Monday, April 14, 2025

ಪ್ರಶ್ನೋತ್ತರ ರತ್ನಮಾಲಿಕೆ 11 (Prasnottara Ratnamalike 11)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೧೧. ಕಳ್ಳರು ಯಾರು ?

ಉತ್ತರ - ವಿಷಯಗಳು.


ಈ ಮುಂದಿನ ಪ್ರಶ್ನೆ ಕಳ್ಳರು ಯಾರು? ಎಂಬುದಾಗಿ. ಅದಕ್ಕೆ ಉತ್ತರ ವಿಷಯ. ಕಳ್ಳರು ವಸ್ತುವನ್ನು ಕದಿಯುವವರು. ಪ್ರತಿಯೊಂದು ವಸ್ತುವಿಗೂ ಒಂದು ಸ್ವಾಮೀ ಅಂದರೆ ಆ ವಸ್ತುವಿಗೆ ಆ ವ್ಯಕ್ತಿಯ ಅಧಿಕಾರ ಎಂಬುದು ಇರುತ್ತದೆ. ಆ ವಸ್ತುವಿನ ಸ್ವಾಮಿಯ ಅನುಮತಿ ಪಡೆದು ಆ ವಸ್ತುವನ್ನು ಸ್ವೀಕರಿಸುವುದು ಸರಿಯಾದ ಕ್ರಮ. ಆದರೆ ವಸ್ತುವಿನ ಸ್ವಾಮಿಯ ಅನುಮತಿಯನ್ನು ಪಡೆಯದೆ ಆ ವಸ್ತುವನ್ನು ಬಳಸಿದರೆ ಅದನ್ನು ಕಳ್ಳತನ ಅಥವಾ ಚೌರ್ಯ ಎಂಬುದಾಗಿ ಕರೆಯಲಾಗುತ್ತದೆ. ಆ ವಸ್ತುವು ಆತನ ಭೋಗದ ವಿಷಯವಾಗಿರುತ್ತದೆ. ಅದನ್ನು ಅನುಭವಿಸಲು ಆತನಿಗೆ ಮಾತ್ರ ಅವಕಾಶವಿರುತ್ತದೆ. ಅವನನ್ನು ಬಿಟ್ಟು ಉಳಿದವರು ಆ ವಸ್ತುವನ್ನು ಬಳಸಬೇಕಾದರೆ ಆ ಪದಾರ್ಥದ ಸ್ವಾಮಿಯ ಅನುಜ್ಞೆ ಅತ್ಯಂತ ಅವಶ್ಯ. ಪ್ರಸ್ತುತ ಪ್ರಶ್ನೆಯಲ್ಲಿ ವಿಷಯಗಳು ಆ ಚೋರರು ಎಂಬುದಾಗಿ ಹೇಳಲಾಗಿದೆ. ಅಂದರೆ ಈ ವಿಷಯಗಳು ಯಾವ ರೀತಿಯಾಗಿ ಸ್ವಾಮಿಯ ಅನುಮತಿ ಇಲ್ಲದೆ ಆ ವಸ್ತುವನ್ನು ಕದಿಯುವರು ಎಂಬುದು ಇಲ್ಲಿ ವಿವೇಚಿಸಬೇಕಾದ ವಿಷಯ.


ವಿಷಯ ಎಂದರೆ ವಿಷಿಣೋತಿ- ಬಧ್ನಾತಿ ಯಾವುದು ನಮ್ಮನ್ನು ಕಟ್ಟಿ ಹಾಕುತ್ತದೆಯೋ ಅದಕ್ಕೆ 'ವಿಷಯ' ಎಂಬುದಾಗಿ ಕರೆಯಲಾಗಿದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಈ ಐದು ವಿಷಯಗಳಾಗಿವೆ. ರೂಪವು ಕಣ್ಣನ್ನು, ಗ್ರಂಧವು ಮೂಗನ್ನು, ರಸವು ನಾಲಿಗೆಯನ್ನು, ಸ್ಪರ್ಶವು ಚರ್ಮವನ್ನು, ಶಬ್ದವು ಕಿವಿಯನ್ನು ಬಂಧಿಸುತ್ತದೆ. ಅಂದರೆ ಈ ಕಣ್ಣಿನ ಎದುರುಗಡೆ ಯಾವುದಾದರೂ ಒಂದು ವಸ್ತು ಇದೆ ಅಂತಾದರೆ ಕಣ್ಣು ಆ ವಸ್ತುವಿನಿಂದ ಆಚೆಗೆ ಹೋಗದೆ ಇರುವಂತೆ ತಡೆಯುತ್ತದೆ. ಅದಕ್ಕೆ ಕಾರಣ ಎದುರುಗಡೆ ಇರುವಂತಹ ಆ ವಸ್ತುವಿನ ರೂಪ. ಅದು ನಮ್ಮ ಕಣ್ಣನ್ನು ಬಂಧಿಸುತ್ತದೆ ಎಂಬುದಾಗಿ ಹೇಳಬಹುದು. ಆತ್ಮವು ಅಥವಾ ಜೀವವು ಈ ಇಂದ್ರಿಯಗಳನ್ನು ಬಳಸಿಕೊಂಡು ಶಬ್ದಸ್ಪರ್ಶಾದಿ ವಿಷಯಗಳನ್ನು ಅನುಭವಿಸಬೇಕು. ಈ ಇಂದ್ರಿಯಗಳು ಆತ್ಮದ ಅಪ್ಪಣೆಯನ್ನು ಪಡೆದು ವಿಷಯವನ್ನು ಅನುಭವಿಸಬೇಕಾಗುತ್ತದೆ. ಇವೆಲ್ಲವೂ  ಜೀವದ ಅಧಿಕಾರದಲ್ಲಿಯೇ ಇರಬೇಕಾದದ್ದು ಸಹಜವಾದದ್ದು. ಆದರೆ ಈ ವಿಷಯಗಳು ಜೀವದ ಅಂದರೆ ಸ್ವಾಮಿಯ ಅನುಮತಿ ಇಲ್ಲದೆ ಅವು ಬೇರೆ ಬೇರೆ ವಸ್ತುವನ್ನು - ವಿಷಯವನ್ನು ಇಷ್ಟಪಡುವಂತಾಗುತ್ತದೆ. ಹಾಗಾಗಿ ಅವು ನಮ್ಮ ಜೀವದ ಅರಿವನ್ನು ಅದರ ವಿಷಯವನ್ನು ಅನುಭವಿಸದೆ ಇರುವಂತೆ ಮಾಡುತ್ತದೆ. ಯಾವಾಗ? ಎಷ್ಟು ವಿಷಯವನ್ನು ಅನುಭವಿಸಬೇಕು? ಎಂಬ ನಿಯಂತ್ರಣ ಈ ಇಂದ್ರಿಯಗಳಿಗೆ ಇರುವುದಿಲ್ಲ. ಈ ಇಂದ್ರಿಯಗಳನ್ನು ಆತ್ಮದ ಅರಿವಿಲ್ಲದಂತೆ ರೂಪಾದಿ ವಿಷಯಗಳು ಇಂದ್ರಿಯಗಳ ದಿಕ್ಕನ್ನೇ ಬದಲಿಸುತ್ತದೆ. ವಿಷಯಗಳ ದಾಸರಂತೆ ವರ್ತಿಸುತ್ತವೆ. ಆಗ ಶರೀರವು ಅನಾರೋಗ್ಯಪೀಡಿವಾಗುತ್ತದೆ. ಅಷ್ಟೇ ಅಲ್ಲ ಮನಸ್ಸು ಕೂಡ ನೆಮ್ಮದಿಯನ್ನು ಕಳೆದುಕೊಳ್ಳುದೆ. ಇದೆಲ್ಲದಕ್ಕೂ ಕಾರಣ ರೂಪಾದಿ ವಿಷಯಗಳು ಆತ್ಮದ ಅನುವಭವಕ್ಕೆ ಕಾರಣವಾಗದೆ ಆತ್ಮವನ್ನು ಮರೆಸಿ ಇಂದ್ರಿಯಾರಾಮರಾಗುವಂತೆ ಮಾಡುತ್ತವೆ. ಆದ್ದರಿಂದ ಈ ವಿಷಯಗಳನ್ನು ಕಳ್ಳರು, ಚೋರರು ಎಂಬುದಾಗಿ ಅಧ್ಯಾತ್ಮದ ಭಾಷೆಯಲ್ಲಿ ಹೇಳುವ ಅಭ್ಯಾಸ ಬಂದಿದೆ. 


ಸೂಚನೆ : 13/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.