ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಭಗವಂತನ ಅವತಾರಗಳು ಹಲವುಂಟು. ತಾನು ಶೈವನಾದರೂ ವಿಷ್ಣುವಿನ ಅವತಾರಗಳೇ ಲೀಲಾಶುಕನಿಗೆ ಅತ್ಯಂತವಾಗಿ ಇಷ್ಟವೆನಿಸುವಂತಹವು. ಅಷ್ಟೇ ಅಲ್ಲ. ವಿಷ್ಣುವಿನ ಅವತಾರಗಳೂ ಹಲವಿವೆಯಲ್ಲವೇ? ಅವೆಲ್ಲ ಇರುವುವಾದರೂ ಕೃಷ್ಣಾವತಾರವೇ ಆತನಿಗೆ ಪ್ರಿಯವಾದದ್ದು.
ವಿಷ್ಣುವಿನ ಮಿಕ್ಕ ಅವತಾರಗಳೆಂತಹವು? ಮತ್ತು ಕೃಷ್ಣಾವತಾರದ ವಿಶೇಷವೇನು? ಯಾವ ಅಂಶಗಳಲ್ಲಿ ಈ ಅವತಾರವು ಮಿಕ್ಕ ಅವತಾರಗಳಿಗಿಂತ ಆದರಣೀಯವೆಂಬುದಾಗಿ ಲೀಲಾಶುಕನಿಗೆ ತೋರಿದೆ? - ಎಂಬೀ ವಿಷಯಗಳನ್ನು ಕವಿಯು ಈ ಶ್ಲೋಕದಲ್ಲಿ ತಿಳಿಸಿದ್ದಾನೆ.
ಸರಸಿಜ-ನಯನನೆಂದರೆ ಕಮಲದಂತಿರುವ ಕಣ್ಣುಗಳುಳ್ಳವನು. ಪುಂಡರೀಕನೇತ್ರನೆಂಬ ಪ್ರಸಿದ್ಧಿಯಿರುವುದು ವಿಷ್ಣುವಿಗೇ ಅಲ್ಲವೇ? ವಿಷ್ಣುವಿನ ಅವತಾರಗಳು ಹಲವು. ಅವೆಲ್ಲವೂ ಸರ್ವತೋಭದ್ರಗಳೇ. ಎಂದರೆ ಎಲ್ಲ ಪ್ರಕಾರಗಳಲ್ಲಿಯೂ ಮಂಗಳಕರಗಳೇ. ಕನ್ನಡದಲ್ಲಿ ಭದ್ರವೆಂಬ ಪದಕ್ಕೆ ಬೇರೆ ಅರ್ಥವೇ ವಿದಿತ.
ಹಾಗಿದ್ದ ಮೇಲೆ ಯಾವ ಅವತಾರವಾದರೇನು? ಎಲ್ಲವೂ ಅನುಗ್ರಹ-ಕಾರಕಗಳೇ ಆಯಿತಲ್ಲವೇ? - ಎಂಬ ಪ್ರಶ್ನೆಗೆ ಉತ್ತರವನ್ನು ಶ್ಲೋಕದ ಉತ್ತರಾರ್ಧದಲ್ಲಿ ಕೊಟ್ಟಿದ್ದಾನೆ, ಕವಿ.
ಉತ್ಕಟವಾದ ಉಪಾಸನೆಯನ್ನು ಮಾಡಿದವರಿಗೆ ಫಲಪ್ರದವಾಗತಕ್ಕವು, ಉಳಿದ ಅವತಾರಗಳು. ಆದರೆ ಗೋಪಾಲಕರಿಗೆ, ಎಂದರೆ ಗೊಲ್ಲರಿಗೆ ಸಹ ಮೋಕ್ಷವನ್ನು ಕೊಟ್ಟದ್ದು ಈ ಅವತಾರದಲ್ಲಿಯೇ. ಬರೀ ಗೊಲ್ಲರಿಗೆ ಮಾತ್ರವಲ್ಲ, ಎಂದರೆ ಗಂಡಸರಿಗೆ ಮಾತ್ರವಲ್ಲ, ಸ್ತ್ರೀಯರಿಗೂ, ಎಂದರೆ ಗೊಲ್ಲತಿಯರಿಗೂ, ಮೋಕ್ಷವಿತ್ತವನು ಕೃಷ್ಣನೇ. ಗೊಲ್ಲರಾಗಲಿ ಗೊಲ್ಲತಿಯರಾಗಲಿ, ಶಾಸ್ತ್ರವನ್ನೇನು ಬಲ್ಲವರೇ? ಏನೂ ಅರಿಯದ ಗೊಲ್ಲಗೊಲ್ಲತಿಯರಿಗೆ ಮಾತ್ರವೇ ಅಲ್ಲ, ಗೋವುಗಳಿಗೆ ಸಹ ಮುಕ್ತಿಯನ್ನಿತ್ತವನು ಶ್ರೀಕೃಷ್ಣ!
ಹೀಗೆ ಪಶುಗಳಿಗೆ ಸಹ ಮುಕ್ತಿಯಿತ್ತವನು ಮನುಷ್ಯರಿಗೆ ಕೊಡಲಾರನೇ?
ಹೀಗಾಗಿ, ಸಾಧಾರಣರಿಗೂ ಅತ್ಯಂತ ಸುಲಭನೆನಿಸಿದ ಶ್ರೀಕೃಷ್ಣನೇ ನನಗೆ ಅಚ್ಚುಮೆಚ್ಚು ಎನ್ನುತ್ತಾನೆ, ಲೀಲಾಶುಕ.
ಅವತಾರಾಃ ಸಂತ್ವನ್ಯೇ/
ಸರಸಿಜನಯನಸ್ಯ ಸರ್ವತೋಭದ್ರಾಃ |
ಕೃಷ್ಣಾದ್ ಅನ್ಯಃ ಕೋ ವಾ/
ಪ್ರಭವತಿ ಗೋ-ಗೋಪ-ಗೋಪಿಕಾ-ಮುಕ್ತ್ಯೈ? ||
ಈ ಮುಂದಿನ ಪುಟ್ಟ ಶ್ಲೋಕದಲ್ಲಿ ಕೃಷ್ಣನ ವೇಣುಗಾನವನ್ನು ಕವಿಯು ಚಿತ್ರಿಸಿದ್ದಾನೆ. ಶ್ರೀಕೃಷ್ಣನು ವೃಕ್ಷವೊಂದರ ಬುಡದಲ್ಲಿ ನಿಂತು ವೇಣುವಾದನ ಮಾಡುವ ಕೃಷ್ಣನ ಚಿತ್ರ ಸುಪ್ರಸಿದ್ಧ. ಅದನ್ನು ಎಲ್ಲರೂ ನೋಡಿರುವವರೇ.
ಆದರೆ ಇಲ್ಲಿ ಚಿತ್ರಿಸಿರುವುದು ಶ್ರೀಕೃಷ್ಣನ ವಾಸ-ಕ್ರೀಡೆಗಳನ್ನು, ಆತನ ಆಸನ-ಕ್ರಿಯೆಗಳನ್ನು. ವೃಂದಾವನದಲ್ಲಿ ವಾಸಮಾಡತಕ್ಕವನಲ್ಲವೇ ನಮ್ಮ ಕೃಷ್ಣ? ಎಂದೇ ಆತನನ್ನು ವೃಂದಾವನ-ನಿವೇಶಿತನೆಂದು ಕವಿಯು ಹೇಳಿರುವುದು.
ಇಡೀ ವೃಂದಾವನವೇ ಕೃಷ್ಣನ ಕ್ರೀಡಾಂಗಣ, ಹೌದು. ಆದರೆ ಪ್ರಕೃತ, ಕದಂಬ-ವೃಕ್ಷದ ಮೂಲದಲ್ಲಿ ಖೇಲಿಸುತ್ತಿದ್ದಾನೆ. ಮೂಲವೆಂದರೆ ಬೇರು ಎಂಬ ಅರ್ಥವು ಪ್ರಸಿದ್ಧವಾದರೂ, ವೃಕ್ಷಮೂಲವೆಂದರೆ ಈ ಸಂದರ್ಭದಲ್ಲಿ ಮರದ ಬುಡ.
ಈಗಷ್ಟೆ ಆಟವಾಡುತ್ತಿದ್ದರೂ ಮತ್ತೊಂದು ಕ್ಷಣದಲ್ಲಿ ಎಲ್ಲೋ ಒಂದು ಕಡೆ ನೆಮ್ಮದಿಯಾಗಿ ಕುಳಿತಿದ್ದಾನೆ. ಕೃಷ್ಣನು ಎಷ್ಟಾದರೂ ಯೋಗಿಯಲ್ಲವೇ? ಯೋಗಿಗಳು ಕುಳಿತುಕೊಳ್ಳುವ ಬಗೆಯೇ ಬೇರೆ, ಭಂಗಿಯೇ ಭಿನ್ನ. ಉನ್ನತಯೋಗಸ್ಥಿತಿಗಳಿಗೆ ಹೊಂದುವ/ಸಲ್ಲುವ ಪರಿಯಲ್ಲೇ ಅವರ ನಡೆಯೂ ನಡತೆಯೂ.
ಎಂದೇ ಆತನು ಕುಳಿತಿರುವುದು ಪದ್ಮಾಸನದಲ್ಲಿ. ಆ ಆಸನದಲ್ಲಿ ಕುಳಿತೇ ಕೊಳಲನ್ನೂದುತ್ತಿದ್ದಾನೆ. ಹಾಗೆ ವೇಣುಗಾನಮಾಡುತ್ತಿರುವ ಅಚ್ಯುತನನ್ನು ನಾನು ವಂದಿಸುತ್ತೇನೆ - ಎನ್ನುತ್ತಾನೆ, ಕವಿ. ವಂದಿಸುವುದೆಂದರೆ ನಮಸ್ಕರಿಸುವುದೆಂಬುದು ಪ್ರಸಿದ್ಧಾರ್ಥ. ಸ್ತುತಿಸುವುದೆಂಬರ್ಥವೂ ಅದಕ್ಕಿರುವುದು.
ಕದಂಬ-ಮೂಲೇ ಕ್ರೀಡಂತಂ/
ವೃಂದಾವನ-ನಿವೇಶಿತಂ |
ಪದ್ಮಾಸನ-ಸ್ಥಿತಂ ವಂದೇ
ವೇಣುಂ ಗಾಯಂತಮ್ ಅಚ್ಯುತಮ್ ||
ದೇವರಲ್ಲಿ ಭಕ್ತಿಯಿರಬೇಕೆಂಬ ಮಾತನ್ನು ಯಾರು ಕೇಳಿರುವುದಿಲ್ಲ? ಅಷ್ಟೇ ಅಲ್ಲ, ಭಗವಂತನಲ್ಲಿ ತಮಗಿರುವುದು ನಿಜವಾದ ಭಕ್ತಿಯೇ ಎಂದು ಎಷ್ಟು ಮಂದಿ ಭಾವಿಸಿರುವುದಿಲ್ಲ?
ಹಾಗೆಂದು ಆ ಬಗ್ಗೆ ಆಗೊಮ್ಮೆ ಈಗೊಮ್ಮೆ ಸಂಶಯಗಳೂ ನಮ್ಮೊಳಗೇ ಬರದೇ ಏನಿಲ್ಲ. ಹಾಗಿದ್ದರೆ ಭಗವದ್ಭಕ್ತಿಯೆಂಬುದು ತನ್ನಲ್ಲಿ ಊರಿದೆ - ಎಂಬುದಕ್ಕೆ ನಿಶ್ಚಯವು ದೊರಕುವುದೆಂತು? ಯಾವುದಾದರೂ ಗಿಡವು ಚೆನ್ನಾಗಿ ಬೆಳೆದಿದೆಯೆಂದು ನಾವು ಹೇಗೆ ತೀರ್ಮಾನಿಸುವೆವು? ಅದು ಗೊತ್ತಾಗುವುದು ಅದು ಫಲ ಬಿಟ್ಟಾಗಲೇ, ಅಲ್ಲವೇ? ಹಾಗೆಯೇ ಇಲ್ಲೂ.
"ಭಗವಂತನೇ, ನಿನ್ನಲ್ಲಿ ಭಕ್ತಿಯು ದೃಢವಾದರೆ" - ಎಂದು ಶ್ಲೋಕವನ್ನು ಆರಂಭಿಸುತ್ತಾನೆ, ಲೀಲಾಶುಕ. ಏಕೆ? ಭಕ್ತಿಯು ಕೆಲವೊಮ್ಮೆ ಉಕ್ಕಿ ಹರಿಯುವುದು. ಅದು ಎಂದೋ ಒಮ್ಮೊಮ್ಮೆ ಎಂಬಂತಾದರೆ ಸಾಲದು. ಅದು ದೃಢವಾಗಬೇಕು. ಭಕ್ತಿಯಲ್ಲಿ ಸ್ಥೈರ್ಯವಿರಬೇಕು. ಸ್ಥೈರ್ಯವೆಂದರೆ ಸ್ಥಿರತೆ. ಅದು ಕೂಡ ತೃಪ್ತಿ ತರದು. ಎಂದೇ ಅದು ಸ್ಥಿರತರವಾಗಿರಬೇಕು. ಅತಿಶಯವಾಗಿ ಸ್ಥಿರವಾಗಿದ್ದರೆ ಅದನ್ನು ಸ್ಥಿರತರ ಎನ್ನುತ್ತಾರೆ.
ಅದು ಹಾಗಾಗುವುದು ದೈವದಿಂದ. ದೈವವೆಂದರೆ ಭಾಗ್ಯ. ಹೀಗಾಗಿ ದೈವದಿಂದ ಎಂದರೆ ಸುದೈವದಿಂದ, ಒಳ್ಳೆಯ ಅದೃಷ್ಟದಿಂದ - ಎಂದೇ. ಉತ್ಕೃಷ್ಟವಾದ ಮನುಷ್ಯಪ್ರಯತ್ನದಿಂದ ದೈವವು ಒಲಿಯುವುದು. ಕೆಲವೊಮ್ಮೆ ಅದರೊಂದಿಗೆ ಕಾಲವೂ ಕೂಡಿಬರಬೇಕು, ದೇವತಾನುಗ್ರಹವೂ ಬೇಕು.
ಭಗವಂತನ ಮೂರ್ತಿಗಳು ಹಲವಿದ್ದರೂ, ಕೃಷ್ಣನ ಬಗೆಯೇ ಸೆಳೆತ, ಲೀಲಾಶುಕನಿಗೆ. ಕೃಷ್ಣನ ಮೂರ್ತಿಗಳೂ ಹಲವಿರಬಹುದು. ಆದರೆ ಆತನ ದಿವ್ಯಕಿಶೋರಮೂರ್ತಿಯೇ ಲೀಲಾಶುಕನಿಗೆ ಅತಿಪ್ರಿಯವಾದುದು.
ಅದರಲ್ಲಿ ಭಕ್ತಿ ನೆಲೆಗೊಂಡರೆ ಏನು ಫಲವೆಂಬುದನ್ನು ಶ್ಲೋಕದ ಉತ್ತರಾರ್ಧವು ಹೇಳುತ್ತದೆ. ನಾಲ್ಕು ಪುರುಷಾರ್ಥಗಳೂ ದೊರಕುವುವು. ಅವಲ್ಲಿ ಅತ್ಯಂತ ಮುಖ್ಯವಾದುದೇ ಮೋಕ್ಷ ಅಥವಾ ಮುಕ್ತಿ. ಅದುವೇ ಅತ್ಯಂತ ಕಷ್ಟಸಾಧ್ಯವಾದುದೂ. ಮುಕ್ತಿಯೆಂಬುದನ್ನೇ ಒಬ್ಬ ಸ್ತ್ರೀಯೆಂದುಕೊಳ್ಳಿ. ಅವಳೇ ದಾಸಿಯಾಗಿಬಿಡುತ್ತಾಳೆ ಎನ್ನುತ್ತಾನೆ! ದಾಸಿಯ ವರ್ತನೆ ಹೇಗಿರುತ್ತದೆ? ಕೈಜೋಡಿಸಿ ನಿಂತು ಸೇವೆ ಸಲ್ಲಿಸುವುದು. ಹಾಗೆ ಸಾಕ್ಷಾತ್ ಮುಕ್ತಿಯೇ ಮುಕುಲಿತಾಂಜಲಿಯಾಗಿ ನಮ್ಮನ್ನು ಸ್ವಯಂ ಸೇವಿಸುವುದು. ಅಂಜಲಿಯೆಂದರೆ ಬೊಗಸೆ. ಅದನ್ನು ಮುಕುಲದಂತೆ ಎಂದರೆ ಮೊಗ್ಗಿನಂತೆ ಮಾಡಿಕೊಳ್ಳುವುದು.
ಮುಕ್ತಿಯೆಂಬುದೇ ಸೇವಕಿಯಂತೆ ನಿಂತಮೇಲೆ, ಧರ್ಮ-ಅರ್ಥ-ಕಾಮಗಳ ಬಗ್ಗೆ ಹೇಳಬೇಕಾದುದೇ ಇಲ್ಲ.
ಬಳಿಯೇ ಇದ್ದು ಸೇವೆಸಲ್ಲಿಸುವ ಭಾಗ್ಯವೂ ಇಲ್ಲದವರು ದ್ವಾರಪಾಲಕ ಮುಂತಾದ ಆಳುಕಾಳುಗಳು. ಕರೆದೊಡನೆ ಬರತಕ್ಕವರು - ಎಂದಷ್ಟೇ ಅಲ್ಲ. ಕರೆದು ಕೆಲಸ ಹೇಳಿದರೆ ಅದನ್ನೇ ಭಾಗ್ಯವೆಂದುಕೊಳ್ಳತಕ್ಕವರು. ಒಡೆಯನು ತಮ್ಮನ್ನು ಕರೆದಾನೇ? ಆತನಿಗೆ ಸೇವೆ ಸಲ್ಲಿಸುವ ಭಾಗ್ಯ ದೊರೆತೀತೇ? - ಎಂದು ಎದುರುನೋಡುತ್ತಿರುವವರು ಸಮಯಪ್ರತೀಕ್ಷರು. ಧರ್ಮಾದಿಗಳು ಹಾಗಿರುವರು.
ಹೀಗೆ ಶ್ರೀಕೃಷ್ಣನ ಕಿರ್ಶೋರಮೂರ್ತಿಯಲ್ಲಿ ಭಕ್ತಿಯು ಸುಸ್ಥಿರವಾದರೆ ಅದರ ಫಲವಾದ ನಾಲ್ಕೂ ಪುರುಷಾರ್ಥಗಳು ಹೇಗೆ ಕರಗತವಾಗುವುವೆಂಬುದನ್ನು ಅವುಗಳಲ್ಲಿಯ ತಾರತಮ್ಯನಿರೂಪಣೆಯೊಂದಿಗೆ ಲೀಲಾಶುಕನು ತಿಳಿಸಿದ್ದಾನೆ.
ಭಕ್ತಿಃ ತ್ವಯಿ ಸ್ಥಿರತರಾ ಭಗವನ್ ಯದಿ ಸ್ಯಾತ್/
ದೈವೇನ ನಃ ಫಲಿತ-ದಿವ್ಯ-ಕಿಶೋರ-ವೇಷೇ |
ಮುಕ್ತಿಃ ಸ್ವಯಂ ಮುಕುಲಿತಾಂಜಲಿ ಸೇವತೇಽಸ್ಮಾನ್/
ಧರ್ಮಾರ್ಥಕಾಮಗತಯಃ ಸಮಯಪ್ರತೀಕ್ಷಾಃ ||
ಸೂಚನೆ : 21/04/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.