Monday, April 7, 2025

ವಾಲ್ಮೀಕಿರಾಮಾಯಣದ ಸಂಕ್ಷಿಪ್ತ ಪಕ್ಷಿನೋಟ (Valmikiramayaṇada Sanksipta Paksinota)

ಲೇಖಕರು:ವಾದಿರಾಜ್ ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)



ಆದಿಕವಿ ವಾಲ್ಮೀಕಿ ರಾಮಾಯಣ ಮಹಾಕಾವ್ಯದಲ್ಲಿ 24,000 ಶ್ಲೋಕಗಳು, ಏಳು ಕಾಂಡಗಳಿವೆ. ಈ ಕಾಂಡಗಳಲ್ಲಿ ರಾಮಾಯಣದ ಕಥೆ ಸಂಪೂರ್ಣ ಮಾನವಾದರ್ಶವಾಗಿ ನೈತಿಕ, ಧಾರ್ಮಿಕ, ರಾಜಕಾರಣ, ಸತ್ಯನಿಷ್ಠೆ, ಪಿತೃವಾಕ್ಯಪರಿಪಾಲನೆ ಇತ್ಯಾದಿ ಹಲವಾರು  ವಿಷಯಗಳಲ್ಲಿ ಹರಿದಿದೆ. ಈ ಲೇಖನದಲ್ಲಿ ಪ್ರತಿಯೊಂದು ಕಾಂಡದ ಸಂಕ್ಷಿಪ್ತ ವಿಷಯಗಳನ್ನು ಸ್ಮರಿಸಿಕೊಳ್ಳಲಾಗಿದೆ. 


ತಪಸ್ಸು ಸ್ವಾಧ್ಯಾಯಗಳಲ್ಲಿ ನಿರತರಾದ ಶಾಸ್ತ್ರಾಧ್ಯಯನದಲ್ಲಿ ಶ್ರೇಷ್ಠರೆನಿಸಿದ ನಾರದ ಮಹರ್ಷಿಗಳನ್ನು ಮಹಾ ತಪಸ್ವಿಯಾದ ವಾಲ್ಮೀಕಿ ಮುನಿಗಳು ಪ್ರಶ್ನಿಸಿದರು-ಈ ಕಾಲದಲ್ಲಿ ಸಮಸ್ತ ಸದ್ಗುಣ ಸಂಪನ್ನನಾದವನು,ವೀರ್ಯವಂತ, ಧರ್ಮ-ಅಧರ್ಮಗಳನ್ನು ತಿಳಿದವನು,ಇತರರ ಉಪಕಾರಗಳನ್ನು ಬೆಟ್ಟದಷ್ಟು ಭಾವಿಸಿ, ಅವರು ಎಷ್ಟೇ ಅಪಕಾರಗಳನ್ನು ಮಾಡಿದರೂ ಮನಸ್ಸಿನಲ್ಲಿಟ್ಟುಕೊಳ್ಳದವನು, ಸುಳ್ಳಾಡದವನು, ಧೃಡಪ್ರತಿಜ್ಞನು, ಕುಲಾಚಾರವಂತನು, ಸಮಸ್ತ ಪ್ರಾಣಿಗಳ ಹಿತವನ್ನೇ ಬಯಸುವವನು, ಶಾಸ್ತ್ರವೇತ್ತನು, ಅಪ್ರತಿಮ ಸಾಹಸಿಯು, ನೋಡಿದವರಿಗೆಲ್ಲ ಸಮಾನ ಪ್ರೀತಿಯುಂಟುಮಾಡುವವನು, ಧೈರ್ಯವಂತ, ಕೋಪವನ್ನು ವಶದಲ್ಲಿಟ್ಟುಕೊಂಡವನು, ಅದ್ಭುತ ದೆಹಕಾಂತಿಯುಳ್ಳವನು, ಇತರರ ಗುಣಗ್ರಾಹಿ, ಇತ್ಯಾದಿ ಗುಣ ವಿಶೇಷವುಳ್ಳ ಮನುಷ್ಯನು ಯಾರಾದರೂ ಇದ್ದಾನೆಯೇ ಎಂಬ ಪ್ರಶ್ನೆ. ಇದಕ್ಕೆ ನಾರದರು- ಇಷ್ಟು  ಗುಣಗಳೂ ಸೇರಿದ ಒಬ್ಬ ವ್ಯಕ್ತಿ ಇದ್ದಾನೆ ಎಂದು ಮೊದಲುಮಾಡಿ ಶ್ರೀರಾಮನ ಚರಿತ್ರೆಯನ್ನು ಸಂಕ್ಷೇಪವಾಗಿ ಹೇಳಿ, ಶ್ರೀ ರಾಮಾಯಣ ಮಹಾ ಕಾವ್ಯವನ್ನು ರಚಿಸಲು ವಾಲ್ಮೀಕಿ ಮುನಿಯನ್ನು ಪ್ರೇರಿಸುತ್ತಾರೆ.


1. ಬಾಲಕಾಂಡ 

ಈ ಕಾಂಡದ ಶೀರ್ಷಿಕೆಯಂತೆ  ಶ್ರೀರಾಮನ ಜನನ ಮತ್ತು ಬಾಲ್ಯದ ಕಥೆಯನ್ನು ವಿವರಿಸುತ್ತದೆ. ರಾಮನ ಜನನಕ್ಕೆ ಮುಂಚಿನ ಸನ್ನಿವೇಶಗಳನ್ನು ವಿವರಿಸಲಾಗಿದೆ. ಅಂದರೆ ಅಯೋಧ್ಯಾ ಪಟ್ಟಣದ ಇಕ್ಷ್ವಾಕು ವಂಶದ ಚಕ್ರವರ್ತಿ ದಶರಥನ ಸಂತಾನ ವಿಹೀನತೆಯ ದುಃಖ, ಋಷ್ಯಶೃಂಗ ಮುನಿಗಳ ನೇತೃತ್ವದಲ್ಲಿ ಪುತ್ರಕಾಮೇಷ್ಟಿ ಯಜ್ಞ, ನಂತರ, ದಶರಥನಿಗೆ– ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನ ನಾಲ್ಕು ಶ್ರೇಷ್ಠ ಪುತ್ರರ ಜನನ. ಕೆಲಕಾಲದ ನಂತರ ವಿಶ್ವಾಮಿತ್ರ ಮುನಿಯು ರಾಮ ಮತ್ತು ಲಕ್ಷ್ಮಣರನ್ನು ತನ್ನೊಂದಿಗೆ ಯಜ್ಞರಕ್ಷಣೆಗಾಗಿ ಕೊಂಡೊಯ್ದು, ಅಲ್ಲಿನ ರಾಕ್ಷಸರನ್ನು ಸಂಹಾರಮಾಡಿಸಿ

ವರು. ನಂತರ, ರಾಮನು ಸೀತಾಸ್ವಯಂವರದಲ್ಲಿ ಶಿವಧನುಸ್ಸನ್ನು ಮುರಿದು ಸೀತೆಯನ್ನು ವರಿಸುತ್ತಾನೆ.


2. ಅಯೋಧ್ಯಾಕಾಂಡ 

ಇದು ರಾಮನು ಅಯೋಧ್ಯೆಯಲ್ಲಿ ಹೇಗೆ ಜನಾನುರಾಗಿಯಾಗಿದ್ದನು ಎಂಬುದನ್ನು ವಿವರಿಸುತ್ತದೆ. ದಶರಥನು ರಾಮನ ರಾಜ್ಯಾಭಿಷೇಕವನ್ನು ಘೋಷಿಸುತ್ತಾನೆ. ಆದರೆ, ಕೈಕೆಯಿ ತನ್ನ ಎರಡು ವರಗಳನ್ನು ಪ್ರಯೋಗಿಸಿ, ರಾಮನನ್ನು 14 ವರ್ಷಗಳ ಅರಣ್ಯವಾಸಕ್ಕೆ ಕಳುಹಿಸುತ್ತಾಳೆ ಮತ್ತು ಭರತನನ್ನು ರಾಜನನ್ನಾಗಿ ಮಾಡಲು ಒತ್ತಾಯಿಸುತ್ತಾಳೆ. ಶ್ರೀರಾಮನು ತನ್ನ ತಂದೆಯ ಮಾತನ್ನು ಪಾಲಿಸಿ, ಸೀತಾ ಮತ್ತು ಲಕ್ಷ್ಮಣರೊಂದಿಗೆ ಅರಣ್ಯಕ್ಕೆ ತೆರಳುತ್ತಾನೆ.  ಭರತನು ರಾಮನ ರಾಜ್ಯಭಾರವನ್ನು ಸ್ವೀಕರಿಸಲು ನಿರಾಕರಿಸಿ, ರಾಮನ ಶ್ರೀ ಪಾದುಕೆಗಳನ್ನು ಪಡೆದು ಅಯೋಧ್ಯೆಗೆ ಹಿಂದಿರುಗುತ್ತಾನೆ.


3. ಅರಣ್ಯಕಾಂಡ 

ದಂಡಕಾರಣ್ಯದಲ್ಲಿ ಶೂರ್ಪನಖಿಯು ರಾಮನನ್ನು ವಿವಾಹಕ್ಕೆ ಒತ್ತಾಯಿಸಿದಾಗ , ಲಕ್ಷ್ಮಣನು ಆಕೆಯ ಮೂಗನ್ನು ವಿರೂಪಗೊಳಿಸುತ್ತಾನೆ. ಈ ಘಟನೆಯ ನಂತರ, ಶೂರ್ಪನಖಿಯ ಸಹೋದರರಾದ ಖರ, ದೂಷಣ ಮತ್ತು ತ್ರಿಶಿರ ಅವರು ರಾಮನೊಂದಿಗೆ ಯುದ್ಧ ಮಾಡಲಾಗಿ ರಾಮನು ಅವರನ್ನೆಲ್ಲ ಸಂಹರಿಸುತ್ತಾನೆ. ಶೂರ್ಪನಖಿಯ ಪ್ರೇರಣೆಯಿಂದ ರಾವಣನು ಸೀತೆಯನ್ನು ಅಪಹರಿಸಲು ಮಾರೀಚನನ್ನು ಕಳುಹಿಸುತ್ತಾನೆ. ಅವನ ಆಕರ್ಷಕ ಬಂಗಾರದ ಜಿಂಕೆಯ ರೂಪಕ್ಕೆ ಮೋಹಿತಳಾದ ಸೀತೆ ಅದನ್ನು ಬಯಸುತ್ತಾಳೆ. ಇದರ ಬೆನ್ನಟ್ಟಿ ರಾಮ ಹೋದಾಗ ರಾವಣನಿಂದ ಸೀತಾಪಹರಣವಾಗುತ್ತದೆ. ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕಲು ಪ್ರಯತ್ನಿಸುತ್ತಿರುವಾಗ ಹನುಮಂತನ ಸಹಾಯದಿಂದ ವಾನರರಾಜ ಸುಗ್ರೀವನೊಂದಿಗೆ ಸ್ನೇಹ ಮಾಡುತ್ತಾನೆ. ಹೀಗೆ ಅರಣ್ಯಕಾಂಡದಲ್ಲಿ ರಾಮ, ಸೀತಾ ಮತ್ತು ಲಕ್ಷ್ಮಣರು ಅರಣ್ಯದಲ್ಲಿ 14 ವರ್ಷಗಳ ಕಾಲ ಹೇಗೆ ಕಾಲ ಕಳೆಯುತ್ತಾರೆ ಎಂಬುದನ್ನು ವಿವರಿಸಲಾಗಿದೆ.


4. ಕಿಷ್ಕಿಂಧಾಕಾಂಡ 

ರಾಮನು ಕಿಷ್ಕಿಂಧೆಯಲ್ಲಿ ಸುಗ್ರೀವನ ಅಣ್ಣ ವಾಲಿಯನ್ನು ವಧೆ ಮಾಡಿ ಸುಗ್ರೀವನಿಗೆ ರಾಜ್ಯಾಭಿಷೇಕ ಮಾಡಿಸುತ್ತಾನೆ. ಜಾಂಬವಂತನು,  ಹನುಮಂತನಲ್ಲಿ ಅಡಗಿದ್ದ ಶಕ್ತಿಯನ್ನು ಜ್ಞಾಪಿಸುತ್ತಾನೆ. ಧೀರ, ವೀರ, ಶೂರ ಹನುಮಂತನು ಲಂಕೆಗೆ ಹೋಗಿ, ಸೀತೆಯ ಸ್ಥಳವನ್ನು ಪತ್ತೆಹಚ್ಚಲು ಸಿದ್ಧತೆ ಮಾಡಿಕೊಳ್ಳುತ್ತಾನೆ.ವಾನರಸೇನೆಗೆ ಮುಂದಿನ ಕಾರ್ಯವಿಧಾನ ರೂಪಿಸಲು ಸುಗ್ರೀವನೊಂದಿಗೆ ರಾಮನು ನಿರ್ಧಾರ ಮಾಡುತ್ತಾನೆ.


5. ಸುಂದರಕಾಂಡ 

ಸಮುದ್ರ ಲಂಘನ: ಹನುಮಂತನು ಮಹಾಸಮುದ್ರವನ್ನು ಹಾರಿ ಲಂಕೆಗೆ ಪ್ರವೇಶಿಸುತ್ತಾನೆ. ಮಾರ್ಗಮಧ್ಯೆ, ಮೈನಾಕನ ಆತಿಥ್ಯವನ್ನು ವಿನಮ್ರವಾಗಿ ತಿರಸ್ಕರಿಸಿ, ಸುರಸೆಯ ಪರೀಕ್ಷೆಯಲ್ಲಿ ಗೆದ್ದು, ಸಿಂಹಿಕೆ ಎಂಬ ರಾಕ್ಷಸಿಯರನ್ನು ಸಂಹರಿಸುತ್ತಾನೆ. ಹನುಮಂತನು ಲಂಕೆಗೆ ತೆರಳಿ, ಅಶೋಕವಾಟಿಕೆಯಲ್ಲಿ ಸೀತೆಯನ್ನು ಪತ್ತೆ ಮಾಡುತ್ತಾನೆ. ಸೀತಾದೇವಿಯ ಸಂದರ್ಶನ: ಅಶೋಕವನದಲ್ಲಿ, ಸೀತಾದೇವಿ ದುಃಖಿತರಾಗಿರುವುದನ್ನು ಕಂಡು, ಹನುಮಂತನು ರಾಮನ ಸಂದೇಶವನ್ನು ಅವಳಿಗೆ ನೀಡುತ್ತಾನೆ. ರಾವಣನನ್ನು ಎಚ್ಚರಿಸುತ್ತಾನೆ. ಲಂಕೆಯನ್ನು ಧ್ವಂಸ: ರಾವಣನ ದಂಡನಾಯಕರನ್ನು ಹನುಮಂತನು ಸೋಲಿಸುತ್ತಾನೆ, ಲಂಕೆಯನ್ನು ಸುಡುತ್ತಾನೆ ಮತ್ತು ರಾಮನ ಉಂಗುರ ಕೊಟ್ಟು , ಸೀತೆಯ ಚೂಡಾಮಣಿಯೊಂದಿಗೆ ಆ ಸ್ಥಳದ ಮಾಹಿತಿ ತರುತ್ತಾನೆ. ಈ ರೀತಿಯಾದ ಅನೇಕ ಹನುಮಂತನ ಸಾಹಸ ಮತ್ತು ಭಕ್ತಿಯ ವಿವರಣೆ ಸುಂದರಕಾಂಡದಲ್ಲಿದೆ. 


6. ಯುದ್ಧಕಾಂಡ 

ರಾಮನು ವಾನರ ಸೇನೆಯೊಂದಿಗೆ ಸೇತುವೆಕಟ್ಟಿ ಸಮುದ್ರದಾಟಿ ಲಂಕೆಗೆ ಪ್ರಯಾಣ. ರಾಮ- ರಾವಣ ಯುದ್ಧ ಆರಂಭವಾಗುತ್ತದೆ.  ಇಂದ್ರಜಿತ್, ಕುಂಭಕರ್ಣ ಸಂಹಾರ. ಇತ್ತ ರಾವಣನನ್ನು ಶ್ರೀರಾಮನು ಸಂಹಾರ ಮಾಡುತ್ತಾನೆ. ರಾಮನು ಸೀತೆಯನ್ನು ಮುಕ್ತಗೊಳಿಸುತ್ತಾನೆ, ಆದರೆ ಜನರ ಸಂಶಯ ನಿವಾರಿಸಲು ಅಗ್ನಿ ಪರೀಕ್ಷೆ ಮಾಡಿಸುತ್ತಾನೆ. ರಾಮನು ಅಯೋಧ್ಯೆಗೆ ಮರಳಿದ ಮೇಲೆ ಪಟ್ಟಾಭಿಷೇಕವಾಗುತ್ತದೆ . ಧರ್ಮಯುದ್ಧ ಮತ್ತು ವಿಜಯದ ವಿವರಣೆ ಈ ಯುದ್ಧಕಾಂಡದಲ್ಲಿದೆ.


7. ಉತ್ತರಕಾಂಡ 

ಸೀತಾಪರಿತ್ಯಾಗ: ಶ್ರೀರಾಮನು ಸೀತೆಯನ್ನು ವಾಲ್ಮೀಕಿಮುನಿಯ ಆಶ್ರಮಕ್ಕೆ ಕಳುಹಿಸುತ್ತಾನೆ, ಅಲ್ಲಿ ಅವಳಿಗೆ ಲವಕುಶರು ಜನಿಸುತ್ತಾರೆ. ಲವಕುಶರು ರಾಮನ ಬಗ್ಗೆ ಅರಿವಿಲ್ಲದಂತೆ ವಾಲ್ಮೀಕಿಮುನಿಯ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಪಡೆಯುತ್ತಾರೆ. ಲವಕುಶರು ರಾಮನ ಮುಂದೆ ರಾಮಾಯಣವನ್ನು ಹಾಡುತ್ತಾರೆ, ಆಗ ರಾಮನಿಗೆ ಅವರ ಕುರಿತಾದ ಸತ್ಯ ತಿಳಿದು ಬರುತ್ತದೆ. ಸೀತಾ ಭೂಮಾತೆಯ ಒಡಲೊಳಗೆ ಸೇರುತ್ತಾಳೆ. ಕೊನೆಗೆ, ಶ್ರೀರಾಮರು ಸರಯೂ ನದಿಯಲ್ಲಿ ತನ್ನ ಭಕ್ತರೊಂದಿಗೆ ಲೀನವಾಗಿ,  ರಾಮನು ತನ್ನ ಮೂಲ ಧಾಮ ವೈಕುಂಠವನ್ನು ತಲುಪುತ್ತಾನೆ.


ಶ್ರೀಮದ್ರಾಮಾಯಣದಲ್ಲಿನ ಕೇಂದ್ರಬಿಂದು ಶ್ರೀರಾಮ. ಶ್ರೀರಾಮ ನಿಜಕ್ಕೂ ಯಾರು ಎಂಬ ಜಿಜ್ಞಾಸೆಗೆ ಶ್ರೀರಂಗಮಹಾಗುರುಗಳ ಮಾತು ಸ್ಮರಣೀಯ. ಅವರ ವಾಣಿಯಂತೆ, "ಶ್ರೀ ರಾಮನು ಸ್ಥೂಲ ದೃಷ್ಟಿಗೆ ಮನುಷ್ಯ, ಸೂಕ್ಷ್ಮ ದೃಷ್ಟಿಗೆ ದೇವತೆ ಮತ್ತು ಪರಾ ದೃಷ್ಟಿಗೆ ಪರಂಜ್ಯೋತಿ";. ಪರಂಜ್ಯೋತಿಯೇ ಲೋಕಹಿತಕ್ಕಾಗಿ ಅವತರಿಸಿ ಬರುವುದಿದೆ. "ಅವತಾರ ಎಂದರೆ ಇಳಿದುಬರುವುದು.ತನ್ನ ಮೂಲರೂಪದ ನೆನಪಿನೋಡನೆಯೇ, ತನ್ನ ಸ್ವಸ್ವರೂಪಜ್ಞಾನದೊಡನೆಯೇ ಇಳಿದು ಬರುವುದು". ಹಾಗೆ ಅವತರಿಸಿದ ಶ್ರೀರಾಮ ಲೋಕದಲ್ಲಿ , ಪರಮಾದರ್ಶಸ್ಥಾಪಿಸಿರುವುದನ್ನು ಪುಜ್ಯರಾದ ವಾಲ್ಮೀಕಿ ಮಹರ್ಷಿಗಳು ಯಥಾವತ್ತಾಗಿ, ರಮಣೀಯವಾಗಿ ಚಿತ್ರಿಸಿದ್ದಾರೆ. ವಾಲ್ಮೀಕಿ ರಾಮಾಯಣವು ಧರ್ಮ, ನೈತಿಕತೆ, ಭಕ್ತಿ, ರಾಜಕೀಯನೀತಿ, ತ್ಯಾಗ, ಪ್ರೀತಿಯಂತಹ ಮಹತ್ವದ ತತ್ವಗಳನ್ನು ಬೋಧಿಸುತ್ತದೆ. ಈ ಮಹಾಕಾವ್ಯವು ಸಮಸ್ತಹಿತಕ್ಕಾಗಿ ಸ್ವಂತ ಹಿತಾಸಕ್ತಿಗಳನ್ನು ಬದಿಗಿಡುವ ಪಾಠವನ್ನು ಸಾರುತ್ತಿದೆ. ಧರ್ಮಶ್ರದ್ಧೆ, ಮತ್ತು ಸಮಾಜದ ಯೋಗ್ಯ ಜೀವನಶೈಲಿಯನ್ನು ಸಾರುತ್ತದೆ. ರಾಮನ ಜೀವನದ ಆದರ್ಶ, ಪರೋಪಕಾರ, ಹೀಗೆ ಅಗಣಿತವಾದ ಗುಣಗಳು ಅವಿಸ್ಮರಣೀಯ. ಎಂದೆಂದಿಗೂ ಲೋಕದ ಆದರ್ಶ. ಶ್ರೀ ರಾಮಾಯಣದ ಕಥಾ ಶ್ರವಣ ನಮ್ಮೆಲ್ಲರ ಜೀವನಕ್ಕೆ ಸ್ಫೂರ್ತಿಯನ್ನು ಕೊಟ್ಟು ಸನ್ಮಾರ್ಗದಲ್ಲಿ ನಾವೆಲ್ಲಾ ನಡೆಯಲು ಪ್ರೇರಿಸಲಿ ಎಂದು ಆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಪ್ರಭುವನ್ನು ಪ್ರಾರ್ಥಿಸಿ ಅವನ ಅಡಿದಾವರೆಗಳಿಗೆ ಈ ಕಿರುಬರಹವನ್ನು ಸಮರ್ಪಿಸುತ್ತೇನೆ.


ಸೂಚನೆ : 07/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.