ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ತಾಯಿಗೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಮರಿಗಳು ಹೀಗೆ ತಮ್ಮ ಮಾತನ್ನು ಮುಗಿಸಿದವು: "ಪರಿಸ್ಥಿತಿಯು ಹೀಗಿರಲು, ನಾವಾದರೂ ಅಗ್ನಿಯನ್ನು ಪ್ರವೇಶಮಾಡುವೆವು, ಹಾಗೂ ತತ್ಪರಿಣಾಮವಾಗಿ ಶ್ರೇಷ್ಠವಾದ ಲೋಕಗಳನ್ನು ಪಡೆಯುವೆವು. ಇನ್ನು ಅಗ್ನಿಯೇನಾದರೂ ನಮ್ಮನ್ನು ಸುಡದಿದ್ದ ಪಕ್ಷದಲ್ಲಿ ನೀನು ನಮ್ಮಲ್ಲಿಗೆ ಬಂದೇ ಬರುವೆಯಂತೆ. ಅದು ಇದ್ದದ್ದೇ" ಎಂಬುದಾಗಿ. ಈ ಮಾತುಗಳನ್ನು ಕೇಳಿದ ತಾಯಿ ಶಾರ್ಙ್ಗಿಯು ಆ ಮಕ್ಕಳನ್ನು ಖಾಂಡವವನದಲ್ಲೇ ತೊರೆದು ಹೊರಟಿತು. ಯಾವ ಎಡೆಯಲ್ಲಿ ಅಗ್ನಿಯ ಭಯವೆಂಬುದಿರದೋ ಅಂತಹೆಡೆಗೆ ಬೇಗನೆ ಹೊರಟುಹೋಯಿತು. ತೀಕ್ಷ್ಣವಾದ ಜ್ವಾಲೆಯನ್ನು ಹೊಂದಿದ್ದ ಅಗ್ನಿಯು ಆ ಹೊತ್ತಿಗೆ ವೇಗದಿಂದ ಅಲ್ಲಿಗೇ - ಎಂದರೆ ಮಂದಪಾಲನ ಮಕ್ಕಳಾದ ಶಾರ್ಙ್ಗಕಗಳು ಇರುವಲ್ಲಿಗೇ - ಬಂದನು.
ಜ್ವಲಿಸುತ್ತಿದ್ದ ಅಗ್ನಿಯನ್ನು ಕಂಡ ಆ ಪಕ್ಷಿಗಳು ತಮ್ಮಲ್ಲೇ ಮಾತನಾಡಿಕೊಂಡವು. ಅವುಗಳಲ್ಲಿ ಜರಿತಾರಿಯು ಅಗ್ನಿಗೆ ಈ ಮಾತನ್ನು ಹೇಳಿತು: "ಕಷ್ಟಕಾಲವೆಂಬುದು ಇನ್ನೂ ದೂರದಲ್ಲಿರುವಾಗಲೇ, ಧೀಮಂತನಾದ ಪುರುಷನು ಎಚ್ಚರಗೊಂಡಿರುವನು. ಹೀಗಾಗಿ, ಸಂಕಟದ ಕಾಲವು ಬಂದಾಗ ಎಂದೂ ವ್ಯಥೆಯನ್ನು ಆತ ಪಡುವುದೇ ಇಲ್ಲ. ಆದರೆ ಯಾವ ಬುದ್ಧಿಹೀನನು ಕಷ್ಟಕಾಲವು ಬರುತ್ತಿರುವುದರ ಬಗ್ಗೆ ಎಚ್ಚರಗೊಂಡಿರನೋ, ಆತನು ಸಂಕಷ್ಟವು ಬಂದೊದಗಿದಾಗ ವ್ಯಥೆಪಡುವನು, ಹಾಗೂ ಮಹತ್ತಾದ ಶ್ರೇಯಸ್ಸನ್ನು ಪಡೆಯಲಾರನು" ಎಂದು.
ಅದಕ್ಕೆ ಅದರ ತಮ್ಮನಾದ ಸಾರಿಸೃಕ್ಕವು ಹೇಳಿತು "ಅಣ್ಣಾ, ನೀನೇ ಮೇಧಾವಿ. ನಮಗಂತೂ ಇದು ಪ್ರಾಣಸಂಕಟದ ಸಮಯವೇ ಆಗಿದೆ. ಅದರ ದೆಸೆಯಿಂದ ನಮ್ಮನ್ನು ರಕ್ಷಿಸುವುದೆಂದರೆ ಯಾರು ಪ್ರಾಜ್ಞನೋ ಶೂರನೋ ಅಗಿರುವನೋ ಅಂತಹ ಒಬ್ಬನೇ ಸರಿ. ಅದು ನೀನೇ." ಎಂದು.
ಮತ್ತೊಬ್ಬ ತಮ್ಮನಾದ ಸ್ತಂಬಮಿತ್ರವು ಹೇಳಿತು: "ಜ್ಯೇಷ್ಠನು, ಎಂದರೆ ಅಣ್ಣಂದಿರಲ್ಲಿ ಮೊದಲಿಗನು ತಂದೆಯೇ ಸರಿ, ಎಂದರೆ ತಂದೆಗೆ ಸಮಾನನೇ ಸರಿ.. ಜ್ಯೇಷ್ಠನೇ ಕಷ್ಟಗಳ ದೆಸೆಯಿಂದ ಬಿಡಿಸುವವನು. ಜ್ಯೇಷ್ಠನಿಗೇನಾದರೂ ಕಷ್ಟದಿಂದ ಪಾರಾಗುವ ಬಗೆಯು ಗೋಚರವಾಗದಿದ್ದರೆ ಚಿಕ್ಕವನು ಏನನ್ನು ಮಾಡಿಯಾನು?" ಮತ್ತೂ ಒಬ್ಬ ತಮ್ಮನಾದ ದ್ರೋಣವು ಹೇಳಿತು: "ಜ್ವಲಿಸುತ್ತಾ ಬರುತ್ತಿದ್ದಾನೆ ಈ ಅಗ್ನಿಯು – ಇದೋ ನಮ್ಮ ವಸತಿಯತ್ತಲೇ! ಏಳು ನಾಲಿಗೆಗಳುಳ್ಳ ಬಾಯುಳ್ಳವನಾಗಿ ಕ್ರೂರನಾಗಿ ನೆಕ್ಕುತ್ತಾ ಇತ್ತ ಸರಿಯುತ್ತಿದ್ದಾನೆ!
ಈ ಪ್ರಕಾರವಾಗಿ ಮಂದಪಾಲನ ಮಕ್ಕಳು ಪರಸ್ಪರ ಮಾತನಾಡಿಕೊಳ್ಳುತ್ತಿದ್ದವು. ಮತ್ತು ಏಕಾಗ್ರವಾದ ಚಿತ್ತದಿಂದ ಅಗ್ನಿಯನ್ನು ಹೀಗೆ ಪ್ರಾರ್ಥಿಸಿದವು. ಜರಿತಾರಿಯು ಹೇಳಿತು : ಅಗ್ನಿದೇವನೇ, ನೀನು ವಾಯುವಿಗೆ ಆತ್ಮನಾಗಿದ್ದೀಯೇ. ವನಸ್ಪತಿಗಳ ಶರೀರವಾಗಿದ್ದೀಯೇ. ತೃಣಲತೆಗಳ ಮೂಲವೆನಿಸುವ ಪೃಥ್ವಿಯೂ ಜಲವೂ ನಿನ್ನ ಶುಕ್ರವೇ ಆಗಿವೆ. ಅಲ್ಲದೇ ಜಲಕ್ಕೆ ನೀನೇ ಜನ್ಮಸ್ಥಾನವಾಗಿದ್ದೀಯೇ. ಸೂರ್ಯನ ಕಿರಣಗಳು ಹೇಗೋ ಹಾಗೆ ನಿನ್ನ ಜ್ವಾಲೆಗಳು ಸಹ ಮೇಲಕ್ಕೂ ಕೆಳಕ್ಕೂ ಹಿಂದುಮುಂದಕ್ಕೂ ಅಕ್ಕಪಕ್ಕಗಳಿಗೂ ಹರಡಿಕೊಳ್ಳುತ್ತವೆ" ಎಂದು. ಬಳಿಕ ಸಾರಿಸೃಕ್ಕವು ಹೇಳಿತು: ಓ ಧೂಮಕೇತುವೇ (ಹಾಗೆಂದರೆ ಧೂಮವನ್ನೇ ಧ್ವಜವನ್ನಾಗಿ ಹೊಂದಿರುವ ಅಗ್ನಿದೇವನೇ), ನಮ್ಮ ತಾಯಿ ಎಲ್ಲಿಗೋ ಹೋದಳು, ನಮ್ಮ ತಂದೆ ಎಲ್ಲಿರುವನೋ ನಾವರಿಯೆವು, ನಮಗಿನ್ನೂ ರೆಕ್ಕೆಗಳೇ ಹುಟ್ಟಿಲ್ಲ. ನಿನ್ನನ್ನು ಬಿಟ್ಟರೆ ನಮಗೆ ಮತ್ತಾವ ರಕ್ಷಕರೂ ಇಲ್ಲ. ನಾವಿನ್ನೂ ಎಳೆಯರು. ಆದ್ಧರಿಂದ ನಮ್ಮನ್ನು ಕಾಪಾಡು, ಅಗ್ನಿದೇವನೇ.