ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಮೋಸಗಾರನೊಬ್ಬನನ್ನು ಹುಡುಕುತ್ತಿದ್ದೇವೆ - ಎನ್ನುತ್ತಾನೆ, ಲೀಲಾಶುಕ. ಏನೋ ರಾಜಭಟರಿಗೆ, ಎಂದರೆ ಪೋಲೀಸರಿಗೆ, ಹಿಡಿದುಕೊಡಲೇನೋ ಎಂದು ಭಾವಿಸಬೇಡಿ. ಏಕೆಂದರೆ ಬಹಳ ವಿಭಿನ್ನವಾದ ಬಗೆಯ ಕಿತವ ಈತ. ಕಿತವನೆಂದರೆ ಕಪಟಿ, ವಂಚಕ.
ಇಂದಿನ ಕಾಲದಲ್ಲಿ ಹಾದಿಯಲ್ಲೇ ಸಿಸಿಟಿವಿ ಕ್ಯಾಮರಾಗಳುಂಟು, ಅನೇಕರ ಕೈಯಲ್ಲಿ ಮೊಬೈಲುಂಟು. ಈಗ ಒಂದೈವತ್ತು ವರ್ಷಗಳ ಹಿಂದೆ ಕೂಡ ಇವು ಅಲಭ್ಯವಾಗಿದ್ದವಷ್ಟೆ? ಹಾಗಿದ್ದಾಗ ಯಾರಾದರೂ ಕಳ್ಳನನ್ನೋ ವಂಚಕನನ್ನೋ ಹಿಡಿಯಬೇಕೆಂದಿದ್ದರೆ ಏನು ಮಾಡುತ್ತಿದ್ದರು, ಪೋಲೀಸರು? ಯಾರ ಬಳಿ ಆತ ಸುಳಿದಿದ್ದನೋ ಅವರಲ್ಲಿಗೆ ಹೋಗಿ, ಆ ವಂಚಕನ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಮೊಟ್ಟಮೊದಲು ಆತನು ಹೇಗಿದ್ದಾನೆಂದು ಕೇಳಿತಿಳಿದುಕೊಳ್ಳಬೇಕಷ್ಟೆ? ಅದಕ್ಕಾಗಿ ಆತನ ವರ್ಣನೆಯನ್ನು ಅವರು ಮಾಡಬೇಕಾಗುವುದು. ಆತ ಹೇಗಿದ್ದಾನೆ? ಎಂದರೆ ಆತನ ಆಕೃತಿ ಯಾವ ತೆರನು? ಆತನ ಜೊತೆಯಲ್ಲಿ ಯಾರಿದ್ದರು? ಅವರು ಹೇಗಿದ್ದಾರೆ? ಆತನ ವೇಷಭೂಷಣಗಳಲ್ಲಿ ವಿಶೇಷಗಳೇನಾದರೂ ಉಂಟೇ? ಮುಖ್ಯವಾಗಿ ಆತನ ಮುಖ ಹೇಗಿದೆ? - ಎಂದೆಲ್ಲ ಕೇಳುವರಲ್ಲವೇ?
ಅದನ್ನೆಲ್ಲಾ ವಿವರವಾಗಿ ಕೊಟ್ಟಿದ್ದಾನೆ, ಲೀಲಾಶುಕ. ಆ ವಂಚಕನ ಕೈಯಲ್ಲಿ ಕೊಳಲಿದೆ. ಆತನ ಆಕೃತಿ ಪ್ರಕೃತಿ-ಸುಕುಮಾರವಾದದ್ದು ಎಂದರೆ ಸಹಜ--ಕೋಮಲವಾದದ್ದು. ಅದರಲ್ಲೂ ಎದ್ದು ತೋರುವುದೆಂದರೆ ಆತನ ಬಾಲ್ಯ-ಲಕ್ಷ್ಮೀ. ಲಕ್ಷ್ಮಿಯೆಂದರೆ ಕಳೆ, ಕಾಂತಿ, ಹೊಳಪು. ಬಾಲ್ಯವೆಂದರೆ ಬಾಲಭಾವ. ಹುಡುಗುತನದ ಕಳೆ ಆತನ ಆಕೃತಿಯಲ್ಲಿ ಎದ್ದುಕಾಣುವಂತಹುದು.
ಇನ್ನು ಆತನ ಜೊತೆಗಾರರಾಗಿರುವವರು ಹೆಂಗೆಳೆಯರು. ಆ ಬಾಲೆಯರಲ್ಲಿ ಸ್ಫುಟವಾಗಿ ತೋರುವುದೆಂದರೆ ಅವರ ಲೀಲೆಗಳೇ. ಲೀಲೆಯೆಂದರೂ ಏನೋ ನರ್ತನ-ವರ್ತನಗಳೆಂದೇ ಅಲ್ಲ. ಅವರ ಅಪಾಂಗಗಳ ಲೀಲೆಗಳೆಂದರೆ ಆಯಿತು. ಅಪಾಂಗವೆಂದರೆ ಕುಡಿಗಣ್ಣೋಟ. ಆ ನೋಟದಲ್ಲಿ ಸಹ ತೋರುವುದೆಂದರೆ ಸರಸತೆ. ಸರಸವೆಂದರೆ ರಸವಿರಬೇಕಲ್ಲ? ಆ ರಸವು ಎಲ್ಲಿಂದ ಬಂದದ್ದು? ಅವರಿಗೆ ಅವನಲ್ಲಿರುವ ಪ್ರಣಯದಿಂದ ಬಂದದ್ದು. ಪ್ರೇಮರಸಕ್ಕಿಂತಲೂ ರಸವೇ? ಆ ರಸದೊಂದಿಗೆ ಬಂದ ಆಲೋಕಿತಗಳ ಸೊಗಸಿಗೆ ಸಮವುಂಟೇ?
ಇನ್ನು ಆತನ ತಲೆಯ ಮೇಲೆ ಒಂದು ವಿಶಿಷ್ಟವಾದ ಅಲಂಕಾರವಿದೆ. ನವಿಲುಗರಿಯೊಂದನ್ನು ತನ್ನ ಶಿಖೆಗೆ ಆತ ಸಿಕ್ಕಿಸ್ಕೊಂಡಿರುತ್ತಾನೆ. ಇನ್ನು ಆತನ ಮುಖವೇ? ಮುಖ-ಮುದ್ರೆಯೇ? - ಎರಡನ್ನೂ ಹೇಳುವುದಾಗುತ್ತದೆ. ಮಧುರವಾದ ವದನ-ಕಮಲ, ಎಂದರೆ ಮುಖ-ಪದ್ಮ, ಆತನದು. ಅದರ ಮೇಲೆ ಅಚ್ಚೊತ್ತಿರುವುದು ಆತನ ಮುಗ್ಧತೆ. ಈ ಮೌಗ್ಧ್ಯ-ಮುದ್ರೆ ಪ್ರಾಯಃ ಇನ್ನೆಲ್ಲೂ ಇರಲಾರದು.
ಹೀಗೆ, ಎಂದರೆ ಈ ಪರಿಯಲ್ಲಿ, ಅಥವಾ ಇಷ್ಟೂ ಕಾರಣಗಳಿಂದಾಗಿ, ಆರ್ದ್ರಾಕಾರವಾಗಿರುವ ಕಳ್ಳ ಆತ. ಆರ್ದ್ರವೆಂದರೆ ಒದ್ದೆ, ಸರಸ. ರಸರಸವಾಗಿ ತೋರುವ ಮೈಯುಳ್ಳವ, ಆತ. ಇಷ್ಟೆಲ್ಲಾ ಹೇಳಿದರೂ ಆತನನ್ನು ಚಿತ್ರಿಸಿದಂತಾಗಲಿಲ್ಲ, ವರ್ಣಿಸಿದಂತಾಗುವುದಿಲ್ಲ. ಏಕೆಂದರೆ ಆತ ವಸ್ತುತಃ ಅವರ್ಣನೀಯ. ಕತ್ತಲಲ್ಲಿ ಕಾಣಿಸದವನು ಎಂದು ಸಹ ಅಲ್ಲ. ಏಕೆಂದರೆ ಆತನು ಜ್ಯೋತೀರೂಪ.
ಇಷ್ಟಾಗಿಯೂ ಆತನು ಕಳ್ಳನೇ. ಚಿಕ್ಕಂದಿನಿಂದಲೂ ಬೆಣ್ಣೆ ಕದಿಯುವುದು, ಅವರಿವರ ಮನೆಯಲ್ಲಿ - ಅಲ್ಲಿಲ್ಲೇನು, ಎಲ್ಲರ ಮನೆಯಲ್ಲಿಯೂ - ಎನ್ನಬಹುದೇನೋ. ಅಂತೂ ಹೀಗೆಲ್ಲ ಇರುವ ವಿಶಿಷ್ಟ-ವಿಚಿತ್ರ- ಚೋರನೀತ. ಆತನನ್ನೇ ನಾವು ಹುಡುಕುತ್ತಿರುವುದು - ಎನ್ನುತ್ತಾನೆ, ಲೀಲಾಶುಕ.
ಇಷ್ಟೆಲ್ಲಾ ಲಕ್ಷಣಗಳು ಯಾರಲ್ಲಿರುವುವು? ಮತ್ತಿನ್ನಾರು, ಸಾಕ್ಷಾತ್ ನಮ್ಮ ಕೃಷ್ಣನೇ. ಪ್ರೇಮರಸ-ಭರಿತರಾಗಿ ಆತನನ್ನೇ ಹಿಂಬಾಲಿಸುವ ಕಣ್ಣೋಟವುಳ್ಳವರಾಗಿ, ಮತ್ತೆಲ್ಲ ಸಂಗವನ್ನು ಬಿಟ್ಟು ಆತನ ಸಂಗಕ್ಕೇ ಅಂಟಿಕೊಂಡವರಾದ ಗೋಪಿಕೆಯರು - ಆತನ ಸುತ್ತ ಸರ್ವದಾ ಇರುವರು.
ತನ್ನ ಮೌಳಿಯಲ್ಲಿ ಎಂದರೆ ಶಿರಸ್ಸಿನ ಶಿಖೆಯ ಮೇಲೆ ನವಿಲುಗರಿ ಧರಿಸಿರುವವ, ಬಾಲ್ಯ-ಮೌಗ್ಧ್ಯಗಳ ಅಚ್ಚೊತ್ತಿರುವ ಆತ. ಕಪಟನಾಟಕ ಮಾಡುವವನಾದರೂ ಪರಂಜ್ಯೋತಿಸ್ಸ್ವರೂಪ. ಅತನಿಗಾಗಿಯೇ ನಮ್ಮ ಹುಡುಕಾಟ.
ಆತ ಸಿಕ್ಕರೆ ಅದು ನಮ್ಮ ಪುಣ್ಯ. ಆತನು ಸಿಕ್ಕ ದಿನ ಧನ್ಯ. ಆತನನ್ನು ಕಂಡ ಕಂಗಳು ಪಾವನ. ಅತನನ್ನು ಹುಡುಕುತ್ತಿದ್ದೇವೆ.
ಶ್ಲೋಕ ಹೀಗಿದೆ:
ಪಾಣೌ ವೇಣುಃ, ಪ್ರಕೃತಿ-ಸುಕುಮಾರಾಕೃತೌ ಬಾಲ್ಯ-ಲಕ್ಷ್ಮೀಃ /
ಪಾರ್ಶ್ವೇ ಬಾಲಾಃ, ಪ್ರಣಯ-ಸರಸಾಲೋಕಿತಾಪಾಂಗ-ಲೀಲಾಃ |
ಮೌಳೌ ಬರ್ಹಂ, ಮಧುರ-ವದನಾಂಭೋರುಹೇ ಮೌಗ್ಧ್ಯ-ಮುದ್ರೇ-/
-ತ್ಯಾರ್ದ್ರಾಕಾರಂ ಕಿಮಪಿ ಕಿತವಂ ಜ್ಯೋತಿರನ್ವೇಷಯಾಮಃ ||
ಕೃಷ್ಣಾ, ನೀನೇ ನನಗೆಲ್ಲವೂ, ನಿನ್ನ ಬಿಟ್ಟ್ಟರೆ ಮತ್ತಾರೂ ಇಲ್ಲ - ಎನ್ನುತ್ತಾನೆ ಲೀಲಾಶುಕ, ಮತ್ತೊಂದು ಶ್ಲೋಕದಲ್ಲಿ. ಏಕೆ? ನನ್ನ ಪಾಲಿಗೆ ನೀನೇನೇನು? - ಎನ್ನುವುದನ್ನು ಇಲ್ಲಿ ಪಟ್ಟಿಮಾಡಿದ್ದಾನೆ. ಎಲ್ಲರೂ ಬಯಸಬಹುದಾದ ಏಳು ಅಂಶಗಳೂ ಕೃಷ್ಣನೇ - ಎನ್ನುತ್ತಾನೆ. ಜೊತೆಗೆ, ಇವಲ್ಲದೆ ಇನ್ನೂ ಏನಾದರೂ ಇರುವುದಾದರೂ, ಅದೂ ಸಹ ನೀನೇ ಎಂಬ ಧ್ವನಿಯು ಬರಲೆಂದು ಏಳು ಬಾರಿ 'ಚ'ಕಾರವನ್ನು ಬಳಸಿದ್ದಾನೆ.
ಶ್ರೀಕೃಷ್ಣನು ನನಗೆ ಪ್ರೇಮದನೂ ಹೌದು, ಕಾಮದನೂ ಹೌದು. ಆತನ ಪ್ರೇಮವೆಂದರೆ ವಿಶುದ್ಧ-ಮಧುರವಾದದ್ದು. ಅಂತಹ ಪ್ರೇಮವನ್ನು ಮತ್ತಿನ್ನಾರಿತ್ತಾರು? ಪ್ರೇಮಪ್ರದತ್ವವು ಕಾಮಪ್ರದತ್ವವಾಗಿಯೂ ಪರಿಣಮಿಸುತ್ತದೆ. ಎಲ್ಲಿ ಪ್ರೇಮವುಂಟೋ ಅಲ್ಲಿ ಕಾಮಪೂರ್ತಿಯೂ ಉಂಟು. ಕಾಮವೆಂದರೆ ಬಯಕೆಗಳು, ಅಪೇಕ್ಷೆಗಳು. ತಮಗೆ ಇಷ್ಟವಾದವರಿಗೆ ಇಷ್ಟವಾದುದನ್ನು ತಂದು ಕೊಡುವ ಆಸೆ ಯಾರಿಗಿರುವುದಿಲ್ಲ? ಎಲ್ಲರೂ ಬಯಸುವ ಕಾಮವೆಂದರೆ ಆನಂದವೇ ಸರಿ. ಅದನ್ನು ಕೊಡುವವನೂ ಕೃಷ್ಣನೇ.
ಕೃಷ್ಣಾ, ನೀನು ನನ್ನ ವೇದನವೂ ಆಗಿದ್ದೀಯೇ, ವೈಭವವೂ ಆಗಿದ್ದೀಯೇ. ವೇದನೆಯೆಂದರೆ ನೋವು; ಅದನ್ನಲ್ಲ ಇಲ್ಲಿ ಹೇಳುತ್ತಿರುವುದು. ವೇದನವೆಂದರೆ ಅರಿವು, ಜ್ಞಾನ, ನಿಶ್ಚಯಜ್ಞಾನ. ಹೀಗೆ ನೀನೇ ಜ್ಞಾನಪ್ರದನೂ ಹೌದು. ಶಿಕ್ಷಾಗುರುವು ನೀನು ಎಂದು ಆರಂಭದಲ್ಲೇ ಲೀಲಾಶುಕನು ತಿಳಿಸಿದ್ದಾನೆ. ನೀನಲ್ಲದೆ ಮತ್ತಾರು ಜ್ಞಾನದಾತರು? ಜೊತೆಗೆ ನೀನೇ ನನ್ನ ವೈಭವ. ಸಿರಿಸಂಪತ್ತುಗಳನ್ನು ವೈಭವ ಎನ್ನುವರು. ನೀನೇ ನನ್ನ ಸಮಸ್ತ ಸಂಪತ್ತು.
ಇವೇ ಅಲ್ಲದೆ ನನ್ನ ಜೀವನವೂ ನೀನೇ, ಜೀವಿತವೂ ನೀನೇ. ಯಾವುದರಿಂದಾಗಿ ಜೀವಿಸುತ್ತೇವೆಯೋ ಅದುವೇ ಜೀವನ. ಯಾವ ವೈಭವವಿಲ್ಲದಿದ್ದರೂ ಜೀವಿಸಿಯೇವು. ಯಾವನು ಜೀವ ತುಂಬುವನೋ ಆತನೇ ಜೀವನಹೇತು. ಇದೇ ಅಲ್ಲದೆ, ಜೀವತವೆಂದರೆ ಪ್ರಾಣಧಾರಣವೆಂಬುದಾಗಿ. ಅದೂ ನೀನೇ.
ಮತ್ತು ಕೊನೆಯದಾಗಿ, ನೀನೇ ದೈವತವೂ ಹೌದು. ದೇವತೆಯನ್ನೇ ದೈವತವೆನ್ನುವುದು. ದೇವ-ಸ್ತೋಮಕ್ಕೂ ದೈವತವೆನ್ನುವುದುಂಟು. ಹೀಗೆ ನನ್ನ ಪಾಲಿನ ಎಲ್ಲ ದೇವತೆಗಳೂ ನೀನೇ.
ನಾನು ನಿನ್ನನ್ನು ಇಷ್ಟೆಲ್ಲ ಪ್ರಕಾರಗಳಲ್ಲಿ ಭಾವಿಸಿದರೂ ನೀನೇಕೆ ಇನ್ನೂ ತೋರುತ್ತಿಲ್ಲ? - ಎಂದು ಅಂಗಲಾಚಿ ಕೇಳಿಕೊಳ್ಳುವ ದೈನ್ಯಭಾವ ಈ ಶ್ಲೋಕದಲ್ಲಿದೆ.
ಪ್ರೇಮದಂ ಚ ಮೇ ಕಾಮದಂ ಚ ಮೇ
ವೇದನಂ ಚ ಮೇ ವೈಭವಂ ಚ ಮೇ |
ಜೀವನಂ ಚ ಮೇ ಜೀವಿತಂ ಚ ಮೇ
ದೈವತಂ ಚ ಮೇ ದೇವ ನಾಪರಮ್ ||
ಸೂಚನೆ : 07/04/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.