ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಮನೆಯಲ್ಲಿ ಮಗುವೊಂದು ಹುಟ್ಟಿತೆಂದರೆ ಸಂಭ್ರಮವೋ ಸಂಭ್ರಮ. ಎಲ್ಲರಿಗೂ ಸುದ್ದಿ ತಿಳಿಸುವುದೇನು, ನಿಕಟಬಂಧುಮಿತ್ರರಿಗೆ ಸಿಹಿ ಹಂಚುವುದೇನು, ಎಲ್ಲವೂ ಸಡಗರವೇ. ಎಲ್ಲರಿಗೂ ನವಶಿಶುವನ್ನು ನೋಡುವ ಆಸೆ, ಮೊಟ್ಟಮೊದಲು. ಆ ಆಸೆಯು ಈಡೇರುತ್ತಲೇ, ಅನತಿಕಾಲದಲ್ಲೇ, ಮಗುವು ತನ್ನತ್ತ, ಅಥವಾ ತನ್ನನ್ನೇ, ನೋಡಬೇಕೆಂಬ ಆಸೆ.
ಮಗುವಿನ ಗಮನ ಸೆಳೆಯಲು ಸರ್ವಪ್ರಯತ್ನಗಳೂ ಸಾಗುವುವು: ಏನಾದರೊಂದು ಸದ್ದು ಮಾಡು, ಕಣ್ಣ ಮುಂದೆ ಏನನ್ನಾದರೂ ಅತ್ತಿತ್ತ ಆಡಿಸು; ಚಪ್ಪಾಳೆಯೋ, ಚಿಟಿಕೆಯೋ, ಬಣ್ಣ ಬಣ್ಣದ ಗಿಲಕಿಯೋ - ಅಂತೂ ಶಿಶುವಿನ ಕಣ್ಣು-ಕಿವಿಗಳಿಗೆ ತಲುಪುವ ರೂಪ-ಶಬ್ದಗಳನ್ನು ಮುಂದಿಡು!
ಮಗುವಿನ ಆಗಾಗಿನ ಮುಗುಳ್ನಗೆಯೆಂಬುದು ನಿಷ್ಕಾರಣವೆಂಬಂತೆ ಕಂಡರೂ, ಅದು ವಾಸ್ತವವಾಗಿ, ಶ್ರೀರಂಗಮಹಾಗುರುಗಳು ತಿಳಿಸಿರುವಂತೆ, ಅಂತರಂಗದಲ್ಲಿ ಗೋಚರಿಸುವ ಒಳಬೆಳಕಿನಲ್ಲಿ ತಾನೇ ತಾನಾಗಿ ಶಿಶುವು ನಲಿಯುವುದರ ಸೂಚಕ; ಅದಕ್ಕೆ ಸದ್ದು-ನೋಟಗಳ ಹೊರಗಣ ಆಕರ್ಷಣೆಗಳನ್ನು ಒಡ್ಡುತ್ತಿರುವುದು ನಾವು. ಬಹಿರ್ಮುಖತೆಯನ್ನು ಬರಿಸುತ್ತಿರುವುದು ನಾವು, ಅಷ್ಟೇ.
ಆಮೇಲಾಮೇಲೇ, "ನನ್ನನ್ನು ನೋಡಿಯೇ ಮಗು ನಕ್ಕದ್ದು" - ಎಂದು ಹೇಳಿಕೊಳ್ಳುವುದರಲ್ಲಿಯೇ ಧನ್ಯತೆಯೆಂಬುದು ತಂದೆತಾಯಿಗಳಲ್ಲಿ ಶುರುವಾಗುವುದು.
ಮಗುವಿನ ಅಂಗಗಳಲ್ಲಿ ಸ್ಫುಟತೆ-ಸ್ಪಷ್ಟತೆಗಳು ಮೂಡುತ್ತಲೇ, ಅದರ ರೂಪದ ನಿರೂಪಣವು ಆರಂಭವಾಗುತ್ತದೆ: ತಾಯಿಯ ಕಡೆಯವರಿಗೆಲ್ಲ ತಮ್ಮ ಮನೆಯವರ ರೂಪ ಮಗುವಿನಲ್ಲಿ ಕಂಡರೆ, ತಂದೆಯ ಕಡೆಯವರಿಗೆ ತಮ್ಮ ಮಂದಿಯ ಅಚ್ಚೇ ಎದ್ದು ಕಾಣುತ್ತದೆ. ಮಿತ್ರರಂತೂ ಎರಡೂ ಕಡೆಯ ಮುದ್ರೆಗಳನ್ನೂ ಗುರುತಿಸಿಯಾರು.
ಹಾಗೆಯೇ, ಅಪ್ಪಅಮ್ಮಂದಿರಿಗೆ ತಮ್ಮ ತಮ್ಮ ಕಡೆಯವರನ್ನು ಪರಿಚಯ ಮಾಡಿಕೊಡುವ ಉತ್ಸಾಹವೂ ಇಲ್ಲದಿರುವುದಿಲ್ಲ. ಎಂದೇ, ಶ್ರೀರಂಗಮಹಾಗುರುಗಳು ತಿಳಿಹಾಸ್ಯವನ್ನೂ ಅನುಪ್ರಾಸವನ್ನೂ ಬೆರೆಸಿ ಹೇಳುವಂತೆ, "ಮಾವ ನೋಡು, ಭಾವ ನೋಡು" ಇತ್ಯಾದಿಯಾಗಿ ಹೇಳಿ, ಮಗುವಿನ ಗಮನವನ್ನು ಅದರಿದರತ್ತಲೋ ಅವರಿವರತ್ತಲೋ ಸೆಳೆಯುವುದಾಗುತ್ತದೆ.
ಇನ್ನು ಮಕ್ಕಳನ್ನು ತೂಗಿ ನಿದ್ರೆಮಾಡಿಸುವುದರಲ್ಲಿ ನಮ್ಮ ದೇಶದಲ್ಲ್ಲಿಯ ಸಂಪ್ರದಾಯವೇ ವಿಶಿಷ್ಟ. ಮಕ್ಕಳಿಗೆ ಕೆಲವೊಮ್ಮೆ ನಿದ್ದೆ ಬರುತ್ತಿದ್ದರೂ, ಅಥವಾ ಆ ಕಾರಣಕ್ಕಾಗಿಯೇ, ಏನೋ ಹಟ, ಏನೋ ಚಂಡಿ ಹಿಡಿಯುವುದು ಆಗುವುದುಂಟು. ತೊಟ್ಟಿಲನ್ನು ತೂಗುತ್ತಾ ನಾವು ಜೋಗುಳ ಹಾಡುತ್ತಿದ್ದರೆ, ಗಾನವನ್ನಾಲಿಸುತ್ತ ಮಗುವು ನಿದ್ದೆಹೋಗುವುದುಂಟಲ್ಲವೇ?ಹಾಗೆ ಹಾಡಿ ನಿದ್ದೆ ಬರಿಸುವಾಗ, ಮಗುವನ್ನು ದೇವರೆಂಬಂತೆ ಕಂಡು - ಪೂಜ್ಯ ಪುರಂದರದಾಸರು ಹಾಕಿಕೊಟ್ಟ ಮೇಲ್ಪಂಕ್ತಿಯಂತೆ – "ಜಗದೋದ್ಧರನಾ, ಆಡಿಸಿದಳು ಯಶೋದಾ" ಎಂಬ ಪರಿಯಲ್ಲಿ ಹಾಡುವುದುಂಟಲ್ಲವೇ? ಇಲ್ಲೆಲ್ಲಾ ಎಳೆಗೂಸಿನಲ್ಲಿ ದೈವತ್ವದ ಅಚ್ಚನ್ನು ಕಂಡುಕೊಳ್ಳುವುದಾಗಿರುತ್ತದೆಯಲ್ಲವೇ?
ಹೀಗೆ ಮಗುವಿನಲ್ಲಿ ದೈವಭಾವವನ್ನು ಕಾಣುವ ಈ ಹಿಂದೂಸಂಸ್ಕೃತಿಯ ಪರಿ ಇಡೀ ದೇಶದಲ್ಲೇ ಉಂಟು. ತೊಟ್ಟಿಲು ತೂಗುವಾಗ ಮಾತ್ರವಲ್ಲದೆ, ಒಂದು ಆರತಿಯಿರಬಹುದು, ನಾಮಕರಣವಿರಬಹುದು - ಇವೆಲ್ಲ ಸಂದರ್ಭದಲ್ಲೂ ಶಿಶುವಿನಲ್ಲಿಯ ದೈವಭಾವವನ್ನು ಗುರುತಿಸಿ ಆದರಿಸಿ ನಲಿದು, ಸಿಹಿ ಹಂಚಿ ಸಂತೋಷಪಡು(ಡಿಸು)ವ ಬಗೆಯನ್ನು ನಮ್ಮ ಪರಂಪರೆಯಲ್ಲಿ ಉದ್ದಕ್ಕೂ ನೋಡಬಹುದು.
ಇವೆಲ್ಲಕ್ಕಿಂತಲೂ ಮಿಗಿಲಾದುದೆಂದರೆ, ಶ್ರೀಕೃಷ್ಣನು ಹುಟ್ಟಿದಾಕ್ಷಣದಲ್ಲಿ ದೇವಕಿಯು ಆತನನ್ನು ಕಂಡ ರೀತಿ: ಭಾಗವತದಲ್ಲಿ ನಿರೂಪಿತವಾಗಿರುವಂತೆ, ಪರತತ್ತ್ವವು ತೋರಿಕೊಂಡಾಗ ಅದು ಹೇಗಿರುವುದೆಂಬುದನ್ನು ಸಾಕ್ಷಾತ್ ಜ್ಞಾನಿಯೊಬ್ಬನು ಕಾಣುವ ಬಗೆಯೇ ಅದು!
ಕೃಷ್ಣನ ರೂಪವು ಅವ್ಯಕ್ತವೂ ಆದ್ಯವೂ ಆದದ್ದು. ನಿರ್ಗುಣವೂ ನಿರ್ವಿಕಾರವೂ ಆದ ಬ್ರಹ್ಮಜ್ಯೋತಿಸ್ಸದು. ಏಕೆಂದರೆ ಅದಿನ್ನೂ ಸತ್ತಾಮಾತ್ರವೂ ನಿರ್ವಿಶೇಷವೂ ಆಗಿರುವುದು (ಸತ್ತಾಮಾತ್ರಂ ನಿರ್ವಿಶೇಷಂ).
ಏನು ಹಾಗೆಂದರೆ? ಸತ್ತೆಯೆಂದರೆ ಇರುವಿಕೆ. ಹೀಗಾಗಿ "ಅದು ಇದೆ"ಯೆಂದಷ್ಟನ್ನು ಮಾತ್ರವೇ ಅದರ ಬಗ್ಗೆ ಹೇಳಲಾಗುವುದು. ಅದನ್ನೇ ವಿವರಿಸಿ ಹೇಳೆಂದರೆ, ಆಗದೆನ್ನಬೇಕಾಗುತ್ತದೆ! ಯಾವುದನ್ನು ಕುರಿತು ವರ್ಣ-ರೂಪ-ಆಕಾರ ಮೊದಲಾದ ವಿಶೇಷಗಳನ್ನೇನನ್ನೂ ಹೇಳಲಾಗದೋ, ಅದುವೇ ನಿರ್ವಿಶೇಷ. ಇದುವೇ ಆತ್ಮತತ್ತ್ವದ ಮೂಲಸ್ಥಿತಿ, ಪರಿಶುದ್ಧಸ್ಥಿತಿ, ಪರಮಾನಂದದ ಸ್ಥಿತಿ.
ಯಾವಾಗ ಈಹೆಯು, ಎಂದರೆ ಸೃಷ್ಟಿಮಾಡಬೇಕೆಂಬ ಬಯಕೆಯು, ಉಂಟಾಗುತ್ತದೆಯೋ, ಅಲ್ಲಿಂದ ಮುಂದಕ್ಕೇ ಈ ವಿಶೇಷಗಳೇನಿದ್ದರೂ ಮೂಡುವುದು. ಆದ್ದರಿಂದ ಇದು ವಿಷ್ಣುವಿನ ನಿರೀಹ-ಸ್ಥಿತಿಯೂ ಹೌದು. ಸವಿಶೇಷತೆಗಳೇನಿದ್ದರೂ ಆಮೇಲಿನವೇ.
ಶ್ರೀಕೃಷ್ಣನನ್ನು ದೇವಕಿಯು ಹೀಗೆ ಅಧ್ಯಾತ್ಮದೀಪವಾಗಿ ಕಂಡುದರ ವಿಶೇಷವನ್ನು ನಿರೂಪಿಸಿ, ಅದರ ಈ ತಾತ್ತ್ವಿಕನೆಲೆಯನ್ನು ಶ್ರೀರಂಗಮಹಾಗುರುಗಳು ತೋರಿಸಿಕೊಟ್ಟಿದ್ದಾರೆ.
ಶ್ರೀಕೃಷ್ಣನನ್ನು ವಸುದೇವಸುತನೆಂದು ಕರೆದರೂ, ದೇವಕೀಪರಮಾನಂದನೆಂದು ಹೇಳುವುದರಲ್ಲಿಯ ಔಚಿತ್ಯಪೂರ್ಣತೆಯು ಈಗ ಸ್ಫುಟವಾಗುತ್ತದೆಯಲ್ಲವೇ?
ಪರತತ್ತ್ವದ ಒಳಮರ್ಮವನ್ನು ಗುರುತಿಸಿ ತೋಷಿಸಿ ಸಮುಚಿತವಾಗಿ ನುತಿಸುವ ದೇವಕಿಯ ಈ ಭಾಗ್ಯ ಎಷ್ಟು ತಾಯಂದಿರಿಗುಂಟು?
ಸೂಚನೆ: 26/4//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.