Monday, April 7, 2025

ಆದರ್ಶ ಸತಿಯ ದಿಟ್ಟರೀತಿ, ಧರ್ಮಪ್ರೀತಿ (Adarsha Satiya Dittariti, Dharmapreeti)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ರಾಮಾಯಣವೆಂದರೆ ಸೀತೆಯ ಚರಿತ್ರವೆಂದೇ ವಾಲ್ಮೀಕಿಮಹರ್ಷಿಗಳು ಹೇಳುತ್ತಾರೆ (ಸೀತಾಯಾಃ ಚರಿತಂ ಮಹತ್). ಜನಕಮಹಾರಾಜನ ಜ್ಯೇಷ್ಠಪುತ್ರಿಯೂ ದಶರಥಮಹಾರಾಜನ ಹಿರಿಯ ಸೊಸೆಯೂ ಆಗಿದ್ದ ಸೀತಾದೇವಿ, ರಾಮನ ಪತ್ನಿಯ ರೂಪದಲ್ಲಿ ತನ್ನ ಸತೀತ್ವವನ್ನು ಮೆರೆದಿರುವುದರಲ್ಲಿ ಸಂಶಯವೇ ಇಲ್ಲ. ಇದನ್ನು ಒಂದೇ ಪ್ರಸಂಗದ ಮೂಲಕ ಕಂಡುಕೊಳ್ಳಬಹುದು, ಸ್ಥಾಲೀಪುಲಾಕನ್ಯಾಯದಿಂದ, ಎಂದರೆ ಅಕ್ಕಿ ಬೆಂದಿದೆಯೇ ಇಲ್ಲವೋ ಎಂಬುದನ್ನು ಒಂದೇ ಅಗುಳನ್ನು ಪರೀಕ್ಷಿಸಿ ತಿಳಿದುಕೊಂಡಂತೆ.

ರಾಮನ ಯೌವರಾಜ್ಯಾಭಿಷೇಕ ತಪ್ಪಿಹೋಗಿ, ಅವನಿಗೆ ವನವಾಸದ ಆಜ್ಞೆಯಾಗುವುದು - ಇದು ರಾಮಾಯಣದ ಒಂದು ಮುಖ್ಯ ಘಟ್ಟ. ಆ ಮಹಾತ್ಮನಾದರೋ ಒಂದಿಷ್ಟೂ ಮನೋವಿಕಾರವಿಲ್ಲದೇ ಆ ಆಜ್ಞೆಯನ್ನು ಸ್ವೀಕರಿಸಿದನು. ತನ್ನ ತಾಯಿಯಾದ ಕೌಸಲ್ಯೆಗೆ ವಿಷಯ ತಿಳಿಸಿದಾಗ ಅವಳ ದುಃಖಕ್ಕೆ ಕೊನೆಯೇ ಇಲ್ಲದಾಯಿತು. ಅತ್ತ ಲಕ್ಷ್ಮಣನೂ ಕೋಪಗೊಂಡನು. ಕೊನೆಗೆ ರಾಮನು ಬಂದು ತಿಳಿಸಿದ್ದು ಸೀತೆಗೆ. ಅವಳನ್ನು ನೋಡಿದಾಕ್ಷಣ ರಾಮನಿಗೆ ದುಃಖವು ಉಮ್ಮಳಿಸಿತು - ತನ್ನ ಸಲುವಾಗಿಯಲ್ಲ, ಅವಳ ಸಲುವಾಗಿ! ತನಗೆ ತಂದೆಯಿತ್ತ ಆಜ್ಞೆಯನ್ನು ರಾಮನು ತಿಳಿಸಿದನು. ಸೀತೆಯು ಮುಂದೆ ತನ್ನ ಪತಿಯ ಅನುಪಸ್ಥಿತಿಯಲ್ಲಿ ಯಾರ ಕೋಪಕ್ಕೂ ಸಿಕ್ಕಿಹಾಕಿಕೊಳ್ಳಬಾರದೆಂದರೆ ಅರಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು, ಅವಳ ದಿನಚರಿ ಹೇಗಿರಬೇಕು, ಎಂದೆಲ್ಲಾ ಅವಳಿಗೆ ಬುದ್ಧಿವಾದ ಹೇಳಿದನು. ಆಗ ಅವಳ ಮೊದಲ ಪ್ರತಿಕ್ರಿಯೆಯಾದರೂ ಏನು?


ಪ್ರಣಯಕೋಪದಿಂದಲೇ ಅವಳು "ಆರ್ಯಪುತ್ರ, ನೀನು ಹೀಗೆಲ್ಲಾ ಉಪಹಾಸ್ಯ ಮಾಡಬಹುದೇ? ಹೆಂಡತಿಯೊಬ್ಬಳೇ ಗಂಡನ ಭಾಗ್ಯವನ್ನು ಹಂಚಿಕೊಳ್ಳುವವಳು. ಹಾಗಿದ್ದಾಗ, ನಿನಗೆ ವನವಾಸ ಆಜ್ಞೆಯಾಗಿದೆಯೆಂದರೆ, ನನಗೂ ಆಜ್ಞೆಯಾದಂತೆಯೇ! ನಿನಗಿಂತ ಒಂದು ಹೆಜ್ಜೆ ನಾನೇ ಮುಂದೆ ನಡೆಯುತ್ತಾ, ನಿನ್ನ ಹಾದಿಯ ಮುಳ್ಳುಕಡ್ಡಿಗಳನ್ನು ಮೆಟ್ಟುತ್ತಾ ಹೋಗುತ್ತೇನೆ. ನನ್ನ ಮೇಲೆ ಏನಾದರೂ ಕೋಪವಿದ್ದರೆ, ಅದನ್ನೆಲ್ಲ ಮರೆತು ನನ್ನನ್ನು ನಿನ್ನೊಡನೆ ಕರೆದುಕೊಂಡು ಹೋಗು. ಎಂತಹ ಅರಣ್ಯವೇ ಆಗಿರಲಿ, ಸುಖವಾಗಿ ನಿನ್ನ ಸೇವೆ ಮಾಡಿಕೊಂಡು ಅಲ್ಲಿರುತ್ತೇನೆ. ನೀನು ಆಹಾರ ತೆಗೆದುಕೊಂಡಾಗಲೇ ನಾನೂ ತೆಗೆದುಕೊಳ್ಳುತ್ತೇನೆ. ನದಿ-ಪರ್ವತ-ಕೊಳ-ವನ ಎಲ್ಲವನ್ನೂ ನೋಡುವ ಆಸೆ ಇದೆ. ನಿನ್ನಂತಹ ಧೀಮಂತನಿರುವಾಗ ನಿರ್ಭಯವಾಗಿ ಎಲ್ಲವನ್ನೂ ನೋಡುತ್ತೇನೆ" ಎಂದು ಹೇಳಿ, "ನೀನಿಲ್ಲದಿದ್ದರೆ ಸ್ವರ್ಗದಲ್ಲೂ ನಾನು ವಾಸಮಾಡೆ. ನೀನು ಬಿಟ್ಟುಹೋದರೆ ನನ್ನ ಸಾವು ನಿಶ್ಚಿತ" ಎಂದು ತನ್ನ ನಿಶ್ಚಯವನ್ನು ತಿಳಿಸುತ್ತಾಳೆ ತನ್ನ ಪತಿಗೆ. ತನ್ನ ಮೇಲಿನ ಪ್ರೀತಿಯಿಂದ ಸೀತೆ ಹೀಗೆಲ್ಲಾ ಹೇಳುತ್ತಿದ್ದು, ಅವಳಿಗೆ ವನವಾಸದ ಕಷ್ಟಗಳ ಎಣಿಕೆಯೇ ಇಲ್ಲವೆಂದು ಬಗೆದು ಶ್ರೀರಾಮನು ಅದನ್ನೂ ಬಣ್ಣಿಸಿದ್ದಾಯಿತು. ಹೀಗೆ ಬಹಳ ಹೊತ್ತು ರಾಮನ ಕಡೆಯಿಂದ ಅವಳನ್ನು ತಡೆಯಲೂ, ಸೀತೆಯ ಕಡೆಯಿಂದ ಅದನ್ನು ಮೀರಿ ಬರಲೂ ಪ್ರಯತ್ನಗಳು ನಡೆದವು. ಕೊನೆಗೆ, ಸೀತೆಯು, "ನನ್ನ ತಂದೆ ಮಿಥಿಲಾಧಿಪನು ಗಂಡುವೇಷದ ಹೆಣ್ಣನ್ನು ಅಳಿಯನಾಗಿ ಪಡೆದನೆ, ರಾಮ?" ಎಂದು ಮುಂತಾಗಿ ಮೂದಲಿಸಿ, ಕೊನೆಗೆ ಗೋಳಿಟ್ಟಳು. ಸರ್ವವಿಧದಲ್ಲೂ ತಾನು ರಾಮನ ಜೊತೆಗೇ ಹೋಗಬೇಕೆಂಬ ಆಗ್ರಹ ತೋಡಿಕೊಂಡ ನಂತರ, ಕೊನೆಗೆ ರಾಮನೂ ಒಪ್ಪಬೇಕಾಯಿತು. ತದನಂತರದ ಕಥೆಯು ತಿಳಿದೇ ಇದೆ.


ಇಲ್ಲಿ ರಾಮನು ಸೀತೆಯ ಸೌಕುಮಾರ್ಯದ ಬಗ್ಗೆ ಚಿಂತಿಸಿ, ಅಲ್ಲಿಯ ದುಃಖಪರಂಪರೆಯನ್ನು ಬಣ್ಣಿಸುತ್ತಾನೆ. ಕಾಡುಮೇಡುಗಳಲ್ಲಿರುವುದು, ದೇವಪಿತೃಕಾರ್ಯಗಳನ್ನೂ ಅತಿಥಿಸತ್ಕಾರವನ್ನೂ ವಿಧಿಪೂರ್ವಕವಾಗಿ ಮಾಡುವುದು, ಘೋರಸರ್ಪಗಳ ಕಾಡುಪ್ರಾಣಿಗಳ ಕಾಟ ತಡೆಯುವುದು, ದರ್ಭೆಯ ಮೇಲೆ ಮಲಗುವುದು - ಇವೆಲ್ಲ ಸುಲಭವೇ ಅಲ್ಲ ಇತ್ಯಾದಿಯಾಗಿ ರಾಮನ ಯೋಚನೆ. ಸೀತೆಗೆ ಮಾತ್ರ ತನ್ನ ಧರ್ಮವೊಂದರ ಮೇಲೇ ಗಮನ - ಪತಿಯಿದ್ದೆಡೆಯೇ, ಅವನಿಗೆ ಅನುಕೂಲವಾಗುವಂತೆ ತಾನಿರಬೇಕು - ಎಂದು. ರಾಮನು ರಾಜ್ಯಾಭಿಷೇಕ ತಪ್ಪಿದ್ದರ ಬಗ್ಗೆ ದುಃಖಿಸಲಿಲ್ಲವೆಂದರೆ ಸೀತೆಯೂ ದುಃಖಿಸಲಿಲ್ಲ. ಅವಳು ಪಡಬೇಕಾದ ಕಷ್ಟವನ್ನು ಯೋಚಿಸಿ ರಾಮನು ದುಃಖಿತನಾದನೆಂದರೆ ಅವಳೂ ರಾಮನ ಕಷ್ಟದಲ್ಲಿ ತಾನು ಭಾಗಿಯಾಗುವುದನ್ನು ರಾಮ ತಪ್ಪಿಸುತ್ತಿದ್ದಾನಲ್ಲಾ ಎಂದು ದುಃಖಿಸುತ್ತಾಳೆ. ತನ್ನ ಕರ್ತವ್ಯ, ಧರ್ಮಗಳನ್ನಾಚರಿಸಲು ರಾಮನು ಅರಣ್ಯಕ್ಕೆ ಹೊರಟಿದ್ದರೆ ಆಕೆಯೂ ಅಷ್ಟೆ, ತನ್ನ ಧರ್ಮಕ್ಕಾಗಿಯೂ, ಪತಿಯ ಮೇಲಿನ ಪ್ರೀತಿಯಿಂದಲೂ ಅರಣ್ಯಕ್ಕೆ ಹೊರಡಲು ಹಾತೊರೆಯುತ್ತಿದ್ದಾಳೆ. ಇವಳಿಗೆ ಅಲ್ಲಿ ಕಷ್ಟವಾಗಬಹುದೆಂದು ರಾಮನು ಊಹಿಸಿಕೊಂಡರೆ, ತನಗೆ ನದೀ-ವನಗಳನ್ನು ನೋಡುವ ಆಸೆಯಿದೆಯೆಂದೂ ಅವನ ದುಗುಡವನ್ನು ಶಮನ ಮಾಡುವಂತೆ ಹೇಳುತ್ತಾಳೆ. ಇಬ್ಬರಿಗೂ ಪರಸ್ಪರ ಅನುರಕ್ತಿ ಎಷ್ಟಿದೆಯೆಂಬುದು ಇಲ್ಲೇ ತಿಳಿಯುತ್ತದೆ. ಮುಂದೆ ಸುಂದರಕಾಂಡದಲ್ಲಿ ಹನುಮಂತನೇ ಹೇಳುವುದೇನೆಂದರೆ: "ರಾಘವೋಽರ್ಹತಿ ವೈದೇಹೀಂ ತಂ ಚೇಯಮ್ ಅಸಿತೇಕ್ಷಣಾ". ಅರ್ಥಾತ್ "ವೈದೇಹಿಯನ್ನು ಪಡೆಯಲು ರಾಘವನು ಅರ್ಹ, ಅವನನ್ನು ಪಡೆಯಲು ಈ ಕಪ್ಪುಕಣ್ಗಳುಳ್ಳವಳು ಅರ್ಹಳು" - ಎಂದು ಅವರ ಪರಸ್ಪರ ಆನುರೂಪ್ಯವನ್ನು ಆತ ಮೆಚ್ಚಿಕೊಳ್ಳುತ್ತಾನೆ. ಚಂಪೂರಾಮಾಯಣದಲ್ಲಿ ಭೋಜರಾಜನು ವರ್ಣನೆ ಮಾಡಿರುವ ರಾಮ-ಸೀತೆಯರ ಪರಸ್ಪರ ಸಂಬಂಧವೇ ಸೀತೆ ಎಂತಹವಳು ಎಂಬುದರ ಬಗ್ಗೆ ಬೆಳಕು ಹರಿಸುತ್ತದೆ. ಸೀತಾವಿರಹದಿಂದ ಬಳಲಿರುವ ರಾಮ, ಸೀತೆಯು ತನಗೆ ಏನೇನಾಗಿದ್ದಳು ಎಂದು ಹೀಗೆ ಹೇಳಿಕೊಳ್ಳುತ್ತಾನೆ:


ಆಧೌ ಸಿದ್ಧೌಷಧಿರಿವ ಹಿತಾ, ಕೇಲಿಕಾಲೇ ವಯಸ್ಯಾ,

ಪತ್ನೀ ತ್ರೇತಾಯಜನ-ಸಮಯೇ, ಕ್ಷತ್ರಿಯಾಣ್ಯೇವ ಯುದ್ಧೇ, |

ಶಿಷ್ಯಾ ದೇವ-ದ್ವಿಜ-ಪಿತೃ-ಸಮಾರಾಧನೇ, ಬಂಧುರಾರ್ತೌ,

- ಸೀತಾ ಸಾ ಮೇ ಶಿಶಿರಿತ-ಮಹಾಕಾನನೇ ಕಾ ನ ಜಾತಾ?! ||


ಅರ್ಥಾತ್ - "ಮನೋವೇದನೆಗಳಿದ್ದಾಗ ಸಿದ್ಧೌಷಧಿಯಂತೆ ಹಿತಳಾದವಳು. ಕ್ರೀಡಾಕಾಲದಲ್ಲಿ ಸ್ನೇಹಿತೆ. ಯಜ್ಞ ಮಾಡುವ ಕಾಲದಲ್ಲಿ ಅವಳು ಪತ್ನೀ. ಯುದ್ಧಕಾಲದಲ್ಲಿ ಕ್ಷತ್ರಿಯಾಣೀ (ಎಂದರೆ ಕ್ಷತ್ರಿಯಸ್ತ್ರೀ). ದೇವಕಾರ್ಯ, ಪಿತೃಕಾರ್ಯ ಇತ್ಯಾದಿಗಳಲ್ಲಿ ಶಿಷ್ಯೆ. ದುಃಖದಲ್ಲಿ ಬಂಧು. ಆ ಸೀತೆ ನನಗೆ ದೊಡ್ಡ ಕಾಡಿನಲ್ಲಿ ಏನು ತಾನೇ ಆಗಲಿಲ್ಲ!" ಲೌಕಿಕವಾಗಿ ಕಂಡರೆ ಆತನಿಗೆ ಎಲ್ಲ ರೀತಿಯಲ್ಲೂ ಹಿತಳೂ ಅನುಕೂಲಳೂ ಆಗಿದ್ದವಳು ಅವಳು. ಪಾರಮಾರ್ಥಿಕವಾಗಿ ಕಂಡರೆ, ಶ್ರೀರಂಗಮಹಾಗುರುಗಳ ಮಾತಿನಲ್ಲಿ, ಸೀತೆಯಾದರೋ ಪುರುಷನ ಸಂಕಲ್ಪಕ್ಕೆ ಹೊಂದಿಕೊಂಡ ಪರಾಪ್ರಕೃತಿ, ಮತ್ತು ಹಾಗಾಗಿಯೇ ಸ್ತ್ರೀಯರಿಗೆ ಆದರ್ಶ.  ಪ್ರಿಯ ನುಡಿವ ಸಖಿಯಾಗಿಯೂ, ಹಿತ ನುಡಿವ ಮಂತ್ರಿಯಾಗಿಯೂ ಔಚಿತ್ಯಪೂರ್ಣವಾಗಿ ತನ್ನ ಧರ್ಮದಲ್ಲಿ ನಡೆಯುತ್ತಿದ್ದ ಸೀತೆಯು ನಿಜಕ್ಕೂ ರಾಮನ ಸಹಧರ್ಮಚಾರಿಣಿಯೇ ಸರಿ. ಪತಿಯೊಂದಿಗೆ ಧರ್ಮದ ಹಾದಿಯಲ್ಲಿ ನಡೆಯುವುದೆಂದೇ ಆ ಪದದ ಅರ್ಥ. ಕಾಲದ ಎಲ್ಲೆಗಳಿಗೆ ಸಿಲುಕದ ಆದರ್ಶವು ಇದೇ ಅಲ್ಲವೇ?


ಸೂಚನೆ : 07/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.