Sunday, April 13, 2025

ಕೃಷ್ಣಕರ್ಣಾಮೃತ 59 ನೇತ್ರದಿಂದ ಆಲಿಂಗಿಸಿಕೊಳ್ಳಬೇಕು, ಈ ಬಾಲನನ್ನು! (Krishakarnamrta 59)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಬಾಲೇನ ಮುಗ್ಧ.

ಬಾಲಕೃಷ್ಣನನ್ನು ಅಪ್ಪಿಕೊಂಡು ಮುದ್ದಿಸಬೇಕೆಂಬ ಹಂಬಲವೆಮಗೆ - ಎನ್ನುತ್ತಾನೆ ಲೀಲಾಶುಕ, ಈ ಪದ್ಯದಲ್ಲಿ. ಎಳೆಯ ಕೃಷ್ಣನನ್ನು ಅಪ್ಪಿಕೊಳ್ಳಲು ಯಾರಿಗೆ  ತಾನೆ ಇಷ್ಟವಾಗುವುದಿಲ್ಲ? - ಎಂದು ನೀವು ಕೇಳುತ್ತೀರೇನೋ? ಆದರೆ ಹೇಗಪ್ಪಿಕೊಳ್ಳುವುದೆಂಬ ಬಗೆಯೇ ಬೇರೆ, ಲೀಲಾಶುಕನದು. ಅದರ ಏನು-ಎಂತುಗಳನ್ನೊಮ್ಮೆ ನೋಡೋಣವೇ?

ಎಂತಹ ಕೃಷ್ಣನನ್ನು? - ಎಂದು ಸೂಚಿಸಲು, "ಲೀಲಾಕಿಶೋರನನ್ನು" ಎನ್ನುತ್ತಾನೆ, ಕವಿ ಲೀಲಾಮಯನಾದ ಕಿಶೋರನಲ್ಲವೆ ಆತನು? ಲೀಲಾಪರನೂ ಹೌದು. ಲೀಲೈಕಪರನೇ ಆತನೆನ್ನಬಹುದು.

ಉಪಗೂಹನವೆಂದರೆ ಆಲಿಂಗನ. ಆಶ್ಲೇಷವೆಂದರೂ ಅದೇ. ಆತನನ್ನು ಆಶ್ಲೇಷಿಸಿಕೊಳ್ಳಬೇಕೆನ್ನುವುದರ ಬಗೆಯಲ್ಲೂ ವಿಶೇಷವುಂಟು. ಆತನನ್ನು ಕಣ್ಣಿನಿಂದಲೇ ಆಲಿಂಗಿಸಿಕೊಳ್ಳಬೇಕಂತೆ!

ಕಣ್ಣಿನಿಂದ ಎಂದೇಕೆ ಹೇಳಬೇಕು? ಎರಡೂ ಕಣ್ಣುಗಳಿಂದ ಎನ್ನಬೇಕಲ್ಲವೆ? "ಎರಡು ಕಣ್ಣುಗಳಿಂದ" - ಎಂದುಬಿಟ್ಟರೆ ಸರಿಹೋಗದಂತೆ. ಏಕೆ? ಎರಡೇ ಕಣ್ಣುಗಳಿಂದ ಕಂಡಲ್ಲಿ ತೃಪ್ತಿಯುಂಟಾಗದು. ಅದಕ್ಕೇ, 'ಕಣ್ಣಿನಿಂದ' ಎಂದು ಸಾಧಾರಣವಾಗಿ ಹೇಳಿಬಿಟ್ಟರೆ ಮತ್ತೂ ಹೆಚ್ಚನ್ನೇ ಹೇಳಿದಂತಾಯಿತು - ಎಂಬ ಭಾವನೆ, ಕವಿಯದು, ಎನ್ನುತ್ತಾರೆ, ವ್ಯಾಖ್ಯಾನಕಾರರು.

ಯಾರನ್ನಾದರೂ ಕಣ್ಣಿನಿಂದ ಆಲಿಂಗಿಸಿಕೊಳ್ಳಲಾಗುವುದೇ? ಆಲಿಂಗಿಸುವುದೆಂದರೆ ಬಾಚಿತಬ್ಬಿಕೊಳ್ಳುವುದು, ಕೈಗಳನ್ನು ಬಾಚಿ ತಾನೆ ತಬ್ಬಿಕೊಳ್ಳುವುದು. ಕಣ್ಗಳಿಗೆ ಕೈಗಳಿವೆಯೇ? ಕೈಗಳಿಂದಾಗಬೇಕಾದ ಕೆಲಸವನ್ನು ಕಣ್ಗಳಿಂದ ಮಾಡಲಾಗುವುದೇ? ಕರ್ಮೇಂದ್ರಿಯದಿಂದಾಗಬೇಕಾದ ಕಾರ್ಯವನ್ನು ಜ್ಞಾನೇಂದ್ರಿಯದಿಂದ ಮಾಡುವುದೇ?  

ಕರ್ಮೇಂದ್ರಿಯಗಳಲ್ಲಿ ಮೊದಲನೆಯ ಸ್ಥಾನ ಕೈಗೆ. ಕಾರ್ಯಕರಣಕ್ಕಾಗಿ, ಎಂದರೆ ಕೆಲಸಗಳನ್ನು ಮಾಡಲಿಕ್ಕಾಗಿ ಬಳಸುವ ಮೊದಲ ಕರಣವೇ, ಎಂದರೆ ಸಾಧನವೇ, ಕರ, ಹಸ್ತ. ಎಂದರೆ, ಏನೇ ಕೆಲಸಮಾಡಲೂ ಮೊದಲ ಸಾಧನವೇ ಕೈ. ಹಾಗೆಯೇ ಸರ್ವೇಂದ್ರಿಯಗಳಲ್ಲೂ, ಎಂದರೆ ಜ್ಞಾನೇಂದ್ರಿಯಗಳಲ್ಲೆಲ್ಲ ಮೊಟ್ಟಮೊದಲೆಂದರೆ ಕಣ್ಣೇ ಸರಿ.

ಯಾರನ್ನಾದರೂ ಆಲಿಂಗಿಸಿಕೊಳ್ಳಬೇಕೆಂದರೆ ಅವರದೆಷ್ಟು ಸಮೀಪದಲ್ಲಿರಬೇಕು! ಹಾಗಿರಲು, ಕಣ್ಣಿನಿಂದ ಆಲಿಂಗಿಸಿಕೊಳ್ಳುವುದೆಂದರೆ ಕೃಷ್ಣನು ಅದೆಲ್ಲೋ ದೂರದಲ್ಲಿರುವನೆಂದರ್ಥವಲ್ಲ. ಕಣ್ತುಂಬ ತುಂಬಿಕೊಳ್ಳಲು ಬೇಕಾಗುವಷ್ಟು ಹತ್ತಿರದಲ್ಲೇ ಕೃಷ್ಣನಿರಬೇಕು. ತೃಪ್ತಿಯಾಗುವಷ್ಟೂ ನೋಡುತ್ತಲೇ ಇರಬೇಕು - ಎಂಬ ಬಯಕೆ, ಕವಿಯದು.

ಯಾರನ್ನಾದರೂ ನೋಡುತ್ತಲೇ ಇರುವುದೆಂದರೆ ಬೇಜಾರಾಗುವುದಿಲ್ಲವೇ - ಎಂದು ಕೇಳಬಹುದು. ಹೆತ್ತವರಿಗೆ ಹೆಗ್ಗಣ ಮುದ್ದು - ಎನ್ನುವಂತೆ, ಹೆತ್ತಮ್ಮನಿಗಂತೂ ತನ್ನ ಮಗುವನ್ನು ನೋಡುತ್ತಿದ್ದರೆ ಬೇಸರವೇನೂ ಬರದು. ಯಾವುದೇ ಮಗುವಾದರೂ ಬಲುಮುದ್ದಾಗಿದ್ದರೆ ಆಕರ್ಷಣೆ ಕಡಿಮೆಯೇನಿರುವುದಿಲ್ಲ.

ಇನ್ನು ಕೃಷ್ಣನೋ? ಆಕರ್ಷಣೆಯ ಮೂರ್ತಿಯೇ ಆತ. ಎಳಸಿನಲ್ಲೂ ಸೊಗಸು, ಬೆಳೆದಾಗಲೂ ಬೆಡಗೇ, ಎಂದರೆ ಬೆಳಕೇ. ಕರ್ಷತೀತಿ ಕೃಷ್ಣಃ.

ಆತನು ಲೋಚನ-ರಸಾಯನ. ಏನು ಹಾಗೆಂದರೆ? ರಸಗಳಿಗೆ ಅಯನವಾದದ್ದು, ಎಂದರೆ ನೆಲೆಯಾದದ್ದು ರಸಾಯನ. ಎಲ್ಲಿ ರಸವಿರುವುದೋ ಅಲ್ಲಿ ತಾನೆ ಚಪ್ಪರಿಕೆಯಿರುವುದು? ಹೀಗಾಗಿ ಆಸ್ವಾದನೆಯನ್ನೀಯುವ ವಸ್ತುವಿನಿಂದ ಸಂತೋಷವೆಂಬುದು ಬರುತ್ತಲೇ ಇರುವಂತಹುದು.

ಅಲ್ಲದೆ, ಆಯುರ್ವೇದದಲ್ಲೂ ರಸಾಯನಗಳನ್ನು ಕುರಿತು ಹೇಳಲಾಗಿದೆ. ರಸಾಯನಗಳು  ಪುಷ್ಟಿಕರವಾದವು. ಹೀಗೆ ವಿಶಿಷ್ಟ-ಪುಷ್ಟಿಯನ್ನೂ ಕೊಡತಕ್ಕವು ರಸಾಯನಗಳು. ಆದರೆ ನನ್ನ ಕಣ್ಣುಗಳೆಂತಹವು? ಅವಕ್ಕೇನೋ ವ್ಯಾಧಿ ಬಡಿದಂತಿದೆ. ದೃಷ್ಟಿಮಾಂದ್ಯವೋ ಏನೋ? ಅವಕ್ಕೆಲ್ಲಾ ದಿವ್ಯೌಷಧವೆಂದರೆ ಈ ರಸಾಯನವೇ ಸರಿ. ನಾಲಿಗೆಗೆ ರುಚಿ ಕೆಟ್ಟಾಗ ರಸಾಯನವನ್ನು ಕೊಡುವರು. ರುಚಿಯುಂಟುಮಾಡುವುದೂ ರಸಾಯನವೇ. ಕೊನೆಗೆ,

ನಾಲಿಗೆಗೆ ಪರಮಸಂತೃಪ್ತಿಯನ್ನುಂಟುಮಾಡುವುದನ್ನೇ ರಸಾಯನವೆನ್ನುವುದು.

ಅಂತೂ ಹೀಗೆ ನಾನಾ-ಕಾರಣಗಳಿಂದಾಗಿ ಲೋಚನ-ರಸಾಯನ, ನಮ್ಮ ಬಾಲಕೃಷ್ಣ. ಅವನಿಗಾಗಿ ನನ್ನ ಕಣ್ಣುಗಳು ಲೋಲವಾಗಿವೆ. ಲೋಲವಾಗಿವೆಯೆಂದರೆ ತೃಷ್ಣೆಯಿಂದ ಕೂಡಿವೆ. "ಈಗ ಕಂಡೆನೇ, ಮರುಕ್ಷಣದಲ್ಲಿ ಕಂಡೆನೇ?" - ಎಂದುಕೊಳ್ಳುತ್ತಲೇ ಇರುವುದನ್ನೇ ಲೋಲವೆನ್ನುವುದು. ಅಂತಹ ಕಣ್ಣಿನಿಂದ ಆತನನ್ನು ಅಪ್ಪಿಕೊಳ್ಳಬೇಕು.

ಯಾರ ಬಗ್ಗೆಯಾದರೂ ಪ್ರೀತಿ ಹುಟ್ಟಿತೆಂದರೆ ಆ ಪ್ರೀತಿಯು ಏನೇನನ್ನೋ ಮಾಡಿಸುತ್ತದೆ. ಪ್ರೀತಿಪಾತ್ರರಾದವರ ಹಸ್ತಾಕ್ಷರವೂ ಅಚ್ಚುಮೆಚ್ಚಾಗುತ್ತದೆ.  ಅವರ ಫೋಟೋ, ಅವರ ಒಂದು ವಿಡಿಯೋ - ಏನು ಸಿಕ್ಕರೂ ಅದನ್ನು ಕಾಪಿಟ್ಟುಕೊಳ್ಳುವಂತಾಗುತ್ತದೆ. ಅಷ್ಟುದೂರದಲ್ಲಿ ಕಂಡರೂ ತೋಷವೇ. ಬಳಿ ಸುಳಿದಾಡಿದರಂತೂ ಮತ್ತೂ ಸಂತೋಷವೇ. ಇವಕ್ಕೂ ಮಿಗಿಲಾದುದು ಆತನ ಮುಖ ತೋರುವುದು. ಮತ್ತೂ ಹೆಚ್ಚೆನಿಸುವುದೆಂದರೆ ಆತನ ದೃಷ್ಟಿ ನಮ್ಮ ಮೇಲೆ ಬೀಳುವುದು. ಮತ್ತೂ ಮಿಗಿಲಾದುದೆಂದರೆ ನಮ್ಮ ಕಣ್ಣೂ ಆತನ ಆ ಕಣ್ಣೂ ಸಂಧಿಸುವುದು. ಚಕ್ಷುಃಪ್ರೀತಿಯೆಂದರೆ ಒಬ್ಬರನ್ನೊಬ್ಬರು ನೋಡುತ್ತಲೇ ಇರಬೇಕು - ಎನ್ನಿಸುವುದು.

ಹೀಗಿರುವಾಗ ಕೃಷ್ಣನ ಕಣ್ಣೋಟವು ಹೇಗಿರುವುದೆಂಬುದನ್ನೂ ಸ್ವಲ್ಪ ಹೇಳಬೇಕಲ್ಲವೇ? ಅದು ಬಾಲ-ವಿಲೋಕಿತ - ಎಂದರೆ ಕೋಮಲವಾದ ನೇತ್ರ, ಬಾಲ್ಯದ ಕಾರಣ, ಕ್ರೀಡಾಪರವಾದ ನಯನ. ಅದಲ್ಲದೆ, ಅದು ಮುಗ್ಧವೂ ಚಪಲವೂ ಆದ ಲೋಚನವದು. ಯಾವುದರಲ್ಲಿ ಹೆಜ್ಜೆಹೆಜ್ಜೆಗೂ ಮಾಧುರ್ಯವುಂಟೋ ಅದು ಮುಗ್ಧ. ಜೊತೆಗೆ ಆ ಅಕ್ಷಿಗಳಲ್ಲಿ ಚಪಲತೆ, ಎಂದರೆ ಚಂಚಲತೆ - ಅದು ಸಹ ಮನೆಮಾಡಿದೆ. ಎಳೆಮಕ್ಕಳ ನೇತ್ರ-ಚಾಂಚಲ್ಯವೂ ಆಕರ್ಷಕವೇ.

ಹಾಗಿರುವ ನೇತ್ರಗಳು ನನ್ನ ಮೇಲೆ ಪರಿಣಾಮವನ್ನುಂಟುಮಾಡಿವೆ. ನನ್ನ ಮನಸ್ಸಿನ ಮೇಲೂ ಪರಿಣಾಮವಾಗಿದೆ. ಆತನನ್ನು ಕಾಣಲೇಬೇಕೆಂಬ ಚಾಪಲವನ್ನು ಮೂಡಿಸಿದೆ, ಅದು. ಚಾಪಲವೆಂದರೆ ಆಸೆ. ತಡೆಯಲಾರದ ಒಂದು ಕುತುಕವೇ ಚಾಪಲ. ಯಾವುದಾದರೂ ಕೆಲಸವು ಸಾಧ್ಯವೋ ಇಲ್ಲವೋ, ಅರ್ಹವೋ ಅಲ್ಲವೋ ಎಂದು ಲೆಕ್ಕಿಸದೆಯೇ ನುಗ್ಗಿ ಅದಕ್ಕಾಗಿ ಯತ್ನಿಸಿಬಿಡಬೇಕೆನ್ನುವ ಪ್ರವೃತ್ತಿಯೇ ಚಾಪಲ. ಒಮ್ಮೆ ಸವಿದಿದ್ದರೂ ಮತ್ತೊಮ್ಮೆ ಸವಿಗಾಣಬೇಕೆಂಬ, ಸವಿಯಿನ್ನೂ ಕೊನೆಗೊಂಡಿರದ ಸ್ಥಿತಿಯೇ ಚಾಪಲ. ಒಮ್ಮೆ ಚಪ್ಪರಿಸಿದ್ದುದರ ನೆನಪು ಕಾಡಿ ಮತ್ತೆ ಮತ್ತೆ ಅದೇ ಬೇಕೆನಿಸಿದಾಗ ಆಗುವ ಅದಮ್ಯಪ್ರೇರಣೆಯೇ ಚಾಪಲ.

ಅಂತೂ, ಚಪಲವಾದ ಲೋಚನಗಳು ಚಾಪಲವನ್ನುಂಟುಮಾಡಿವೆಯೆಂದಾದರೆ ಅದರಲ್ಲಿ ಆಶ್ಚರ್ಯವು ತಾನೆ ಏನು? – ಎಂದೂ ಕೇಳಬಹುದಲ್ಲವೇ?  ಅಂತಹ ಉನ್ನತವೂ ಉತ್ಕೃಷ್ಟವೂ ಆದ ಉತ್ಕಂಠೆಯನ್ನುಂಟುಮಾಡುವ ಲೀಲಾಕಿಶೋರ, ಈ ಕೃಷ್ಣ.

ಅಂತೂ ಕಣ್-ಸೊಬಗಿನ ಆತನನ್ನು ಕಣ್ಣುಗಳಿಂದಲೇ ತಬ್ಬಿಕೊಳ್ಳುವ ಹಂಬಲ ನಮ್ಮದು. ಇದು ಗೋಪಿಕೆಯ ಮಾತೆಂದುಕೊಂಡರೆ, ಅದೇ ಮನಃಸ್ಥಿತಿಯಲ್ಲಿರುವ ಇತರ ಗೋಪಿಕೆಯರ ಚಿತ್ತವೃತ್ತಿಯನ್ನೂ ಸೇರಿಸಿಕೊಂಡು, ಈ ಸ್ಥಿತಿ ನಮ್ಮದಾಗಿದೆಯೆಂದು ಹೇಳಿಕೊಳ್ಳುತ್ತಿರುವುದು -ಎಂಬ ಕಾರಣಕ್ಕೆ "ಉತ್ಸುಕರಾಗಿದ್ದೇವೆ" ಎಂದು ಹೇಳಲಾಗಿದೆ.

ಎರಡನೆಯ ಪಾದದಲ್ಲಿ "ನನ್ನ ಮಾನಸದಲ್ಲಿ" ಎಂದು ಏಕವಚನವನ್ನು ಬಳಸಿ ಹೇಳಿದರೆ, ಕೊನೆಯ ಪಾದದಲ್ಲಿ "ನಾವು ಉತ್ಸುಕರಾಗಿದ್ದೇವೆ" ಎಂದು ಬಹುವಚನದಲ್ಲಿ ಹೇಳಿದೆ. ಒಮ್ಮೆ ಏಕವಚನ, ಮತ್ತೊಮ್ಮೆ ಬಹುವಚನ ಸರಿಯೇ? ಅದು ದೋಷವಾಗುವುದಿಲ್ಲವೇ? – ಎಂದರೆ, ಭಾವ-ಪರವಶತೆಯಿರುವಾಗ ಹೀಗೆ ವ್ಯತ್ಯಾಸಗಳಾಗುವುದು ದೂಷಣವಲ್ಲ, ಭೂಷಣವೇ ಸರಿ! ದೂಷಣವೆಂದರೆ ದೋಷ; ಭೂಷಣವೆಂದರೆ ಅಲಂಕಾರ.

"ಲ"ಕಾರ ಒಂಭತ್ತು ಬಾರಿ ಬಳಕೆಯಾಗಿರುವ ಹೃದ್ಯಾನುಪ್ರಾಸದಿಂದ ಕೂಡಿರುವ ಶ್ಲೋಕವಿದು.

ಶ್ಲೋಕ ಹೀಗಿದೆ:

ಬಾಲೇನ ಮುಗ್ಧ-ಚಪಲೇನ ವಿಲೋಕಿತೇನ

ಮನ್ಮಾನಸೇ ಕಿಮಪಿ ಚಾಪಲಮ್ ಉದ್ವಹಂತಮ್ |

ಲೋಲೇನ ಲೋಚನ-ರಸಾಯನಮ್ ಈಕ್ಷಣೇನ

ಲೀಲಾ-ಕಿಶೋರಮ್ ಉಪಗೂಹಿತುಮ್ ಉತ್ಸುಕಾಃ ಸ್ಮಃ ||

ಸೂಚನೆ : 13/04/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.