Monday, April 14, 2025

ವ್ಯಾಸ ವೀಕ್ಷಿತ 132 (Vyaasa Vikshita 132)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯಾವ ಸಾವು ವಾಸಿ? ಇಲಿಯಿಂದಲೋ, ಅಗ್ನಿಯಿಂದಲೋ?


ಖಾಂಡವವನದಲ್ಲಿ ಹೀಗೆ ಅಗ್ನಿಯು ಆವರಿಸುತ್ತಾ ಬರುತ್ತಿರಲು, ತನ್ನ ಮಕ್ಕಳನ್ನು ಈ ಅಗ್ನಿಯ ದೆಸೆಯಿಂದ ಬಿಡಿಸುವ ಬಗೆ ಹೇಗೆ? - ಎಂಬುದನ್ನು ಅರಿಯಲಾರದೆ ನೊಂದಳು, ಜರಿತೆ. ಹೀಗೆಲ್ಲ ತನ್ನ ದುಃಖವನ್ನು ಹೇಳಿಕೊಳ್ಳುತ್ತಿದ್ದ ತಾಯಿ ಜರಿತೆಯನ್ನು ಕುರಿತು, ಆ ಶಾರ್ಙ್ಗಕಗಳು ಹೇಳಿದವು: "ಅಮ್ಮ, ನಮ್ಮ ಮೇಲಣ ಈ ಪುತ್ರಸ್ನೇಹವನ್ನು ತೊರೆ; ಈ ಅಗ್ನಿಯು ಎಲ್ಲಿಲ್ಲವೋ ಅಲ್ಲಿಗೆ ನೀ ಹಾರಿಕೋ! ಏಕೆನ್ನುವೆಯಾ? ಒಂದು ವೇಳೆ ನಾವುಗಳು ಸತ್ತರೆ, ನಿನಗೆ ಮುಂದೆ ಮಕ್ಕಳಾಗುವರು. ಆದರೆ ತಾಯಿ, ನೀನೇ ಇಲ್ಲವಾದರೆ, ನಮ್ಮ ಕುಲಸಂತತಿಯೆಂಬುದೇ ಇರದು.


ಇವೆರಡೂ ಅಂಶಗಳನ್ನು ಗಮನಿಸಿಕೊಂಡು ನಮ್ಮ ಕುಲಕ್ಕೆ ಯಾವುದು ಕ್ಷೇಮವಾದೀತೋ ಅದನ್ನು ಮಾಡಲು ಇದುವೇ ಶ್ರೇಷ್ಠವಾದ ಕಾಲವಾಗಿದೆ, ಅಮ್ಮಾ. ಸರ್ವರಿಗೂ ವಿನಾಶವನ್ನು ತರತಕ್ಕಂತಹುದು, ನಮ್ಮಗಳ ಮೇಲಣ ಪ್ರೀತಿ; ಅದೀಗ ಬೇಡ. ನಮ್ಮ ತಂದೆಗೆ ಉತ್ತಮವಾದ ಲೋಕಗಳು ಬೇಕಾಗಿವೆ. ಆದುದರಿಂದ ಆತನ ಈ ಕರ್ಮವು ವ್ಯರ್ಥವಾಗುವುದು ಬೇಡ." - ಎಂದು. ಆಗ ಜರಿತೆಯು ಹೇಳಿದಳು:


ಇದೋ ಈ ಮರದ ಬುಡದಲ್ಲಿ ನೆಲದಲ್ಲೊಂದು ಇಲಿಬಿಲವಿದೆ. ಅದರೊಳಗೆ ಬೇಗನೆ ನೀವು ನುಗ್ಗಿರಿ. ಬೆಂಕಿಯ ದೆಸೆಯಿಂದ ನಿಮಗಲ್ಲಿ ಭಯವಿರದು.

ಆ ಬಳಿಕ ನಾನು ಈ ಬಿಲದ ಬಾಯನ್ನು ಧೂಳಿನಿಂದ ಮುಚ್ಚಿಬಿಡುತ್ತೇನೆ, ಮಕ್ಕಳಿರಾ. ಹೀಗೆ ಮಾಡಿದಲ್ಲಿ ಅಗ್ನಿಗೆ ತಕ್ಕ ಪ್ರತೀಕಾರವನ್ನೇ ನಾವು ಮಾಡಿದಂತಾಗುತ್ತದೆ. ಆಮೇಲೆ, ಎಂದರೆ ಬೆಂಕಿಯಾರಿದ ನಂತರ, ನಾನು ಬರುವೆ, ಈ ಧೂಳಿನ ರಾಶಿಯನ್ನು ತೆಗೆದುಹಾಕುವುದಕ್ಕೋಸ್ಕರ. ಅಗ್ನಿಯ ದೆಸೆಯಿಂದ ನೀವುಗಳು ಬಿಡುಗಡೆಹೊಂದಲಿಕ್ಕಾಗಿ ನನ್ನೀ ಮಾತು. ಅದು ನಿಮಗೆ ರುಚಿಸುವುದೆಂದುಕೊಳ್ಳುತ್ತೇನೆ – ಎಂದು.


ಆಗ ಆ ಶಾರ್ಙ್ಗಕಗಳು ಹೇಳಿದವು: "ರೆಕ್ಕೆಯಿನ್ನೂ ಬಂದಿಲ್ಲದ ನಾವು ಇನ್ನೂ ಮಾಂಸದ ಮುದ್ದೆಗಳಂತಿದ್ದೇವೆ, ಅಲ್ಲವೇ? ಹಾಗಿರುವ ನಮ್ಮನ್ನು ಇಲಿಯು ತಿಂದೇ ಹಾಕೀತು - ಏಕೆಂದರೆ ಇಲಿಯು ಹಸೀಮಾಂಸವನ್ನು ತಿನ್ನುವ ಪ್ರಾಣಿ. ಈ ಭಯವನ್ನು ಎದುರುನೋಡುತ್ತಿರುವ ನಾವು ಇಲ್ಲಿ ಪ್ರವೇಶಿಸಲಾರೆವು. ಬದಲಾಗಿ, ಹೀಗೆ ಯೋಚಿಸೋಣ: ಅಗ್ನಿಯು ನಮ್ಮನ್ನು ಸುಡದಿರುವುದೆಂತು? ಇಲಿಯು ನಮ್ಮನ್ನು ನಾಶಪಡಿಸದಿರುವುದೆಂತು? ನಮ್ಮ ತಂದೆಯು ತಂದೆಯೆಂದಾಗಿರುವುದು - ಎಂದರೆ ನಮಗೆ ಜನ್ಮವಿತ್ತಿರುವುದು - ವ್ಯರ್ಥವಾಗದಿರುವುದೆಂತು? ನಮ್ಮ ತಾಯಿಯೂ ಉಳಿದಾಳು ಹೇಗೆ? – ಇದಕ್ಕೆ ಮಾರ್ಗವನ್ನು ಹುಡುಕಬೇಕಾಗಿದೆ.


ಬಿಲದೊಳಗೆಂದರೆ ಇಲಿಯ ದೆಸೆಯಿಂದಾಗಿ ನಾಶ ನಿಶ್ಚಿತ; ಆಕಾಶದಲ್ಲಿ ಸಂಚರಿಸುವ ಪಕ್ಷಿಯೆಂದರೆ ಅಗ್ನಿಯಿಂದಾಗಿ ನಾಶ ನಿಶ್ಚಿತ; ಎರಡನ್ನೂ ತೋಲನೆ ಮಾಡಿದರೆ, ಅಗ್ನಿಯಲ್ಲಿ ನಾವು ಸುಟ್ಟುಹೋಗುವುದೇ ವಾಸಿ, ಇಲಿಗೆ ಆಹಾರವಾಗಿಬಿಡುವುದಲ್ಲ. ಬಿಲದೊಳಗೆ ಇಲಿಯು ನಮ್ಮನ್ನು ತಿಂದುಹಾಕಿತೆಂದರೆ ಅದು ಗರ್ಹಿತವಾದ ಮರಣ. ಶಿಷ್ಟರ ಮಾತಿನಂತೆ ಶರೀರಕ್ಕೆ ಅಗ್ನಿಯಿಂದ ದಹನವಾಗುವುದೆಂಬುದೇ ಲೇಸು" - ಎಂದು. ಆಗ ಜರಿತೆ ಹೇಳಿದಳು: "ಈ ಬಿಲದಿಂದ ಹೊರಬಂದ ಇಲಿಯನ್ನು ಗಿಡುಗವೊಂದು ಹಾರಿಸಿಕೊಂಡು ಹೋಯಿತು. ಅದನ್ನು ನಾನೇ ಕಂಡೆ. ಅದು ಈ ಇಲಿಮರಿಯನ್ನು ತನ್ನ ಕಾಲುಗಳಲ್ಲಿ ಹಿಡಿದುಕೊಂಡು ಹೊರಟುಹೋಯಿತು. ಎಂದೇ ಈ ಬಿಲದಲ್ಲಿ ನಿಮಗೆ ಭಯವಿಲ್ಲವೆಂದು ನಾ ಹೇಳಿದುದು" - ಎಂದು.


ಸೂಚನೆ : 13/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.