Tuesday, April 22, 2025

ವ್ಯಾಸ ವೀಕ್ಷಿತ 133 ಅಮ್ಮನಿಗೆ ಮರಿಗಳ ಹಿತೋಪದೇಶ! (Vyaasa Vikshita 133)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಪ್ರಾಣಾಪಾಯದಿಂದ ತಮ್ಮನ್ನು ಕಾಪಾಡಿಕೊಳ್ಳುವ ಸಲುವಾಗಿ ಜರಿತೆಯು ಹೇಳಿದ ಉಪಾಯಕ್ಕೆ ಪ್ರತಿಯಾಗಿ ಮರಿ ಶಾರ್ಙ್ಗಕ-ಪಕ್ಷಿಗಳು ಹೇಳಿದವು :


ಗಿಡುಗವು ಇಲಿಯನ್ನು ಹೊತ್ತುಕೊಂಡು ಹೋದುದನ್ನು ನಾವರಿಯೆವು. ಈ ಬಿಲದಲ್ಲಂತೂ ಬೇರೆ ಇಲಿಗಳೂ ಇದ್ದಾವು. ಅವುಗಳಿಂದ ನಮಗೆ ಭಯವು ಇರುವಂತಹುದೇ ಸರಿ. ಇನ್ನು ಅಗ್ನಿಯು ಇಲ್ಲಿಯವರೆಗೆ ಬರುವುದು ಸಹ ಸಂಶಯವೇ. ಏಕೆಂದರೆ ವಾಯುವಿನ ದೆಸೆಯಿಂದಾಗಿ ಅಗ್ನಿಯು ಮತ್ತೊಂದೆಡೆಗೆ ತಿರುಗುತ್ತಿರುವುದನ್ನು  ಕಂಡಿದ್ದೇವೆ. ಆದರೆ ಈ ಬಿಲದೊಳಗೇ ಇರುವುದೆನ್ನುವುದಾದರೆ, ಇಲ್ಲಿಯ ಬಿಲವಾಸಿಗಳಿಂದಾಗಿಯೇ ನಮಗೆ ಸಾವೆಂಬುದು ನಿಶ್ಚಯವೇ ಸರಿ.


ಹೀಗಿರಲು, "ಮೃತ್ಯುವು ನಿಃಸಂಶಯ" - ಎಂದಾಗುವುದಕ್ಕಿಂತ, "ಮೃತ್ಯುವು ಸಂಶಯಾಸ್ಪದ" - ಎಂದಾಗುವುದೇ ನಮಗೆ ವಾಸಿಯೆಂದು ತೋರುತ್ತದೆ.


ಆದುದರಿಂದ ನೀನು ಲೆಕ್ಕಕ್ಕೆ ಅನುಸಾರವಾಗಿ ಆಕಾಶದಲ್ಲಿ ಯಥಾನ್ಯಾಯವಾಗಿ ಸಂಚರಿಸು; [ಮುಂದೆ] ಸುಂದರವಾದ ಮಕ್ಕಳನ್ನು ನೀನು ಪಡೆಯುವೆಯೆಂಬುದೇ ಸರಿ - ಎಂದು.


ಆಗ ಜರಿತೆಯು ಹೇಳಿದಳು:


ಬಿಲದಿಂದ ಇಲಿಯನ್ನು ಒಯ್ಯುತ್ತಾ ವೇಗದಿಂದ ಹೋಗುತ್ತಿದ್ದ ಆ ಪಕ್ಷಿಶ್ರೇಷ್ಠನನ್ನು ನಾನು ಕಂಡೆ. ಮಹಾವೇಗದಿಂದ ಹಾರಿಹೋಗುತ್ತಿದ್ದ ಆ ಗಿಡುಗವನ್ನು ಶೀಘ್ರವಾಗಿ ಹಿಂಬಾಲಿಸಿದೆ. ಬಿಲದಿಂದ ಇಲಿಯನ್ನು ಹೊತ್ತೊಯ್ಯುತ್ತಿದ್ದ ಅದಕ್ಕೆ ಆಶೀರ್ವಾದವನ್ನೂ ಹೇಳಿದೆ:


"ಗಿಡುಗಗಳಿಗೊಡೆಯನೇ, ನನ್ನ ಶತ್ರುವಾದ ಇಲಿಯನ್ನು ತೆಗೆದುಕೊಂಡು ನೀನು ವೇಗವಾಗಿ ಹೋಗುತ್ತಿದ್ದೀಯೆ. ನೀನು ಸ್ವರ್ಗವನ್ನು ಸೇರುವೆಯೆಲ್ಲಾ, ಆಗ ನೀನು ಹಿರಣ್ಮಯನಾಗು, ಎಂದರೆ ಚಿನ್ನದ ಶರೀರವುಳ್ಳವನಾಗು. ಹಾಗೂ ನೀನು ನಿರಮಿತ್ರನಾಗು (ಎಂದರೆ ಶತ್ರುಗಳೇ ಇಲ್ಲದವನಾಗು)." ಎಂದು.


ಆ ಶ್ಯೇನರಾಜನು, ಎಂದರೆ ಗಿಡುಗಗಳ ರಾಜನಾದ ಆ ಪಕ್ಷಿಯು, ಆ ಇಲಿಯನ್ನು ತಿಂದುಹಾಕಿದ ಮೇಲೆ, ನಾನು ಆತನ ಅಪ್ಪಣೆ ಪಡೆದು ಮನೆಗೆ ಹಿಂದಿರುಗಿದೆನು.


ಆದ್ದರಿಂದ, ಮಕ್ಕಳಿರಾ, ಶೀಘ್ರವಾಗಿಯೇ ನೀವು ಬಿಲವನ್ನು ಪ್ರವೇಶಿಸಿ. ನಿಮಗಲ್ಲಿ ಭಯವಿರದು. ಮಹಾತ್ಮನಾದ ಆ ಪಕ್ಷಿರಾಜನು ನಾನು ನೋಡುತ್ತಿದ್ದಂತೆಯೇ ಆ ಇಲಿಯನ್ನು ಅಪಹರಿಸಿರುವನು" ಎಂದು.


ಅದಕ್ಕೆ ಆ ಶಾರ್ಙ್ಗಕಗಳು, "ಆ ಗಿಡುಗವು ಇಲಿಯು ಹೊತ್ತೊಯ್ದುದನ್ನು ನಾವಂತೂ ಅರಿಯೆವು. ಮತ್ತು ಇದನ್ನು ಅರಿಯದೆಯೇ ನಾವು ಬಿಲವನ್ನು ಹೊಗಲಾರೆವು" ಎಂದವು.


ಅದಕ್ಕೆ ಜರಿತೆಯು, "ಆ ಶ್ಯೇನವು ಆ ಮೂಷಿಕವನ್ನು ಹೊತ್ತು ಹೋದುದನ್ನು ನಾ ಬಲ್ಲೆ. ಆದ್ದರಿಂದ ನಿಮಗೆ ಯಾವ ಭಯವೂ ಇಲ್ಲ, ಮಕ್ಕಳೇ, ನನ್ನ ಮಾತಿನಂತೆ ನಡೆಯಿರಿ" ಎಂದಳು.


ಆಗ ಶಾರ್ಙ್ಗಕಗಳು ಹೇಳಿದವು: "ಮಿಥ್ಯೋಪಚಾರದಿಂದ, ಎಂದರೆ ಸುಳ್ಳನ್ನು ಹರಿಬಿಟ್ಟಾದರೂ, ನಮ್ಮನ್ನು ಭಯದ ದೆಸೆಯಿಂದ ಕಾಪಾಡಲು ನೀನೆಳಸುತ್ತಿಲ್ಲವಷ್ಟೆ? ಜ್ಞಾನವು ಸಮಾಕುಲವಾಗಿರಲು, ಎಂದರೆ ಕಾರ್ಯವೊಂದರ ಬಗ್ಗೆ ಇನ್ನೂ ಸ್ಪಷ್ಟತೆಯೆಂಬುದೇ ಮೂಡಿಲ್ಲದಿರಲು, ಕಾರ್ಯಪ್ರವೃತ್ತರಾಗಿಬಿಡುವುದು ಧೀಮಂತರ ಲಕ್ಷಣವಲ್ಲ.


ನಮ್ಮಿಂದ ನಿನಗಾವ ಉಪಕಾರವೂ ಆಗಿಲ್ಲ. ನಾವಾರೆಂಬುದಾಗಿ ನೀನರಿತಿಲ್ಲ. ಹೀಗೆ ಕಷ್ಟಪಟ್ಟಾದರೂ ನಮ್ಮನ್ನು ಕಾಪಾಡುತ್ತಿರುವೆಯೆಲ್ಲಾ, ನೀನು ನಮಗೇನಾಗಬೇಕು, ನಾವಾದರೂ ನಿನಗೇನಾಗಬೇಕು?


ನೀನಿನ್ನೂ ತರುಣಿಯೂ ಸುಂದರಿಯೂ ಆಗಿದ್ದೀಯೇ. ಪತಿಯ ಅನ್ವೇಷಣದಲ್ಲಿ ಸಮರ್ಥಳೂ ಆಗಿದ್ದೀಯೇ. ಪತಿಯನ್ನು ಅನುಸರಿಸು, ತಾಯೇ, ನೀನು ಮತ್ತೆ ಮುದ್ದಾದ ಮಕ್ಕಳನ್ನು ಪಡೆಯುವೆ."


ಸೂಚನೆ : 20
/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.