ಪ್ರತಿಕ್ರಿಯಿಸಿರಿ (lekhana@ayvm.in)
ಭಾರತಮಾತೆ ತನ್ನ ಉದರದಿಂದ ಸನಾತನ ಭಾರತೀಯ ಸಂಸ್ಕೃತಿಯ ಉನ್ನತಿ-ಪುನರುಜ್ಜೀವನಕ್ಕೋಸ್ಕರ ಆಗಿಂದ್ದಾಗ್ಗೆ ಮಹಾತ್ಮರಿಗೆ ಜನ್ಮವೀಯುತ್ತಲೇ ಇರುತ್ತಾಳೆ. ಅಂತಹ ಒಬ್ಬ ಮಹಾತ್ಮರು ಭಗವದ್ರಾಮಾನುಜರು. ಸುಮಾರು ಸಾವಿರ ವರ್ಷಗಳ ಹಿಂದೆ ತಮಿಳುನಾಡಿನಲ್ಲಿರುವ ಶ್ರೀಪೆರುಂಬೂದೂರ್ನಲ್ಲಿ ಭಗವದ್ರಾಮನುಜರ ಜನನ (೧೦೧೭).
ತಂದೆಯವರಿಂದ ಮೊದಲ ವಿದ್ಯಾಭ್ಯಾಸ ಕಲಿತ ಅತಿತೀಕ್ಷ್ಣಬುದ್ಧಿಯ ರಾಮಾನುಜರಿಗೆ ಚಿಕ್ಕಂದಿನಲ್ಲೇ ವೇದ-ಶಾಸ್ತ್ರಗಳಲ್ಲಿ ಪರಿಣತಿ. ಭಗವಂತ ಮತ್ತು ಭಕ್ತರಲ್ಲಿ ಅತ್ಯಂತ ಭಕ್ತಿ. ಭಗವಂತನೊಡನೆ ನೇರವಾಗಿ ಸಂಭಾಷಣೆಯನ್ನು ಮಾಡುತ್ತಾರೆ ಎಂದು ಪ್ರತೀತಿಯಿದ್ದ ಭಕ್ತಶಿರೋಮಣಿ ಕಂಚೀಪೂರ್ಣರ ಪರಿಚಯ. ತಂದೆಯ ಕಾಲಾನಂತರದಲ್ಲಿ ಕಂಚಿಯಲ್ಲಿ ಯಾದವಪ್ರಕಾಶರಹತ್ತಿರ ವಿಧ್ಯಾಭ್ಯಾಸದ ಮುಂದುವರಿಕೆ. ನಂತರ ಯಾಮುನಮುನಿಗಳ ಶಿಷ್ಯರು ಗೋಷ್ಟೀಪೂರ್ಣರಿಂದ ಮುಕ್ತಿಪ್ರದಾಯಕವಾದ 'ಅಷ್ಟಾಕ್ಷರೀ' ಮಹಾಮಂತ್ರದ ಉಪದೇಶ. ಕಂಚೀಪೂರ್ಣರಮೂಲಕ ವರದರಾಜಸ್ವಾಮಿಯಿಂದಲೇ ಹಲವುಕಾಲ ಕಾಡುತ್ತಿದ್ದ ವಿಶಿಷ್ಟಾದ್ವೈತ ಸಿದ್ಧಾಂತಕ್ಕೆ ಅಡಿಪಾಯಗಳಾದ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದರು. ನಂತರ ದಿವ್ಯಪ್ರಬಂಧಗಳ ಅಧ್ಯಯನ.
ಯಾದವಪ್ರಕಾಶರಲ್ಲಿ ಅಧ್ಯಯನ ಮಾಡುತ್ತಿದ್ದಾಗ ಗುರುಗಳ ಕಿರಿ-ಕಿರಿ ಅಸಹನೆಯಾಗಿ ಪ್ರಕೋಪಕ್ಕೆ ತೆರಳುತ್ತಿತ್ತು. ಒಮ್ಮೆ ಅಭ್ಯಂಗಸ್ನಾನಮಾಡಿಸುತ್ತಾ ಆಚಾರ್ಯಸೇವೆಯಲ್ಲಿ ನಿರತರಾಗಿದ್ದ ರಾಮಾನುಜರಿಗೆ ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ವಾಕ್ಯಕ್ಕೆ 'ಭಗವಂತನ ಕಣ್ಣು ತಾವರೆಯಂತೆ, ಅದರ ಬಣ್ಣ ಕಪಿಯ ಪೃಷ್ಠದಂತೆ ಕೆಂಪಗೆ ' ಎಂದು ಗುರುಗಳು ವಿವರಿಸಿದರು. ಕೀಳ್ಮಟ್ಟದ ಈ ಹೋಲಿಕೆಯನ್ನು ಕೇಳಿದ ರಾಮಾನುಜರ ಕಣ್ಣಿನಲ್ಲಿ ಹರಿದ ಅಶ್ರುಧಾರೆ ಮತ್ತು ಈ ವಾಕ್ಯವನ್ನು 'ಆತನ ಕಣ್ಣು ಆಗತಾನೇ ಸೂರ್ಯಕಿರಣಗಳಿಂದ ಅರಳಿದ ಕೆಂದಾವರೆಯ ದಳದ ವರ್ಣದಂತೆ-ಎಂದು ಸೊಗಸಾಗಿ ಅರ್ಥೈಸಬಹುದಲ್ಲಾ' ಎಂಬ ಉದ್ಗಾರ. ಸರಿಯೆಂದು ತೋರಿದರೂ ಅಹಂಕಾರಕ್ಕೆ ಬಿದ್ದ ಪೆಟ್ಟಿನಿಂದ ರಾಮಾನುಜರ ಮೇಲೆ ಯಾದವಪ್ರಕಾಶರ ಹಾರಾಟ. ಹೀಗೆ ಮುಂದುವರಿದ ಈರ್ಷೆ, ದ್ವೇಷದಲ್ಲಿ, ಕೊನೆಗೆ ಹೇಗಾದರೂ ಇವರನ್ನು ಮುಗಿಸಿಬಿಡಬೇಕೆಂಬುದರಲ್ಲಿ ಪರ್ಯವಸಾನಗೊಂಡಿತು.
ಒಮ್ಮೆ ಯಾತ್ರೆಗೆಂದು ಹೊರಟಾಗ ಮಧ್ಯದಲ್ಲಿ ರಾಮಾನುಜರನ್ನು ಮುಗಿಸುವ ಸಂಚು. ಸಹಪಾಠಿ ಚಿಕ್ಕಮ್ಮನಮಗ ಗೋವಿಂದನಿಂದ ಪಿತೂರಿಯನ್ನು ಅರಿತ ರಾಮಾನುಜರು, ಕಾಡಿನಲ್ಲಿ ತಪ್ಪಿಸಿಕೊಳ್ಳುತ್ತಾರೆ. ದಾರಿಕಾಣದ ಇವರನ್ನು ಬೇಡದಂಪತಿಗಳು ಕಂಚಿಗೆ ತಲುಪಿಸಿ ಅದೃಶ್ಯರಾಗುತ್ತಾರೆ. ಕಾಪಾಡಿದವರು ಭಗವಂತ-ಭಾಗವತಿಯರೇ ಎಂದರಿತ ಅವರ ಆನಂದಕ್ಕೆ ಎಲ್ಲೆಯಿಲ್ಲ.
ಎಂದೂ ಪತಿಧರ್ಮದಲ್ಲಿ ಸರಿಯಾಗಿ ಪಾಲ್ಗೊಳ್ಳದ ರಾಮಾನುಜರ ಪತ್ನಿ, ಮನೆಗೆ ಬಂದ ಮಹಾಪೂರ್ಣ ದಂಪತಿಗಳನ್ನು, ಅವಮಾನಿಸುತ್ತಾಳೆ. ಈಗಾಗಲೇಬೇಸತ್ತಿದ್ದ ರಾಮಾನುಜರು, ವರದರಾಜನ ಸನ್ನಿಧಿಯಲ್ಲಿ ಸಂನ್ಯಾಸ ಸ್ವೀಕರಿಸುತ್ತಾರೆ. ನಂತರ ಪ್ರಯಾಣ ಶ್ರೀರಂಗಂನಗರಿಗೆ, ಯಾಮುನರಿಗೆ ಅವರ ಅವಸಾನಕಾಲದಲ್ಲಿ ತಾನುಕೊಟ್ಟ ವಚನವನ್ನು ಪಾಲಿಸಲು ಸಂಕಲ್ಪ - ಯಾಮುನರು ಸಂಕಲ್ಪಿಸಿ ಮಾಡಲಾಗದ್ದಿದ್ದ ಬ್ರಹ್ಮಸೂತ್ರಕ್ಕೆ ಭಾಷ್ಯ ಮೊದಲಾದವು.
ಬ್ರಹ್ಮಸೂತ್ರಭಾಷ್ಯರಚನೆಯನ್ನು ಪೂರ್ಣಗೊಳಿಸಲು ಬೋಧಾಯನ ವೃತ್ತಿಯ, ಕೇವಲ ಕಾಶ್ಮೀರದ ಶಾರದಾಪೀಠದಲ್ಲಿ ಲಭ್ಯವಿದ್ದ ಗ್ರಂಥಪಡೆಯಲು ಕೂರೇಶರೆಂಬ ಶಿಷ್ಯರೊಡನೆ ಪಯಣ. ಶಾರದೆಯ ಅನುಗ್ರಹದಿಂದ ಕೇವಲ ಒಂದುರಾತ್ರಿ ಸಿಕ್ಕ ಗ್ರಂಥವನ್ನು ಏಕಸಂಧಿಗ್ರಾಹಿ ಕೂರೇಶರು ಅಕ್ಷರಬಿಡದಂತೆ ಮನನ ಮಾಡುತ್ತಾರೆ.
ನಂತರ ಶ್ರೀಭಾಷ್ಯ ರಚನೆ. ಸಂಗ್ರಹವಾಗಿ: ಶ್ರೀಸಹಿತವಾದ ನಾರಾಯಯಣನೇ ಪರದೈವ. ಜೀವ ಮತ್ತು ಪ್ರಕೃತಿ ಆತನ ಒಡಲು. ಆದ್ದರಿಂದ ಈ ದರ್ಶನ ವಿಶಿಷ್ಟ-ಅದ್ವೈತ. ಶ್ರೀವೈಕುಂಠವೇ ಮುಕ್ತಿಯ ತಾಣ. ಭಕ್ತಿ-ಶರಣಾಗತಿಗಳಿಂದ ಮುಕ್ತಿ. ಭಗವಂತ ಅನಂತಕಲ್ಯಾಣ ಗುಣಗಳಿಂದ ಕೂಡಿದವನಾಗಿ ದೇವಸ್ಥಾನದ ಮೂರ್ತಿಗಳಲ್ಲಿ, ಸಾಲಿಗ್ರಾಮ ಮೊದಲಾದ ಶಿಲೆಗಳಲ್ಲಿ ಪೂಜೆಗೆ ಸಿಗುತ್ತಾನೆ.
೮೨ ರ ಹರೆಯದಲ್ಲಿ ಅವರು ಶ್ರೀರಂಗಂ ತ್ಯಜಿಸಬೇಕಾಗುತ್ತದೆ. ಶೈವ ಮತಾಂಧ ಕುಲೋಥುಂಗರಾಜ , ರಾಮಾನುಜರನ್ನು 'ಶಿವನು ನಾರಾಯಣನಿಗಿಂತ ದೊಡ್ಡವನು' ಎಂದು ಒಪ್ಪದಿದ್ದರೆ ಕೊಲ್ಲುವುದಕ್ಕೆ ಟೊಂಕ ಕಟ್ಟಿರುತ್ತಾನೆ. ಇದನ್ನರಿತ ಶಿಷ್ಯ ಕೂರೇಶರು, ರಾಮಾನುಜರ ಕಾವಿಬಟ್ಟೆಯನ್ನು ತಾವು ಧರಿಸಿ, ಅವರಿಗೆ ಬಿಳಿಯಬಟ್ಟೆಯನ್ನು ಉಡಿಸಿ, ರಾತ್ರಿಯಲ್ಲೇ ಹೊರಡಿಸುತ್ತಾರೆ. ಹೇಗೋ ಅವರ ಬಿಡಾರ ತೊಂಡನೂರಿನಲ್ಲಿ. ರಾಮಾನುಜರೆಂದೇ ತಿಳಿದು ವಾದದದಲ್ಲಿ ಸೋಲಿಸಲಾಗದ ಕೂರೇಶರ ಕಣ್ಣುಗಳನ್ನು ರಾಜ ಕೀಳಿಸಿರುತ್ತಾನೆ.
ತೊಂಡನೂರು ಜೈನ ರಾಜ್ಯದಲ್ಲಿರುತ್ತದೆ. ರಾಜನ ಮಗಳಿಗೆ ಭೂತದ ಕಾಟ. ರಾಮಾನುಜರೇ ಬಂದಿರುವುದನ್ನು ಅರಿತ ರಾಜಬಿಟ್ಟಿದೇವನಿಂದ ಮಗಳ ಚಿಕಿತ್ಸೆಗಾಗಿ ಬೇಡುವಿಕೆ. 'ನಾರಾಯಣ' ಮಂತ್ರಪೂತ ಜಲದಿಂದ ಪ್ರೋಕ್ಷಣೆ ಮಾಡಿದೊಡನೆ, ಬಗ್ಗದ ಭೂತ ಬಿಟ್ಟೋಡುತ್ತದೆ. ಕೃತಜ್ಞ ರಾಜನಿಂದ ಶ್ರೀವೈಷ್ಣವಧರ್ಮದ ಸ್ವೀಕಾರ. ವಿಷ್ಣುವರ್ಧನನೆಂಬ ನಾಮಧೇಯ. ಆತ ಭಗವಂತನಿಗೆ ಅನೇಕ ಗುಡಿಗಳನ್ನು ಕಟ್ಟಿಸುತ್ತಾನೆ, ಬೇಲೂರಿನ ಚೆನ್ನಕೇಶವ ದೇವಸ್ಥಾನದೊಂದಿಗೆ. ರಾಜನೇ ಶ್ರೀವೈಷ್ಣವಧರ್ಮವನ್ನು ಸ್ವೀಕರಿಸಿದನ್ನು ಕಂಡ ಜೈನವಿದ್ವಾಂಸರು ರಾಮಾನುಜರಿಗೆ ಒಂದೇ ಸಮಯದಲ್ಲಿ ಉತ್ತರಿಸುವಂತೆ ೧೦೦೦ ಪ್ರಶ್ನೆಗಳನ್ನು ಹಾಕಿದರಂತೆ. ತನ್ನ ಮೂಲ ಸ್ವರೂಪವಾದ ಆದಿಶೇಷನನ್ನು ಜ್ಞಾಪಿಸಿಕೊಂಡ ಅವರು, ತನ್ನ ಸಾವಿರಫಣಗಳಿಂದ ಉತ್ತರಿಸಿದರಂತೆ.
ಈ ಮಧ್ಯೆ ಕನಸಿನಲ್ಲಿ ಹುತ್ತದಲ್ಲಿ ದೇವರಮೂರ್ತಿ ಚೆಲುವ ನಾರಾಯಣನ ದರ್ಶನ, ಸ್ಥಾಪನ. ಆದರೂ, ಉತ್ಸವ ಮೂರ್ತಿಯನ್ನು ಕಾಣದ ಕೊರತೆ. ಮತ್ತೆ ಕನಸಿನಲ್ಲಿ ಭಗವಂತನ ಸೂಚನೆ, ಅದು ದೆಹಲಿಯಲ್ಲಿ ಸುಲ್ತಾನನ ಬಳಿಯಲ್ಲಿರುವುದಾಗಿ. ಏಕಾಏಕಿ ಬಂದ ರಾಮಾನುಜರ ತೇಜಸ್ಸನ್ನು ಕಂಡು ಮರ್ಯಾದೆಯಿಂದ ಕಂಡ ಸುಲ್ತಾನ 'ಕರೆದಾಗ ಅದಾಗಿ ಬಂದರೆ ಕೊಂಡಯ್ಯಬಹುದೆಂದು' ಇಷ್ಟವಿಲ್ಲದಿದ್ದರೂ ಅನುಮತಿ ಕೊಡುತ್ತಾನೆ. 'ಏನ್ ಸೆಲ್ವಮೇ ವಾ' ಎಂದು ಕರೆದ ರಾಮನುಜರ ಮಡಿಲಿನಲ್ಲಿ ನಡೆದುಬಂದು ವಿಗ್ರಹ ಕುಳಿತಿತು ಎಂಬ ಪ್ರತೀತಿ. ತಿರುನಾರಾಯಣಪುರವನ್ನು ಪುನಃ ತಲಪುವವೇಳೆಗೆ, ಮುದ್ದು ವಿಗ್ರಹವನ್ನು ಕಾಣದ ವಿರಹವೇದನೆಯನ್ನು ಅನುಭವಿಸುತ್ತಿದ್ದ ಸುಲ್ತಾನನ ಕುಮಾರಿ ಬಂದು, ಪ್ರಣಾಮ ಸಲ್ಲಿಸಿದೊಡನೆ ವಿಗ್ರಹದಲ್ಲೇ ಐಕ್ಯಳಾದಳು ಎಂಬ ಪ್ರತೀತಿ. ಅವಳ ಒಂದು ಪ್ರತೀಕ ಭಗವಂತನ ಅಡಿದಾವರೆಗಳಲ್ಲಿ.
ರಾಮಾನುಜರು ಮೇಲುಕೋಟೆಯಲ್ಲಿದ್ದದ್ದು ಸುಮಾರು ೧೩ ವರ್ಷ. ಐದು ನಾರಾಯಣ ದೇವಸ್ಥಾನಗಳನ್ನು ಸ್ಥಾಪಿಸಿರುತ್ತಾರೆ. ಜೊತೆ ಜೊತೆಗೆ ಪಾಂಚರಾತ್ರ ಆಗಮದಂತೆ ಪೂಜಾಪದ್ಧತಿಯನ್ನು ನಿಯೋಜಿಸಿ, ದೇವಸ್ಥಾನಗಳ ಆಡಳಿತಗಳನ್ನು ವ್ಯವಸ್ಥೆ ಗೊಳಿಸಿ, ಅನೇಕರಿಗೆ ಸಮಾಶ್ರಯಣ-ಪ್ರಪತ್ತಿ ದೀಕ್ಷೆಯನ್ನು ಅನುಗ್ರಹಿಸಿ ಶ್ರೀರಂಗಕ್ಕೆ ಹಿಂದಿರುಗುತ್ತಾರೆ. ನಂತರ ದಿಗ್ವಿಜಯವನ್ನು ಸಾಧಿಸಿ, ೧೨೦ ವರ್ಷದ ತುಂಬು ಜೀವನವನ್ನು ಮಾಡಿ, ಆದಿಶೇಷನ ಅವತಾರವೆಂದೇ ಪ್ರಸಿದ್ಧಿಪಡೆದ ಇವರು ಭಗವಂತನ ಪಾದವನ್ನು ಸೇರುತ್ತಾರೆ. ಅವರ ದೇಹ ಎಷ್ಟು ಪವಿತ್ರವೆಂದರೆ ಈಗಲೂ ಶ್ರೀರಂಗದಲ್ಲಿ ಅದನ್ನು ಕಾಪಿಟ್ಟಿದ್ದಾರೆ. ಶ್ರೀರಂಗಮಹಾಗುರುಗುಳು ಹೇಳಿದಂತೆ 'ಪರಮಪದಕ್ಕೆ ಸೋಪಾನ ಕಟ್ಟಿದ' ಭಗವದ್ರಾಮಾನುಜರ ಮತ್ತು 'ಪರಮ ಪದಕ್ಕೆ ಹಾರಿದ' ಶ್ರೀಶಂಕರಭಗವದ್ಪಾದರ ಜಯಂತಿ ಒಂದೇ ದಿನ ಬರುವುದರಲ್ಲಿ ಏನಾಶ್ಚರ್ಯ?
ಸೂಚನೆ : 26/04/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.