Monday, April 7, 2025

ಪ್ರಶ್ನೋತ್ತರ ರತ್ನಮಾಲಿಕೆ 10 (Prasnottara Ratnamalike 10)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೦. ಮದಿರದಂತೆ ಮೋಹಜನಕ ಯಾವುದು ?

ಉತ್ತರ - ಶರೀರ, ಸ್ತ್ರೀ, ಪುತ್ರ, ಧನ ಈ ವಿಷಯಗಳಲ್ಲಿ ಮೋಹ.

ಮದಿರಾ ಎಂಬುದು ಒಂದು ಬಗೆಯ ಮಾದಕದ್ರವ್ಯ. ಅದನ್ನು ಸ್ವೀಕರಿಸಿದವನು ತನ್ನ ಮನಸ್ಸಿನ ಸ್ತಿಮಿತತೆಯನ್ನು ಕಳೆದುಕೊಳ್ಳುತ್ತಾನೆ. ಅವನು ಹೇಗೆ ನಡೆಯಬೇಕಿತ್ತೋ ಹಾಗೆ ನಡೆಯಲಾಗದು; ಹೇಗೆ ಯೋಚಿಸಬೇಕೋ ಹಾಗೆ ಯೋಚಿಸಲಾಗದು; ಹೇಗೆ ಮಾತನಾಡಬೇಕೋ ಹಾಗೆ ಮಾತನಾಡಲಾಗದು. ಇವೆಲ್ಲವೂ ವ್ಯತ್ಯಾಸವಾಗುವುದು. ಅಂದರೆ ಅವನ ನಡವಳಿಕೆಯಲ್ಲಿ ಮದಿರೆಯೆಂಬುದು ತೊಂದರೆಯನ್ನು ಉಂಟುಮಾಡುತ್ತದೆ. ಹಾಗೆಯೇ ಇಲ್ಲೂ ಕೂಡ ಅಂಥದ್ದೇ ಮೋಹಜನಕವಾದುದು ಯಾವುದು? ಎಂಬ ಪ್ರಶ್ನೆ ಬಂದಿದೆ. ಅದಕ್ಕೆ ಉತ್ತರವಾಗಿ ಶರೀರ, ಸ್ತ್ರೀ, ಪುತ್ರ, ಧನ ಈ ವಿಷಯಗಳಲ್ಲಿ ಇರುವ ಮೋಹವವೇ ಅಂತಹ ಮದಿರೆ ಎಂಬುದಾಗಿ ಕರೆಯಬೇಕು ಎಂಬ ಉತ್ತರ ಇಲ್ಲಿದೆ. ಅಂದರೆ ಶರೀರ ಸ್ತ್ರೀ ಮೊದಲಾದವುಗಳು ನಮ್ಮ ಸ್ತಿಮಿತತೆಯನ್ನು ಅಥವಾ ನಮ್ಮ ಅಸ್ತಿತ್ವವನ್ನು ಕಳೆಯುವಂತವುಗಳು ಎಂಬುದು ಇದರ ಅರ್ಥ.


ನಮಗೆ ಒಂದು ಸಂದೇಹ ಬರುತ್ತದೆ ಇವು ಮೋಹವನ್ನು ಅಂದರೆ ನಮ್ಮ ಅಸ್ತಿತ್ವವನ್ನು ಕಳೆಯುವಂತಹ ವಿಷಯಗಳಾದರೆ ಇವು ಬೇಡವೇ? ಎಂದರೆ ಹಾಗಲ್ಲ. ಇವುಗಳು ಇಲ್ಲದಿದ್ದರೆ ಯಾವುದೂ ಕೂಡ ನಡೆಯುವುದಿಲ್ಲ. ಶರೀರವಿಲ್ಲದಿದ್ದರೆ ನಾವು ಯಾವ ಕಾರ್ಯವನ್ನು ಕೂಡ ಮಾಡಲಾರೆವು. ಸ್ತ್ರೀ ಇಲ್ಲದಿದ್ದರೆ ಈ ಸಂಸಾರ ಅಥವಾ ವಂಶವೇ ಮುಂದುವರೆಯಲಾರದು. ಪುತ್ರ ಸಂತತಿ ಇಲ್ಲದಿದ್ದರೆ ಅದು ಕೂಡ ಅಷ್ಟೇ. ಇವೆಲ್ಲದಕ್ಕೂ ಕಳಶಪ್ರಾಯದಂತೆ ಇರುವಂತದ್ದು ಧನ. ಅಂದರೆ ನಮ್ಮ ಬಾಹ್ಯವ್ಯವಹಾರ ಸಂಗತವಾಗಿ ನಡೆಯಬೇಕಾದರೆ ಧನ ಬೇಕಷ್ಟೇ. ಹಾಗಾಗಿ ಇವುಗಳು ಇಲ್ಲದಿದ್ದರೆ ನಮ್ಮ ಬದುಕು ಅಸಾಧ್ಯ ಎಂಬುದೇ ವಿಷಯ. ಆದರೆ ಇಲ್ಲಿ ಹೇಳುವ ವಿಷಯ ಯಾವುದು? ಇವುಗಳು ಹೇಗೆ ಮೋಹಕ?


ಶರೀರ ಮೊದಲಾದ ವಿಷಯಗಳು ನಮಗೆ ಬೇಡವೆಂಬ ಅರ್ಥವಲ್ಲ. ಅವುಗಳನ್ನು ಯಾವಾಗ? ಹೇಗೆ? ಎಷ್ಟು ಬಳಸಿಕೊಳ್ಳಬೇಕು? ಎಂಬ ಬಗ್ಗೆ ನಮಗೆ ಒಂದು ಬಗೆಯ ನಿಗಾ ಇರಬೇಕು ಎಂಬುದು ಇದರ ತಾತ್ಪರ್ಯ. ಅದಕ್ಕಾಗಿಯೇ ಶರೀರವನ್ನು ಅಷ್ಟಾಗಿ ಮೋಹಿಸಬಾರದು ಎಂಬುದಾಗಿ ಶ್ರೀಶಂಕರ ಭಗವತ್ಪಾದರು ಮೋಹಮದ್ಗರ ಸ್ತೋತ್ರದಲ್ಲಿ ಹೇಳುತ್ತಾರೆ ಮತ್ತು ದಾರೇಷಣ, ವಿತ್ತೇಷಣ, ಪುತ್ರೇಷಣ ಎಂಬುದಾಗಿ ಈಷಣಾತ್ರಯ ತ್ಯಾಗವೇ ಮುಕ್ತಿಗೆ ಸಾಧನ ಎಂಬುದಾಗಿ ಬಹಳ ವಿವರವಾಗಿ ಈ ಬಗ್ಗೆ ಉಪನಿಷತ್ತುಗಳಲ್ಲಿ ಕಾಣಬಹುದು. ಅಂದರೆ ಇವೆಲ್ಲವೂ ನಮ್ಮ ಮುಕ್ತಿಗೆ ಬಾಧಕಗಳಾಗಬಹುದು ಎಂಬುದು ಅರ್ಥ. ಇಲ್ಲಿ ಸ್ತ್ರೀ ಪುರುಷ ಎಂಬ ಸಂಕೇತದ ವಿಷಯವಲ್ಲ. ಈ ಪ್ರಪಂಚಕ್ಕೆ ಬಂದಂತಹ ಪ್ರತಿಯೊಬ್ಬರೂ ಕೂಡ ಸ್ತ್ರೀಯೇ ಆಗಿರುತ್ತಾನೆ. ಅಲ್ಲಿ ಭಾವಿಸಬೇಕಾದುದೇ ಪುರುಷ. ಹಾಗಾಗಿ ಈ ಪ್ರಪಂಚಕ್ಕೆ ಬಂದವನು ಈ ಶರೀರವೆಂಬ ಪ್ರಕೃತಿಯನ್ನು ಮತ್ತು ಅದರ ವಿಕಾಸ ರೂಪವಾಗಿರುವಂತ ಸಂಸಾರವನ್ನು ಮತ್ತು ಅದಕ್ಕೆ ಬೇಕಾದಂತಹ ಧನ-ಸಂಪತ್ತು ಮೊದಲಾದವುಗಳನ್ನು ಎಷ್ಟಕ್ಕೆ ಬೇಕೋ ಅಷ್ಟರಮಟ್ಟಿಗೆ ಅದನ್ನು ಬಳಸಿಕೊಂಡರೆ ಅವನು ತನ್ನ ಗುರಿಯನ್ನು ಬಹಳ ಸುಲಭವಾಗಿ ಮುಟ್ಟಬಲ್ಲ. ಅದಿಲ್ಲದಿದ್ದರೆ ಅವನಿಗೆ ಗುರಿಯು ಬಹಳ ಕಷ್ಟವಾದೀತು ಎಂಬ ಒಂದು ಸಂದೇಶವನ್ನು ಈ ಪ್ರಶ್ನೋತ್ತರದಲ್ಲಿ ಕೊಟ್ಟಂತೆ ಕಂಡುಬರುತ್ತದೆ.

ಸೂಚನೆ : 6/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.