Sunday, April 27, 2025

ಪ್ರಶ್ನೋತ್ತರ ರತ್ನಮಾಲಿಕೆ 12 (Prasnottara Ratnamalike 12)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೧೩. ಶತ್ರು ಯಾರು ?

ಉತ್ತರ - ತನಗೆ ತಾನೆ ಶತ್ರು (ಯಾರು ತನ್ನ ಕಲ್ಯಾಣಕ್ಕಾಗಿ ಪುರುಷಾರ್ಥಗಳನ್ನು ಆಚರಿಸುವುದಿಲ್ಲವೋ ಅವನು) 


ಈ ಮುಂದಿನ ಪ್ರಶ್ನೆ - 'ವೈರಿ ಯಾರು?' ತನಗೆ ತಾನು ಶತ್ರು ಯಾವಾಗ ಆಗಬಹುದು? ಎಂಬುದು ಈ ಪ್ರಶ್ನೆಯ ಆಶಯವಾಗಿದೆ. 'ಯಾರು ಪುರುಷಾರ್ಥಗಳನ್ನು ಸರಿಯಾಗಿ ಅನುಷ್ಠಾನ ಮಾಡುವುದಿಲ್ಲವೋ ಅವನು ತನಗೆ ತಾನೇ ಶತ್ರುವಾದಂತೆ' ಎಂಬುದು ಈ ಉತ್ತರದ ಅಂಶವಾಗಿದೆ. ಇಲ್ಲಿ ನಾವು ವಿಚಾರಿಸಬೇಕಾದ ವಿಷಯ, ಪುರುಷಾರ್ಥಗಳು ಯಾವುವು? ಅವುಗಳನ್ನು ಹೇಗೆ ನಾವು ಆಚರಿಸಬೇಕು? ಹೇಗೆ ಆಚರಿಸದಿದ್ದರೆ ಅವುಗಳು ನಮ್ಮನ್ನು ಶತ್ರುಗಳು ಎಂದು ಕರೆಸಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ? ಎಂಬುದು. 


ಪುರುಷನ ಬಯಕೆಯನ್ನು 'ಪುರುಷಾರ್ಥ' ಎಂಬುದಾಗಿ ಕರೆಯಲಾಗಿದೆ. ಇಲ್ಲಿ ಪುರುಷ ಎಂದರೆ ಸ್ತ್ರೀ ಮತ್ತು ಪುರುಷ ಎಂಬ ವಿಭಾಗದ ವಿಷಯವಲ್ಲ. ಪುರ ಎಂದರೆ ಶರೀರ. ಶರೀರವೆಂಬ ಪುರದಲ್ಲಿ ಯಾರು ವಾಸವಾಗಿರುತ್ತಾರೋ, ಅವನಿಗೆ 'ಪುರುಷ' ಎಂದು ಕರೆಯಲಾಗಿದೆ. 'ಜೀವ' ಎಂದರ್ಥ. ಪುರುಷ ಅಥವಾ ಸ್ತ್ರೀ ಇಬ್ಬರಲ್ಲೂ ಜೀವ ಎಂಬ ವಿಷಯ ಇದ್ದೇ ಇರುತ್ತದೆ. ಇವರಿಬ್ಬರೂ ಪುರುಷರೇ. ಜೀವನಕ್ಕೆ ಅಥವಾ ತನ್ನ ಕಲ್ಯಾಣಕ್ಕಾಗಿ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥವನ್ನು ಮಾಡಬೇಕಾಗಿದೆ. ಮೋಕ್ಷವು ಕೊನೆಯ ಪುರುಷಾರ್ಥವಾಗಿದೆ. ವಸ್ತುತಃ ಇದು ಪಡೆಯಬೇಕಾದದ್ದಲ್ಲ, ಪಡೆದಿದ್ದನ್ನು ಉಳಿಸಿಕೊಳ್ಳಬೇಕಾದದ್ದು. ಒಂದಾನೊಂದು ಕಾಲದಲ್ಲಿ ಮೋಕ್ಷವು ಸಹಜಸಿದ್ಧವಾದದ್ದು ಆಗಿತ್ತು. ಆದರೆ ಅದು ಕ್ರಮೇಣ ಕ್ರಮೇಣ ತಪ್ಪಿ ಮೋಕ್ಷವನ್ನು ಪಡೆಯಬೇಕು ಎಂಬ ವಿಷಯ ಸಿದ್ಧವಾಯಿತು. ಉದಾಹರಣೆಗೆ ಚಿಕ್ಕ ಮಕ್ಕಳಿಗೆ ನಿದ್ರೆ ಅನ್ನುವುದು ಅತ್ಯಂತ ಸಹಜವಾಗಿ ಬರುತ್ತದೆ. ನಿದ್ದೆಗಾಗಿ ಯಾವುದನ್ನು ಕೂಡ ಮಾಡುವ ಅವಶ್ಯಕತೆ ಇಲ್ಲ. ನಿದ್ದೆಗೆ ಇರುವ ಪ್ರತಿಬಂಧಕವನ್ನು- ದುರಿತವನ್ನು ಅಥವಾ ತೊಂದರೆಯನ್ನು ನಿವಾರಣೆ ಮಾಡಿಕೊಂಡರೆ ಅಥವಾ ನಿದ್ರೆಗೆ ಬೇಕಾದ ಪೂರಕವಾದ ಸಂಗತಿಗಳನ್ನು ಜೋಡಿಸಿಕೊಂಡರೆ ಆಗ ನಿದ್ರೆಯು ತಾನಾಗಿಯೇ ಬರುತ್ತದೆ, ಹೇಗೋ ಹಾಗೆ ಈ ಮೋಕ್ಷವು ಕೂಡ. ಮೋಕ್ಷ ಎಂದರೆ ಬಿಡುಗಡೆ ಬಂಧನದಿಂದ ಮುಕ್ತವಾಗುವಿಕೆ. ಜೀವಿಯು ಈ ಸಂಸಾರವೆಂಬ ಚಕ್ರದಲ್ಲಿ ಸಿಲುಕಿರುತ್ತಾನೆ. ಇದರಿಂದ ಅವನು ಬಿಡುಗಡೆಯನ್ನು ಹೊಂದಬೇಕು. ಇದಕ್ಕೆ 'ಮೋಕ್ಷ' ಎಂದು ಹೆಸರು. ಹೇಗೆ ನಿದ್ದೆಯು ಬರಬೇಕಾದರೆ ಒಂದು ಸ್ಥಿತಿ ಅಥವಾ ಕಂಡೀಶನ್ ಎಂಬುದು ಅತ್ಯಂತ ಅವಶ್ಯವೋ ಹಾಗೆಯೇ ಮೋಕ್ಷಕ್ಕೂ ಒಂದು ಕಂಡೀಶನ್ ಅಥವಾ ಸ್ಥಿತಿ ಇರಬೇಕಾಗುತ್ತದೆ. ಇದನ್ನೇ 'ಧರ್ಮ' ಎಂಬುದಾಗಿ ಕರೆಯುತ್ತಾರೆ. ಈ ಸ್ಥಿತಿ ಅಥವಾ ಕಂಡೀಶನ್ ಬರಬೇಕಾದರೆ ಅದಕ್ಕೆ ಸೂಕ್ತವಾದ ಬಯಕೆ ಬೇಕು. ಇದನ್ನೇ 'ಕಾಮ' ಎನ್ನುತ್ತಾರೆ. ಕಾಮಕ್ಕೆ ಒಂದು ವಿಷಯ ಬೇಕು. ಉದಾಹರಣೆಗೆ ನಿದ್ದೆಯನ್ನು ಮಾಡುವಾಗ ಹಾಸಿಗೆ ನಿಶ್ಶಬ್ದತೆ ಮೊದಲಾದವುಗಳನ್ನು ಬಯಸುತ್ತೇವೆ. ಹಾಸಿಗೆ ಮೊದಲಾದವುಗಳು ಅಲ್ಲಿ ಅರ್ಥ ಎನಿಸಿಕೊಳ್ಳುತ್ತವೆ. ಅಂತೆಯೇ ಜೀವನದಲ್ಲಿ ಅನೇಕ ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಬಯಕೆಯನ್ನು ಪೂರ್ತಿ ಮಾಡಿಕೊಂಡು ಒಂದು ಕಂಡೀಶನ್ನು ಏರ್ಪಡಿಸಿಕೊಂಡರೆ ಆಗ ಮೋಕ್ಷ ಎಂಬುದು ಸಿದ್ಧವಾಗುತ್ತದೆ. ಈ ರೀತಿ ಯಾರೋ ಬದುಕುತ್ತಾನೋ ಅದನ್ನೇ ಪುರುಷಾರ್ಥಮಯವಾದ ಬಾಳಾಟ ಎನ್ನುತ್ತಾರೆ. ಹೀಗೆ ಮಾಡದಿದ್ದರೆ ಅವನು ಅವನಿಗೇ ಶತ್ರುವಾಗುತ್ತಾನೆ. ಶ್ರೀರಂಗ ಮಹಾಗುರುಗಳು ಹೇಳಿದಂತೆ ಪೂರ್ಣ ಜೀವನ ಎಂದರೆ "ಭಗವಂತನಿಂದ ಬಂದ ಜೀವ ಮತ್ತೆ ಭಗವಂತನಲ್ಲೇ ಒಂದಾಗುವಿಕೆ". ಇಂತಹ ಪೂರ್ಣ ಜೀವನವನ್ನು ಮಾಡದಿದ್ದರೆ ಅವನಿಗೆ ಅವನೇ ಶತ್ರುವಾಗುತ್ತಾನೆ.


ಸೂಚನೆ : 13/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.