ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರಶ್ನೆ ೧೨. ಸಂಸಾರವಲ್ಲಿ (ಬಳ್ಳಿ) ಯಾವುದು ?
ಉತ್ತರ - ತೃಷ್ಣಾ.
ಈ ಮುಂದಿನ ಪ್ರಶ್ನೆ ಹೀಗಿದೆ - ಸಂಸಾರ ಎಂಬ ಬಳ್ಳಿ ಯಾವುದು ? ಎಂದು. ಅದಕ್ಕೆ ಉತ್ತರ ತೃಷ್ಣಾ ಅಥವಾ ಆಶೆ. ಆಶೆ ಎಂಬುದು ಸಂಸಾರವನ್ನು ಬೆಳೆಸುತ್ತದೆ ಎಂಬುದು ಈ ಪ್ರಶ್ನೋತ್ತರದ ಒಟ್ಟಾರೆ ಅಭಿಪ್ರಾಯವಾಗಿದೆ. ಸಂಸಾರವನ್ನು ಆಶೆಯು ಹೇಗೆ ಬೇಳೆಸುತ್ತದೆ? ಎಂಬುದನ್ನು ನಾವಿಲ್ಲಿ ನೋಡಬೇಕಾಗಿದೆ. ಪ್ರಶ್ನೆಯು ಬಹಳ ಜಟಿಲವಾಗಿದೆ. ಭಾಷೆಯ ದೃಷ್ಟಿಯಿಂದ ಪ್ರಶ್ನೋತ್ತರ ಬಹಳ ಸುಲಭವಾಗಿರುವಂತೆ ಕಂಡರೂ ಅರ್ಥೈಸುವಾಗ ಅದರ ಕಾಠಿನ್ಯ ಅಥವಾ ಅದನ್ನು ಅನುಭವಿಸುವಾಗ ತಿಳಿಯುತ್ತದೆ. ಇಂತಹ ಗಂಭೀರವಾದ ವಿಷಯವನ್ನು ಪ್ರಶ್ನೋತ್ತರರೂಪದಲ್ಲಿ ಚಿಂತಿಸೋಣ.
ಸಂಸ್ಕೃತ ಭಾಷೆಯ ವಲ್ಲಿ ಎಂಬ ಪದವೇ ಕನ್ನಡದಲ್ಲಿ ಬಳ್ಳಿಯಾಗಿದೆ. ವಕಾರಕ್ಕೆ ಬಕಾರ ಬಂದಿದೆ. ಲಕಾರವು ಳಕಾರವಾಗಿದೆ ಅಷ್ಟೆ. ಬಳ್ಳಿಯು ಹಬ್ಬುವ ಸಭಾವ ಉಳ್ಳದ್ದು. ಎಲ್ಲಿಯವರೆಗೆ ಅದಕ್ಕೆ ಬೇಕಾದ ಪೋಷಕವಾದ ಅಂಶ ದೊರಕುತ್ತದೆಯೋ ಅಲ್ಲಿಯವರೆಗೆ ಅದು ಹಬ್ಬುತ್ತದೆ. ಅದು ವಲ್ಲಿಯಾದ್ದರಿಂದ ಸ್ವತಂತ್ರವಾಗಿ ಬೆಳೆಯದು ಎಂಬುದನ್ನೂ ನಾವಿಲ್ಲಿ ತಿಳಿಯಲೇ ಬೇಕು. ವಲ್ಲಿಯ ಮೂಲ ಭದ್ರವಾಗಿ ಬೇರೂರಿದ ಒಂದು ವೃಕ್ಷ. ಅದನ್ನು ಆಶ್ರಯಿಸಿ ವಲ್ಲಿಯು ತನ್ನ ವಿಸ್ತಾರವನ್ನು ಮಾಡಿಕೊಳ್ಳುತ್ತದೆ. ವಲ್ಲಿಯ ಬೆಳವಣಿಗೆಗೆ ವಸ್ತುತತಃ ಬೇರೆಯದಾದ ಪೋಷಕಾಂಶದ ಅಗತ್ಯವಿಲ್ಲ. ವೃಕ್ಷಕ್ಕೆ ಹಾಕಿದ ನೀರು ಗೊಬ್ಬರವೇ ವಲ್ಲಿಗೂ ಸಾಕಾಗುತ್ತದೆ. ಕೆಲವೊಮ್ಮೆ ವಲ್ಲಿಯು ತಾನು ಆಶ್ರಯಿಸಿದ ಮರವನ್ನು ಬೆಳೆಯಲು ಕೊಡುವುದಿಲ್ಲ. ಮರಕ್ಕೆ ಹಾಕಿದ ಗೊಬ್ಬರವನ್ನೆಲ್ಲಾ ತಾನೇ ಹೀರುತ್ತದೆ.
ಇಲ್ಲಿ ಬಹಳ ಅದ್ಭುತವಾದ ರೂಪಕ ಅಲಂಕಾರವಿದೆ. ಎರಡು ವಸ್ತುಗಳಿಗೆ ಅಭೇದವನ್ನು ಹೇಳುವಾಗ ರೂಪಕಾಲಂಕಾರವನ್ನು ಬಳಸಲಾಗುತ್ತದೆ. ಇಲ್ಲಿ ವೃಕ್ಷವೆಂದರೆ ಸಮಸ್ತ ಪ್ರಪಂಚಕ್ಕೂ ಆಧಾರಭೂತವಾದ ಪರಬ್ರಹ್ಮ. ಅದನ್ನು ಆಶ್ರಯಿಸಿಕೊಂಡಿರುವುದು ಈ ಸಂಸಾರವೆಂಬ ವಲ್ಲಿ. ಹೇಗೆ ನೀರು ಗೊಬ್ಬರಗಳು ವೃಕ್ಷವನ್ನು ಮತ್ತು ವಲ್ಲಿಯನ್ನೂ ಬೆಳೆಸುತ್ತದೆಯೋ ಅಂತೆಯೇ ಆಶೆಯು ಪರಬ್ರಹ್ಮವನ್ನು ಮತ್ತು ಸಂಸಾರವನ್ನು ಎರಡನ್ನೂ ಬೆಳೆಸುತ್ತದೆ. ಆಶಾ ಎಂಬುದಕ್ಕೆ ಕಾಮ ಎಂದು ಇನ್ನೊಂದು ಪದದಿಂದ ಹೇಳುವ ರೂಢಿಯಿದೆ. ವಲ್ಲಿಯು ವೃಕ್ಷವನ್ನು ಆಶ್ರಯಿಸಿಕೊಂಡು ಬೆಳೆದರೆ ಒಳ್ಳೆಯದು. ತಾನು ಮಾತ್ರ ಬೆಳೆದು ವೃಕ್ಷವನ್ನೇ ಸಾಯಿಸುವಂತಾಗಬಾರದಷ್ಟೆ. ಅಂತೆಯೇ ಕಾಮವು ಸಂಸಾರವನ್ನು ಬೆಳೆಸುವುದರ ಜೊತೆ ಜೊತೆ ಸಂಸಾರ ಮೂಲವಾದ ಪರಬ್ರಹ್ಮವನ್ನು ಮೆರೆಸುವಂತೆ ಇರಬೇಕು; ಮರೆಸುವಂತಲ್ಲ. ಬಳ್ಳಿಯು ಮಿತಿಮೀರಿ ಬೆಳೆದರೆ ವೃಕ್ಷವೇ ಕಾಣದಂತಾಗುವ ಸಂದರ್ಭವಿರುತ್ತದೆ. ಅಂತೆಯೇ ಕಾಮವು ಅಧಿಕವಾಗಿ ಸಂಸಾರ ಮಾತ್ರ ಬೆಳೆಯುತ್ತದೆ. ಈ ಸಂಸಾರಕ್ಕೆ ಯಾವುದು ಆರಂಭವೋ ಅದೇ ಅಂತ್ಯವೂ ಹೌದು. ಪರಬ್ರಹ್ಮವೇ ಈ ಸಂಸಾರಕ್ಕೆ ಆರಂಭ, ಅದೇ ಅಂತ್ಯವೂ ಆಗಿದೆ. ಶ್ರೀರಂಗ ಮಹಾಗುರುಗಳು ಹೇಳಿದ ಕಾಮದ ವಿವರಣೆ ಈ ವಿಷಯಕ್ಕೆ ಹೆಚ್ಚು ಸೂಕ್ತವಾಗಿದೆ - "ಅರ್ಥ-ಕಾಮಗಳು ತುಂಟಹಸುವಿನಂತೆ: ಹಾಲು ಕರೆಯಲು ಹೋದರೆ, ಕೊಂಬಿನಿಂದ ತಿವಿಯುವುವು, ಕಾಲಿನಿಂದ ಒದೆಯುವುವು. ಅಂತಹ ಹಸುಗಳನ್ನು ಹಿಂದೊಂದು ಮುಂದೊಂದು ಕಂಬಗಳಿಗೆ ಕಟ್ಟಿಹಾಕಿ ಹಾಲು ಕರೆಯಬೇಕು: ಧರ್ಮ-ಮೋಕ್ಷಗಳೆಂಬ ಎರಡು ಕಂಬಗಳಿಗೆ ಕಟ್ಟಿಹಾಕಿದಾಗ ಅಮೃತದ ಧಾರೆಯನ್ನೇ ಅವು ಕರೆಯಬಲ್ಲವು!" ಎಂದು. ಅಂತೆಯೇ ಆಶೆಯು ಸಂಸಾರವನ್ನು ಬೆಳೆಸಿ ಸಂಸಾರಮೂಲವಾದ ಪರಂಜ್ಯೋತಿಯನ್ನು ದರ್ಶನಮಾಡಿಸುವಂತಿರಬೇಕೆಂಬುದೇ ಈ ಪ್ರಶ್ನೋತ್ತರದ ಸಾರವಾಗಿದೆ.
ಸೂಚನೆ : 20/4/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.