Sunday, April 13, 2025

ಅಷ್ಟಾಕ್ಷರೀ 79 ಯಸ್ಮಿನ್ ದೇಶೇ ಮೃಗಃ ಕೃಷ್ಣಃ (Ashtakshari 79)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


 ಕೃಷ್ಣಮೃಗವು ವಿಹರಿಸುವೆಡೆಯೇ ಪವಿತ್ರವಾದದ್ದು

ಭಾರತೀಯಸಾಹಿತ್ಯದಲ್ಲಿ ಮೊದಲಿನಿಂದಲೂ  ಸಿಂಹಕ್ಕೇ ಮೃಗರಾಜನೆಂಬ ಪಟ್ಟ. ರಾಣಾಪ್ರತಾಪ ಸಿಂಗ್, ಭಗತ್ ಸಿಂಗ್ - ಮುಂತಾದವರ ಹೆಸರಿಗೂ ಶೋಭೆಕೊಡಬಲ್ಲ, ಠೀವಿಯ ನಡೆಯ ನಿರ್ಭಯಪ್ರಾಣಿಯೇ ಈ ಕಂಠೀರವ. ಆದರೂ ಭಾರತದ ರಾಷ್ಟ್ರಿಯಪ್ರಾಣಿಯೆಂದು ಘೋಷಿಸಿದುದು ವ್ಯಾಘ್ರವನ್ನೇ. ಎಲ್ಲಾ ರಾಜ್ಯಗಳಲ್ಲೂ ಅದರ ಅಸ್ತಿತ್ವ, ವಿಶಿಷ್ಟಬಲ-ಪರಾಕ್ರಮಗಳು, ಮುಂತಾದುವನ್ನಾಧರಿಸಿ ಅದಕ್ಕೀ ಪದವಿಯು ದಕ್ಕಿತು- ೧೯೭೩ರಲ್ಲಿ. ಇನ್ನು ಆನೆಯೋ? ಸಸ್ಯಾಹಾರಿಯಾದರೂ ಬೃಹದಾಕಾರದ ಪ್ರಾಣಿ. ಬಲಶಾಲಿಯಾದರೂ ಪಳಗಿಸಬಹುದಾದದ್ದು. ಅರಸರಿಗೆ ಅಚ್ಚುಮೆಚ್ಚಾಗಿದ್ದು,ಮೆರವಣಿಗೆ-ಉತ್ಸವಗಳಿಗೆ ಮೆರುಗು ತರುವುದೆಂಬ ಕಾರಣಕ್ಕೆ, ರಾಷ್ಟ್ರಿಯಸಾಂಸ್ಕೃತಿಕ-ಪ್ರಾಣಿಯೆಂಬ ಬಿರುದನ್ನು ಪಡೆಯಿತು - ೨೦೧೦ರಲ್ಲಿ . ಸರ್ವವಂದ್ಯವಾದ ಗೋವಿಗೆ ಸಹ ಇವಕ್ಕೆ ಸರಿಸಮವೆನಿಸುವ ಸ್ಥಾನಗಳು ಸಲ್ಲಲಿಲ್ಲ! 

ಭಾರತದೇಶದ ಪ್ರಾಜ್ಞರು ಪೃಥಿವಿಯಲ್ಲಿರುವ ಮಾನವರೆಲ್ಲರಿಗೂ ಮಾರ್ಗದರ್ಶಕರಾಗಬಲ್ಲರು - ಎಂದು ಮನುಸ್ಮೃತಿಯು ಭಾರತದ ವಿಶ್ವಗುರುತ್ವವನ್ನು ಸಾರಿದೆಯಷ್ಟೆ. ಆ ಸಂದರ್ಭದಲ್ಲಿಯೇ ಬ್ರಹ್ಮಾವರ್ತ, ಬ್ರಹ್ಮರ್ಷಿದೇಶ, ಆರ್ಯಾವರ್ತಗಳನ್ನು ಕುರಿತು ಅದು ಹೇಳುತ್ತದೆ. ಹಾಗೆ ಹೇಳುವಾಗ ಯಾವುದು ಶ್ರೇಷ್ಠದೇಶ, ಯಾವುದಲ್ಲವೆಂಬ ವಿಂಗಡಣೆಯನ್ನದು ಮಾಡುತ್ತದೆ. ಯಾಜ್ಞವಲ್ಕ್ಯಸ್ಮೃತಿಯು ಸಹ, ಪವಿತ್ರವೆನಿಸುವ ದೇಶವನ್ನು ಆರಂಭದಲ್ಲೇ ಗುರುತಿಸಿ, ಅಲ್ಲಿ ಆಚರಿಸಿ ಸಾಧಿಸಬೇಕಾದುದನ್ನು ಹೇಳಹೊರಡುತ್ತದೆ. 

ಈ ಎರಡು ಸ್ಮೃತಿಗಳೂ ಈ ಪುಣ್ಯಭೂಮಿಗೆ ಕೊಡುವ ಒಂದು ವಿಶಿಷ್ಟಲಕ್ಷಣವಿದೆ. ಯಾವ ದೇಶದಲ್ಲಿ "ಸ್ವಭಾವತಃ" ಕೃಷ್ಣಮೃಗದ ವಾಸವಿರುತ್ತದೋ (ಯಸ್ಮಿನ್ ದೇಶೇ ಮೃಗಃ ಕೃಷ್ಣಃ), ವಿಹಾರವಿರುತ್ತದೋ, ಅದುವೇ ಶ್ರೇಷ್ಠಭೂಮಿ - ಎಂದು. ಯಾಜ್ಞವಲ್ಕ್ಯಸ್ಮೃತಿಗೆ ಕರ್ಣಾಟಕದ ವಿಜ್ಞಾನೇಶ್ವರನು ಬರೆದಿರುವ "ಮಿತಾಕ್ಷರಾ" ವ್ಯಾಖ್ಯೆಯೂ ಕೃಷ್ಣಸಾರಮೃಗವು "ಸ್ವಚ್ಛಂದವಾಗಿ" ಎಲ್ಲಿ ಸಂಚರಿಸುತ್ತದೆಯೋ ಅದು ಎನ್ನುತ್ತದೆ. ಸ್ವಭಾವತಃ ವಾಸಮಾಡುವುದೆಂದರೇನೆಂದು ವಿವರಿಸುತ್ತಾ, ಮನುಸ್ಮೃತಿವ್ಯಾಖ್ಯಾನಕಾರರಾದ ಮೇಧಾತಿಥಿ-ಕುಲ್ಲೂಕಭಟ್ಟರು, "ದೇಶಾಂತರದಿಂದ ಏನೋ ಉಪಾಯಮಾಡಿಯೋ, ಮತ್ತಾವುದೋ ಉದ್ದೇಶಕ್ಕೆಂದೋ ತರಲಾದ ಮೃಗವಾಗಿರಬಾರದು ಅದು", ಎನ್ನುತ್ತಾರೆ.  ಹೀಗೆ ಅನ್ವಯಮುಖವಾಗಿ ಹೇಳಿದ್ದನ್ನು ವ್ಯತಿರೇಕಮುಖವಾಗಿಯೂ ದೃಢಪಡಿಸಿ ಹೇಳಿದೆ. ಅನ್ವಯಮುಖವಾಗಿ ಎಂದರೆ, "ಇದು ಹೀಗಿದ್ದರೆ ಅದು ಹಾಗಾಗುತ್ತದೆ" - ಎಂಬ ಲೆಕ್ಕ. ವ್ಯತಿರೇಕಮುಖವಾಗಿ ಎಂದರೆ, "ಇದು ಹೀಗಿಲ್ಲದಿದ್ದರೆ ಅದು ಹಾಗಾಗದು" - ಎಂಬ ಲೆಕ್ಕ. 

ಈ ಲೆಕ್ಕದ ಮೇರೆಗೆ, ಕೃಷ್ಣಸಾರಮೃಗದ ಸಹಜವಾದ ಇರುವಿಕೆ, ಸ್ವಚ್ಛಂದವಾದ ಸಂಚಾರಗಳು ಇದ್ದಲ್ಲಿ ಅದು ಶ್ರೇಷ್ಠವಾದ ದೇಶ, ಹಾಗಿಲ್ಲದಿದ್ದಲ್ಲಿ ಅದು ಮ್ಲೇಚ್ಛದೇಶ - ಎಂದಿದೆ. ಶ್ರೇಷ್ಠವಾದ ದೇಶವೆಂಬುದನ್ನು ಸೂಚಿಸಲು "ಅದು ಯಜ್ಞಿಯದೇಶ" - ಎಂದೂ ಈ ಸ್ಮೃತಿಗಳು ಹೇಳಿವೆ.  ಆದರೆ ಇಲ್ಲಿ ಬರಬಹುದಾದ ಪ್ರಶ್ನೆಯೆಂದರೆ, ಮೇಲೆ ಹೇಳಿದ ಬಗೆಬಗೆಯ ಹೆಗ್ಗಳಿಕೆಗಳುಳ್ಳ ಗೋ-ಗಜ-ಸಿಂಹ-ವ್ಯಾಘ್ರಗಳನ್ನು ಬಿಟ್ಟು ಕೃಷ್ಣಸಾರಮೃಗಕ್ಕೆ ಕೊಟ್ಟಿರುವ ಈ ವಿಶಿಷ್ಟಸ್ಥಾನಕ್ಕೆ ಕಾರಣವೇನೆಂಬುದು.   ಈ ಪ್ರಶ್ನೆಯನ್ನು ತಾವೇ ಎತ್ತಿ ಇದಕ್ಕೊಂದು ಸಮರ್ಪಕವಾದ ಉತ್ತರವನ್ನು ಶ್ರೀರಂಗಮಹಾಗುರುಗಳು ಬಹಳ ಹಿಂದೆಯೇ ಕೊಟ್ಟಿರುವರು. ಅವರ ಮಾತಿನ ಕೆಲಮುಖ್ಯಾಂಶಗಳು ಹೀಗಿವೆ. 

"ಕೃಷ್ಣಸಾರಮೃಗವು ಯಜ್ಞಿಯವಾದ ಮೃಗ. ಎಷ್ಟೆಂದರೆ, ಈ ಮೃಗದ ಪ್ರತಿಯೊಂದು ಭಾಗವೂ ಯಜ್ಞದಲ್ಲಿ ಉಪಯೋಗಕ್ಕೆ ಬರತಕ್ಕದ್ದಾಗಿದೆ. ಇದರ ಚರ್ಮವೂ ಶೃಂಗಗಳೂ ಯಜ್ಞೀಯ ಸಾಮಗ್ರಿಗಳು. ಅಲ್ಲದೆ, ಇದರ ಚಲನ-ವಲನಗಳು ಮಾನವನ ಪ್ರಜ್ಞಾಕೇಂದ್ರದ ಕೆಲವು ಗ್ರಂಥಿಗಳ ಮೇಲೆ ಕೆಲಸ ಮಾಡುತ್ತವೆ. ಋಷಿಗಳಿಗೆ ಬೇಕಾದ ನೀವಾರ-ದರ್ಭೆಗಳು ಇರುವ ಪ್ರದೇಶಗಳಲ್ಲಿ ಇವು ವಾಸಿಸುವುವು."  ಎಲ್ಲಿ ಕ್ರೂರಪ್ರಾಣಿಗಳಿರುವುವೋ ಅಲ್ಲಿ ಕೃಷ್ಣಸಾರಗಳಿರ(ಲಾರ)ವು. ಬದಲಾಗಿ, ಎಲ್ಲಿ ದರ್ಭಸಮೃದ್ಧಿಯಿರುವುದೋ ಅಲ್ಲಿಯೇ ಕೃಷ್ಣಸಾರಗಳಿರುವುದೂ. ಎಲ್ಲಿ ಹಿಂಸ್ರಪ್ರಾಣಿಗಳಿರವೋ,ಹಾಗೂ ದರ್ಭೆಯು ಪುಷ್ಕಳವಾಗಿ ದೊರೆಯುವುದೋ,  ಅಲ್ಲಿಯೇ ತಪೋವನಗಳು ಏಳುವುದು. ಎಲ್ಲಿ ತಪೋವನಗಳಿರುವುವೋ ಅಲ್ಲಿಯೇ ಯಜ್ಞಯಾಗಾದಿಗಳು ನೆರವೇರುವುವು. ಎಲ್ಲಿ ತಪೋ-ಯಜ್ಞಗಳು ಸಂಪನ್ನವಾಗುವುವೋ ಅಲ್ಲಿ ಧರ್ಮವು ಸುಪ್ರತಿಷ್ಠಿತವಾಗುವುದು. ಋಷಿಗಳು ನಡೆಸುತ್ತಿದ್ದ ಯಜ್ಞಗಳು ಧರ್ಮಸಾರವಾದ ಲೋಕಕಲ್ಯಾಣಾರ್ಥವಾಗಿಯೇ ಇರುತ್ತಿದ್ದವು. ಎಲ್ಲಿ ಧರ್ಮವು ನೆಲೆಗೊಂಡಿರುವುದೋ ಅಲ್ಲೇ ಪ್ರಜೆಗಳು ಪರಸ್ಪರ-ಹಿತಚಿಂತಕರಾಗಿದ್ದು ನೆಮ್ಮದಿಯನ್ನು ಕಾಣುವುದು. 

ಈ ಕಾರಣಕ್ಕಾಗಿಯೇ, "ತಪಸ್ವಿಗಳ ಯಜ್ಞ-ತಪಸ್ಸುಗಳು ನಿರ್ವಿಘ್ನವಾಗಿ ನಡೆಯುತ್ತಿವೆ ತಾನೆ?" – ಎಂಬ ಕಾಳಜಿಯನ್ನು ರಾಜರುಗಳು ವಹಿಸುತ್ತಿದ್ದುದು. ಹಾಗೂ, ಪ್ರಜೆಗಳ ಸುಖವನ್ನು ಲೆಕ್ಕಿಸದೆ ತಮ್ಮ ಅಧಿಕಾರ-ಐಶ್ವರ್ಯಗಳಲ್ಲಿ ಮೆರೆಯುತ್ತಾ ಲೋಕಕಂಟಕರಾಗಿದ್ದ ರಾಕ್ಷಸರಾದರೂ ಯಜ್ಞಕಾರ್ಯಗಳಿಗೇ ಧ್ವಂಸವನ್ನು ಉಂಟುಮಾಡುತ್ತಿದ್ದುದು. ಹೀಗಾಗಿ, ದೇಶದ ಸಲ್ಲಕ್ಷಣವನ್ನು ಮನು-ಯಾಜ್ಞವಲ್ಕ್ಯರು ಕೊಟ್ಟಿರುವುದು ಅತ್ಯಂತಸಾರ್ಥಕವಾಗಿದೆ. ಸ್ವಾರ್ಥ-ರಹಿತರಾಗಿ ಲೋಕಹಿತಕ್ಕಾಗಿಯೇ ಶ್ರಮಿಸುತ್ತಿದ್ದ ಋಷಿಗಳ ಮಾರ್ಗದರ್ಶನದಲ್ಲಿದ್ದ ನಾಡು ವಿಶ್ವಗುರುವಾದದ್ದರಲ್ಲಿ ಆಶ್ಚರ್ಯವಾದರೂ ಏನು?  ಮತ್ತದೇ ಸ್ಥಾನವು ಮರುಕಳಿಸಲಾ(ಬಾ)ರದೇನು? 

ಸೂಚನೆ: 12/4//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.