Sunday, January 7, 2024

ವ್ಯಾಸ ವೀಕ್ಷಿತ - 70 ಪಂಚಪತಿತ್ವಕ್ಕೆ ಐದು ಕಾರಣಗಳು (Vyaasa Vikshita - 70 Panchapatitvakke Aidu Karanagalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಧರ್ಮದ ನಡೆಯನ್ನು ಹಿಡಿಯುವುದು ಸುಲಭವಲ್ಲವಾದರೂ ತಾನು ತೀರ್ಮಾನಕ್ಕೆ ಬಂದ ಬಗೆಯನ್ನು ಯುಧಿಷ್ಠಿರನು ದ್ರುಪದನಿಗೆ ತಿಳಿಸುತ್ತಿದ್ದಾನೆ. ಐದು ಕಾರಣಗಳನ್ನು ಕೊಟ್ಟಿದ್ದಾನೆ. ಅವಲ್ಲಿ ನಾಲ್ಕನೆಯದನ್ನು ಸ್ವಲ್ಪಮಟ್ಟಿಗೆ ತಿಳಿಸಿತ್ತು.

 

ಧರ್ಮವೆಂಬುದು ಲೆಕ್ಕಾಚಾರವಾಗಿಯೇ ಇರುತ್ತದೆ. ಆದರೆ ಆ ಲೆಕ್ಕಾಚಾರವು ಎಲ್ಲರ ಮನಸ್ಸಿಗೆ ಗೋಚರವಾಗುವುದಿಲ್ಲ. ಆದರೆ ಯಾರು ತಾವು ತಿಳಿದಂತೆ ತಪ್ಪಾದ ಹೆಜ್ಜೆ ಹಾಕುತ್ತಿಲ್ಲವೋ ಅಂತಹವರಿಗೆ ಆ ಲೆಕ್ಕಾಚಾರವು ಗೋಚರವಾಗದಿದ್ದರೂ, ಆ ಲೆಕ್ಕಾಚಾರದಿಂದ ಬರಬಹುದಾದ ಧರ್ಮ್ಯವಾದ ತೀರ್ಮಾನವೇ ತಾನೇತಾನಾಗಿ ಸ್ಫುರಿಸುವುದು. ಇದೂ ಪ್ರಕೃತಿಯು ಕೊಡುವ ವರವೇ.

 

ಧರ್ಮಮಯವಲ್ಲದ್ದನ್ನು ಕ್ಷಣಾರ್ಧವೂ ಮನಸ್ಸಿನಲ್ಲಿ ಮೆಲ್ಲದವರಿಗೆ ಒದಗುವ ಅನುಗ್ರಹವೆಂದರೆ, ಅವರ ಮನಸ್ಸಿನಲ್ಲಿ ಸುಮ್ಮನೆ ಅದೇನು ತೋರುವುದೋ ಅದುವೇ ಧರ್ಮಮಯವಾಗಿರುವುದು! (ಮಹಾಕವಿ ಕಾಳಿದಾಸನು ಹೇಳುವ ಮಾತು ಇದಕ್ಕೆ ಸಂವಾದಿಯಾಗಿದೆ: ಸಜ್ಜನರ ಅಂತಃಕರಣಪ್ರವೃತ್ತಿಯೆಂಬುದು ಪ್ರಮಾಣಭೂತವಾದದ್ದು – ಎಂದು. ಎಂದರೆ, "ಇದು ಧರ್ಮ" ಎಂದು ನಿಶ್ಚಯಿಸಲು ಸಾಕಷ್ಟು ಸಾಮಗ್ರಿಯಿಲ್ಲದಿದ್ದರೂ, ಇದುವೇ ಧರ್ಮವೆಂಬುದಾಗಿ ಅಂತರಂಗವು ಏನನ್ನು ಹೇಳುತ್ತದೋ, ಅದುವೇ ಸರಿಯೆಂಬುದು ಆಮೇಲೂ, ಎಂದರೆ ತಿಳಿದಿರಬೇಕಾದ ಎಲ್ಲವನ್ನೂ ತಿಳಿದಮೇಲೂ,  ಮೊದಲು ತೋರಿದ್ದು ಸರಿಯಾದದ್ದೇ ಎಂಬುದು ದೃಢಪಡುತ್ತದೆ. ಇಲ್ಲಿ ಯುಧಿಷ್ಠಿರನಿಗೆ ಹಾಗಾಗಿದೆ.)


(೫) ಯುಧಿಷ್ಠಿರನು ಕೊಡುವ ಕೊನೆಯ ಕಾರಣ - ತನ್ನ ತಾಯಿಗೂ ಹೀಗೆಯೇ ಹೇಳುತ್ತಿದ್ದಾಳೆಂಬುದು, ಮತ್ತು ತನ್ನ ಮನಸ್ಸು ಇದು ಸರಿಯೆಂದು ಮಾರ್ನುಡಿಯುತ್ತಿರುವುದು. ಎಲ್ಲರಿಗೂ ತನ್ನ ತಾಯಿಯು ಪೂಜ್ಯಳೇ ಆಗಿರುವವಳು. ತಾಯಿಯು ಸಹಜವಾಗಿ ಹಿತೈಷಿಣಿಯೇ - ಎನ್ನುವುದನ್ನು ಲೋಕನೀತಿಯೆಂದು ಸಾಧಾರಣವಾಗಿ ಒಪ್ಪುವುದಾದರೂ, ಆ ಲೆಕ್ಕದ ನೇರಕ್ಕೆ ಮಾತ್ರವೇ ಯುಧಿಷ್ಠಿರನು ಇಲ್ಲಿ ಹೇಳುತ್ತಿರುವುದಲ್ಲ. ಆ ಲೆಕ್ಕವೂ ಉಂಟು; ಆದರೆ ಅದಕ್ಕಿಂತಲೂ ಮಿಗಿಲಾಗಿ ಅವಳು ಧರ್ಮವನ್ನೆಂದೂ ಬಿಟ್ಟುಹೋದವಳಲ್ಲವೆಂಬುದು ಯುಧಿಷ್ಠಿರನಿಗೆ ದೃಢಪಟ್ಟಿರುವುದು.

 

ಸಾಧಾರಣಜನರ ನಡತೆಯಲ್ಲಿ ಹಾಗಿರಬೇಕಾಗಿಲ್ಲ. ಎಷ್ಟೋ ಮಂದಿಗೆ ತಮ್ಮ ತಂದೆ-ತಾಯಿಯರ ನಡೆ-ನುಡಿಗಳಲ್ಲಿ ಆದರಣೀಯವಲ್ಲವೆನಿಸುವ ಕೆಲವು ಅಂಶಗಳೂ ಸೇರಿರುವುದು ಗೋಚರವಾಗದೇ ಇರುವುದಿಲ್ಲ; ಆ ಬಗ್ಗೆ ತಮ್ಮ ಅಸಮಾಧಾನವನ್ನು ತೋಡಿಕೊಳ್ಳುವುದೋ ಬಿರುಸಿನ ಮಾತಾಡುವುದೋ ಲೋಕದಲ್ಲಿ ಇರುವಂತಹುದೇ.

 

ಆದರೆ ಯುಧಿಷ್ಠಿರನಿಗೆ ಕುಂತಿಯ ವರ್ತನೆಯಲ್ಲಿ ಧರ್ಮವೇ ಕಂಡಿದೆ. ಅವಳದ್ದು ಶುದ್ಧವಾದ ಮನಸ್ಸು; ಮತ್ತು ಅದನ್ನು ಪ್ರತಿಫಲಿಸುವ ಶುದ್ಧವಾದ ಮಾತು. ಇವೆರಡೂ ಅವಳಲ್ಲಿವೆ. ಇದು ಯುಧಿಷ್ಠಿರನಿಗೆ ಚೆನ್ನಾಗಿಯೇ ಮನದಟ್ಟಾಗಿರುವುದು. ಎಂದೇ ಅವಳ ಮಾತಿನಲ್ಲಿ ಆತನಿಗೆ ಅಪಾರವಾದ ನೆಚ್ಚಿಕೆ. ಎಂದೇ, ತನ್ನ ಮನಸ್ಸೂ ಅವಳ ನುಡಿಗೆ ಹೂಗುಟ್ಟುತ್ತಿದೆಯೆಂದು ಹೇಳುತ್ತಾನೆ, ಯುಧಿಷ್ಠಿರ. ಆದ್ದರಿಂದಲೇ, ಈ ಹೆಜ್ಜೆಯಲ್ಲಿ ಅಧರ್ಮವಿಲ್ಲವೆಂಬ ನೆಚ್ಚಿಕೆ ಆತನದು.

 

ಹೀಗೆ ಈ ಐದು ಕಾರಣಗಳಿಂದಾಗಿ ದ್ರೌಪದಿಯ ಪಂಚಪತಿತ್ವವು ಅಯುಕ್ತವಲ್ಲವೆಂಬುದಾಗಿ ಹೇಳುತ್ತಾನೆ. ಧರ್ಮವನ್ನು ಸ್ಪಷ್ಟವಾಗಿ ಅರಿತಿರುವವರಲ್ಲಿ ಯಾವ ದೃಢತೆಯು ತೋರುವುದೋ ಅದುವೇ ಯುಧಿಷ್ಠಿರನಲ್ಲಿ ತೋರಿದೆ.

 

ಹಾಗಿದ್ದರೂ ಸಹ ದ್ರುಪದನಿಗೆ ಚಿಂತೆ: ಎಲ್ಲಿ ಧರ್ಮವನ್ನು ಮೀರಿ ನಡೆದಂತಾದೀತೋ – ಎಂಬುದಾಗಿ. ಅದಕ್ಕೇ ಆತನು ಕೊಡುವ ಉತ್ತರ ನಾಳೆ ಇದರ ಬಗ್ಗೆ ತೀರ್ಮಾನವಾಗಲೆಂದು. ನಾಳೆ ಯುಧಿಷ್ಠಿರ-ಕುಂತಿ-ಧೃಷ್ಟದ್ಯುಮ್ನರು ಕಲೆತು ಚರ್ಚಿಸಿ ನಿರ್ಣಯಕ್ಕೆ ಬರುವುದು – ಎಂಬುದಾಗಿ.


ಸೂಚನೆ : 7/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.