ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಹೇಗೆ ಭಗವದ್ಗೀತೆಯಲ್ಲಿ, ತಾನು ಹೇಳುವುದನ್ನೆಲ್ಲಾ ಹೇಳಿಯಾದ ಮೇಲೆ ಶ್ರೀಕೃಷ್ಣನು ಅರ್ಜುನನಿಗೆ 'ಯಥೇಚ್ಛಸಿ ತಥಾ ಕುರು' (ನಿನಗೆ ಬೇಕಾದಂತೆ ಮಾಡು) ಎಂದನೋ, ಹಾಗೆಯೇ ಇಲ್ಲಿ ವ್ಯಾಸರೂ ದ್ರುಪದನಿಗೆ "ಇಷ್ಟಂ ಕುರುಷ್ವ" (ನಿನಗೆ ಯಾವುದು ಇಷ್ಟವೋ ಇದನ್ನು ಮಾಡು) ಎಂದರು. (ಎಂದರೆ ಬಲವಂತವಿಲ್ಲ.)
ಆಗ ದ್ರುಪದನು ಹೇಳಿದನು: "ಮಹರ್ಷಿಗಳೇ, ತಮ್ಮ ಮಾತನ್ನು ಕೇಳುವುದಕ್ಕೆ ಮೊದಲು ನಾನು ದ್ರೌಪದಿಯನ್ನು ಒಬ್ಬನಿಗೇ ಕೊಡತಕ್ಕದ್ದೆಂದು ಭಾವಿಸಿದ್ದೆ. ದೈವವಿಹಿತವಾದದ್ದನ್ನು ಬೇರೆಯಾಗಿಸಲು ಸಾಧ್ಯವಿಲ್ಲ. ಆದ್ದರಿಂದ ವಿಹಿತವಾದದ್ದನ್ನು ಮಾಡುವುದೇ ಯುಕ್ತವಾದದ್ದು. ದೈವವೇ ಹಾಕಿರುವ ಗಂಟನ್ನು ಬದಲಿಸಲು ಸಾಧ್ಯವಿಲ್ಲ. ಇಲ್ಲಿ ನಾನು ಮಾಡಿರುವುದೆಂಬುದಾಗಿ ಏನೂ ಇಲ್ಲ.
ಒಬ್ಬ ವರನಿಗಾಗೆಂದೇ ಒಂದು ನಿಮಿತ್ತ(ವ್ಯವಸ್ಥೆ)ವನ್ನು ಮಾಡಿತ್ತು; ಆದರೀಗ ದೈವನಿಶ್ಚಿತವನ್ನು ಮಾಡುವುದೇ ಯುಕ್ತವಾಗಿದೆ. ಹಿಂದೆ ಕೃಷ್ಣೆಯೇ ಅನೇಕ ಬಾರಿ "ಪತಿಯನ್ನು ಕೊಡು" ಎಂಬುದಾಗಿ ಕೇಳಿಕೊಂಡಿರುವಳಷ್ಟೆ; ಅದಕ್ಕೇ, ಭಗವಂತನೇ "ಹೀಗೆಯೇ ಯುಕ್ತ"ವೆಂಬುದಾಗಿ ಹೇಳಿರುವನು. ಇಲ್ಲಿ ಉತ್ತಮವಾದದ್ದು ಯಾವುದೆಂಬುದನ್ನು ಆತನೇ ಬಲ್ಲ (ದೇವೋ ಹಿ ವೇತ್ತಾ). ಈ ಪ್ರಕಾರವಾಗಿ ಶಂಕರನೇ ವಿಧಾನ ಮಾಡಿರುವನೆಂದಾದಲ್ಲಿ, ಇದು ಧರ್ಮವೋ ಅಧರ್ಮವೋ ನನ್ನದಂತೂ ಅಪರಾಧವಿಲ್ಲಿಲ್ಲ. ಆದ್ದರಿಂದ ವಿಧಿಪೂರ್ವಕವಾಗಿ ಈ ಪಾಂಡವರು ಸಂತೋಷದಿಂದ ಮದುವೆಯಾಗಲಿ. ಕೃಷ್ಣೆಯು ಇವರಿಗೇ ವಿಹಿತಳಾಗಿದ್ದಾಳಷ್ಟೆ."
ಆ ಬಳಿಕ ವ್ಯಾಸರು ಧರ್ಮರಾಜನಿಗೆ ಹೇಳಿದರು: "ಪಾಂಡುಪುತ್ರನೇ, ಇಂದೇ ಒಳ್ಳೆಯ ದಿನವಾಗಿದೆ. ಚಂದ್ರನಿಂದು ಪುಷ್ಯನಕ್ಷತ್ರಯೋಗವನ್ನು ಹೊಂದುತ್ತಿದ್ದಾನೆ. (ಒಂದರ್ಥದಲ್ಲಿ, ಚಂದ್ರವಂಶದವನಾದ ಯುಧಿಷ್ಠಿರನಿಗೆ ಪುಷ್ಟಿಪ್ರದವಾದ ಸಂನಿವೇಶ; ಪುಷ್ಯವು ಪೋಷಣಪ್ರದ). ಆದ್ದರಿಂದ ನೀನು ಮೊದಲು ಕೃಷ್ಣೆಯ ಕೈಹಿಡಿ." – ಎಂದು.
ಆಮೇಲೆ ದ್ರುಪದನು ತನ್ನ ಪುತ್ರ ಧೃಷ್ಟದ್ಯುಮ್ನನೊಂದಿಗೆ ವಧೂವರರಿಗೆಂದು ಹೇಳಲಾದ ಉತ್ತಮ ವಸ್ತುಗಳನ್ನೆಲ್ಲ ತರಿಸಿದನು. ಮಗಳಾದ ದ್ರೌಪದಿಯ ಮಂಗಳಸ್ನಾನವು ಮುಗಿಯಲು, ನಾನಾರತ್ನಮಯವಾದ ಆಭರಣಗಳಿಂದ ಅವಳನ್ನು ಅಲಂಕರಿಸಲಾಯಿತು.
ಆಮೇಲೆ ವಿವಾಹವನ್ನು ನೋಡಲು ರಾಜನ ಮಿತ್ರರೆಲ್ಲರೂ ಅತ್ಯಂತ ಸಂತುಷ್ಟರಾಗಿ ಅಲ್ಲಿಗೆ ಬಂದರು. ಮಂತ್ರಿಗಳೂ ದ್ವಿಜರೂ ಪುರವಾಸಿಗಳಾದ ಪ್ರಧಾನರೂ ಬಂದರು. ಅಗ್ರ್ಯಜನರಿಂದ (ಎಂದರೆ ಶ್ರೇಷ್ಠಪುರುಷರಿಂದ) ಸುಶೋಭಿತವಾಯಿತು, ದ್ರುಪದನ ಮನೆ. ಅರಳಿದ ಅಬ್ಜ(ಗಳ ತೋರಣ)ಗಳಿಂದಾದ ಅಲಂಕಾರವಾಯಿತು, ಅಲ್ಲಿಯ ಅಂಗಣದಲ್ಲಿ. ಅಲ್ಲಿ ನೆರೆದಿದ್ದ ಸೈನ್ಯಸ್ತೋಮ ಹಾಗೂ ರತ್ನರಾಶಿ - ಇವುಗಳಿಂದಾಗಿ ಆಶ್ಚರ್ಯಕರವಾಗಿದ್ದು, ಆ ಅಂಗಣವು ಬೆಳಗುತ್ತಿತ್ತು - ನಿರ್ಮಲವಾದ ನಕ್ಷತ್ರಗಳಿಂದ ಕೂಡಿದ ಆಕಾಶವು ಹೇಗೆ ಕಂಗೊಳಿಸುವುದೋ ಹಾಗೆ.
ಆಮೇಲೆ ಆ ಯುವಕರಾದ ಪಾಂಡುಪುತ್ರರು ಸ್ನಾನ ಹಾಗೂ ಮಂಗಲಕ್ರಿಯೆಗಳನ್ನು ಮುಗಿಸಿಕೊಂಡರು. ಸಂತೋಷದಿಂದ ತುಂಬಿದ್ದ ಅವರು, ಚೆನ್ನಾಗಿ ವಸ್ತ್ರಗಳಿಂದಲೂ ಆಭೂಷಣಗಳಿಂದಲೂ ಅಲಂಕೃತರಾದರು. ಬಹಳ ಬೆಲೆಬಾಳುವ ಅವರ ವೇಷವಸ್ತ್ರಗಳ ಮೇಲೆ ಚಂದನ ರಸದ ಸಿಂಪಡಿಕೆಯಾಯಿತು. ಅಗ್ನಿಗೆ ಸಮಾನವಾದ ತೇಜಸ್ಸುಳ್ಳವರು, ಅವರಿಗೆ ಪುರೋಹಿತನಾಗಿ ಬಂದ ಧೌಮ್ಯರು. ಅಣ್ಣನು ಮೊದಲು, ತಮ್ಮನು ಆಮೇಲೆ - ಎಂಬ ಕ್ರಮದಲ್ಲಿ, ಅವರೆಲ್ಲರೂ ಧೌಮ್ಯರೊಂದಿಗೆ ಕ್ರಮವಾಗಿ ಸಭೆಯನ್ನು ಪ್ರವೇಶಿಸಿದರು - ಮಹಾವೃಷಭಗಳು ಗೋಶಾಲೆಗೆ ಬಂದು ಸೇರುವಂತೆ.
ವೇದಗಳಲ್ಲಿ ಪಾರಂಗತರಾಗಿದ್ದರು ಆ ಧೌಮ್ಯರು. ಮಂತ್ರಜ್ಞರಾದ ಅವರು ಮಂತ್ರಗಳೊಂದಿಗೆ ಮೊದಲು ಯಜ್ಞವೇದಿಕೆಗಳಲ್ಲಿ ಅಗ್ನಿಯು ಜ್ವಲಿಸುವಂತೆ ಮಾಡಿದರು.
ಸೂಚನೆ : 21/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.