Monday, January 1, 2024

ಯಕ್ಷ ಪ್ರಶ್ನೆ 70 (Yaksha prashne 70)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ – 69 ಮಿತ್ರರನ್ನು ತ್ಯಜಿಸಲು ಕಾರಣವೇನು ?

ಉತ್ತರ - ಲೋಭ  

ಈ ಹಿಂದಿನ ಹಿಂದಿನ ಲೇಖನದಲ್ಲಿ ಲೋಭದ ಬಗ್ಗೆ ವಿವರಿಸಲಾಗಿದೆ. ಲೋಭವು ಹೇಗೆ ಮಾನವನ ನಾಶಕ್ಕೆ ಕಾರಣವಾಗಿದೆ ? ಎಂಬ ವಿಷಯವನ್ನು ಅಲ್ಲಿ ವಿಚಾರಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ವಿಷಯವನ್ನು ಸೇರಿಸಿ ಈ ಲೇಖನದಲ್ಲಿ ಲೋಭವು ಯಾವ ರೀತಿಯಾಗಿ ಮಿತ್ರನನ್ನು ಕಳೆದುಕೊಳ್ಳುವಂತೆ ಮಾಡುತ್ತದೆ? ಎಂಬ ವಿಷಯವನ್ನು ವಿವೇಚಿಸಲಾಗುವುದು. ಲೋಕದಲ್ಲಿ ಸನ್ಮಿತ್ರರು ಸಿಗುವುದೇ ವಿರಳ. ಪ್ರಾಣಕ್ಕೆ ಪ್ರಾಣವನ್ನು ಬೇಕಾದರೂ ಕೊಡುವಂತಹ ಮಿತ್ರರು ಸಿಗುವುದು ಇನ್ನೂ ವಿರಳ. ಹೀಗಿರುವಾಗ ಎಂತಹಾ ಮಿತ್ರನನ್ನಾದರೂ ಈ ಲೋಭವೆಂಬ ದೋಷವಿದ್ದರೆ ಕಳೆದುಕೊಳ್ಳುತ್ತೇವೆ. ಆದ್ದರಿಂದ ಲೋಭವು ಸರ್ವಥಾ ತ್ಯಾಜ್ಯವಾದುದು ಎಂಬುದು ಯಕ್ಷಪ್ರಶ್ನೆಯಲ್ಲಿ ಬಿಂಬಿತವಾಗಿದೆ. 

ಬಾಹ್ಯವಾದ ಪದಾರ್ಥದ ಸಂಸರ್ಗವು ನಮ್ಮನ್ನು ದುಃಖಕ್ಕೆ ಈಡುಮಾಡುತ್ತದೆ. ಅದನ್ನೇ 'ಸಂಸಾರ' ಎಂದು ಕರೆಯುತ್ತಾರೆ. ಪದಾರ್ಥದ ಸಂಸಂಸರ್ಗದಿಂದಲೇ ನಮಗೆ ಇನ್ನಷ್ಟು ಬೇಕು ಮತ್ತಷ್ಟು ಬೇಕು ಎಂಬ ಬಯಕೆ ಹೆಚ್ಚಾಗುತ್ತಾ ಹೋಗುತ್ತದೆ. ಯಾವಾಗ ಪಡಯಲೇಬೇಕಾದ ಪದಾರ್ಥವು ಸಿಗುವುದಿಲ್ಲವೋ ಆಗ ತಾನಾಗಿಯೇ ಸಿಟ್ಟು ಬರುತ್ತದೆ. ಸಿಟ್ಟು ಎನ್ನುವಂತಹದ್ದು ಎಂತಹವನನ್ನೂ ಸುಡುವ ವಿಷಯ. ಸಿತ್ತು ಬಂದಾಗ ಮನುಷ್ಯ ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಅದನ್ನೇ ಭ್ರಾಂತಿ ಎನ್ನುತ್ತಾರೆ. ತಾನು ಯಾರು? ಏನು ಮಾಡಬೇಕಾಗಿತ್ತು? ಏನು ಮಾಡುತ್ತಿದ್ದೇನೆ ? ಇಂಬಿತ್ಯಾದಿ ವಿವೇಕವೇ ಇಲ್ಲದಂತಾಗುತ್ತದೆ. ಇದಕ್ಕೆಲ್ಲಾ ಕಾರಣವೇ ಲೋಭ. ಇಂತಹ ಸಂದರ್ಭದಲ್ಲಿ ಯಾರು ನಮಗೆ ಅತ್ಯಂತ ಬೇಕಾದವರು? ಯಾರು ನಮಗೆ ಇಷ್ಟವಾಗದವರು ? ಎಂಬುದೇ ತಿಳಿಯದಂತಾಗುತ್ತದೆ. ಹಾಗಾಗಿ ನಮ್ಮಿಂದ ಉತ್ತಮವಾದುದೆಲ್ಲವೂ ಕಳೆಚಿಕೊಳ್ಳುತ್ತಾ ಹೋಗುತ್ತವೆ. ಯಾವುದೇ ಒಂದು ಉತ್ತಮವಾದ ವಸ್ತು ಮತ್ತೊಬ್ಬನ ಕಡೆ ಸೇರುವಾಗ ಉತ್ತಮರಾದವರನ್ನೇ ಬಯಸುತ್ತದೆಯಂತೆ (ಸರ್ವರತ್ನೋಪಸ್ಥಾನಂ) ಎಂದು ಯೋಗಶಾಸ್ತ್ರ ಹೇಳುತ್ತದೆ. ಹಾಗೆಯೇ ಒಬ್ಬ ಸನ್ಮಿತ್ರ ಸಿಗಬೇಕಾದರೆ ಹೇಗೆ ಸದ್ಗುಣ ಇವನಲ್ಲೂ ಇದ್ದಾಗ ಮಾತ್ರ ಸಿಗುವಂತಹದ್ದು. ಶ್ರೀಶಂಕರ ಭಗವತ್ಪಾದರು ರಚಿಸಿರುವ ಮೋಹಮುದ್ಗರ ಸ್ತೋತ್ರದಲ್ಲಿ 'ಸತ್ಸಂಗತ್ವೇ ನಿಸ್ಸಂಗತ್ವಂ' ಎಂದು ಹೇಳಿದ್ದಾರೆ. ಸಜ್ಜನರ ಸಂಸರ್ಗವು ನಮ್ಮನ್ನು ಲೋಭವಿಲ್ಲದಂತೆ ಮಾಡುತ್ತದೆ. ಸಜ್ಜನರ ಸಂಸರ್ಗವು ಉತ್ತಮವಾದ ವಿಷಯದ ಸಂಬಂಧವನ್ನೇ ಮಾಡಿಸುತ್ತದೆ. ಅದೇ ಲೋಭವು ದುರ್ಜನರ ಸಂಗಕ್ಕೂ ಕಾರಣವಾಗಬಹುದು. ವಸ್ತುವಿನ ನಿಸ್ಸಂಗ ಅಂದರೆ ಈ ಸಂಸಾರದ ಬಂಧನಕ್ಕೆ ಕಾರಣವಾಗದ ವಸ್ತು ಎಂದೇ ಅರ್ಥ. ಇಂತಹ ಸುವಸ್ತು ಎಂದರೆ ಸನ್ಮಿತ್ರನೇ ಆಗಿರುತ್ತಾನೆ. ಆತ ಆಪತ್ತನ್ನು ದೂರಮಾಡುತ್ತಾನೆ. ಸಂಪತ್ತನ್ನು ಉಂಟುಮಾಡುತ್ತಾನೆ. ಸನ್ಮಾರ್ಗದಲ್ಲಿ ನಮ್ಮನ್ನು ತೊಡಗಿಸುತ್ತಾನೆ. ಇಂತಹ ಸನ್ಮಿತ್ರನ ಸಂಗವು ಸಂಸಾರಬಂಧನದಿಂದ ಬಿಡುಗಡೆ ಮಾಡಿ ಮೋಕ್ಷವನ್ನೂ ದೊರಕಿಸಿಕೊಡುವ ಸಾಮರ್ಥ್ಯವುಳ್ಳದ್ದಾಗಿದೆ.  ಮನುಷ್ಯ ಮೋಕ್ಷಾಕಾಂಕ್ಷಿ. ತದ್ವಿರುದ್ಧವಾದುದೆಲ್ಲವನ್ನು ಆತ ಬಿಡಬೇಕಾಗುತ್ತದೆ. ಮೋಕ್ಷಕ್ಕೆ ವಿರೋಧವಾದವುಗಳಲ್ಲಿ ಬಿಡಲೇಬೇಕಾದುದು ಎಂದರೆ ಅದು ಲೋಭ. ಇಂದ್ರಿಯಗಳನ್ನು ಕಟ್ಟಿಹಾಕುವಂತಹದ್ದು ಲೋಭ. ವಿಷಯ ಎಂಬ ಶಬ್ದಕ್ಕೆ ಯಾವುದು ನಮ್ಮನ್ನು ಬಂಧಿಸುವುದೋ (ವಿಶಿಣೋತಿ ಬಧ್ನಾತಿ) ಅದು ಎಂದರ್ಥ. ವಿಷಯಾಸಕ್ತಿಯೇ ಲೋಭ. ವಿಷಯಗಳ ಅನಾಸಕ್ತಿಯೇ ಲಾಭ. ಎಂತಹ ಲಾಭವಿದ್ದರೆ ಉತ್ತಮ ಎಂಬುದನ್ನು ರಾಮಕಥಾ ಕವಿ ಎಂದೇ ಪ್ರಖ್ಯಾತರಾದ ಗಜಾನನ ಶರ್ಮರು, ಶ್ರೀರಾಮನಲ್ಲಿ 'ಎಂತಹ ಆಸಕ್ತಿಯನ್ನು ಬೇಡಿಕೊಂಡಿದ್ದಾರೆ ಎಂಬುದು ನನಗೆ ಬಹಳ ಇಷ್ಟವಾದ ಮಾತು. ಅದನ್ನೊಮ್ಮೆ ಇಲ್ಲಿ ನೆನಪಿಸಿಕೊಳ್ಳುತ್ತೇನೆ. "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ. ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ!" ಎಂದು. ಇಲ್ಲಿರುವ ಬೇಕುಗಳ ಪಟ್ಟಿಯು ಪ್ರತಿಯೊಬ್ಬ ರಾಮದರ್ಶನಾಕಾಂಕ್ಷಿ ಬಯಸಬೇಕಾದುದು.

ಸೂಚನೆ : 31/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.