Saturday, December 30, 2023

ವೃತ್ರಾಸುರನ ವೃತ್ತಾಂತ (Vrtrasurana Vrttanta)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)

ಅಧ್ಯಾತ್ಮಸಾಧನೆಗೆ ಸಂಬಂಧಿಸಿದ ಕ್ಲಿಷ್ಟತತ್ತ್ವಗಳನ್ನು  ಸಾಮಾನ್ಯ ಜನಗಳಿಗೆ ಕಥಾರೂಪದಲ್ಲಿ ತಿಳಿಸುವ ಕೌಶಲ್ಯ ಪುರಾಣಗಳದ್ದು. ಉದಾಹರಣೆಗೆ, ವೃತ್ರಾಸುರನ ಆಖ್ಯಾನವು ಶ್ರೀಮತ್ಭಾಗವತದಲ್ಲಿಯೂ ವೇದಗಳಲ್ಲಿಯೂ ಅನೇಕಕಡೆ ವಿವರಿಸಲ್ಪಟ್ಟಿದೆ.  ವೃತ್ರಾಸುರನು ಲೋಕಕಂಟಕ ಮತ್ತು ದೇವಕಂಟಕ.  ನಾನಾರೀತಿಯಲ್ಲಿ ಇಂದ್ರಾದಿದೇವತೆಗಳಿಗೆ  ಕಿರುಕುಳ ಕೊಡುತ್ತಿದ್ದನು. ಕೆಲವೊಮ್ಮೆ ಸರ್ಪರೂಪವನ್ನೂ ತಾಳುವುದರಿಂದ ಅಹಿ ಎಂಬ ಹೆಸರುಂಟು. ದೇವತೆಗಳ ನಿಯಮಿತ ಸಂಚಾರಮಾರ್ಗಗಳನ್ನು ತಡೆಯುತ್ತಿದ್ದನು. ಮೂರುಲೋಕದ ಪ್ರಯೋಜನಕ್ಕಾಗಿ ಹರಿದುಬರುತ್ತಿರುವ ತೀರ್ಥಪ್ರವಾಹದ ಮಾರ್ಗಗಳನ್ನು ಸ್ತಂಭನ ಮಾಡುತ್ತಿದ್ದನು. 

ಒಮ್ಮೆ ದೇವಗುರುವಾದ ಬೃಹಸ್ಪತಿಯು ಇಂದ್ರನಿಂದ ಗೌರವಿಸಲ್ಪಡದಿದ್ದುದರಿಂದ ಅದೃಶ್ಯರಾದರು. ತಾತ್ಕಾಲಿಕಗುರುವಾಗಿ ನೇಮಿಸಲ್ಪಟ್ಟ ತ್ವಷ್ಟೃವಿನ ಮಗನಾದ ವಿಶ್ವರೂಪನಿಗೆ ಅಸುರರ ಸಂಪರ್ಕವಿದ್ದದ್ದರಿಂದ  ಇಂದ್ರನು ಗುರುವನ್ನೇ ಸಂಹರಿಸಿದನು. ಅದರಿಂದ ತೀವ್ರಕುಪಿತನಾದ ತ್ವಷ್ಟೃುವು ಇಂದ್ರನನ್ನು ಕೊಲ್ಲಲು ಅಮೋಘವಾದ ಯಾಗವೊಂದನ್ನು  ಕೈಗೊಂಡನು. ಆದರೆ ವೇದಮಂತ್ರದ ಸ್ವರವ್ಯತ್ಯಾಸದಿಂದ (ಇಂದ್ರನನ್ನು ಸಂಹಾರಮಾಡುವ ಪುತ್ರನ ಬದಲು) ಇಂದ್ರನೇ ಸಂಹಾರಮಾಡುವ ಪುತ್ರನು ಹುಟ್ಟುವಂತಾಯಿತು. ಆತನೇ ವೃತ್ರ. ಯುವಕನಾಗಿಯೇ ಹುಟ್ಟಿದ ಆತನ ಜನನವಾದೊಡನೆ ಸಮಸ್ತ ಲೋಕಗಳೂ ನಡುಗಿದವು. ವೃತ್ರನು ಮಹಾಪರಾಕ್ರಮಿಗಳಾದ ಅಸುರರೆಲ್ಲರ  ನಾಯಕತ್ವವನ್ನು ವಹಿಸಿ ದೇವತೆಗಳಮೇಲೆ ಆಕ್ರಮಣಮಾಡಿ ವಿಜಯಗಳಿಸುತ್ತಿದ್ದ. ವರಬಲದಿಂದ ಬಲಿಷ್ಠನಾದ ಅವನನ್ನು ಯಾವ ಅಸ್ತ್ರಗಳೂ ಸಂಹರಿಸಲಾಗುತ್ತಿರಲಿಲ್ಲ. ಅವನ ಉಪದ್ರವವನ್ನು ತಾಳಲಾರದೇ ಇಂದ್ರನು, ಮಹಾವಿಷ್ಣುವಿನ ಸಲಹೆಯಂತೆ, ಮಹಾದಯಾಮಯರೂ ಸರ್ವದೇವತಾಶಕ್ತಿಮಯರೂ ಆದ ದಧೀಚಿಮಹರ್ಷಿಗಳನ್ನು ಪ್ರಾರ್ಥಿಸಿದನು.  ಸದಾ ಲೋಕಹಿತಚಿಂತಕರಾದ ಅವರು ದೇವಕಾರ್ಯಕ್ಕಾಗಿ ತಮ್ಮ ಬೆನ್ನುಮೂಳೆಯನ್ನು ದಾನಮಾಡಲು ಅನುಮತಿಸಿದರು. ಅದಕ್ಕಾಗಿ ಧ್ಯಾನಸಮಾಧಿಯಲ್ಲಿ ಅವರು ಶರೀರತ್ಯಾಗಮಾಡಿದಾಗ ಅವರ ಮೂಳೆಗಳಿಂದ ವಿಶ್ವಕರ್ಮನ ಮೂಲಕ ಅಮೋಘವಾದ ಪ್ರತ್ಯಸ್ತ್ರವಿಲ್ಲದ ವಜ್ರಾಯುಧವನ್ನು ನಿರ್ಮಿಸಿದನು. ಇದರ ಬಲದಿಂದ ಅತ್ಯಂತ ಉತ್ಸಾಹದಿಂದ ಇಂದ್ರನು ವೃತ್ರನನ್ನು ಎದುರಿಸಿದನು. ಮಹಾಸ್ತ್ರಸಂಪನ್ನನಾದ ಇಂದ್ರನನ್ನು ನೋಡಿ ಭಯದಿಂದ ಓಡಿದ ಅಸುರರನ್ನು ಹುರಿದುಂಬಿಸಿ ವೃತ್ರನು ಇಂದ್ರನಕಡೆಯ ದೇವತೆಗಳನ್ನೆಲ್ಲ ವಶಪಡಿಸಿಕೊಂಡು ಘೋರಯುದ್ಧ ನಡೆಸಿದನು.  ಇಂದ್ರನ ಐರಾವತದ ಕುಂಭಸ್ಥಳಕ್ಕೆ ಹೊಡೆದೋಡಿಸಿದನು. ಇಂದ್ರನು ಬೇಗನೇ ಅದನ್ನು ಸ್ವರೂಪಕ್ಕೆತಂದು ಯುದ್ಧ ಮುಂದುವರಿಸಿದಾಗ ಅವನು ಪ್ರಯೋಗಿಸಿದ ಅಸ್ತ್ರಗಲೆಲ್ಲವನ್ನೂ ವೃತ್ರನು ನುಂಗಿಹಾಕಿ ಇಂದ್ರನಿಗೆ ಭೀತಿಯನ್ನು ಹುಟ್ಟಿಸಿದನು! ವಜ್ರಾಯುಧವಲ್ಲದೆ ಇನ್ನಾವ ಅಸ್ತ್ರದಿಂದಲೂ ತನಗೆ ಮರಣವಿಲ್ಲವೆಂಬ ಗುಟ್ಟನ್ನು ತಾನೇ ತಿಳಿಸಿಕೊಟ್ಟನು. ಮತ್ತು ಅಸುರನಾದರೂ ವೃತ್ರನು ಇಂದ್ರನಿಗೇ ಅಧ್ಯಾತ್ಮತತ್ತ್ವವನ್ನು  ಉಪದೇಶಮಾಡಿದನು!

ಅಷ್ಟಲ್ಲದೆ, ಇಂದ್ರಸಹಿತವಾಗಿ ಐರಾವತವನ್ನೇ ನುಂಗಿಬಿಟ್ಟನು. ನಾರಾಯಣ-ಕವಚದ ಮಹಿಮೆಯಿಂದ  ಬದುಕಿದ್ದ ಇಂದ್ರನು ವೃತ್ರಾಸುರನ ಹೊಟ್ಟೆಯನ್ನು ಸೀಳಿಕೊಂಡು ಹೊರಬಂದು ಅವನ ತಲೆಯನ್ನು ವಜ್ರಾಯುಧದಿಂದ ಕಡಿದುಹಾಕಿದನು. ಆಗ ಲೋಕವೆಲ್ಲವೂ ಪ್ರಸನ್ನವಾಗಿ, ದೇವತೆಗಳು ಪರಮಾನಂದಭರಿತರಾದರು. ಅಮೃತದ ಮಳೆಸುರಿಯಿತು.

ವೃತ್ರಾಸುರನು ಅಧ್ಯಾತ್ಮಉಪದೇಶ ಮಾಡಿದ್ದು ಹೇಗೆಂದರೆ ಹಿಂದಿನ ಜನ್ಮದಲ್ಲಿ ಅವನು ಚಿತ್ರಕೇತುವೆಂಬ ರಾಜನಾಗಿದ್ದು ನಾರದಮಹರ್ಷಿಯಿಂದ ಉಪದೇಶಾನುಗ್ರಹ ಪಡೆದು ವಿದ್ಯಾಧರ ಪದವಿಯನ್ನು ಹೊಂದಿದ್ದನು. ನಂತರ ಮದಾಂಧನಾಗಿ ಪಾರ್ವತೀ-ಪರಮೇಶ್ವರರನ್ನು ಅವಹೇಳನ ಮಾಡಿದ್ದರಿಂದ ಕುಪಿತಳಾದ ಪಾರ್ವತಿಯು ಅಸುರನಾಗಿ ಹುಟ್ಟೆಂಬ ಶಾಪವನ್ನು ನೀಡುತ್ತಾಳೆ. ನಂತರ ಕ್ಷಮಾಪಣೆಬೇಡಿ ಅಸುರನಾದರೂ ಅಧ್ಯಾತ್ಮಜ್ಞಾನವನ್ನು ಮರೆಯಬಾರದೆಂಬ ವರವನ್ನೂ ಪಡೆದುಕೊಂಡನು.

ತತ್ತ್ವಾರ್ಥ: ಅಧ್ಯಾತ್ಮಧ್ವನಿಯಿಂದ ಕೂಡಿದ್ದಾಗಿ, ಅಧ್ಯಾತ್ಮಭಾವಕ್ಕೆ ಅಡ್ಡಿಯನ್ನೊಡ್ಡುವ ಆಸುರೀಗುಣಗಳನ್ನು ತಿಳಿಹೇಳುವ ತತ್ತ್ವಮಯವಾದ ಕಥೆಯಿುದು. ವೃತ್ರನೆಂದರೆ ಎಲ್ಲವನ್ನೂ ಆವರಿಸುವ ಕತ್ತಲೆ ಎಂದರ್ಥ. ಆದ್ದರಿಂದಲೇ ಅಸುರನು.  ಸುಷುಮ್ನೆಯಲ್ಲಿ ಸಾಧಕನ ಪ್ರಾಣಗಳು ಆರೋಹಣಕ್ರಮದಲ್ಲಿ ಹರಿದಂತೆ ಅವನು ವಿವಿಧ ಆಧ್ಯಾತ್ಮಿಕ ಅನುಭವಗಳನ್ನು ಪಡೆಯುತ್ತಾನೆ. ಪ್ರಾಣಗಳು ಬ್ರಹ್ಮರಂದ್ರವನ್ನು ತಲುಪಿದಾಗ ಅಮೃತಮಯವಾದ ಆನಂದಾನುಭವವು ಉಂಟಾಗುತ್ತದೆ. ಅವರೋಹಣದಲ್ಲಿ ಈ ಸುಧೆಯು ಸ್ರವಿಸಿ ಧಾರೆಯಾಗಿ, ಕೆಳಸ್ತರದ ಇಂದ್ರಿಯಗಳಿಗೆ(ಇಂದ್ರನು ಇಂದ್ರಿಯಾಧಿಪತಿ) ಹರಿಯುತ್ತದೆ. ಈ ಧಾರೆಯನ್ನು ಮಳೆ ಅಥವಾ ಕಟ್ಟೆಯೊಡೆದ ನೀರಿನ ಬಿಡುಗಡೆ ಎಂದು ವರ್ಣಿಸುತ್ತಾರೆ. ಈ ಓಘವನ್ನೇ ವೃತ್ರನು ತಡೆಹಿಡಿದು ನಿಲ್ಲಿಸಿ ಸುಧೆಯಿಂದ ಇಂದ್ರಿಯಗಳನ್ನು ವಂಚಿತರನ್ನಾಗಿ ಮಾಡುವುದು.

ಇಂದ್ರಿಯಗಳ ರಾಜ ಇಂದ್ರ, ದೇವೇಂದ್ರನೂ ಹೌದು. ಅವನಿಗೆ ಮನಸ್ಸಿನೊಂದಿಗೆ ಸಂಬಂಧವಿರುವುದು. ಮನಸ್ಸು ವಿವಿಧ ಊಹಾ-ಪೋಹಗಳನ್ನು ರೂಪಿಸಿ-ಪ್ರಯೋಗಿಸಲು ಪ್ರಯತ್ನಿಸುವುದು. ಆದರೆ ನಿರ್ಧಾರ ತೆಗೆದುಕೊಳ್ಳುವುದು ಬುದ್ಧಿಯೇ(ಇಂದ್ರನ ಗುರು ಬೃಹಸ್ಪತಿ-ಬುದ್ಧಿಸ್ಥಾನದಲ್ಲಿ). ಇದರ ಅನುಪಸ್ಥಿತಿಯಲ್ಲಿ ಮನಸ್ಸಿನ ವ್ಯರ್ಥಅಲೆದಾಟ. ಪರಿಣಾಮ-ಆಡಂಬರ, ದುರಹಂಕಾರ. ಆಗ ಅಸುರರಿಂದ ಸೋಲು ನಿಶ್ಚಿತ. ಆಗ ಸರ್ವರಕ್ಷಕನಾದ ವಿಷ್ಣುವನ್ನೇ ಮೊರೆಹೋಗಬೇಕು. ಅವನ ಸಲಹೆಯಂತೆ ಇಂದ್ರನು ತನ್ನ ಮನಸ್ಸಿನ ಸಂಯಮದ ತಪಸ್ಶಕ್ತಿಯಾದ ದಧೀಚಿ ಮಹರ್ಷಿಯಿಂದ ಸಕಲದೇವತಾಶಕ್ತಿಗಳನ್ನೂ ಸಂಗ್ರಹಿಸಿ ನಿರ್ಮಿಸಿದ ವಜ್ರಾಯುಧವನ್ನುಪಯೋಗಿಸಿ ವೃತ್ರನನ್ನು ವಧಿಸುತ್ತಾನೆ. ವೃತ್ರನ ವಧೆಯಿಂದ(ನೀಗಿದ ಕತ್ತಲೆಯಿಂದ) ಅವನು ಅಡ್ಡಗಟ್ಟಿದ ಎಲ್ಲ ತೊರೆಗಳಿಂದಲೂ ಈ ಹರಿವು ಸಾಧ್ಯವಾಗುತ್ತದೆ. ದೇವತೆಗಳಿಗೆಲ್ಲಾ ಅಮೃತವನ್ನು ಇಂದ್ರನು ದೊರಕಿಸಿಕೊಟ್ಟಂತಾಗುತ್ತದೆ.

ಈ ರೀತಿ ಸಾಧಕನಲ್ಲಿ ಕಾಣಿಸುವ ಹಿರಿದಾದ ತತ್ತ್ವಗಳನ್ನು ಸುಲಭ ಶೈಲಿಯಲ್ಲಿ ಕಥೆಗಳಮೂಲಕ ವಿವರಿಸುವ ಜಾಣ್ಮೆ ಪುರಾಣಗಳದ್ದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ವೃತ್ರಾಸುರನ ವೃತ್ತಾಂತ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  30/12/2023 ರಂದು ಪ್ರಕಟವಾಗಿದೆ.