Friday, December 15, 2023

ಧರ್ಮದ ಸೋಗಿಗೆ ಮರುಳಾಗದಿರೋಣ (Dharmada Sogige Marulagadirona)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)ಅದೊಂದು ದಾರುಣ ಪ್ರಸಂಗ. ಎಳೆ ವಯಸ್ಸಿನ ಬಾಲಕನೊಬ್ಬನ ಅಕಾಲಿಕ ಮೃತ್ಯುವಾಗಿದೆ. ಬಂಧುಗಳ ದುಃಖ ಅವರ್ಣನೀಯ. ಅವರು ಸ್ಮಶಾನದಲ್ಲಿ ಬಾಲಕನ ದೇಹವನ್ನಿಟ್ಟುಕೊಂಡು ಅಳುತ್ತಿದ್ದಾರೆ. ಆಗ ಅಲ್ಲೇ ಇದ್ದ ಹದ್ದು ಅವರನ್ನು ಸಮಾಧಾನ ಪಡಿಸುವಂತೆ ಮಾತಾಡಿತಂತೆ-"ಈ ಜೀವನವೇ ನಶ್ವರ. ಹುಟ್ಟು-ಸಾವುಗಳೆಲ್ಲ ಕರ್ಮಾಧೀನ. ಶರೀರ ಎಂದಿದ್ದರೂ ಬೀಳುವುದೇ. ಜಾತಸ್ಯ ಮರಣಂ ಧ್ರುವಂ-ಹುಟ್ಟಿದವನು ಸಾಯಲೇಬೇಕು. ನೀವೆಲ್ಲಾ ಎಷ್ಟು ಹೊತ್ತು ಈ ಭಯಂಕರ ಸ್ಮಶಾನದಲ್ಲಿ ಜೀವವಿರದ ಅವನ ದೇಹದೊಡನೆ ಕಳೆಯುತ್ತೀರಿ? ಎಲ್ಲರೂ ಮುಂದಿನ ಜೀವನವನ್ನು ಮನದಲ್ಲಿಟ್ಟು  ನಿಮ್ಮ ಮನೆಗಳಿಗೆ ಹೋಗಿ. ಎಷ್ಟು ಹೊತ್ತು ಇಲ್ಲಿದ್ದರೂ ಅವನೆಂದೂ ಬದುಕಿಬಾರನು. ಇಲ್ಲಿನ ಪರಿಸ್ಥಿತಿಯಾದರೋ ಭಯಾನಕ. ರಾತ್ರಿಯಾದರೆ ಇಲ್ಲಿ ಹಿಂಸ್ರ ಪಶುಗಳ ಹಿಂಡೇ ಬರುತ್ತವೆ. ನಿಮ್ಮ ಜೀವಕ್ಕೂ ಅಪಾಯ. ಎಲ್ಲರೂ ಒಡನೆಯೇ ಹೊರಟುಹೋಗಿ" ಎಂದಿತಂತೆ. ಅವರೆಲ್ಲ ಹೊರಡಲು ಅನುವಾಗುವಾಗ ನರಿಯೊಂದು ಬಂದು ಹೀಗೆಂದಿತಂತೆ- " ಇಷ್ಟು ಆಸ್ಥೆಯಿಂದ ಬೆಳೆಸಿದ ಎಳೆ ಮಗುವನ್ನು ಬಿಟ್ಟುಹೋಗಲು ನಿಮಗೆ ಮನಸ್ಸಾದರೂ ಹೇಗೆ ಬರುವುದು? ಜಗತ್ತಿನಲ್ಲಿ ಎಂತೆಂತಹ ಅದ್ಭುತಗಳು ನಡೆಯುತ್ತೆ. ಹಾಗೆಯೇ ಈ ಹುಡುಗನೂ ಬದುಕಬಹುದು. ನಿಮಗೆಲ್ಲಾ ಕರುಣೆಯೇ ಇಲ್ಲವೇ? ಅವನ ಮೇಲಿನ ಪ್ರೀತಿ ಇಷ್ಟೇನೇ? ರಾತ್ರಿಯಾಗುವವರೆಗಾದರೂ ಕಾಯಬಹುದಲ್ಲ! ಮಗುವಿನೊಡನಿದ್ದು ಭಗವಂತನನ್ನು ಇಡೀ ಹಗಲು ಪ್ರಾರ್ಥಿಸಿ. ಅವನಾಗ ಜೀವಂತನಾಗಬಹುದು. ಅವನನ್ನು ಎಲ್ಲರೂ ಹೀಗೆ ಬಿಟ್ಟುಹೋಗುವ ನಿಮ್ಮಹೃದಯಗಳು ಕಲ್ಲಾಗಿವೆಯೇ" ಎಂದೆಲ್ಲ. ಮತ್ತೆ ಅವರೆಲ್ಲ ಹುಡುಗನನ್ನು ತೊಡೆಯಮೇಲಿರಿಸಿ ಗೋಳಾಡತೊಡಗಿದರು. ಪುನಃ ಹದ್ದಿನ ಧರ್ಮೋಪದೇಶ ಆರಂಭ. ಹೊರಟರೆ ನರಿಯ ಉಪದೇಶ. ಈ ತೊಳಲಾಟ ನೋಡಲಾಗದೇ ಭಗವಂತ ಆ ಮಗುವನ್ನು ಬದುಕಿಸಿದನಂತೆ, ಎಂಬುದು ಮುಂದಿನ ಕಥೆ. ಇರಲಿ.

ಹದ್ದು , ಅವರು ಬಿಟ್ಟುಹೋದಮೇಲೆ  ಶವವನ್ನು ಹಗಲಿನಲ್ಲೇ ತಿಂದುಮುಗಿಸಬಹುದು ಎಂಬುದಕ್ಕಾಗಿ ಧರ್ಮಶಾಸ್ತ್ರವನ್ನೆಲ್ಲ ಬಳಸಿತು. ಹದ್ದು ಇದ್ದಾಗ ತನಗೆ ಮಾಂಸ ಸಿಗದು. ಅದಕ್ಕಾಗಿ ರಾತ್ರಿಯಾದರೆ ಹದ್ದಿನ ಕಾಟ ಇರುವುದಿಲ್ಲ ತಾನೇ ಹುಡುಗನ ಶವವನ್ನು ತಿನ್ನಬಹುದು ಎಂಬುದು ನರಿಯ ಆಲೋಚನೆ. ಎರಡಕ್ಕೂ ಯಾವ ಧರ್ಮಶಾಸ್ತ್ರವೂ ಬೇಕಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಧರ್ಮದ ಮಾತುಗಳ ದುರ್ಬಳಕೆ ಮಾಡುತ್ತಿವೆ ಅಷ್ಟೇ. ಎರಡೂ ತಮ್ಮ ತಮ್ಮ ವರಸೆಯಲ್ಲಿ ಸಹಾನುಭೂತಿಯ ನಾಟಕವಾಡುತ್ತಿವೆ.

ನಮ್ಮ ಜೀವನದಲ್ಲೂ ಸಹ ಇಂತಹ ಅನೇಕ ಪ್ರಸಂಗಗಳು ಬರುತ್ತವೆ. ತಮ್ಮ ತಮ್ಮ ಸ್ವಾರ್ಥ ಸಾಧನೆಗೆ ಹಿರಿಯರು ಸಮಾಜದ ಒಳಿತಿಗೆಂದು ಅರುಹಿದ ಧರ್ಮದ ಮಾತುಗಳನ್ನು ಅಸಮಯದಲ್ಲಿ  ಬಳಸುತ್ತಾರೆ. ಅಲ್ಲೆಲ್ಲ ನಾವು ವಿವೇಕದಿಂದ ನಿರ್ಣಯಿಸಬೇಕಾಗುತ್ತದೆ. ಕುರುಕ್ಷೇತ್ರದಲ್ಲಿ ಅರ್ಜುನನೂ, ಆ ಸಮಯದ ತನ್ನ ಹೃದಯದೌರ್ಬಲ್ಯವನ್ನು ಸಮರ್ಥಿಸಲು, ಕರ್ತವ್ಯರೂಪವಾದ  ಯುದ್ಧ ಮಾಡದಿರಲು ಧರ್ಮಶಾಸ್ತ್ರದ ಮಾತುಗಳನ್ನೇ ಆಡಿದ. ಆದರೆ ಆ ಮಾತುಗಳ ಮೂಲ, ಧರ್ಮಪ್ರಜ್ಞೆಯಲ್ಲದೇ, ಅವನ ಆಗಿನ ದೌರ್ಬಲ್ಯವಾಗಿತ್ತು ಎಂಬುದನ್ನು ಮನಗಂಡ  ಸರ್ವೆಶ್ವರನಾದ ಕೃಷ್ಣಪ್ರಭು ಅದನ್ನು ಅವನಿಗೆ ನಿಜವಾದ ಧರ್ಮಮಾರ್ಗವನ್ನು ತೋರಿಸಿಕೊಡಬೇಕಾಯಿತು. ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ-" ಜೀವನದ ಅಪಾರ್ಥಗಳನ್ನೆಲ್ಲ ಕಳೆದು, ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಅವನು(ಅರ್ಜುನನು) ಪಾರ್ಥಸಾರಥಿಯನ್ನು ತನ್ನ ಜೊತೆ ಇಟ್ಟುಕೊಂಡನಪ್ಪಾ" ಹಾಗೆ ಜೀವನದ ನಿರ್ಣಯಗಳಲ್ಲಿ ಶ್ರೀಕೃಷ್ಣನಂತಹ ಜ್ಞಾನಿಶ್ರೇಷ್ಠರ ನಡೆ ನಮಗೆ ದಾರಿದೀಪವಾಗಲಿ.

ಸೂಚನೆ: 13/12/2023 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.