Monday, December 18, 2023

ಯಕ್ಷ ಪ್ರಶ್ನೆ 68 (Yaksha prashne 68)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ – 67 ಈ ಲೋಕವು ಯಾವುದರಿಂದ ಆವೃತವಾಗಿದೆ ?

ಉತ್ತರ - ಅಜ್ಞಾನದಿಂದ  

ಲೋಕವೆನ್ನುವುದು ಬೆಳಕಿನ ಲೋಕ ಮತ್ತು ಕತ್ತಲೆಯ ಲೋಕವೆಂದು ಎರಡು ಬಗೆ. ಈ ಎರಡೂ ಲೋಕಗಳೂ ಭಗವಂತನ ಸೃಷ್ಟಿಯ ಭಾಗಗಳೇ ಆಗಿವೆ ಎಂಬುದು ವಿಶೇಷ. ಸೃಷ್ಟಿಯ ಆರಂಭದಲ್ಲಿ ಕೇವಲ ಬೆಳಕು ಮಾತ್ರ ಇತ್ತು. ಯಾವಾಗ ಅದು ತನ್ನನ್ನು ವಿಸ್ತಾರ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿತೋ ಅಲ್ಲೇ ಬೆಳಕಿಗೆ ಮತ್ತೊಂದು ದ್ವಂದ್ವಿ ನಿರ್ಮಾಣವಾಯಿತು. ಬೆಳಗಿಸಬೇಕೆಂದು ದೀಪವನ್ನು ಹಚ್ಚುತ್ತೇವೆ. ಆದರೆ ದೀಪದ ಬುಡದಲ್ಲೇ ಕತ್ತಲೆ ಇರುತ್ತದೆಯಲ್ಲವೇ! ಹಾಗಾಗಿ ಬೆಳಕಿಲ್ಲದೇ ಸೃಷ್ಟಿಯೇ ಇಲ್ಲ. ಆದರೆ ಅಲ್ಲಿ ಬೆಳಕೇ ಎಲ್ಲವೂ ಅಲ್ಲ. ಇಂತಹ ಬೆಳಕು ಹೊರಕ್ಕೆ ಕಾಣಿಸಿಕೊಳ್ಳಬೇಕಾದರೆ ಅದಕ್ಕೊಂದು ಆಧಾರ ಬೇಕೆಬೇಕು. ಕೆಲವೊಮ್ಮೆ ಬೆಳಕನ್ನು ಮರೆಸುವಂತೆ ಇರಬಹುದು. ಇನ್ನು ಕೆಲವೊಮ್ಮೆ ಮೆರೆಸುವಂತೆಯೂ ಇರಬಹುದು. ಯಾವುದು ಬೆಳಕನ್ನು ಮೆರೆಸುವಂತೆ ಮಾಡುವುದೋ ಅದನ್ನು ಜ್ಞಾನ, ವಿದ್ಯೆ, ಪ್ರಕಾಶ, ಅಮೃತ್ಯು ಮೊದಲಾದ ಪದಗಳಿಂದ ಕರೆಯಲಾಗಿದೆ. ಇಲ್ಲಿ ಯಕ್ಷ ಕೇಳವ ಪ್ರಶ್ನೆ ಇದಕ್ಕೆ ಸಂಬಂಧಿಸಿದ್ದಾಗಿದೆ. ಯಾವುದು ಈ ಮೂಲ ಪ್ರಕಾಶವನ್ನು ಆವರಿಸಿದೆ? ಅದನ್ನು ಮರೆಸಿದೆ? ಎಂಬುದಾಗಿ. ಅದಕ್ಕೆ ಧರ್ಮರಾಜನ ಉತ್ತರ 'ಅಜ್ಞಾನ' ಎಂಬುದಾಗಿ. 

ಇಲ್ಲಿ ನಾವು ಮರೆಸುವುದು ಮತ್ತು ಮೆರೆಸುವುದು ಎಂಬ ಎರಡು ವಿಷಯಗಳ ಬಗ್ಗೆ ಗಮನ ಹರಿಸಿದರೆ ಈ ಪ್ರಶ್ನೆಯ ಆಂತರ್ಯ ನಮಗೆ ಅರ್ಥವಾಗುವುದು. ಸೃಷ್ಟಿಯ ಮೂಲವೇ ಪ್ರಕಾಶ. ಭಗವಂತ ಅಥವಾ ಪರಬ್ರಹ್ಮ. ಈ ನಿಸರ್ಗವು ಅವನಿಂದಲೇ ಆದದ್ದು. ನಾವು ಅದನ್ನು ಪರಬ್ರಹ್ಮನದ್ದು ಎಂದು ತಿಳಿದುವುದೇ ಜ್ಞಾನ. ಅದನ್ನು ಹಾಗೆ ತಿಳಿಯದಿರುವುದೇ ಅಜ್ಞಾನ. ಅಂದರೆ ಈ ಲೋಕವು ಅಂತಹ ಅಜ್ಞಾನದಿಂದ ಆವೃತವಾಗಿದೆ ಎಂದು ಅರ್ಥ. ಲೋಕವೆಂದರೆ 'ಲೋಕೃ-ದರ್ಶನೇ' ಎಂಬ ಸಂಸ್ಕೃತ ಭಾಷೆಯ ವಿಶ್ಲೇಷಣೆಯ ಪ್ರಕಾರ ಕಣ್ಣು ಮೂಗು ಮೊದಲಾದ ಇಂದ್ರಿಯಗಳಿಗೆ ಕಾಣುವ ವಿಷಯವನ್ನೇ 'ಲೋಕ' ಎಂದು ಕರೆಯಲಾಗಿದೆ. ಈ ವಿಷಯಗಳೇ ಪ್ರಪಂಚ. ಇವೇ ಒಳ ಬೆಳಕನ್ನು ಕಾಣದಂತೆ ಮಾಡುವಂತಹವುಗಳು. ಆದರೆ ಇವೇ ಒಳ ಬೆಳಕನ್ನು ಅರಿಯುವ ಸಾಧನಗಳೂ ಆಗಿವೆ. ನಾವು ಕೇವಲ ಬಾಹ್ಯಪ್ರಪಂಚವನ್ನು ಮಾತ್ರ ನೋಡುತ್ತ, ಅಲ್ಲೇ ಮೈ ಮರೆತರೆ ಒಳಬೆಳಕನ್ನು ಕಾಣಲು ಸಾಧ್ಯವಿಲ್ಲ. ನಾವು ಸವಿಯಬೇಕಾದುದು ಎಲ್ಲದರಲ್ಲೂ ಇರುವ ಒಳಬೆಳಕನ್ನು ಮಾತ್ರ. ಸಾಮಾನ್ಯಜನರು ತಮ್ಮ ಇಂದ್ರಿಯಗಳಿಂದ ಕೇವಲ ಈ ಪ್ರಪಂಚವನ್ನು ಮಾತ್ರ ನೋಡುತ್ತಾರೆ. ಅಲ್ಲೇ ಜೀವನದ ಎಲ್ಲಾ ಭಾಗಗಳನ್ನೂ ಕಳೆದಿರುತ್ತಾರೆ. ಉದಾಹರೆಣೆಗೆ ತೆಂಗಿನ ಒಳ ತಿರುಳು ನಾವು ಪಡೆಯುವಂತಹದ್ದು. ಅದರ ರಕ್ಷಣೆಗಾಗಿ ಬಂದದ್ದು ಕರಟ, ಜುಂಗು, ಮೊಟ್ಟೆ ಮಾದಲಾದುವುಗಳು. ಹೊರಗಿನವುಗಳೇ ತೆಂಗಿನ ಕಾಯಲ್ಲ. ಒಳಗಿನ ತಿರುಳು ಇವುಗಳಿಂದ ಹೇಗೆ ಆವೃತವಾಗಿದೆ. ಅಂತೆಯೇ ಸಮಸ್ತ ಲೋಕಗಳಿಂದ ಒಳಗಿನ ಪ್ರಕಾಶ ಆವರಣಗೊಂಡಿದೆ. ಆವರಣವೆಲ್ಲವೂ ಮರೆಯಾಗಲಾರದು. ಅವು ಒಳಗಿನ ವಿಷಯದ ರಕ್ಷಕಗಳೂ ಆಗಬಹುದು. ಆವರಣವೇ ಮರೆಯಾದಾಗ ಒಳಗಡೆಯದ್ದು ಕಾಣದು. ಆವರಣವನ್ನು ತೆಗೆದಾಗ ಅದು ಕಾಣುವುದು. ಜ್ಞಾನಕ್ಕೆ ಅಜ್ಞಾನ, ಬೆಳಕಿಗೆ ಕತ್ತಲು, ಅಮೃತ್ಯುವಿಗೆ ಮೃತ್ಯುವು ಆವರಣ. ಹಾಗಾಗಿ ಆಜ್ಞಾನಾದಿ ಆವರಣವನ್ನು ತೆಗೆಯುವ ಕಾರ್ಯವಾಗಬೇಕು.

ಸೂಚನೆ : 
17/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.