Sunday, December 24, 2023

ವ್ಯಾಸ ವೀಕ್ಷಿತ - 67 ದ್ರುಪದನ ದ್ವಂದ್ವ (Vyaasa Vikshita - 67 Drupadana Dvandva)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)
ಭೋಜನಕ್ಕೆ ಪಾಂಡವರನ್ನು ಆಹ್ವಾನಿಸಿ, ಭೋಜನವಾದ ಬಳಿಕ ಅವರು ವಿಶ್ರಮಿಸಿಕೊಳ್ಳಲು ಬರುವಷ್ಟರಲ್ಲಿ ಅವರಿಗೆ ಕಾಣುವಂತೆ ನಾನಾಪದಾರ್ಥಗಳನ್ನು ಅಲ್ಲಿಟ್ಟಿದ್ದನಷ್ಟೆ, ದ್ರುಪದ? ಏಕೆ? ಅವರ ಮನಸ್ಸನ್ನು ಸೆಳೆಯುವುದು ಯಾವುದು? – ಎಂಬುದನ್ನು ಅಳೆದುಕೊಳ್ಳಲು. ನಾಲ್ಕು ವರ್ಣದವರಿಗೆ ಇಷ್ಟವಾಗುವ ವಸ್ತುಗಳೂ ಅಲ್ಲಿದ್ದವು. ಯಾವುದರತ್ತ ಅವರಿಗೆ ಸಹಜವಾದ ಆಕರ್ಷಣೆಯು ಉಂಟಾಗುವುದೆಂಬುದರ ಪರೀಕ್ಷೆ; ಅವರು ಯಾವ ವರ್ಣದವರೆಂಬುದರ ಸುಳಿವು ಅಲ್ಲಿ ದೊರೆತುಬಿಡುವುದರ ಸಂಭವ ಹೆಚ್ಚು – ಎಂಬ ಲೆಕ್ಕ.


ಮತ್ತು ಆದದ್ದಾದರೂ ಅಂತೆಯೇ. ಬ್ರಾಹ್ಮಣವೇಷ ಧರಿಸಿದ್ದ ಮಾತ್ರಕ್ಕೆ ಕ್ಷಾತ್ರವು ಅಳಿಸಿಹೋದೀತೇ? ಪಾಂಡವರೆಲ್ಲರೂ ಕ್ಷತ್ರಿಯೋಚಿತವಾದ ವಸ್ತುಗಳನ್ನೇ ಕೈಗೆತ್ತಿಕೊಂಡರು. ಕುಲದ ಕಸುಬಿನ ಸೆಳೆತವನ್ನು ಹತ್ತಿಕ್ಕುವುದು ಸುಲಭವೇ? ದ್ರುಪದನಿಗೆ ಮೊದಲು ಚಿಂತೆಯಾಗಿತ್ತು: ಯಾವ ವರ್ಣದವನ ಕೈಹಿಡಿಯುವಳೊ ತನ್ನ ಮಗಳು? -ಎಂಬುದಾಗಿ. ಪುತ್ರನೂ ಪುರೋಹಿತನೂ ತಮಗೆ ಸಿಕ್ಕ ಸುಳಿವಿನ ಸೂಚನೆಯನ್ನೂ ಕೊಟ್ಟಿದ್ದರೇ: ಇಬ್ಬರ ವರದಿಯಲ್ಲೂ ಪಾಂಡವರ ಕ್ಷಾತ್ರದ ಸುಳಿವು ಸಿಕ್ಕೇಇತ್ತು. ಆದರೂ ತನಗೂ ಪ್ರತ್ಯಕ್ಷವಾಗಿ ಕಾಣುವ ಅಪೇಕ್ಷೆ: ಕ್ಷತ್ರಸಂಬಂಧಿಯಾದ ವರ್ಮ-ಚರ್ಮ-ಧನುಸ್-ಶರಗಳನ್ನೇ ಆಯ್ದುಕೊಳ್ಳುವರು ತಾನೆ? - ಎಂಬುದಾಗಿ.


ಅಂತೂ ಕಂಡದ್ದೂ ಆಯಿತು; ಖಚಿತವೂ ಆಗಿಯಾಯಿತು. ಅಷ್ಟಾದರೂ, ಒಮ್ಮೆ ಬಾಯಿಬಿಟ್ಟೂ ಕೇಳಿ ತಿಳಿಯುವ ತನಕವೂ ತವಕವೇ: "ತಮ್ಮನ್ನು ಕ್ಷತ್ರಿಯರೆಂದು ತಿಳಿಯಲೋ, ಬ್ರಾಹ್ಮಣರೆಂದೋ? ಅಥವಾ ವೈಶ್ಯರೆಂದೋ ಶೂದ್ರರೆಂದೋ? - ಎಂದೂ ವಾಚ್ಯವಾಗಿಯೂ ಕೇಳಿಯೇ ಕೇಳುತ್ತಾನೆ. ಜಾತಿಧರ್ಮ-ಕುಲಧರ್ಮಗಳ ಬಗ್ಗೆ ದ್ರುಪದನಿಗಿದ್ದ ಕಾಳಜಿ ಆ ತೆರನದು; (ಗೀತೆಯ ಆರಂಭದಲ್ಲೂ ಈ ಬಗ್ಗೆಯೇ ಮಾತಿದೆಯಷ್ಟೆ? ಶಾಕುಂತಲದ ದುಷ್ಯಂತನೂ ಈ ಕಾಳಜಿಯ ನೇರಕ್ಕೇ ಹೆಜ್ಜೆಯಿಟ್ಟವನಲ್ಲವೇ?)


ತಾವೆಲ್ಲರೂ ಕ್ಷತ್ರಿಯರೇ– ಎಂದು ಯುಧಿಷ್ಠಿರನು ಬಾಯಿಬಿಟ್ಟು ಹೇಳಿಕೊಂಡಾಗಲೇ ದ್ರುಪದನಿಗೆ ಸಮಾಧಾನ. ಆಗಲೂ ಸತ್ಯವನ್ನೇ ಹೇಳುತ್ತಿದ್ದೀರಲ್ಲವೇ? – ಎಂದು ಖಾತ್ರಿಪಡಿಸಿಕೊಂಡದ್ದೂ ಆಯಿತು.  ಆಗಲೇ "ಹರ್ಷವ್ಯಾಕುಲಲೋಚನ"ನಾದದ್ದು, ದ್ರುಪದ. ಅರ್ಥಾತ್, ಅವನ ಕಣ್ಣುಗಳಲ್ಲಿ ಆನಂದಬಾಷ್ಪಗಳು ಉಕ್ಕಿಬಂದದ್ದು! ಅಲ್ಲಿಯ ತನಕ ಶಂಕಾತಂಕವೇ!  ಕ್ಷತ್ರಿಯಕುಮಾರಿಯಾದ ದ್ರೌಪದಿಯು ಮತ್ತಾರ ಕೈ ಹಿಡಿಯುವಂತಾದೀತೋ ಎಂಬ ಕಳವಳ.


ಇವರು ಪಾಂಡವರೇ, ಮತ್ತು ದ್ರೌಪದಿಯನ್ನು ಗೆದ್ದವನ್ನು ಅರ್ಜುನನೇ – ಎಂದು ತಿಳಿದಾಗಲಂತೂ ಮನಸ್ಸಿಗೆ ಪರಮಸಮಾಧಾನ.


ಆದರೆ ಅಷ್ಟರಲ್ಲೇ - ಒಂದು ಕಳವಳವನ್ನು ದಾಟಿದೆನೆನ್ನುವಷ್ಟರಲ್ಲೇ - ಮತ್ತೊಂದು ಆತಂಕ. ಎಲ್ಲೂ ಕೇಳಿಲ್ಲದ ಬಗೆಯಲ್ಲಿ, ಒಬ್ಬನನ್ನಲ್ಲ ಐದು ಮಂದಿಯನ್ನು ಆಕೆಯು ವಿವಾಹವಾಗಬೇಕು - ಎನ್ನುವ ಸೂಚನೆ ಬಂದಾಗ ಮಾಡುವುದೇನೆಂಬುದು ಆತನಿಗೆ ಹೊಳೆಯದಾಯಿತು. ಇದು ವೇದೋಕ್ತವಲ್ಲವೆಂಬುದಷ್ಟೇ ಅಲ್ಲ, ಇತ್ತ ಲೋಕಾಚಾರವೂ  ಅಲ್ಲ. (ಒಬ್ಬ ಪುರುಷನಿಗೆ ಹಲವು ಪತ್ನಿಯರೆಂಬುದು ಸುವಿದಿತವೇ; ಋಷಿಗಳಲ್ಲಿ ಸಹ ಇದು ಇಲ್ಲದಿಲ್ಲ; ಕ್ಷತ್ರಿಯರಲ್ಲಂತೂ ಸಾಮಾನ್ಯವೇ ಸರಿ. ಆದರೆ) ಒಬ್ಬಳಿಗೇ ಹಲವು ಪತಿಗಳೆಂಬುದು ಅಶ್ರುತಪೂರ್ವ, ಹಿಂದೆ ಕೇಳಿಲ್ಲದ್ದು. ಇದು ಗಾಬರಿಪಡಬೇಕಾದದ್ದು ಎನ್ನಿಸಿದೆ, ದ್ರುಪದನಿಗೆ. ಇದನ್ನು ವೈಯಕ್ತಿಕವೆನ್ನುವಂತೆಯೂ ಇಲ್ಲ; ಸಮಾಜಕ್ಕೆ ಉತ್ತರಕೊಡಬೇಕಾಗುತ್ತದೆಯಲ್ಲವೇ? ರಾಜನೇ ತಪ್ಪುಹೆಜ್ಜೆ ಹಾಕುವುದೇ? ಆದರೆ ಇದಕ್ಕೆ ಯುಧಿಷ್ಠಿರನ ಉತ್ತರವೂ ಸಿದ್ಧವಿತ್ತು: "ಇದು ನನ್ನ ತಾಯಿಯ ಮಾತು, ನಡೆಸಿಕೊಡಬೇಕಾದದ್ದು"! ಇಕ್ಕಟ್ಟಾಯಿತು, ದ್ರುಪದನಿಗೆ.


ಸೂಚನೆ : 24/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.