Sunday, December 24, 2023

ದೇವತೆಗಳಿನ ಸಂಬಂಧಗಳು (Devategalina Sambandhagalu)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)

 ಪುರಾಣಗಳನ್ನು ಪರೀಕ್ಷಿಸಿದರೆ, ದೇವರುಗಳಲ್ಲಿಯೂ ಮನುಷ್ಯರಂತೆ ಗಂಡ-ಹೆಂಡಿರು, ತಂದೆ-ತಾಯಂದಿರು, ಮಗ-ಮಗಳು ಮೊದಲಾದ ಸಂಬಂಧಗಳು ಕಾಣಿಸುವುದು ನಗೆಪಾಟಲಾಗುವುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪುರಾಣಗಳು ಜನಸಾಮಾನ್ಯರ ಉಪದೇಶಕ್ಕಾಗಿ ರಚಿಸಿದ ವಿಶಿಷ್ಟವಾದ ಗ್ರಂಥಗಳು. ವೇದಗಳಲ್ಲಿ ಮತ್ತಿತರ ಗ್ರಂಥಗಳಲ್ಲಿ ಅರುಹಿರುವ ತತ್ತ್ವಗಳ ತಿರುಳನ್ನೇ ಕಥೆ-ರೂಪಕ-ಉದಾಹರಣೆಗಳ ಮೂಲಕ ಬಿತ್ತರಿಸುತ್ತವೆ. ಬಾಲರಿಗೆ ತಿಳಿಯಪಡಿಸಲು 'ಪಂಚತಂತ್ರ' ಮೊದಲಾದ ಕಥೆಗಳನ್ನು ಚೊಕ್ಕವಾಗಿ ಹೆಣೆದಿರುವಹಾಗೆ, ಪುರಾಣಗಳು ವಿಶೇಷವಾದ ತಂತ್ರಗಳನ್ನುಪಯೋಗಿಸಿ, ಅವರ ಉದ್ಧಾರಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತವೆ.

ಇಲ್ಲಿ ಶ್ರೀರಂಗಮಹಾಗುರುಗಳು ನೀಡಿದ ನೋಟವು ಪ್ರಸ್ತುತ. ಸೃಷ್ಟಿಯಲ್ಲಿ ಯಾವುದು ವಿಕಾಸವಾಗುತ್ತದೆಯೋ ಆ ಬೀಜವನ್ನು 'ಪುರುಷ-ಪಿತಾ' ಎಂದೂ, ಯಾವುದು ವಿಕಾಸಕಾರ್ಯವನ್ನು ನಿರ್ವಹಿಸುತ್ತದೆಯೋ ಅದನ್ನು 'ಸ್ತ್ರೀ-ಮಾತಾ' ಎಂದೂ ಕರೆಯುತ್ತಾರೆ (ದ್ಯೌಃ ಪಿತಾ- ಪೃಥಿವೀ ಮಾತಾ). ಬೀಜ ಪತಿಯಾದರೆ, ಅದನ್ನು ವಿಕಸಿತಗೊಳಿಸುವ ಪೃಥ್ವಿ(ಭೂಮಿ) ಪತ್ನಿ. ಇವುಗಳ ಸಂಸರ್ಗದಿಂದ ಹೊರಡುವ ಎಲೆ, ಕಾಯಿ, ಹಣ್ಣು ಮೊದಲಾದವು ಇವುಗಳ ಮಕ್ಕಳಲ್ಲವೇ? ಇವುಗಳಲ್ಲಿ ಯಾವುದನ್ನವಲಂಬಿಸಿದರೂ 'ಬೀಜ'ವನ್ನು ತಲುಪಬಹುದು. 

ಹಾಗೆಯೇ, ಹಾಲು-ಮೊಸರುಗಳ ಸಂಸರ್ಗದಿಂದ, 'ವಿವಾಹ'ದಿಂದ, ಮಗುವಾದ ಬೆಣ್ಣೆ, ಮೊಮ್ಮಗುವಾದ ತುಪ್ಪ ಉತ್ಪತ್ತಿಯಾಗುವುದಿಲ್ಲವೇ? ಈ ಮದುವೆ, ಪೂರ್ಣಗೊಳ್ಳಬೇಕಾದರೆ, ಬೇರೆಯವರು ಸಹಕರಿಸಬೇಕು! ಉದಾಹರಣೆಗೆ ಬ್ಯಾಕ್ಟೀರಿಯಾಗಳ ಸಹಕಾರವಿಲ್ಲದೆ, ಈ ಕ್ರಿಯೆ ನೆರವೇರುವುದಿಲ್ಲ. ಅಂತೆಯೇ ಈ ಪ್ರಕ್ರಿಯೆಗೆ ಯಾವ ಅಡ್ಡಿ-ಆತಂಕಗಳೂ ಇರಬಾರದು. 'ಕೆನೆ' ಎಂಬ ತಡೆಯನ್ನು ತಡೆಗಟ್ಟಬೇಕು. ಶಿವ-ಪಾರ್ವತೀಯರ ಸಂಗಮದಿಂದ ಉದ್ಭವಿಸುವ 'ಗಣೇಶ' ಮತ್ತು 'ಷಣ್ಮುಖ' ರೆಂಬ ಸುತರಿಂದ ಮೂಲಸ್ಥಾನವಾದ ಶಿವ-ಶಕ್ತಿಯರನ್ನು ತಲುಪಬಹುದು. ಆದುದರಿಂದಲೇ, ತಂದೆ-ತಾಯಿ-ಮಕ್ಕಳೆಂಬ ಪರಿಕಲ್ಪನೆ. 

ದೇವತೆಗಳ ವಾಹನ:  ವಾಹನ ರವಾನಿಸುವ ಸಾಧನ. ಯಾವ ಸಾಧನವನ್ನು ಬಳಸಬೇಕೆಂಬುದು, ಯಾವ ಸಾಮಗ್ರಿಯನ್ನು ರವಾನಿಸುತ್ತೇವೆಯೋ ಅದರ ಆಧಾರವನ್ನವಲಂಬಿಸಿಲ್ಲವೇ? ಮನುಷ್ಯರೇ? ಸಾಮಗ್ರಿಗಳೇ? ಯಾವ ಉದ್ದೇಶಕ್ಕೆ? ವಿಹಾರಕ್ಕೋ? ಸೇನಾಸಾಮಗ್ರಿಗಳಿಗೋ? ಅವುಗಳು ಒಳಪಡಬೇಕಾದ ನಿಯಮಾವಳಿ - ವೇಗ, ಸೌಲಭ್ಯಗಳು, ತಗಲುವ ವೆಚ್ಚ ಮೊದಲಾದವುಗಳ ಮೇಲೆ ಆಧಾರಿತವಾಗಿದೆ. ಒಂದು ಅಥವಾ ಈ ಎಲ್ಲ ನಿಯಮಗಳೂ, ಸಾಧನ ಯಾವುದು ಎಂಬುದನ್ನು ನಿಶ್ಚಯಿಸುತ್ತವೆ. ಆದುದರಿಂದ 'ಪ್ರಯಾಣದ ವಿಧಾನ' ಪ್ರಯಾಣದ ಗುರಿಯಮೇಲೆ ತೀರ್ಮಾನವಾಗುತ್ತದೆ. ಅಂತರಿಕ್ಷದಲ್ಲಿ ಹಾರುವ ವಿಮಾನದಬದಲಾಗಿ ಭೂಮಿಯಲ್ಲಿ ಚಲಿಸುವ ರೈಲುಗಾಡಿಯನ್ನೂ  ರೈಲಿನಬದಲಿಗೆ, ವಿಮಾನವನ್ನೂ- ವಿಶೇಷ ಸೌಲಭ್ಯಗಳಿದ್ದರೂ ಸಹ- ಬಳಸಲಾಗುವುದಿಲ್ಲ. 

ಈ ಲೌಕಿಕ ಪ್ರಪಂಚದಲ್ಲೇ ಭೂಮಿ, ಆಕಾಶ, ನೀರು ಇವುಗಳಲ್ಲಿ ಪ್ರಯಾಣಿಸಲು ಇಷ್ಟೆಲ್ಲಾ ವಿವಿಧ ಮಾಧ್ಯಮಗಳಿದ್ದರೆ, ಅಂತಃಪ್ರಪಂಚದ ಅನ್ವೇಷಣೆಗೆ ಒಬ್ಬ ಸಾಧಕನಿಗೆ 'ವಾಹನ'ಗಳಾಗಬಹುದಾದವು ಯಾವುವು? ಇದಕ್ಕೆ ಉತ್ತರ - ಆತನ ಗುರಿಯನ್ನು ತಲುಪಿಸಬಲ್ಲ ಯಾವ ಮಾಧ್ಯಮವಾದರೂ ಸಾಧನವಾಗಬಹುದು. ಆತನ ಪ್ರಯಾಣ ಈ ಭೌತಿಕಕ್ಷೇತ್ರದಿಂದ ಆಧ್ಯಾತ್ಮಿಕ ಕ್ಷೇತ್ರದವರೆವಿಗೆ. ತನ್ನ ದೇಹ, ತನ್ನದೇ ನಿಯಂತ್ರಣದಲ್ಲಿರುವ ಕೈ-ಕಾಲು-ಕಣ್ಣು ಮೊದಲಾದ ಕರ್ಮ-ಜ್ಞಾನೇಂದ್ರಿಯಗಳು, ಮನಸ್ಸು-ಬುದ್ಧಿ ಇವುಗಳನ್ನೇ ಉಪಯೋಗಿಸಿಕೊಂಡು ಚಲಿಸಬೇಕಾಗುತ್ತದೆ. ದೈವಿಕಕ್ಷೇತ್ರವನ್ನು ನಿಯಂತ್ರಿಸುವವರು ದೇವತೆಗಳು. ಆದ್ದರಿಂದ, ಆತನ ವ್ಯವಹಾರ ದೈವಿಕ, ಆಧ್ಯಾತ್ಮಿಕ ಕ್ಷೇತ್ರಗಳೆಲ್ಲದರಲ್ಲೂ ವ್ಯಾಪಿಸಿರುತ್ತದೆ. ಅವನು, ತನ್ನ ಪರಂಬ್ರಹ್ಮನ ಅನ್ವೇಷಣೆಯಲ್ಲಿ ಯಾವುದಾದರು ವಿಧಾನವನ್ನು ಆಯ್ದುಕೊಳ್ಳಬೇಕಾಗುತ್ತದೆ; ಉದಾಹರಣೆಗೆ ವೇದಗಳ ಅಧ್ಯಯನ. ವೇದಗಳನ್ನು, ಅವನನ್ನು ಸ್ಥಳಾಂತರಗೊಳಿಸುವ ವಾಹನವಾಗಿ, ಪಕ್ಷಿಯಾಗಿ, ಪ್ರಾಣದೇವರಾದ ಗರುತ್ಮಂತನಾಗಿ ಗುರುತಿಸುತ್ತಾರೆ. ಗರುಡ, ವಿಷ್ಣುವಿನ ಸಮೇತನಾಗಿ ಧಾವಿಸಿ, ಸಾಧಕನನ್ನು ಅವನೆಡೆಗೆ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಆದ್ದರಿಂದ, ಗರುಡ, ವಿಷ್ಣುವಿಗೆ ವಾಹನ. ಇದರಂತೆಯೇ, ಯಾವಮಾಧ್ಯಮವು, ಸಾಧಕನನ್ನು ಆ ದೇವತಾ ಸ್ಥಾನಕ್ಕೆ ಕೊಂಡೊಯ್ಯಬಲ್ಲುದೋ, ಅಂತೆಯೇ ಸಾಧಕನನ್ನೂ ಆ ದೇವತೆಯನ್ನೂ ಒಟ್ಟುಗೂಡಿಸುವುದೋ ಅದೇ ಆ ದೇವತೆಯ ವಾಹನ. 

ಯಾವುದನ್ನು ನಿಯಂತ್ರಿಸಬಲ್ಲೆವೋ ಅದನ್ನೂ ವಾಹನವೆಂದು ಕರೆಯುತ್ತಾರೆ. ಅಧ್ಯಾತ್ಮದಹಾದಿಯಲ್ಲಿ, ಸಾಧಕನು ಬಹುತೇಕ ವಿಘ್ನಗಳನ್ನೆದುರಿಸಬೇಕಾಗುವುದು. ಗಣೇಶ, ಆ ವಿಘ್ನಗಳನ್ನು ನಿಯಂತ್ರಿಸುತ್ತಾನೆ, ಅವುಗಳಮೇಲೆ 'ಸವಾರಿ' ಮಾಡುತ್ತಾನೆ. ಆದುದರಿಂದಲೇ ಆತ, 'ವಿಘ್ನೇಶ್ವರ. 'ಇಲಿ' ಈ ಎಲ್ಲ ವಿಘ್ನಗಳನ್ನು ಒಟ್ಟಾರೆ ಪ್ರತಿನಿಧಿಸುತ್ತದೆ. ಇಲಿಯನ್ನು ನಿಯಂತ್ರಿಸದಿದ್ದರೆ, ಅದು ತನ್ನ ವೇಗವಾದ ಚಲನೆಯಿಂದ, ಹಾವಳಿಯನ್ನುಂಟುಮಾಡುತ್ತದೆ. ಆದ್ದರಿಂದ, ಈ ದೇವತೆಯನ್ನು ಸರಿಯಾದಕ್ರಮದಲ್ಲಿ ಒಲಿಸಿಕೊಂಡರೆ, ಆತ ತನ್ನ ವಾಹನದಮೇಲೆ ಸಹಾಯಕ್ಕೆ ಬರುತ್ತಾನೆ. ಇದು, ಒಬ್ಬ ಯೋಧ, ತಾನು ಸೋಲಿಸಿದ ವೈರಿಯ ರಥದಮೇಲೆ ಸವಾರಿಮಾಡಿಕೊಂಡು ಬರುವುದನ್ನು ನೆನೆಪಿಸುತ್ತದೆ. 

ದರ್ಶನ:  ದೇವತೆಗಳು ಮತ್ತು  ಅವರ ವಾಹನಗಳು ಕೇವಲ ಸಂಕೇತಗಳೇ? ಅವುಗಳನ್ನು ಆಧುನಿಕ ಪ್ರತೀಕಗಳೊಂದಿಗೆ ಬದಲಿಸಬಹುದೇ? ಎಂದರೆ, ದೇವತೆಗಳು, ಅಂತರ್ದೃಷ್ಟಿಗೆ ಗೋಚರವಾಗುವವರು. ಮತ್ತು, ನಿರ್ದೇಶಿಸಿರುವ ಅಧ್ಯಾತ್ಮ ಮಾರ್ಗದಲ್ಲಿ ಸಾಗುವವರೆಲ್ಲರಿಗೂ ಈ ದರ್ಶನ ಒದಗುತ್ತದೆ ಎಂಬ ಶ್ರೀರಂಗಮಹಾಗುರುಗಳ ಉಕ್ತಿಯನ್ನು  ಸ್ಮರಿಸಬಹುದು. ಈ ದರ್ಶನ ಸಾರ್ವತ್ರಿಕ. ಆದ್ದರಿಂದ ಇದನ್ನು ಸಾಮಾನ್ಯರು ಬದಲಿಸುವುದು ಸೂಕ್ತವಲ್ಲ. ಯೋಗದ ಎಣಿಸಲಾಗದ ದಾರಿ-ಕವಲುಗಳನ್ನೆಲ್ಲ ಅನ್ವೇಷಿಸಿ, ದೇವತೆಗಳನ್ನೂ ಅವರ ವಿವಿಧ ರೂಪ-ಭಂಗಿಗಳನ್ನೂ, ಅವರ ವಾಹನ-ಆಯುಧಗಳನ್ನೂ ಕಂಡು ಗ್ರಂಥಗಳಲ್ಲಿಯೂ, ಶಿಲ್ಪಗಳಲ್ಲಿಯೂ ದಾಖಲುಮಾಡಿದ ಭಾರತೀಯಋಷಿಗಳ ಯತ್ನ ಅತ್ಯಂತ ಶ್ಲಾಘನೀಯವೇಸರಿ. 

(ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  23/12/2023 ರಂದು ಪ್ರಕಟವಾಗಿದೆ.