Monday, December 11, 2023

ಯಕ್ಷ ಪ್ರಶ್ನೆ 67 (Yaksha prashne 67)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ – 66 ರಾಜನಿಗೆ ಏಕೆ ಕಾಣಿಕೆಯನ್ನು ಸಲ್ಲಿಸಬೇಕು ?

ಉತ್ತರ - ಭಯದ ನಿವೃತ್ತಿಗಾಗಿ  

ದೇಶದಲ್ಲಿ ಇರುವ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಿಂದ, ನಿರ್ಭಯವಾಗಿ ಜೀವನ ಮಾಡುವಂತಿದ್ದರೆ ಆ ದೇಶವನ್ನು ಸಮೃದ್ಧವಾದ ದೇಶ ಎಂದು ಹೇಳಬಹುದು. ನೆಮ್ಮದಿಯಾಗಿ ಜೀವನ ಮಾಡಬೇಕಾದರೆ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಆ ದೇಶದ ರಾಜನು ಕಲ್ಪಿಸಿಕೊಡಬೇಕಾಗುತ್ತದೆ. ಆ ವ್ಯವಸ್ಥೆಯನ್ನು ರೂಪಿಸಲು ವ್ಯಾವಹಾರಿಕವಾದ ದ್ರವ್ಯದ ಅವಶ್ಯಕತೆ ಇರುತ್ತದೆ. ಜನರು ಕೊಡುವ ಧನದಿಂದಲೇ ರಾಜನು ರಾಜ್ಯವನ್ನು ನೋಡಿಕೊಳ್ಳಬೇಕಾಗುತ್ತದೆ. ಜನರು ಕೊಡುವ ಆ ದ್ರವ್ಯಕ್ಕೆ 'ಕರ' ಎಂದು ಕರೆಯಲಾಗುತ್ತದೆ. ಇಂತಹ ಕರದಿಂದ ರಾಜನು ಜನರಿಗೆ ನೆಮ್ಮದಿಯ ಜೀವನಕ್ಕೆ ಬೇಕಾದ ಸಕಲ ಸಾಧನವನ್ನು ಒದಗಿಸಿಕೊಡುವುದರ ಜೊತೆಗೆ ಅವರ ರಕ್ಷಣೆಯನ್ನೂ ಮಾಡಿಕೊಡಬೇಕಾದ ಗುರುತರ ಹೊಣೆಗಾರಿಕೆ ಅವನದಾಗಿರುತ್ತದೆ. ಅದನ್ನೇ ಇಲ್ಲಿ ಯಕ್ಷನು ಪ್ರಶ್ನೆಯಾಗಿ ಕೇಳುತ್ತಿದ್ದಾನೆ. "ರಾಜನಿಗೆ ನಾವು ಯಾವ ಉದ್ದೇಶಕ್ಕಾಗಿ ಕರವನ್ನು ನೀಡುವುದು?" ಎಂದು. ಅದಕ್ಕೆ ಧರ್ಮರಾಜನ ಉತ್ತರ 'ಭಯದ ನಿವಾರಣೆಗಾಗಿ' ಎಂದು. 

ಭಯವೆಂಬುದು ಪ್ರತಿಯೊಂದು ಜೀವಿಗೂ ಸಹಜ. ತಾನು ಹುಟ್ಟುತ್ತಲೇ ಭಯದಿಂದಲೇ ಹುಟ್ಟುತ್ತಾನೆ. ಇದಕ್ಕೆ ಮನುಷ್ಯ ಹೊರತಲ್ಲ. ಹುಟ್ಟಿದ ಆ ಘಳಿಗೆಯಿಂದಲೇ ತಾನು ಬದುಕಬೇಕು ಎಂಬ ಹೋರಾಟ ನಡೆದೇ ಇರುತ್ತದೆ. ತನ್ನ ಬದುಕಿಗೆ ಯಾವುದೇ ತೊಂದರೆ ಬರಬಾರದು ಎಂದು ಪ್ರತಿಯೊಂದು ಜೀವವೂ ಅಪೇಕ್ಷೆಪಡುತ್ತದೆ. ಅವರ ಅಪೇಕ್ಷೆಯನ್ನು ಈಡೇರಿಸುವುದು ರಾಜನ ಆದ್ಯ ಕರ್ತವ್ಯವಾಗಿರುತ್ತದೆ. ಅಂತಹ ಭಯವನ್ನು ನಿವೃತ್ತಿಪಡಿಸಿ ನಿರಾತಂಕವಾದ ವಾತಾವರಣವನ್ನು ಕಲ್ಪಿಸಿ ಕೊಡಬೇಕಾಗುತ್ತದೆ.

ಭಯವೆಂಬುದು ಒಳಗಿನವರಿಂದ ಅಥವಾ ಹೊರಗಿನವರಿಂದಲಾದರೂ ಆಗಬಹುದು. ಭಯ, ಮಹಾಭಯ, ಮೃತ್ಯುಭಯ ಮತ್ತು ಅಂತಕಭಯ ಎಂಬ ಭಯಗಳಿವೆ. ರಾಜನಾದವನು ಈ ಎಲ್ಲಾ ಭಯಗಳಿಂದಲೂ ನಿವೃತ್ತಿ ಮಾಡಿಸುವಂತಿರಬೇಕು. ಸಾಮಾನ್ಯಮಾನುಷ್ಯ, ಪಶು, ಪಕ್ಷಿ ಮೊದಲಾದ ಪ್ರಾಣಿ, ಕೀಟ ಮೊದಲಾದವುಗಳಿಂದ ಉಂಟಾಗುವುದು ಭಯ. ಸಿಂಹ ವ್ಯಾಘ್ರ ಸರ್ಪಾದಿಗಳಿಂದ ಸಾವು ಬದುಕಿನ ನಡುವೆ ಹೋರಾಡುವಂತಾಗುವಂತೆ ಮಾಡುವುದು ಮಹಾಭಯ. ಮೃತ್ಯುವೇ - ಮರಣವೇ ಬರುತ್ತದೆ ಎಂದು ತಿಳಿಯುವುದು ಇನ್ನೂ ಭಯಂಕರವಾದುದು. ಇನ್ನು ಬಾಹ್ಯವಾಗಿ ಅನುಭವಗೋಚರವಾಗದೇ ಕೇವಲ ಆ ಆ ಜೀವಿಗೇ ಈ ಶರೀರವನ್ನು ಬಿಟ್ಟ ಅನಂತರದಲ್ಲಿ ಉಂಟಾಗುವ ಭಯವೇ ಅಂತಕನ ಭಯ. ಹೀಗೆ ಎಲ್ಲಾ ಭಯಗಳಿಂದಲೂ ಅಭಯವನ್ನು ಕೊಡಲು ರಾಜನನ್ನು ಗಟ್ಟಿಗೊಳಿಸಬೇಕು. ಅದಕ್ಕೆ ಅವನಿಗೆ ಬಾಹ್ಯಶಕ್ತಿ ಮತ್ತು ಅಂತಃಶಕ್ತಿ ಇವೆರಡೂ ಬೇಕಾಗುತ್ತದೆ. ತಪಸ್ವಿಗಳು ತಾವು ಮಾಡಿದ ತಪಸ್ಸಿನ ಫಲವನ್ನೇ ಕರರೂಪವಾಗಿ ನೀಡುತ್ತಿದ್ದರಂತೆ. ಅದಕ್ಕೆ ಅಶಕ್ತರಾದವರು ಅವರವರ ಶಕ್ತಿಗನುಗುಣವಾದ ಕರವನ್ನು ಕೊಡಬೇಕಾದುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಹೀಗೆ ರಾಜನನ್ನು ಗಟ್ಟಿಗೊಳಿಸಲು ರಾಜನ ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕವಾದ ಮೂರರ ಶಕ್ತಿಯನ್ನು ಪ್ರಜೆಗಳು 'ಕರ' ರೂಪವಾಗಿ ಕೊಡಬೇಕಾಗುತ್ತದೆ. ಹೇಗೆ 'ಸೂರ್ಯನು ಸಮುದ್ರದ ನೀರನ್ನು ಆವಿಯಾಗಿ ಪಡೆದು, ಅದರ ನೂರುಪಟ್ಟು ಸಾವಿರಪಟ್ಟು ಪರಿಶುದ್ಧವಾದ ನೀರನ್ನು ಮಳೆಯಾಗಿ ಮತ್ತೆ ಭೂಮಿಗೆ ಕೊಡುತ್ತಾನೋ, ಅಂತೆಯೇ ರಾಜನಾದವನು ಪ್ರಜೆಗಳ ಕರವನ್ನು ಅವರ ಯೋಗಕ್ಷೇಮಕ್ಕಾಗಿಯೇ ಪಡೆದು ಅದನ್ನು ಹೆಚ್ಚಿಸಿ ಕೊಡುತ್ತಾನೆ' ಎಂಬ ಕಾಳಿದಾಸನ ಮಾತು ಈ ಸಂದರ್ಭಕ್ಕೆ ಉಚಿತವಾಗಿದೆ.

ಸೂಚನೆ : 
10/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.