Monday, December 18, 2023

ಅಷ್ಟಾಕ್ಷರೀ​ - 50 ದುಗ್ಧಂ ಗೀತಾಮೃತಂ ಮಹತ್ (Astakshara Darshana 49)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ಇನ್ನೊಂದು ವಾರದೊಳಗೆ ಬರಲಿದೆ ವೈಕುಂಠ ಏಕಾದಶಿ. ಅಂದೇ ಗೀತಾಜಯಂತಿಯ ಆಚರಣೆಯೂ. ಆ ಹಿನ್ನೆಲೆಯಲ್ಲಿ ಭಗವದ್ಗೀತೆಯ ಹಿರಿಮೆಯತ್ತ ನಮ್ಮ ಚಿತ್ತ ಹರಿಯಬೇಕಾದುದು ಯುಕ್ತವೇ ಸರಿ. ಗೀತೆಯ ಸಂದೇಶವೇನೆಂದು ಅರಿಯಲು ಇಡೀ ಗೀತೆಯ ಅಧ್ಯಯನವನ್ನೇ ಮಾಡಬೇಕಷ್ಟೆ? ಆದರೂ ಅದನ್ನು ಕಿಂಚಿತ್ತಾಗಿ ಅಧ್ಯಯನ ಮಾಡಿದರೂ (ಹೇಗೆ ಗಂಗಾಜಲದ ಹನಿಯೊಂದಂಶವನ್ನು ಕುಡಿದರೂ, ಒಮ್ಮೆಯಷ್ಟೆ ಮುರಾರಿಯನ್ನು ಅರ್ಚಿಸಿದರೂ) ಯಮ-ಭಯವಿರದು - ಎನ್ನುತ್ತದೆ, ಭಜಗೋವಿಂದಸ್ತುತಿ.


ಯಮನ ಭಯವೇ ಮಿಗಿಲಾದ ಭಯವಲ್ಲವೇ? ಸಾವಿಗಿಂತಲೂ ನೋವೇ? ಮುಪ್ಪೂ ರೋಗವೂ ನೋವುಗಳೇ. ಜ್ಞಾನಿಗಳ ದೃಷ್ಟಿಯಲ್ಲಿ ಹುಟ್ಟೂ ನೋವೇ! ಜನ್ಮ-ಮೃತ್ಯು-ಜರಾ-ವ್ಯಾಧಿಗಳೆಂಬ ನೋವುಗಳಿಂದ ತುಂಬಿದೆ, ಈ ಸಂಸಾರಬಂಧ. "ಸಾವು ಬಂದಂದೇ ಎಲ್ಲ ನೋವುಗಳ ಕೊನೆ" ಎಂದು ನಾವೆಂದುಕೊಳ್ಳುತ್ತೇವೆ; ಹಾಗಲ್ಲವೆನ್ನುತ್ತಾರೆ, ಜ್ಞಾನಿಗಳು. ಏಕೆ? ಸತ್ತವರು ಮತ್ತೆ ಹುಟ್ಟುವುದು ಕಟ್ಟಿಟ್ಟದ್ದೇ. ಹುಟ್ಟು-ಸಾವುಗಳ ಚಕ್ರ ಅನಾದಿಯೆನ್ನಬಹುದಾದದ್ದೇ ಸರಿ!


ಅನಾದಿಯಾದರೂ ಅನಂತವಾಗಬೇಕಿಲ್ಲವೆನ್ನುವುದೇ ಉಪನಿಷತ್ತುಗಳಿತ್ತಿರುವ ಸಂದೇಶ. ಹಾಗೆಂದರೆ, ಹುಟ್ಟಿಯೂ ಸಾಯದಿರಬಹುದು - ಎಂದರ್ಥವಲ್ಲ! ಮರುಹುಟ್ಟೆಂಬುದೇ ಇಲ್ಲದಂತಾಗಿಬಿಟ್ಟರೆ ಮತ್ತೆ ಸಾವೆನ್ನುವುದೆಲ್ಲಿನ್ನು?


ಅಮೃತವನ್ನು ಕುಡಿದವರಿಗೆ ಮರಣವಿಲ್ಲವೆನ್ನುವರಲ್ಲವೇ? ಯಾವುದಾ ಮಹತ್ತಾದ ಅಮೃತ? ಗೀತೆಯೇ :"ದುಗ್ಧಂ ಗೀತಾಮೃತಂ ಮಹತ್".


ಹಸುವಿನ ಹಾಲನ್ನು ಅಮೃತವೆನ್ನುವುದುಂಟು; ಗೀತೆಯೆಂಬ ದುಗ್ಧ(ಹಾಲು) ವಿಶಿಷ್ಟವಾದದ್ದು. ಯಾವ ಹಸುವಿನ ಹಾಲದು? ಹಾಲು ಕರೆದವರಾರು? ಹಾಲು ಸೊರೆಬಿಡಲು ಬಳಸಿದ ಕರುವಾವುದು? ಯಾರಿಗಾಗೀ ಹಾಲು? ಉಪನಿಷತ್ತುಗಳೇ ಗೋವುಗಳು; ಹಾಲು ಕರೆಯುವ ಗೊಲ್ಲ ಶ್ರೀಕೃಷ್ಣ; ಪಾರ್ಥ(ಅರ್ಜುನ)ನೇ ಕರು. ಸುಧೀಗಳಿಗಾಗಿಯೇ ಈ ಹಾಲನ್ನು ಕರೆದಿರುವುದು. (ಸುಧೀ - ಎಂದರೆ ವಿದ್ವಾಂಸ; ಒಳ್ಳೆಯ ಬುದ್ಧಿಯುಳ್ಳವನು).


ಒಟ್ಟಿನ ತಾತ್ಪರ್ಯ: ಉಪನಿಷತ್ತುಗಳೆಂಬ ಗೋವುಗಳಿಂದ ಅವುಗಳ ಸಾರವೆನಿಸುವ ಹಾಲನ್ನು ಶ್ರೀಕೃಷ್ಣನೇ ಕರೆದು ತಂದಿರುವನು. ಅರ್ಜುನನಿಗೆ ಕೊಡುವ ನೆಪದಲ್ಲಿ ಸನ್ಮತಿ-ಸಂಪನ್ನರಿಗಾಗಿ ಹರಿದಿದೆ ಇದರ ಧಾರೆ! ಬನ್ನಿ, ಈ ಗೀತೆಯೆಂಬ ಅಮೃತವನ್ನು ಪಾನ ಮಾಡೋಣ; ಅಮೃತತ್ವಕ್ಕೆ ಪಾತ್ರರಾಗೋಣ!


ಅಲ್ಲಿಗೆ, ಉಪನಿಷತ್ತುಗಳ ಸಾರವೇ ಗೀತೆಯೆಂದಂತಾಯಿತು. ಉಪನಿಷತ್ತುಗಳ ಭಾಷೆ ಸುಲಭವಲ್ಲ; ಪದಗಳೆಲ್ಲ ಅರ್ಥವಾದರೂ ವಾಕ್ಯವು ಅರ್ಥವಾಯಿತೆನ್ನಿಸದ ಪ್ರಸಂಗಗಳು ಕಡಿಮೆಯಿಲ್ಲ; ಒಟ್ಟಿನ ತಾತ್ಪರ್ಯವಂತೂ ದಕ್ಕಿತೆಂಬ ನೆಚ್ಚಿಕೆ ಸುಲಭವಲ್ಲ. ಅದರೆ ಗೀತೆಯಲ್ಲಿಯ ಭಾಷೆ-ಭಾವಗಳೂ ಅರ್ಥ-ತಾತ್ಪರ್ಯಗಳೂ ಯತ್ನಿಸಿದರೆ ಬಹುಪಾಲು ಎಟುಕಿಸಿಕೊಳ್ಳಲಾಗುವಂತಹವೇ; ಜೀವನಕ್ಕೆ ಅನ್ವಯಿಸಿಕೊಳ್ಳಲು ಆಗಿಬರುವಂತಹವೇ. ಎಷ್ಟಾದರೂ, ಉಪನಿಷತ್‍ಕಾಲಕ್ಕಿಂತಲೂ ಗೀತೆಯ ಕಾಲವು ನಮಗೆ ನಿಕಟವಾದದ್ದಲ್ಲವೇ? 


ಹುಟ್ಟುಸಾವುಗಳೆಂಬ ಸಂಸಾರಚಕ್ರವ್ಯೂಹವನ್ನು ಭೇದಿಸಲು ಹೊರಟ ಸಾಹಿತ್ಯವೇ ಉಪನಿಷತ್ತುಗಳೆಂಬುದು. ಎಂದೇ ಗೀತೆಯಲ್ಲಿಯೂ ಅವುಗಳಲ್ಲಿಯ ಭಾವ-ಭಾಷೆಗಳು ಅಲ್ಲಲ್ಲಿ ಕಾಣಸಿಗುವುವು. ಅದಕ್ಕೊಂದೆರಡು ಉದಾಹರಣೆಗಳು ಬೇಕಲ್ಲವೇ? ಈ ಶರೀರವನ್ನು ಹೇಗೆ ಕಾಣಬೇಕು? ಜೀವಿತಕಾಲದಲ್ಲಿ ತೋರುವ ಮೌಲಿಕಸಮಸ್ಯೆಯೇನು? ಅದನ್ನೆದುರಿಸುವುದೆಂತು? ಸಾವು ಸಮೀಪಿಸುತ್ತಿದ್ದಂತೆ ಮಾಡತಕ್ಕದ್ದೇನು? - ಇತ್ಯಾದಿಗಳೆಲ್ಲ ಮುಖ್ಯಪ್ರಶ್ನೆಗಳೇ ಸರಿ. ಈ ಶರೀರವು ನವದ್ವಾರಗಳನ್ನು ಹೊಂದಿರುವ ಪುರ - ಎಂಬುದಾಗಿ ಶ್ವೇತಾಶ್ವತರೋಪನಿಷತ್ತು ಹೇಳಿರುವುದನ್ನೇ ಗೀತೆಯು ಹೇಳುತ್ತದೆ. ಜೀವನದ ಲಕ್ಷ್ಯವು ತಮಸ್ಸಿನ ಆಚೆಗಿನದು – ಎಂಬ ಗೀತಾಭಾವದ ಮೂಲ ಛಾಂದೋಗ್ಯದಲ್ಲಿದೆ. ರಾಗದ್ವೇಷಗಳೆಂಬ ದ್ವಂದ್ವದಿಂದಾದ ಮೋಹವೇ ಬಂಧನ; ಅದರಿಂದಲೇ ಬಿಡುಗಡೆಯಾಗಬೇಕಾದದ್ದೆಂದು ಮೈತ್ರಾಯಣ್ಯುಪನಿಷತ್ತಿನಲ್ಲೂ ಗೀತೆಯಲ್ಲೂ ಹೇಳಿದೆ. ಪುಣ್ಯರಾಶಿಯು ಖರ್ಚಾಗುತ್ತಲೇ ಇಲ್ಲೇ ಮರುಹುಟ್ಟು ಮರುಕಳಿಸುವುದೆಂದು ಮುಂಡಕೋಪನಿಷತ್ತಿನಂತೆಯೇ ಗೀತೆಯು ಹೇಳಿದೆ. ಮೇಲ್ಬೇರು-ಕೆಳಗೊಂಬೆಯ ಮರದ ರೂಪಕವನ್ನು ಕಠೋಪನಿಷತ್ತಿನಲ್ಲೂ ಗೀತೆಯಲ್ಲೂ ಕಾಣುತ್ತೇವೆ. ಕಠೋಪನಿಷತ್ತಿನ ಕೆಲವು ಶ್ಲೋಕಗಳಂತೂ ಗೀತೆಯಲ್ಲಿ ಪಡಿಯಚ್ಚಾಗಿವೆ. ಗೀತೆಯ ದೇವಯಾನ-ಪಿತೃಯಾಣಗಳ ವಿವರಣೆಯೂ ಉಪನಿಷದನುಸಾರಿಯೇ. ಛಾಂದೋಗ್ಯೋಪನಿಷತ್ತಿನ ಪುಷ್ಕರ-ಪಲಾಶ(ಪದ್ಮಪತ್ರ)ದ ಉಪಮಾನವೂ ಗೀತೆಯಲ್ಲಿ ಅನುಗತವಾಗಿದೆ.


ಕಮಲದೆಲೆಯ ಈ ಉಪಮಾನವು ಬಂದಿರುವುದು, ಪಾಪವಂಟದಿರುವ ಜೀವನದ ಪರಿಯ ನಿದರ್ಶನಕ್ಕಾಗಿ. ಇಲ್ಲಿಯ ಭಾವವನ್ನು ಶ್ರೀರಂಗಮಹಾಗುರುಗಳು ಇನ್ನೂ ವಿಸ್ತರಿಸಿಯೂ ವಿಶದತರವಾಗಿಯೂ ಹೇಳಿದ್ದಾರೆ: "ನೀರಿನಲ್ಲೇ ಹುಟ್ಟಿ, ನೀರಿನಲ್ಲೇ ಬೆಳೆದು, ಸರ್ವದಾ ನೀರಿನಲ್ಲೇ ಇರುವುದು, ಕಮಲ; ಆದರೂ ಅದರ ಎಲೆಗೆ ನೀರು ಅಂಟುವುದಿಲ್ಲ; ಅಂತೆಯೇ ಪ್ರಾಕೃತಜನರ (ಎಂದರೆ ಸಾಧಾರಣಜನರ) ಮಧ್ಯದಲ್ಲಿಯೇ ಇದ್ದೂ, ಪ್ರಾಕೃತಭಾವವನ್ನು ತಾನು ಅಂಟಿಸಿಕೊಳ್ಳದೇ ಜ್ಞಾನಿಯು ಜೀವನ ಮಾಡುತ್ತಾನೆ". ಜ್ಞಾನಿಗಳ ಉದಾತ್ತಜೀವನಶೈಲಿಗೆ  ಕನ್ನಡಿಹಿಡಿಯುತ್ತದೆ, ಈ ನುಡಿ; ಉಪನಿಷತ್ಸಾರವಾದ ಗೀತೆಯ ಸಾರದ ಜೀವನಾನ್ವಯವನ್ನು ಸಪರಿಷ್ಕಾರವಾಗಿಯೂ ಸ್ಫುಟತರವಾಗಿಯೂ ಸಾರುತ್ತದೆ ಕೂಡ, ಅಲ್ಲವೇ?


ಸೂಚನೆ : 17/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.