ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಇಂದು ಚಿತ್ರವಿಚಿತ್ರವಾದ ವಾದಗಳು ತಲೆಯೆತ್ತುತ್ತಿವೆ. ಯಾವುದು ಸರಿಯೋ ಯಾವುದು ತಪ್ಪೋ ಹೇಳಲಾಗದ ಪರಿಸ್ಥಿತಿ ಬಂದಿರುವಂತಿದೆ. ಒಳ್ಳೆಯ ವೈಚಾರಿಕತೆಯಿಲ್ಲದವರಿಗಂತೂ, ಇದಾವುದೇ ಗೊಂದಲದ ಗೊಡವೆಯೂ ಬೇಡವೆನಿಸಿ, ಲಭ್ಯವಾದ ಮಿತಸಮಯದಲ್ಲಿ, ಮೊಬೈಲ್‍ನಲ್ಲಿ ಸಿಕ್ಕುವ ಸಿನಿಮಾಸಮೂಹವನ್ನೋ, ಟಿವಿಯಲ್ಲಿ ಹರಿಯುವ ಧಾರಾವಾಹಿಗಳನ್ನೋ ನೋಡಿಕೊಂಡು ಕಾಲಕಳೆದರಾಯಿತೆನ್ನಿಸುವಂತಾಗಿಹೋಗಿದೆ.
ನ್ಯಾಯವಾಗಿ, ದೇಶಸೇವೆಗಾಗಿಯೂ ದೇವಸೇವೆಗಾಗಿಯೂ ದೇಹವನ್ನು ಸಜ್ಜುಮಾಡಿಕೊಳ್ಳುವ ಸಂಕಲ್ಪವು ಬಾಲ್ಯದಿಂದಲೂ ಇರಬೇಕು. ಆದರಿಂದು ಬಾಲಕ-ಬಾಲಿಕೆಯರ ತಲೆಕೆಡಿಸುವ ಬಗೆಗಳೇ ಹಲವು ತೋರಿಕೊಂಡಿವೆ. ಪ್ರಚಲಿತವಾಗಿರುವ ಸಾಮಾಜಿಕಸಿದ್ಧಾಂತಗಳೂ ಬೌದ್ಧಿಕಸಿದ್ಧಾಂತಗಳೂ ಹತ್ತುಹಲವು ಬಗೆಗಳವು; ಪರಿಣಾಮವಾಗಿ, ಸ್ಪಷ್ಟವಾಗಿರುವ ಒಂದೇ ವಿಷಯವೆಂದರೆ ಎಲ್ಲವೂ ಅಸ್ಪಷ್ಟವೆಂಬುದೊಂದೇ ಸರಿ! ನಮ್ಮ ಜೀವನಕ್ಕನ್ವಯಿಸುವಂತೆ, ಹಾಗೂ ನಾವಾಡುವ ಭಾಷೆಗನ್ವಯಿಸುವಂತೆ, ಉಂಟಾಗಿರುವ ಅಂತಹ ಒಂದೆರಡು ಗೊಂದಲಗಳನ್ನು ಮಾತ್ರ ಇಲ್ಲಿ ಉದಾಹರಣೆಗೆಂದು ತೆಗೆದುಕೊಂಡಿದೆ.
ಮೊದಲನೆಯದು ಲಿಂಗದ ವಿಷಯವಾಗಿ ಹುಟ್ಟುಹಾಕಲಾಗಿರುವ ಭ್ರಮೆಗಳು. ಇತ್ತೀಚಿನವರೆಗೂ ಪುಲ್ಲಿಂಗ-ಸ್ತ್ರೀಲಿಂಗ-ನಪುಂಸಕಲಿಂಗಗಳೆಂಬ ಭಾಷಾವಿಷಯಕವಾದ ಮೂರುಲಿಂಗಗಳೆಂದು ತಿಳಿಯುತ್ತಿದ್ದೆವು. ಮನುಷ್ಯರಲ್ಲೂ ಹಾಗೆಯೇ ಗಂಡಸರು-ಹೆಂಗಸರು ಎಂಬ ಸಾಧಾರಣವಿಭಾಗವೂ, ಎರಡೂ ಅಲ್ಲದವರೆನಿಸತಕ್ಕವರು ಅಲ್ಲೊಬ್ಬ ಇಲ್ಲೊಬ್ಬರಿರುವರೆಂಬುದೂ, ಸಾಮಾನ್ಯಜ್ಞಾನವಾಗಿತ್ತು. ಆದರೀಗ ಹಾಗಿಲ್ಲ. ಪಾಶ್ಚಾತ್ಯದೇಶಗಳಲ್ಲಿ, ವಿಜ್ಞಾನವೂ ಒಪ್ಪದ, ಹತ್ತಾರು "ಲಿಂಗಭೇದ"ಗಳನ್ನು ಬೇಕೆಂದೇ ಹುಟ್ಟುಹಾಕಲಾಗಿದೆ. ಈವರೆಗಿದ್ದುದನ್ನೆಲ್ಲಾ ತಲೆಕೆಳಕುಮಾಡಿ ಜನರ ಮನದಲ್ಲಿ ಗಲಿಬಿಲಿಯುಂಟುಮಾಡುವುದರಲ್ಲಿ ಕೆಲ "ಬುದ್ಧಿಜೀವಿ"ಗಳಿಗೆ ಎಲ್ಲಿಲ್ಲದ ಸಂತೋಷ.
ಬದಲಾವಣೆಗಳನ್ನು ಎಳೆಯ ಮಕ್ಕಳಿಂದಲೇ ಆರಂಭಿಸಬೇಕಲ್ಲವೆ? ಎಂದೇ ತಮ್ಮ ಹುಚ್ಚು ಸಿದ್ಧಾಂತಗಳ ಹುಳುಗಳನ್ನು ಎಳೆಯರ ತಲೆಯೊಳಗೇ ಬಿಟ್ಟು ಸಾಕಷ್ಟು ಭ್ರಾಂತಿಯನ್ನು ಉಂಟುಮಾಡಲಾಗುತ್ತಿದೆ. ವಿಶ್ವವಿದ್ಯಾಲಯಗಳ ಮಾನವಿಕವಿಭಾಗದಲ್ಲಿ ಅಧ್ಯಾಪಿಸುವ ಹಲವರು ಈ ಹೊಸ ಸಾಮಾಜಿಕ ಪಿಡುಗಿಗೆ ಕಾರಣೀಭೂತರಾಗಿದ್ದಾರೆಂದರೆ ತಪ್ಪಾಗಲಾರದು. ಇಂತಹ ಬೋಧಕರು ಸಮಾಜದ ಆರೋಗ್ಯಕ್ಕೆ ಬಾಧಕರೇ ಸರಿ! ಉದಾಹರಣೆಗೆ, ಹೆಣ್ಣುಮಕ್ಕಳ ಸಮವಸ್ತ್ರವನ್ನೇ ಗಂಡುಮಕ್ಕಳೂ ಧರಿಸಿಬರಬೇಕೆಂದು ಪ್ರಾಥಮಿಕ ಶಾಲೆಗಳಲ್ಲಿ ನಿಯಮಮಾಡುವುದು; ಬೇಕೆಂದೇ ಇಬ್ಬರಿಗೂ ಏಕಮಾತ್ರ-ಮೂತ್ರಾಲಯವನ್ನೇ ನಿರ್ಮಿಸುವುದು - ಮುಂತಾದ ಕ್ರಮಗಳನ್ನು ಆರಂಭಿಸಿದ್ದಾರೆ. ಈ "ವ್ಯವಸ್ಥೆ"ಯನ್ನು ಹಲವು ಮಂದಿ ಹಲವು ಬಗೆಯಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿರುವುದರ, ಅಸಹ್ಯವೆನಿಸುವ ಅಪಸವ್ಯಗಳ, ವರದಿಗಳು ಕೇಳಿಬರುತ್ತಿವೆ. ಇಂತಹ ಗೋಳಿನ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಬದಲು, ಗೃಹಶಿಕ್ಷಣವೇ(ಹೋಂಸ್ಕೂಲ್) ವಾಸಿಯೆಂಬ ತೀರ್ಮಾನಕ್ಕೆ ಹಲವಾರು ಪೋಷಕರು ಬರುತ್ತಿದ್ದಾರೆ. ಇಷ್ಟಲ್ಲದೆ ಭಾಷಾಪ್ರಯೋಗದಲ್ಲಿಯೂ – ಉದಾಹರಣೆಗೆ ಸರ್ವನಾಮಗಳ ಬಳಕೆಯ ವಿಷಯದಲ್ಲಿ ಸಹ - ಸಾಕಷ್ಟು ವಿಕಾರಗಳನ್ನೆಬ್ಬಿಸಲಾಗಿದೆ. ಭಾಷೆಯು ಹೀಗೆ ಕಲುಷಿತವಾಗುತ್ತ ಹೋದರೆ, ಭಾವಗಳೊಳಗೂ ಕೊಳಕುಗಳು ಸುಳಿಯದಿರುವುದಿಲ್ಲ.
ಮತ್ತೊಂದು ಗೊಂದಲವೆಂದರೆ ಅಹಿಂಸಾತತ್ತ್ವವನ್ನು ಕುರಿತಾದುದು. ಹಿಂಸೆಗೂ ಅಹಿಂಸೆಗೂ ಜೀವನದಲ್ಲಿ ಸ್ಥಾನಗಳೇನು? ಅರ್ಥಾತ್ ಯಾವುದೆಲ್ಲಿ ಸೂಕ್ತ, ಎಲ್ಲಲ್ಲ? - ಎಂಬ ವಿವೇಕವನ್ನೇ ಕಿತ್ತೊಗೆದು, ಎಲ್ಲೆಡೆ ಅಹಿಂಸಾತತ್ತ್ವವನ್ನು ಅನ್ವಯಿಸುವ ಚಾಳಿಯೊಂದು, ವಿಶೇಷವಾಗಿ ನಮ್ಮ ದೇಶದಲ್ಲಿ, ಸ್ವಾತಂತ್ರ್ಯೋತ್ತರಕಾಲದಲ್ಲಿ, ಪ್ರಚುರವಾಗಿದೆ. ಗುರೂಜೀ ಗೋಳವಲಕರರ ಚಿಂತನಗಂಗಾ-ಪುಸ್ತಕದಲ್ಲಿ ಜೈನಸಾಧುವೊಬ್ಬನ ಉತ್ತಮವಾದ ಮಾತೊಂದಿದೆ: ನಿನ್ನನ್ನು ಕೊಲ್ಲಲೆಂದು ಬಂದ ದುಷ್ಟನನ್ನು ತಡೆಯಲು ಯತ್ನಿಸದೆಯೇ ಇದ್ದಲ್ಲಿ, ಆತನಲ್ಲಿಯ ಹಿಂಸಾಪ್ರವೃತ್ತಿಯು ಉಲ್ಬಣವಾಗುವುದಕ್ಕೆ ನೀನೇ ಕಾರಣನಾಗುತ್ತೀಯೇ; ಅಪರಾಧವು ಜರುಗಲು ಸಹಾಯಮಾಡಿದವನು ಸಹ ಅಪರಾಧದಲ್ಲಿ ಭಾಗಿಯೆಂದೇ - ಎಂಬುದು ಆ ಸಾಧುವಿನ ಸೊಗಸಾದ ಎಚ್ಚರಿಕೆಯ ಮಾತು. ಈಚೆಗೆ ನಡೆದ ದುರಂತವೊಂದನ್ನಿಲ್ಲಿ ಸ್ಮರಿಸಬಹುದು: ಜೈನಮುನಿಯೊಬ್ಬರನ್ನು ಒಬ್ಬ ಕೊಂದಿದ್ದ; ಆತನನ್ನು ಕ್ಷಮಿಸಿಬಿಡುವುದೇ ಅಹಿಂಸಾಮಾರ್ಗವೆಂಬ ಮೂರ್ಖವಾದವೊಂದು ಹೊಮ್ಮಿತ್ತು!
ಭಗವಂತನ ಅವತಾರಕಾರ್ಯವು ಇದಕ್ಕೆ ಪೂರ್ಣವ್ಯತಿರಿಕ್ತ: ದುಷ್ಟವಿನಾಶನವನ್ನು ಮಾಡಿಕೊಂಡೇ ಶಿಷ್ಟರಕ್ಷಣವನ್ನು ಮಾಡುವುದಾಗುವುದು. ಶ್ರೀರಂಗಮಹಾಗುರುಗಳ ಈ ಉದ್ಗಾರ ಮಾರ್ಮಿಕವಾದುದು: "ಧರ್ಮವನ್ನು ಕೂರಿಸಿ ಬೆಳಗಿಸಲು ಕೂರಸಿಯನ್ನೂ ಹಿಡಿಯಬೇಕಾಗಬಹುದು!". ಕೂರಸಿಯೆಂದರೆ ಹರಿತವಾದ ಖಡ್ಗ. ಅಧರ್ಮಿಷ್ಠರ ವಿರುದ್ಧ ಹೋರಾಡುವುದು ಧರ್ಮಿಷ್ಠರ ಪರಮಕರ್ತವ್ಯ. ಎಂದೇ, "ಕ್ಲೈಬ್ಯ(ನಪುಂಸಕತ್ವ)ವನ್ನು ಹೊಂದಬೇಡ!" - ಎಂಬುದಾಗಿಯೇ ಕೃಷ್ಣನು ಅರ್ಜುನನಿಗೆ ಎಚ್ಚರಿಸಿದುದು. ಮೇಲೆ ಹೇಳಿದ ಪುಸ್ತಕದಲ್ಲಿ, ಅಧರ್ಮಭರಿತ-ಸಂನಿವೇಶಕ್ಕನ್ವಯಿಸುವ ಮಾತೊಂದಿದೆ (ಮಹಾಭಾರತದ್ದು): "ಎಲ್ಲದ್ದಕ್ಕೂ ಕ್ಷಮೆ-ಸಹನೆ ಎನ್ನುತ್ತಿರುವವನು ಅತ್ತ ಹೆಂಗಸೂ ಅಲ್ಲ, ಇತ್ತ ಗಂಡಸಂತೂ ಅಲ್ಲವೇ ಅಲ್ಲ" (ನೈವ ಸ್ತ್ರೀ, ನ ಪುನಃ ಪುಮಾನ್)!
ಧರ್ಮತತ್ತ್ವದ ಸರಿಯಾದ ಅರಿವಿಗಾಗಿ, ಹಾಗೂ ಆ ಅರಿವನ್ನಾಧರಿಸಿದ ಪರಮಧರ್ಮದ ಪ್ರತಿಷ್ಠಾಪನೆಗಾಗಿ, ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆನ್ನುವ ವೀರನಾರಿ-ವೀರಪುರುಷರನ್ನು ಬಹುಹೆಚ್ಚಿನ ಸಂಖ್ಯೆಯಲ್ಲಿಂದು ಬಯಸುತ್ತಾಳೆ, ಭಾರತಮಾತೆ.
ಸೂಚನೆ: 3/12/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.