Sunday, December 24, 2023

ಸಂಧ್ಯಾವಂದನೆಯಲ್ಲಿ ಏಕೆ ಸೂರ್ಯನನ್ನೇ ಉಪಾಸಿಸಬೇಕು? (Sandhyavandaneyalli Eke Suryananne Upasisabeku?)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)

ಸಂಧ್ಯಾಕಾಲದಲ್ಲಿ ಮಾಡುವ ವಂದನೆಗೆ ‘ಸಂಧ್ಯಾವಂದನೆ’ ಎಂದು ಕರೆಯುತ್ತಾರೆ. ಸಂಧಿಸುವುದು, ಸೇರುವುದು, ಎರಡರ ನಡುವಿನದ್ದು ಎಂಬೆಲ್ಲಾ ಅರ್ಥಗಳು ಬರುತ್ತವೆ. ಇಲ್ಲಿ ನಾವು ವಿಚಾರಕ್ಕೆ ತೆಗೆದುಕೊಂಡ ವಿಷಯ ಕಾಲದ ಸಂಧ್ಯೆಯನ್ನು. ಒಂದು ಕಾಲ ಮುಗಿದು ಇನ್ನೊಂದು ಕಾಲವು ಆರಂಭವಾಗುತ್ತದೆ. ಒಂದರ ಮುಕ್ತಾಯ ಇನ್ನೊಂದರ ಆರಂಭದ ಕಾಲವೇ ‘ಸಂಧ್ಯಾ’ ಎಂಬುದಾಗಿ ಕರೆಯುತ್ತಾರೆ. ಹಾಗಾಗಿ ಒಂದು ದಿನಕ್ಕೆ ಯಾವ ಸಂಧಿಗಳು ಸಂಭವಿಸುತ್ತವೆ ಎಂಬುದನ್ನು ಲೆಕ್ಕ ಹಾಕಿ ಪ್ರಾತಃಸಂಧ್ಯಾ, ಮಧ್ಯಾಹ್ನಸಂಧ್ಯಾ, ಸಾಯಂಸಂಧ್ಯಾ ಮತ್ತು ರಾತ್ರಿಸಂಧ್ಯಾ ಎಂದು ನಾಲ್ಕು ಬಗೆಯ ಸಂಧ್ಯಾಕಾಲವನ್ನು ನಮ್ಮ ಪೂರ್ವಜರು ಗುರುತಿಸಿದ್ದಾರೆ. ಇವುಗಳಲ್ಲಿ ನಾವು ಅತಿಮುಖ್ಯವಾಗಿ ಮೊದಲ ಮೂರು ಸಂಧ್ಯೆಯನ್ನು ಪರಿಗಣಿಸುತ್ತೇವೆ. ರಾತ್ರಿಸಂಧ್ಯೆಯನ್ನು ಯೋಗಿಗಳು ಮಾತ್ರ ಅನುಭವಿಸಬಲ್ಲರು. ಸಾಮಾನ್ಯರಿಗೆ ಅದು ಅನುಭವಿಸಲು ಕಷ್ಟಸಾಧ್ಯ. ಸಾಮಾನ್ಯರು ಕೇವಲ ಮೂರು ಸಂಧ್ಯೆಯನ್ನು ಮಾತ್ರ ಪರಿಗಣಿಸುತ್ತಾರೆ. ಇಂತಹ ಕಾಲದಲ್ಲಿ ಆಚರಿಸುವ ಪೂಜೆಯನ್ನೋ, ಆರಾಧನೆಯನ್ನೋ, ನಮಸ್ಕಾರವನ್ನೋ ‘ಸಂಧ್ಯಾವಂದನೆ’ ಎಂದು ಕರೆಯುತ್ತಾರೆ. 


ಇಂದು ನಾವು ಸಂಧ್ಯಾವಂದನೆ ಎಂದರೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ ಸೂರ್ಯನಿಗೆ ಗಾಯತ್ರಿಯನ್ನು ಹೇಳಿ ನೀರಿನಿಂದ ಮೂರು ಅರ್ಘ್ಯವನ್ನು ಕೊಡುವುದು ಎಂದು ಮಾತ್ರ ತಿಳಿದಿದ್ದೇವೆ. ಅದೂ ಸಂಧ್ಯಾವಂದನೆಯೇ. ಈ ಸಂಧ್ಯಾವಂದನೆಯಲ್ಲಿ ನಾವು ಏಕೆ ಸೂರ್ಯನನ್ನೇ ಉದ್ದೇಶವಾಗಿಟ್ಟುಕೊಂಡು ಅರ್ಘ್ಯವನ್ನಾಗಲಿ, ಜಪವನ್ನಾಗಲಿ, ಉಪಸ್ಥಾನವನ್ನಾಗಲಿ ಮಾಡುತತ್ತೇವೆ? ಎಂಬ ವಿಷಯ ನಮ್ಮಿಂದ ದೂರವಾಗಿದೆ. ಇದರ ಬಗ್ಗೆ ಕೆಲವು ಮಾಹಿತಿಯನ್ನು ತಿಳಿಯಬೇಕಾದುದು ಅನಿವಾರ್ಯವಾಗಿದೆ. 


ಸಂಧಿಕಾಲವು ಭಗವಂತನನ್ನು ಆರಾಧಿಸಲು ಅತ್ಯಂತಪ್ರಶಸ್ತಕಾಲ ಎನ್ನಲಾಗಿದೆ. ನಿಸರ್ಗದಲ್ಲಿ ಉಳಿದ ಕಾಲಕ್ಕಿಂತ ಸಂಧ್ಯಾಕಾಲವು ಬಾಹ್ಯವ್ಯಾಪರವನ್ನು ಬಿಟ್ಟು ಅಂತರ್ಮುಖರಾಗಲು ಇರುವ ಅತಿಮುಖ್ಯವಾದ ಕಾಲವಾಗಿದೆ. ಸಂಧಿಯಲ್ಲಿ ಸಮಾರಾಧನೆಯನ್ನು ಮಾಡಬೇಕು’ ಎಂಬ ಗಾದೆಮಾತು ಕನ್ನಡದಲ್ಲಿ ಪ್ರಚಲಿತವಾಗಿದೆ. ಈ ಗಾದೆಮಾತು ಇಂದು ‘ಯಾವುದೋ ಒಂದು ಕಾರ್ಯವನ್ನು ಬಿಡುವಿಲ್ಲದ ಕಾರ್ಯಗಳ ಒತ್ತಡದ ಮಧ್ಯದಲ್ಲಿ ಮಾಡಿಮುಗಿಸುವುದು’ ಎಂಬ ಸಂಕುಚಿತವಾದ ಅರ್ಥದಲ್ಲಿ ಬಳಕೆಯಾಗುತ್ತಿದೆ. ಆದರೆ ಈ ಮಾತು ‘ಅಂತರಂಗ ಸಾಧನೆಯನ್ನು ಮಾಡಲು ಬಹಳ ಉತ್ತಮವಾದ ಕಾಲ’ ಎಂಬುದನ್ನು ಗುರುತಿಸುತ್ತದೆ. 


ಇಂತಹ ಕಾಲದಲ್ಲಿ ಸಂಧ್ಯಾವಂದನೆ ಎಂಬ ಪ್ರಕ್ರಿಯೆಯನ್ನು ನಮ್ಮ ಹಿಂದಿನವರು ಮಾಡಿಕೊಳ್ಳುತ್ತಾ ಬಂದಿದ್ದಾರೆ. ಸ್ನಾನ ಮಾಡಿ, ಭಸ್ಮ ಮೊದಲಾದ ಅವರವರ ಸಂಪ್ರದಾಯಕ್ಕೆ ಅನುಗುಣವಾದ ಪುಂಡ್ರವನ್ನು ಧಾರಣೆ ಮಾಡಿ ಸೂರ್ಯದೇವನಿಗೆ ಅರ್ಘ್ಯವನ್ನು ಕೊಡುತ್ತೇವೆ. ತದನಂತರದಲ್ಲಿ ಗಾಯತ್ರೀಜಪ, ಸೂರ್ಯೋಪಸ್ಥಾನ ಮಾದಲಾದ ವಿಧಾನವನ್ನು ಆಚರಿಸುತ್ತೇವೆ. ಇದನ್ನೆಲ್ಲಾ ಸೇರಿಸಿ ಸಂಧ್ಯಾವಂದನೆ ಎನ್ನುತ್ತಾರೆ. ಇಲ್ಲಿ ಬಂದಿರುವ ಪ್ರಶ್ನೆ “ಸಂಧ್ಯಾವಂದನೆಯ ಕಾಲದಲ್ಲಿ ಏಕೆ ಸೂರ್ಯನನ್ನೇ ಧ್ಯಾನಿಸಬೇಕು?” ಎಂಬುದಾಗಿ. 

ಸೂರ್ಯನಿಂದಲೇ ಈ ಜಗತ್ತಿಗೆ ಬೆಳಕು, ಅವನಿದ್ದರೆ ಮಾತ್ರವೇ ಸಮಸ್ತ ಚರಾಚರ ಜಗತ್ತಿನ ಅಳಿವು ಮತ್ತು ಉಳಿವು. ಅವನಿಲ್ಲದೆ ಒಂದು ಹುಲ್ಲು ಕಡ್ಡಿಯೂ ಈ ಜಗತ್ತಿನಲ್ಲಿ ಇರದು. ಸೂರ್ಯ ಉದಯವಾಯಿತೆಂದರೆ ಹಕ್ಕಿಗಳು ಹಾರುತ್ತವೆ. ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಹೊರ ಹೊರಡುತ್ತವೆ. ಸಸ್ಯಗಳು ತಮ್ಮ ಹೂವುಗಳನ್ನು ಅರಳಿಸುತ್ತವೆ. ಹೀಗೆ ಸಂಪೂರ್ಣ ನಿಸರ್ಗ ತಮಸ್ಸಿನಿಂದ ಬೆಳಕಿನ ಕಡೆ ತಿರುಗುತ್ತದೆ. ಇದಕ್ಕೆ ಕಾರಣ ಸೂರ್ಯ. ಹಾಗೆಯೇ ಸಂಜೆಯಾಯಿತೆಂದರೆ ನಿಸರ್ಗದಲ್ಲಿ ಬೆಳಕು ಕಡಿಮೆಯಾಗುತ್ತಾ ಕಡಿಮೆಯಾಗುತ್ತಾ ತಮಸ್ಸಿನ ಕಡೆ ಜಾರುತ್ತದೆ. ಇಲ್ಲೂ ಸೂರ್ಯನೇ ಕಾರಣ. ರಾತ್ರಿಯಲ್ಲಿ ಅನೇಕ ದಿನ ಚಂದಿರನ ಬೆಳಕು ಕಾಣುತ್ತಾದರೂ ಅದಕ್ಕೂ ಸೂರ್ಯನೇ ಕಾರಣ. ಹೀಗೆ ಸೂರ್ಯನೇ ಎಲ್ಲಕ್ಕೂ ಆತ್ಮ. “ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ” ಎಂಬ ವೇದವಾಣಿಯು ಸೂರ್ಯನೇ ಈ ಸಮಸ್ತ ಪ್ರಪಂಚದ ಆತ್ಮಾ ಎಂದಿದೆ. ನಮ್ಮ ಶರೀರದಲ್ಲಿ ಉಳಿದ ಅಂಗಾಂಗಗಳ ಅಸ್ತಿತ್ವಕ್ಕೆ ಹೇಗೆ ಆತ್ಮನೇ ಆಧಾರನೋ ಅಂತೆಯೇ ಈ ಸೃಷ್ಟಿಗೆ ಸೂರ್ಯನೇ ಆಧಾರ. ಸೂರ್ಯ ಎಷ್ಟು ಆವಶ್ಯಕ ಎಂಬುದನ್ನು ಒಂದು ದಿನ ಸೂರ್ಯ ಬರದಿದ್ದರೆ ಆಗುವ ಆನುಹುತವನ್ನು ಊಹಿಸಿದರೆ ಗೊತ್ತಾಗುತ್ತದೆ. ಅಥವಾ ವರ್ಷಾಕಾಲದಲ್ಲಿ ಸೂರ್ಯನ ಕಿರಣ ಅಷ್ಟಾಗಿ ಬಾರದ ಕಾರಣ ಗಿಡಮರ ಬಳಿಗಳಲ್ಲಿ ಹೂವೂ ಕೂಡ ಅರಳುವುದಿಲ್ಲ. ಇದರಿಂದಲೇ ನಮಗೆ ತಿಳಿಯುವುದು ಸೂರ್ಯ ನಿಸರ್ಗಕ್ಕೆ ಎಷ್ಟು ಮುಖ್ಯ ಎಂಬುದು. 

ಸೂರ್ಯನ ಆವಶ್ಯಕತೆ ಕೇವಲ ಉಳಿದ ಪ್ರಾಣಿಗಳಿಗೆ ಮಾತ್ರವಲ್ಲ ಮನುಷ್ಯನ ಜೀವನಕ್ಕೂ ಅಷ್ಟೇ ಅನಿವಾರ್ಯ. ಹಾಗಾಗಿ ಆತ್ಮರೂಪದಲ್ಲಿರುವ ಸೂರ್ಯನನ್ನು ಉಪಾಸೀಸುವ ಪದ್ಧತಿ ಭಾರತೀಯ ಸಂಸ್ಕೃತಿಯಲ್ಲಿ ಬಂದಿದೆ. 


ಸೂಚನೆ: 23/12/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.