Saturday, January 13, 2024

ಬಕಪಕ್ಷಿಯಲ್ಲ- ಜೀವಹಂಸಗಳಾಗೋಣ (Bakapakshiyalla - Jeevahamsagalagona)

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ಹೀಗೊಂದು ಸುಭಾಷಿತ-ಒಂದು ಬಕ ಪಕ್ಷಿಗಳಿರುವ ನೀರಿನ ಆಸರೆ. ಅಲ್ಲಿಗೆ ಒಮ್ಮೆ ಸುಂದರವಾದ ಹಂಸಪಕ್ಷಿಯೊಂದು ಬಂತು. ತಮ್ಮಂತೆ ಇಲ್ಲದಿರುವ ಹೊಸದೊಂದು ಪಕ್ಷಿ ಬಂದಿದ್ದನ್ನು ಕಂಡು ಆ ಬಕಗಳಲ್ಲಿ ನಾಯಕನಾದ ಒಂದು ಬಕ ಈ ಹಂಸವನ್ನು ಪ್ರಶ್ನೆ ಮಾಡಿತು-

ಯಾರು ನೀನು? ನಿನಗೆ ಕೆಂಪಾದ ಕಣ್ಣು,ಮುಖ,ಪಾದಗಳಿವೆಯಲ್ಲಾ ಎಂದು. ನಾನು "ಹಂಸ' ಎಂದು ಹಂಸ ಉತ್ತರಿಸಿತು. ಬಕವು-ನೀನೆಲ್ಲಿಂದ ಬಂದೆ ಎಂದಿತು. ನಾನು ಮಾನಸ ಸರೋವರದಿಂದ ಬಂದೆ ಎಂದುತ್ತರಿಸಿತು ಹಂಸ. ಬಕವು ಸ್ವಲ್ಪ ಧಿಮಾಕಿನಿಂದಲೇ ಕೇಳಿತು-ಅಲ್ಲೇನಿದೆ? ಹಂಸವು ಹೇಳಿತು-ಅಲ್ಲಿ ಸುವರ್ಣಪಂಕಜಗಳ ವನ,ಅಮೃತೊಪಮವಾದ ನೀರು,ಬೇಕಾದಷ್ಟು ರತ್ನಗಳು, ಪ್ರವಾಳ, ವೈಡೂರ್ಯಗಳು ಇವೆಲ್ಲವೂ ಇವೆ. ಮತ್ತೆ ಬಕದ ಪ್ರಶ್ನೆ-ಕಪ್ಪೆಚಿಪ್ಪು ಇದೆಯೇ? ಎಂದು.ಇಲ್ಲವೆಂದಿತು ಹಂಸ. ಅದನ್ನು ಕೇಳಿ ಆ ಎಲ್ಲಾ ಬಕಗಳೂ ಹಿ..ಹಿ.. ಎಂದು ವ್ಯಂಗ್ಯವಾಗಿ ನಕ್ಕವಂತೆ. ಬಕಗಳಿಗೆ ಕಪ್ಪೆ ಚಿಪ್ಪೇ ಮಹತ್ತಾದುದು ಎಂಬ ನಿಶ್ಚಯ. ಬೇರೆ ಉನ್ನತೋನ್ನತವಾದ ವಸ್ತುಗಳ, ವಾತಾವರಣದ ಪರಿಚಯವೇ ಇಲ್ಲ. ಹಾಗೊಂದು ಇರಬಹುದೇನೋ ಎಂಬ ವಿಚಾರವನ್ನೇ ಒಪ್ಪಿಕೊಳ್ಳದ ಕೂಪಮಂಡೂಕದ ಮನಸ್ಸು. ಕಪ್ಪೆಚಿಪ್ಪು ಇಲ್ಲದ ಜಾಗ ನಿಷ್ಪ್ರಯೋಜಕ ಎಂಬ ಭಾವ.

ನಮಗೂ ನಾವು ನೋಡದ, ಅನುಭವಿಸದ ಉನ್ನತೋನ್ನತ ವಿಷಯಗಳ ಬಗ್ಗೆ ಜ್ಞಾನಿಗಳ, ಮಹರ್ಷಿಗಳ ವಿವರಣೆಯೂ ಹೀಗೇ ಆಗುವುದುಂಟು. ನಮ್ಮ ಇಂದ್ರಿಯಗಳ ಕ್ಷೇತ್ರದ ಆಚೆಗೆ ಇರುವ ಅತೀಂದ್ರಿಯವಾದ ಸತ್ಯದ ಬಗ್ಗೆ ಮಾತನಾಡಿದರೆ ನಾವೂ ಬಕಗಳಂತೆಯೇ ವ್ಯಂಗ್ಯ ಮಾಡುವುದುಂಟು. ಕಾರಣ ಇಂದ್ರಿಯಗಳ ಪ್ರಪಂಚವಷ್ಟೇ ನಮ್ಮ ಪ್ರಪಂಚ. ಭಾರತೀಯ ಮಹರ್ಷಿಗಳು ತಮ್ಮ ತಪಸ್ಯೆಯಿಂದ ಜೀವನಕ್ಕೆ ಸ್ಥೂಲ ,ಸೂಕ್ಷ್ಮ,ಪರಾ ಎಂಬ ಮೂರು ಕ್ಷೇತ್ರಗಳುಂಟು ಎಂದು ಸಾರಿದ್ದಾರೆ. ನಮ್ಮ ಇಂದ್ರಿಯಗಳಿಗೆ ಎಟುಕುವ ಹೊರ ಜೀವನವಷ್ಟೂ ಸ್ಥೂಲ. ಈ ಸ್ಥೂಲದ ಹಿಂಬದಿಯಲ್ಲಿ ಸ್ಥೂಲ ಜೀವನಕ್ಕೂ ಶಕ್ತಿಯನ್ನು ಕೊಡುತ್ತಾ ಬೆಳಗುತ್ತಿರುವ ಶಕ್ತಿಯ ಅನ್ಯಾನ್ಯ ರೂಪಗಳುಂಟು. ಆ ಶಕ್ತಿಗಳಿಂದಲೇ ಎಲ್ಲಾ ಇಂದ್ರಿಯಗಳೂ ಕೆಲಸ ಮಾಡುವುವು. ಆ ಶಕ್ತಿಗಳು ಯೋಗಿಗಮ್ಯ. ತಪೋದೃಷ್ಟಿ ಗೋಚರ.ಹೊರಗಣ್ಣಿಗೆ ಎಟುಕದು. ಅದೇ ಸೂಕ್ಷ್ಮ ಪ್ರಪಂಚ. ದೇವತಾ ಸಾಮ್ರಾಜ್ಯ. ಅದಕ್ಕೂ ಹಿಂದೆ ಈ ಎಲ್ಲಾ ದೇವತೆಗಳಿಗೂ ಚೈತನ್ಯ ಧಾರೆ ಎರೆಯುತ್ತಿರುವ ಮಹಾ ಶಕ್ತಿಯೇ ಪರಾ. ಪರಬ್ರಹ್ಮನ ನೆಲೆ. ನಮ್ಮ ಜೀವನಗಳು ಈ ಮೂರೂ ಕ್ಷೇತ್ರಗಳಿಗೆ ವಿರೋಧ ಬಾರದಂತೆ ಇದ್ದಾಗ ಸರ್ವಾಂಗಸುಂದರ. ಅಂತಹ ಜೀವನ ಶೈಲಿ ಸನಾತನ ಭಾರತೀಯರ ಜೀವನ ಶೈಲಿ. ಈ ಋಷಿದೃಷ್ಟಿ ಅರ್ಥವಾಗದಿದ್ದಾಗ ಅವರು ಹೇಳಿದ ಜೀವನ ವಿಧಾನಗಳ ಬಗೆಗೆ, ಅವರು ಅರುಹಿದ ಪರಮಾನಂದದ ಸ್ಥಿತಿಯ ಬಗೆಗೆ ಆ ಬಕಗಳಂತೆ ನಾವೂ ವ್ಯಂಗ್ಯವಾಡುತ್ತೇವೆ. ಸಮಗ್ರ ಜೀವನದ ಪರಿಚಯದ ಕೊರತೆ ಇದು. ನಾವು ಅರಿಯದ ಸೌಂದರ್ಯ ಆನಂದಗಳು ಜಗತ್ತಿನಲ್ಲಿ ಇಲ್ಲವೆಂಬ ಬಕಪ್ರಜ್ಞೆ. ಶ್ರೀರಂಗಮಹಾಗುರುಗಳು ಹೀಗೆನ್ನುತ್ತಿದ್ದರು-"ಜೀವನವೆಂದರೇನು? ಎನ್ನುವುದನ್ನರಿತು ಜೀವವನ್ನೂ ಅದರ ವಿಕಾಸಾವಸ್ಥೆಯನ್ನೂ ನೋಡದಿದ್ದರೆ ಬೇರನ್ನು ಮರೆತು ಮರದ ತುದಿಯಲ್ಲಿನ ಹಣ್ಣುಗಳನ್ನು ನೋಡುವಂತಾಗುತ್ತದೆ ನಮ್ಮ ಸ್ಥಿತಿ. ಆದ್ದರಿಂದ ಮೂಲವರಿತು ನೋಡುವ ಶ್ರದ್ಧೆ ನಮಗೆ ಬೇಕಾಗಿದೆ" ಅಂತಹ ಶ್ರದ್ಧೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ. ನಮ್ಮ ಪೂಜ್ಯ ಪೂರ್ವಜರ ನಿಜವಾದ ಅನುವಂಶೀಯರಾಗೋಣ.

ಸೂಚನೆ: 12/1/2024 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.