Saturday, January 13, 2024

ನರಕಾಸುರ (Narakasura)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)


 


ನರನಿಗೆ ಅತ್ಯಂತ ದುಃಖವನ್ನುಂಟುಮಾಡುವುದೇ ನರಕ. ಅದನ್ನು ಪ್ರಕಟಪಡಿಸುವ ಸಾಕಾರಮೂರ್ತಿಯೇ ನರಕಾಸುರ. ಭೂಮಿದೇವಿಯ ಮಗನಾದ್ದರಿಂದ 'ಭೌಮ' ಎಂದೂ ಕರೆಯಲ್ಪಡುತ್ತಿದ್ದನು. ಇವನ ರಾಜಧಾನಿ ಪ್ರಾಗ್ಜ್ಯೋತಿಷಪುರ. ಜನ್ಮತಃ ಇವನು ಅಸುರ. ಉತ್ಕಟತಪಸ್ಸಿನ ಪ್ರಭಾವದಿಂದ ಮಹಾಬಲಿಷ್ಠನಾಗಿದ್ದನು. ಜೊತೆಗೆ ಅವನ ತಾಯಿಯ ವರವೂ ಸೇರಿತ್ತು - "ನನ್ನನ್ನು ಯಾರೂ ಕೊಲ್ಲುವುದಕ್ಕೆ ಆಗದಿರಲಿ" ಎಂದು ಪ್ರಾರ್ಥಿಸಿದಾಗ, ಭೂದೇವಿಯು "ಅದು ಅಸಾಧ್ಯ, ಬದಲಿಗೆ ನನ್ನ ಅನುಮತಿ ಇಲ್ಲದೆ ಯಾರೂ ನಿನ್ನನ್ನು  ಕೊಲ್ಲದಿರಲಿ" ಎಂದು ಆಶೀರ್ವಾದ ಮಾಡಿದ್ದಳು. ತಾಯಿಯಾದವಳು ಮಗನನ್ನು ಸಂಹರಿಸಲು ಅನುಮತಿ ಖಂಡಿತ ನೀಡಲಾರಳು ಎಂಬ ವಿಶ್ವಾಸದಿಂದ ಮರಣವೇ ಇಲ್ಲವೆಂಬ ಧೈರ್ಯ ಇವನಿಗೆ !!


ಇಂತಹ ಸೌಲಭ್ಯವನ್ನು ಲೋಕಕಲ್ಯಾಣಕ್ಕಾಗಿ ಉಪಯೋಗಿಸದೆ ವರಬಲದಿಂದ ಮತ್ತನಾಗಿ ಲೋಕಕಂಟಕನಾದ. ಧರ್ಮಸೇತುವೆಯನ್ನು ರಕ್ಷಿಸಲು ಭಗವಂತನಿಂದ ನಿಯಮಿಸಲ್ಪಟ್ಟಿರುವ ದೇವತೆಗಳಿಗೇ ಕಂಟಕನಾದನು. ತನ್ನ ಅಸಾಧಾರಣ ಪರಾಕ್ರಮದಿಂದ ಅವರನ್ನು ಜಯಿಸಿದ್ದಲ್ಲದೇ ಇಂದ್ರನ ಸಾರ್ವಭೌಮಛತ್ರವು, ದೇವಮಾತೆಯಾದ ಆದಿತೀದೇವಿಯ ಕುಂಡಲಗಳು ಮುಂತಾದ ಅವರ ಚಿಹ್ನೆಗಳನ್ನು ಕಿತ್ತುತಂದನು. ಇಂದ್ರನು "ನರಕಾಸುರನ ತೀವ್ರಉಪದ್ರವದಿಂದ ನಮ್ಮನ್ನು ಕಾಪಾಡಬೇಕು" ಎಂದು ಕೃಷ್ಣನಲ್ಲಿ ಪ್ರಾರ್ಥಿಸಿಕೊಂಡ. ಇಂದ್ರನ ಮೊರೆಯನ್ನು ಕೇಳಿದ ಶ್ರೀಕೃಷ್ಣನು ಗರುಡಾರೂಢನಾಗಿ ಪ್ರಾಗ್ಜ್ಯೋತಿಷಪುರಕ್ಕೆ ಹೊರಟನು. ಗರುತ್ಮಂತ ಭಗವಂತನಿಗೆ ವಾಹನವಷ್ಟೇ ಅಲ್ಲದೇ ಮಿತ್ರನಾಗಿಯೂ ದಾಸನಾಗಿಯೂ ಧ್ವಜವಾಗಿಯೂ ಶೇಷಭೂತನಾಗಿಯೂ ಇರುವವನು. ಶ್ರೀಕೃಷ್ಣನು ಸ್ಮರಿಸಿದಮಾತ್ರಕ್ಕೇ ಅವನ ಮುಂದೆ ಕಾಣಿಸಿಕೊಳ್ಳುವನು. ಇವನ ಸಾಮರ್ಥ್ಯವೆಂದರೆ ಭೂಮಿಯಲ್ಲಿ, ಸಮುದ್ರದಲ್ಲಿ, ಸ್ವರ್ಗದಲ್ಲಿ, ಪರಮವೈಕುಂಠದಲ್ಲಿಯಾಗಲೀ ಸಂಚರಿಸಬಲ್ಲವನು. ಇಂತಹ ಗರುಡನ ಹೆಗಲೇರಿ ಸತ್ಯಭಾಮಾ ಸಮೇತನಾಗಿ ನರಕಾಸುರನ ರಾಜಧಾನಿಗೆ ಹೊರಟನು. ಸತ್ಯಭಾಮೆಯೂ ಭೂದೇವಿಯ ಅವತಾರವೇ. ಭೂಮಾತೆಯು ಅನುಮತಿ ಕೊಡುವವರೆಗೂ ಅವನಿಗೆ ಮರಣವಿಲ್ಲವೆಂಬ ವರಪಡೆದವನ ಸಂಹಾರಕ್ಕೆ ಭೂದೇವಿಯೇ ಆಜ್ಞೆಯನ್ನು ನೀಡಬೇಕು. 


ಪ್ರಾಗ್ಜ್ಯೋತಿಷಪುರವು ಗಿರಿದುರ್ಗ-ಶಸ್ತ್ರದುರ್ಗ-ಜಲದುರ್ಗ-ಆಗ್ನಿದುರ್ಗ-ವಾಯುದುರ್ಗಗಳೆಂಬ ಐದು ದುರ್ಗಗಳಿಂದ ಕೂಡಿದ್ದಾಗಿತ್ತು. ಇದು ಸಾಲದೋ ಎಂಬಂತೆ, ಮುರಾಸುರನೆಂಬ ಐದು ತಲೆಯ ರಾಕ್ಷಸನ ನೂರಾರು ಪಾಶಗಳು ಇದಕ್ಕೆ ರಕ್ಷಣೆಯನ್ನು ನೀಡುತ್ತಿದ್ದವು. ಶ್ರೀಕೃಷ್ಣನು ತನ್ನ ಗದೆಯಿಂದ ಅಲ್ಲಿಯ ಗಿರಿದುರ್ಗವನ್ನೂ, ಬಾಣಗಳಿಂದ ಶಸ್ತ್ರದುರ್ಗವನ್ನೂ ಸುದರ್ಶನ ಚಕ್ರದಿಂದ ಜಲ-ಅಗ್ನಿ-ವಾಯುದುರ್ಗಗಳನ್ನೂ ಧ್ವಂಸಮಾಡಿದನು. ಅಂತೆಯೇ ತನ್ನ ನಂದಕವೆಂಬ ಕತ್ತಿಯಿಂದ ಮುರಾಸುರನ ನೂರಾರು ಪಾಶಗಳನ್ನು ಕತ್ತರಿಸುತ್ತಾ ತನ್ನ ಅಮೋಘವಾದ ಶಂಖನಾದದಿಂದ ಅಸುರರ ಹೃದಯಗಳನ್ನೂ ಯಂತ್ರಗಳನ್ನೂ ಭೇದಿಸಿದನು. ಶಂಖದ ಭಯಂಕರ ಧ್ವನಿಯನ್ನು ಕೇಳಿ ಮುರಾಸುರನು ನಿದ್ರೆಯಿಂದೆದ್ದು ತ್ರಿಶೂಲದೊಡನೆ ಕ್ರೋಧದಿಂದ ಧಾವಿಸಿದನು. ಶೂಲವನ್ನು ಗರುತ್ಮಂತನಮೇಲೆ ವೇಗವಾಗಿ ಎಸೆದಾಗ ಕೃಷ್ಣನು ಅದನ್ನು ಚೂರುಮಾಡಿದನು. ಹೀಗೆ ಅವನ ಅನೇಕ ಅಸ್ತ್ರ-ಶಸ್ತ್ರಗಳು ವಿಫಲವಾದಮೇಲೆ ಕಡುಕೋಪದಿಂದ ಓಡಿಬರುತ್ತಿದ್ದ ಮುರಾಸುರನ ಐದೂತಲೆಗಳನ್ನು ಲೀಲಾಜಾಲವಾಗಿ ಚಕ್ರಾಯುಧದಿಂದ ಕತ್ತರಿಸಿದನು. ತಂದೆಯ ಮರಣದಿಂದ ಕೋಪಗೊಂಡ ಮುರನ ಏಳುಮಂದಿ ಪುತ್ರರು ಪ್ರಯೋಗಿಸಿದ ಅನೇಕಾನೇಕ ಆಯುಧಗಳನ್ನು ಕೃಷ್ಣನು ಛಿದ್ರಛಿದ್ರವಾಗಿಸಿ ಅವರ ತಲೆಗಳನ್ನೂ ಕತ್ತರಿಸಿದನು. 

ನಂತರ ನರಕನೇ ಕೋಪಾವೇಶದಿಂದ ಕೃಷ್ಣನನ್ನು ಎದುರಿಸಿದನು. ಮೊದಲು ಗರುತ್ಮಂತನಮೇಲೆ ನೂರಾರು ಜನರನ್ನು ಸಂಹರಿಸುವಂತಹ ತನ್ನ ಶತಘ್ನಿಯನ್ನು(ಇಂದಿನ ಬಾಂಬ್ ನಂತೆ) ಪ್ರಯೋಗಿಸಿದ. ಶ್ರೀಕೃಷ್ಣನು ತನ್ನ ತೀಕ್ಷ್ಣವಾದ ಬಾಣಗಳಿಂದ ಅದನ್ನು ವಿಫಲಗೊಳಿಸಿ ಅನೇಕಾನೇಕ ರಾಕ್ಷಸರನ್ನೂ ಮಹಾಸೇನೆಯನ್ನೂ ಸಂಹಾರ ಮಾಡಿದನು. ಗರುಡನೂಸಹ ತನ್ನ ರೆಕ್ಕೆಗಳ ಬಡಿದಾಟದಿಂದ ಅಸುರಸೈನ್ಯವನ್ನು ಸಂಹಾರ ಮಾಡುತ್ತಿದ್ದನು. ಆಗ ನರಕಾಸುರನೇ ತನ್ನ ಶಕ್ತ್ಯಾಯುಧವನ್ನು ಕೃಷ್ಣನಮೇಲೆ ಪ್ರಯೋಗಿಸಿದನು. ಅದನ್ನು ಸಹಿಸಲಾರದ ಸತ್ಯಭಾಮೆಯು ಅವನನ್ನು ಕೂಡಲೇ ಸಂಹರಿಸೆಂದು ಆಜ್ಞಾಪಿಸಿದಳು. ಆಗ ಕೃಷ್ಣನು ಆತನ ಆಯುಧದಿಂದ ಸ್ವಲ್ಪವೂ ವಿಚಲಿತನಾಗದೆ ಆತನ ತಲೆಯನ್ನು ಚಕ್ರಾಯುಧದಿಂದ ಕತ್ತರಿಸಿ ಭೂಮಿಯಲ್ಲಿ ಬೀಳಿಸಿದನು. ಅಸುರರಲ್ಲಿ ಹಾಹಾಕಾರವಾಗುತ್ತಲೇ ದೇವತೆಗಳೆಲ್ಲ ಪುಷ್ಪವೃಷ್ಟಿಸಮೇತ ಸ್ತುತಿಸಿದರು. ಭೂಮಾತೆಯೂ ಅಸುರನು ದುರಹಂಕಾರದಿಂದ ಅಪಹರಿಸಿದ್ದ ದಿವ್ಯಪದಾರ್ಥಗಳೆಲ್ಲವನ್ನೂ  ಕೃಷ್ಣನಿಗೆ ಒಪ್ಪಿಸಿ ನಮಸ್ಕರಿಸಿದಳು. ನರಕಾಸುರನಿಂದ ಸೆರೆಹಿಡಿಯಲ್ಪಟ್ಟಿದ್ದ ಹದಿನಾರು ಸಾವಿರ ಸ್ತ್ರೀಯರನ್ನೂ ಕೃಷ್ಣನು ವಿವಾಹವಾದನು.


ತತ್ತ್ವಾರ್ಥ: ಭೂದೇವಿಯ ಮಕ್ಕಳಾಗಿ ಆಕೆಯ ಸಂಪತ್ತುಗಳನ್ನು ರಕ್ಷಿಸದೆ ಆಸುರೀಪ್ರವೃತ್ತಿಯಿಂದ ಸೂರೆಯಾಡಿ  ದೇವಲೋಕ-ಮನುಷ್ಯಲೋಕದ ಕಂಟಕರಾಗುವವರೆಲ್ಲರೂ ನರಕಾಸುರರೇ. ಪ್ರಾಗ್ಜ್ಯೋತಿಷಪುರವೆಂಬುದು   ಹೊರಮುಖವಾದ ಇಂದ್ರಿಯಗಳಕಡೆ ಹರಿಯುವ ಪ್ರವೃತ್ತಿಯುಳ್ಳ ದೇಶ. ಇದು ಯೋಗಿಗಳ ನೆಲೆಯಾದ  ಪ್ರತ್ಯಗ್ಜ್ಯೋತಿಷಪುರಕ್ಕೆ-ಅಂತರ್ಮಾರ್ಗಕ್ಕೆ ವಿರುದ್ಧವಾದುದು. ಹೀಗೆ ರಾಜಧಾನಿಯ ಹೆಸರೂ ಅನ್ವರ್ಥವಾಗಿಯೇ ಇದೆ!   ಐದುತಲೆಯ ಮುರಾಸುರನೂ ಆತನ ಪಾಶಗಳೂ ಪಂಚಪ್ರಾಣಗಳನ್ನೂ ಅವುಗಳ ವೃತ್ತಿಗಳನ್ನೂ ಪ್ರತಿನಿಧಿಸುತ್ತವೆ.  ಅವನ ನಗರದ ಪಂಚದುರ್ಗಗಳು ಪಂಚಭೂತಗಳನ್ನು ಪ್ರತೀಕಿಸುತ್ತವೆ. ಸೆರೆಹಿಡಿಯಲ್ಪಟ್ಟ ಸ್ತ್ರೀಯರೇ ಹದಿನಾರುಸಾವಿರ ನಾಡಿಗಳು. ಆತನ ಕೃತ್ಯಗಳಿಂದ ಬಾಧಿತವಾದವುಗಳನ್ನು ಬಿಡಿಸಿ ಪರಮಾತ್ಮ ತನ್ನದಾಗಿಸಿಕೊಳ್ಳುವುದೇ ಆತನ ವಿವಾಹದಿಂದ ಸೂಚಿಸಲ್ಪಡುವುದು. ಹೀಗೆ ಸರ್ವಾತ್ಮನಾ ಇಂದ್ರಿಯ ಪ್ರಪಂಚದಲ್ಲೇ ಓಡಾಡುತ್ತಾ ತೀವ್ರ ಹಿಂಸಾಪ್ರವೃತ್ತಿಯುಳ್ಳವನನ್ನು ವಶಪಡಿಸುವುದು ಇಂದ್ರಿಯಗಳ ರಾಜನಾದ ದೇವೇಂದ್ರನಿಗೂ ಸಾಧ್ಯವಾಗುವುದಿಲ್ಲ. ಸಾಕ್ಷಾತ್ ಮಹಾವಿಷ್ಣುವೇ ಪ್ರಾಣಸ್ವರೂಪನಾದ ಗರುತ್ಮಂತಸಹಿತನಾಗಿ ಆಗಮಿಸಿ ಆಸುರೀಭಾವವನ್ನು ಸಂಪೂರ್ಣವಾಗಿ ನಾಶಪಡಿಸಿ ಇಂದ್ರಿಯಾತೀತಸ್ಥಿತಿಗೆ ಒಯ್ಯಬೇಕಾಗುವುದು ಎಂಬ ತತ್ತ್ವವನ್ನು ಬೋಧಿಸುವ ಸುಂದರ ಕಥೆಯಿದು.


ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  13/1/2024 ರಂದು ಪ್ರ