Monday, January 15, 2024

ವ್ಯಾಸ ವೀಕ್ಷಿತ - 71 ಸ್ವಕಾಲದಲ್ಲೇ ಚರ್ಚೆಗೆ ಗ್ರಾಸವಾಗಿತ್ತು (Vyaasa Vikshita - 71 Svakaladalle Charchege Grasavagittu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in

)

 

ಅಲ್ಲಿಗೆ, ಯುಧಿಷ್ಠಿರನು ಹೇಳಿದುದು ತಪ್ಪೆಂದು ತೋರದಿದ್ದರೂ, ದುಡುಕುವುದು ಬೇಡವೆನಿಸಿದೆ ದ್ರುಪದನಿಗೆ.  ಹೀಗೆ ಇವರುಗಳು ಸಂಶಯಗ್ರಸ್ತರಾಗಿರುವ ಘಟ್ಟದಲ್ಲೇ  ಅತ್ಯನಿರೀಕ್ಷಿತವಾಗಿ ಅಲ್ಲಿಗೆ ವ್ಯಾಸರ ಆಗಮನವಾಯಿತು. ದ್ರುಪದನು ತನ್ನ ಪರಿಸ್ಥಿತಿಯನ್ನು ತೋಡಿಕೊಂಡ.

ಎಲ್ಲರ ಅಭಿಪ್ರಾಯಗಳನ್ನೂ ವ್ಯಾಸರು ಕೇಳಿದರು. ದ್ರುಪದ-ಧೃಷ್ಟದುಮ್ನ-ಯುಧಿಷ್ಠಿರ-ಕುಂತಿ - ಇವರುಗಳು ತಮ್ಮ ತಮ್ಮಅಭಿಪ್ರಾಯಗಳನ್ನು ಮಂಡಿಸಿದರು. ಕುಂತಿಯಂತೂ ಅನೃತಕ್ಕೆ ಹೆದರತಕ್ಕವಳು. ಆಗ ವ್ಯಾಸರು ದ್ರುಪದನನ್ನು ಏಕಾಂತಕ್ಕೆ ಕರೆದುಕೊಂಡುಹೋದರು. ದ್ರೌಪದಿಯ ಹಾಗೂ ಪಂಚಪಾಂಡವರ ಪೂರ್ವಜನ್ಮವೃತ್ತಾಂತವನ್ನು ತಿಳಿಸಿದರು. ಐದು ಜನ ಇಂದ್ರರೇ ಪಂಚಪಾಂಡವರಾಗಿ ಅವತರಿಸಿರುವುದು. ಅವರಲ್ಲಿ ಶಕ್ರನೇ(ಮಹೇಂದ್ರನೇ) ಈಗ ಅರ್ಜುನನಾಗಿರುವುದು. ಸ್ವರ್ಗಶ್ರೀಯೇ ದ್ರೌಪದಿಯಾಗಿರುವುದು. ಈ ರಹಸ್ಯವನ್ನು ತಿಳಿಸಿದ್ದಲ್ಲದೆ, ದಿವ್ಯದೃಷ್ಟಿಯ್ನ್ನೂ ದ್ರುಪದನಿಗೆ ದಯಪಾಲಿಸಿದರು, ವ್ಯಾಸರು. ಆಗ ಪಾಂಡವರೈವರನ್ನೂ ಅವರ ಪೂರ್ವರೂಪದಲ್ಲಿ ದ್ರುಪದನು ತಾನೇ ಕಾಣುವಂತಾಯಿತು.

ಇಷ್ಟೇ ಅಲ್ಲದೆ ಋಷಿಕನ್ಯೆಯೊಬ್ಬಳು ತಪಸ್ಸು ಮಾಡಿ ಶಂಕರನಿಂದ ಐದು ಮಂದಿ ಪತಿಗಳನ್ನು ಪಡೆದಿದ್ದು ಅವಳೇ ದ್ರೌಪದಿಯಾಗಿರುವುದನ್ನೂ ತಿಳಿಸಿದರು. ಹೀಗಾಗಿ ಈ ಎರಡೂ ಸಂನಿವೇಶಗಳ ಹಿನ್ನೆಲೆಯಲ್ಲಿ ದ್ರೌಪದಿಯು ಪಂಚಪಾಂಡವರನ್ನು ವಿವಾಹವಾಗುವುದು ಯುಕ್ತವೇ ಆಗಿದೆಯೆಂದು ಪ್ರತಿಪಾದಿಸಿದರು.

ಹೀಗೆ ನಾವು ಕಾಣುವ ಘಟನೆಗಳ ಹಿಂದೆ ಇನ್ನೆಷ್ಟೋ ದೈವಿಕವಾದ ಘಟನೆಗಳು ಸೇರಿರುವುದೂ ಉಂಟು.

ಎಷ್ಟೇ ಆದರೂ ಸ್ವಾನುಭವವೇ ಗಟ್ಟಿ. ದ್ರೌಪದೀ-ಪಂಚಪಾಂಡವರ ಈ ಪೂರ್ವೇತಿಹಾಸವು ದ್ರುಪದನ ಸ್ವಾನುಭವಕ್ಕೇ ಗೋಚರವಾದ ಮೇಲೆ ಇನ್ನಾತನಲ್ಲಿ ಸಂಶಯವು ಉಳಿಯಲಿಲ್ಲ. ಈ ವಿವಾಹಕ್ಕೆ ಆತನು ಸಂಮತಿಸಿದನು.

ಹೀಗಾಗಿ ದ್ರೌಪದಿಯ ಪಂಚಪತಿತ್ವಕ್ಕೆ ವಿಶೇಷವಾದ ಹಿನ್ನೆಲೆಯಿರುವುದು. ಅಂದು ಕೂಡ ಇದು ಸಾಧಾರಣಚರ್ಯೆಯಲ್ಲಿ ನಿಷಿದ್ಧವೆನಿಸಿಕೊಂಡದ್ದೇ. ಎಂದೇ ಒಬ್ಬೊಬ್ಬರೂ ಈ ಬಗ್ಗೆ ಸಂದೇಹವನ್ನು ವ್ಯಕ್ತಪಡಿಸಿದ್ದವರೇ. ಕಗ್ಗಂಟಾಗಿದ್ದ ವಿಷಯವನ್ನು ಬಿಡಿಸಿಕೊಟ್ಟವರು ಮಹರ್ಷಿ ವ್ಯಾಸರು.

ಆದುದರಿಂದ ಇದೊಂದು ಸಾಧಾರಣ ಘಟನೆಯೆಂಬಂತೆ ಮಹಾಭಾರತದಲ್ಲಿ ಚಿತ್ರಿಸಿಲ್ಲ. ಮಹಾಭಾರತದ ಕಥೆಯಲ್ಲೇ, ಮುಂದೆಯೂ ಸಹ ಹಲವರು ದ್ರೌಪದಿಯ ಪಂಚಪತಿತ್ವದ ಬಗ್ಗೆ ತಮ್ಮ ಪ್ರಶ್ನೆಯನ್ನೋ ಆಕ್ಷೇಪವನ್ನೋ ವ್ಯಕ್ತಪಡಿಸಿರುವುದನ್ನು ನಾವು ನೋಡಬಹುದು. ಅಲ್ಲಿಗದು ಅಂದೂ ಪ್ರಚಲಿತವಿರಲಿಲ್ಲವೆಂದೇ.

ತಮ್ಮ ನಾರಿಯರಲ್ಲಿ ಬಹುಪತಿತ್ವದ ಆಚರಣೆಯೊಂದನ್ನು ಯಾರೋ ಗುಡ್ಡಗಾಡು ಜನರು ಇಟ್ಟುಕೊಂಡಿದ್ದಾರೆಂದೂ, ಪಾಂಡವರ ಕಾಲದಿಂದ ತಮ್ಮಲ್ಲಿ ಈ ಆಚರಣೆಯಿದೆಯೆಂದು ಅವರು ಹೇಳಿಕೊಳ್ಳುತ್ತಾರೆಂದೂ ಹೇಳಿ, ಅಷ್ಟಕ್ಕೇ ಪಾಂಡವರಿಗಿಂತಲೂ ಮೊದಲೇ ಈ ಕ್ರಮವು ಕೆಲ ಗುಂಪುಗಳಲ್ಲಿ ಪ್ರಚಲಿತವಾಗಿದ್ದಿರಬೇಕೆಂದು ಕಲ್ಪಿಸಿಕೊಂಡು ಭ್ರಮೆಪಡಬೇಕಿಲ್ಲ. ಆಧುನಿಕ ವಿಮರ್ಶಕರೂ, ಅದಕ್ಕಿಂತಲೂ ಹೆಚ್ಚಾಗಿ ಆಧುನಿಕ ಕತೆಗಾರರೂ, ಈ ಎಚ್ಚರವನ್ನು ತೆಗೆದುಕೊಳ್ಳಬೇಕಾದದ್ದು ವಿಶೇಷವಾಗಿಯೇ ಇದೆ.

ಪೌರಾಣಿಕ ಕಥೆಗಳನ್ನು ತಿರುಚುವ ಚಪಲವುಳ್ಳ ಇಂತಹ ಮಂದಿ, ಹಾಗೆ ಮಾಡುವುದರ ಬದಲು, ತಮ್ಮದೇ ಪಾತ್ರಗಳನ್ನು ಸೃಷ್ಟಿಮಾಡಿಕೊಂಡು ಹೊಸ ಕಥೆಗಳನ್ನು ಬರೆಯುವುದು ತರವೇ ವಿನಾ, ಪ್ರಾಚೀನವಾದ ಕಥೆಗಳನ್ನು ನವ್ಯ=ಪಾಶ್ಚಾತ್ತ್ಯ-ಸಿದ್ಧಾಂತಗಳ ಒತ್ತಡಗಳಿಂದಾಗಿ ತಮ್ಮ ಮೂಗಿನ ನೇರಕ್ಕೆ ವ್ಯತ್ಯಾಸ ಮಾಡುವುದು ಸರ್ವಥಾ ಸರಿಯಲ್ಲ. ಸಾಹಿತ್ಯ ಮೀಮಾಂಸೆಯಲ್ಲಿ ಮೂರ್ಧನ್ಯನೆನಿಸಿದ ಆನಂದವರ್ಧನನೇ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿರುವನು. ವಿಶೇಷವಾಗಿ ಮೂಲರಸವಿರೋಧಿಯಾದ ಕಥಾ ಪರಿವೃತ್ತಿಯನ್ನು ಕಂಠೋಕ್ತವಾಗಿ (ಎಂದರೆ ಸ್ಪಷ್ಟೋಕ್ತಿಗಳಿಂದ) ನಿಷೇಧಿಸಿರುವುದನ್ನು ಗಮನಿಸಿಕೊಳ್ಳಬೇಕು.

ಹೀಗೆ ಈ ಪಂಚೇಂದ್ರೋಪಾಖ್ಯಾನವೊಂದರಿಂದಲೇ ದ್ರೌಪದಿಯ ಪಂಚಪತಿತ್ವದ ಮರ್ಮವು ಏನೆಂಬುದು ಗೊತ್ತಾಗುವಂತಹುದು.

ಸೂಚನೆ : 14/1/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.