Sunday, January 2, 2022

ಶ್ರೀರಾಮನ ಗುಣಗಳು - 38 ಸಮುದ್ರಷ್ಟು ಗಂಭೀರ – ಶ್ರೀರಾಮ ((Sriramana Gunagalu -38 Samudradashtu Gambhira Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀರಾಮನು ಎಷ್ಟು ಗಂಭೀರವಾಗಿದ್ದ ಎಂಬುದಕ್ಕೆ ವಾಲ್ಮೀಕಿಗಳು ಬಹಳ ಆಪ್ಯಾಯಮಾನವಾದ ಉದಾಹರಣೆಯನ್ನು ಕೊಡುತ್ತಾರೆ – 'ಸಮುದ್ರ ಇವ ಗಾಂಭೀರ್ಯೇ' ಆತ ಸಮುದ್ರದಷ್ಟು ಗಂಭೀರವಾಗಿದ್ದ ಎಂದು. ಇಂದು ಗಾಂಭೀರ್ಯ ಎಂಬುದಕ್ಕೆ ನಮ್ಮ ಕಲ್ಪನೆಯೇ ಬೇರೆ. ಯಾವುದೇ ಬಗೆಯ ಚೇಷ್ಟೆ ಮಾಡಬಾರದು. ನಿಷ್ಕ್ರಿಯನಾಗಿರಬೇಕು, ಬಹಳ ನಗಬಾರದು ಇತ್ಯಾದಿ. ಹಾಗಾದರೆ ವಾಲ್ಮೀಕಿಗಳು ರಾಮನಿಗೆ ಹೇಳಿದ ಗುಣ ಯಾವ ಬಗೆಯದ್ದು? ವಾಲ್ಮೀಕಿಗಳು ಏಕೆ ಸಮುದ್ರವನ್ನು ಅವನ ಗಾಂಭೀರ್ಯಕ್ಕೆ ಹೋಲಿಸಿದ್ದಾರೆ? ನಾವು ಯಾವುದೇ ವ್ಯಕ್ತಿಗೆ 'ಸಮುದ್ರವನ್ನು ನೋಡಿದೆಯಾ?' ಎಂದು ಕೇಳಿದರೆ ಆತನ ಉತ್ತರ, 'ಹೌದು' ಎಂದು. ಆದರೆ, ಆತ ನಿಜವಾಗಿಯೂ ಸಮುದ್ರವನ್ನು ನೋಡಿದನೇ!? 'ಇಲ್ಲ'. ಅದು ಎಷ್ಟು ವಿಸ್ತಾರವಾಗಿದೆ? ಎಷ್ಟು ಆಳವಾಗಿದೆ? ಎಂಬ ಅರಿವಿನಿಂದ 'ಹೌದು' ಎಂಬ ಪದ ಬಂದಿದೆಯೇ? ಖಂಡಿತವಾಗಿಯೂ ಇಲ್ಲ. ಯಾರ ಒಬ್ಬರಿಂದಲೂ ಸಮುದ್ರದ ಆಳ-ಅಗಲವನ್ನು ಅರಿಯಲು ಸಾಧ್ಯವಿಲ್ಲ. ಅಂದರೆ ಯಾವುದರ ಆಳ ಅಗಲವನ್ನು ಅರಿಯಲು ಸಾಧ್ಯವಿಲ್ಲವೋ ಅಂತಹ ಸನ್ನಿವೇಶದಲ್ಲಿ ಸಮುದ್ರದ ಹೋಲಿಕೆಯನ್ನು ಕೊಡುತ್ತೇವೆ. ಅಂತೆಯೇ ವಾಲ್ಮೀಕಿಗಳೂ ಕೂಡ ಶ್ರೀರಾಮನ ಗಾಂಭೀರ್ಯವನ್ನು ಸಮುದ್ರಕ್ಕೆ ಹೋಲಿಸಿದ್ದಾರೆ. ಅದು ಹೇಗೆ ಶ್ರೀರಾಮನಲ್ಲಿ ಅನ್ವಿತವಾಗುತ್ತದೆ. ಅವನ ಆಳ-ಅಗಲ ತಿಳಿಯಲು ಹೇಗೆ ಕಷ್ಟ? ಗಂಭೀರವಾದ ಭಾವವನ್ನೇ 'ಗಾಂಭೀರ್ಯ' ಎನ್ನುತ್ತಾರೆ. ಗಂಭೀರ ಎಂದರೆ ಆಳ ಎಂದರ್ಥ. 

ಒಬ್ಬ ವ್ಯಕ್ತಿಗೆ ಗಾಂಭೀರ್ಯ ಎಂಬ ಗುಣವು ಬಂದರೆ ಅಲ್ಲಿ ಋಣಾತ್ಮಕಭಾವಕ್ಕೆ ಅವಕಾಶವಿರುವುದಿಲ್ಲ. ಅಲ್ಲಿ ನಿರ್ಮಲವಾದ ಅಂತಃಕರಣವಿರುತ್ತದೆ. ಆತನನ್ನು ಅರ್ಥಮಾಡಿಕೊಳ್ಳಲು ಸಾಮಾನ್ಯವ್ಯಕ್ತಿಗೆ ಕಷ್ಟಸಾಧ್ಯವೆಂದರ್ಥ. ಒಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಕೊಳ್ಳುವುದು ಎಂದರೆ, ಪರಿ-ಆಮೂಲಾಗ್ರವಾಗಿ, ಚಯ-ಅರ್ಥಮಾಡಿಕೊಳ್ಳುವುದು. ಸ್ಥೂಲ, ಸೂಕ್ಷ್ಮ ಮತ್ತು ಪರಾ ಎಂಬ ಮೂರು ಹಂತದ ಪರಿಚಯದ ಅಗತ್ಯವಿದೆ. ಯಾರಿಗೆ ಈ ಮೂರು ಹಂತದ ಜ್ಞಾನವಿರುತ್ತದೆಯೋ ಅವನ ಜ್ಞಾನದ ಹರಿವೂ ಅಷ್ಟೇ ಆಳದಲ್ಲಿ ಇರುತ್ತದೆ ಎಂದರ್ಥ. ಇದನ್ನೇ 'ಗಾಂಭಿರ್ಯ ಎಂಬ ಬುದ್ಧಿಯ ವಿಶೇಷಗುಣ ಎಂದು ಪರಿಗಣಿಸಿದ್ದಾರೆ. ಭಯ, ಶೋಕ, ಕ್ರೋಧ, ಅತಿಯಾದ ಹರ್ಷ ಇವುಗಳಿಂದ ಗಾಂಭೀರ್ಯ ಎಂಬ ಗುಣಕ್ಕೆ ಧಕ್ಕೆ ಬರುತ್ತದೆ ಎಂಬುದಾಗಿ ಅಲಂಕಾರಶಾಸ್ತ್ರದಲ್ಲಿ ಅದನ್ನು ವಿವರಿಸುವುದುಂಟು. ಅಂದರೆ ಭಯ ಶೋಕಾದಿ ಭಾವವಿಕಾರಗಳು ಇಲ್ಲದಿರುವಿಕೆಯನ್ನೇ 'ಗಾಂಭೀರ್ಯ' ಅಥವಾ ಗಂಭೀರತಾ ಎನ್ನುತ್ತಾರೆ. ಶ್ರೀರಾಮನನ್ನು ಯಾರೇ ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದರೂ ಅವನ ಆಳ-ಅಗಲವನ್ನು ತಿಳಿಯಲಾರರು. ಹಾಗಾಗಿ ಶ್ರೀರಾಮನ ಚರಿತದ ವಿಷಯದಲ್ಲಿ ಅನೇಕ ಗೊಂದಲಗಳಂತೆ ಅನ್ನಿಸುತ್ತದೆ. ಅದಕ್ಕೆ ಕಾರಣವಿಷ್ಟೆ- ಅವನ ಆಂತರ್ಯ ಅರ್ಥವಾಗದಿರುವುದು. ಶ್ರೀರಾಮನು ವನವಾಸವನ್ನು ಸ್ವೀಕರಿಸಿದ್ದಾಗಲಿ, ವಾಲಿಯನ್ನು ವಧಿಸಿರುವ ವಿಚಾರವಾಗಲಿ, ಸೀತೆಯನ್ನು ಪರಿತ್ಯಾಗ ಮಾಡಿರುವ ಸಂದರ್ಭವಾಗಲಿ, ಶಂಭೂಕವಧ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವನು ತೆಗೆದುಕೊಂಡ ನಿರ್ಣಯವೇ ನಮಗೆ ಸಾಕ್ಷಿ, ಆತ ಎಷ್ಟು ಆಳ ಎಂಬುದಕ್ಕೆ ಶ್ರೀರಂಗಮಹಾಗುರುವಿನ ಒಂದು ಮಾತು ಸಾಕು – " ಶ್ರೀರಾಮನು ಸ್ಥೂಲದೃಷ್ಟಿಗೆ ಮಾನವ, ಸೂಕ್ಷ್ಮದೃಷ್ಟಿಗೆ ದೇವತೆ, ಪರಾದೃಷ್ಟಿಗೆ ಪರಬ್ರಹ್ಮ" ಎಂದು. ಎಲ್ಲದಕ್ಕಿಂತಲೂ ಮುಖ್ಯವಾಗಿ ಶ್ರೀರಾಮನ ಮಾನವ ಅವತಾರದ ಉದ್ದೇಶವೇ ಸಾಮಾನ್ಯಬುದ್ಧಿಗೆ ನಿಲುಕದ್ದಾಗಿದೆ.

ಸೂಚನೆ : 2/1/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.