Saturday, January 29, 2022

ಯಶಸ್ಸಿಗಾಗಿ ನಿರಂತರ ಪ್ರಯತ್ನ - ಆಧುನಿಕ ಕ್ಷೇತ್ರಗಳಲ್ಲಿ ಯೋಗಸೂತ್ರದ ಪಾಲನೆ (Yashassigaagi Nirantara Prayatna -Aadhunika Kshetragalalli Yogasutrada Paalane)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


 

ಇಂದು ಉದ್ಯಮಶೀಲತೆ ಎನ್ನುವ ಪದವು ಅನೇಕ ಆಧುನಿಕ ಕ್ಷೇತ್ರಗಳಲ್ಲಿ ಕಂಡು ಕೇಳಿ ಬರುತ್ತಿರುವ ಒಂದು ಅಲೆಯಾಗಿದೆ. ಈ ಅಲೆಯಲ್ಲಿ ಹೆಚ್ಚು ಹೆಚ್ಚು ಜನ ಉದ್ಯಮಗಳನ್ನು ಪ್ರಾರಂಭಿಸುತ್ತಿದ್ದರೂ ಸಹ, ನೂತನ ಉದ್ಯಮದಲ್ಲಿ ಯಶಸ್ಸು ಕಾಣುವವರು ಬಹಳ ಸೀಮಿತ ಸಂಖ್ಯೆಯಲ್ಲಿದ್ದಾರೆ ಎಂದೇ ಹೇಳಬಹುದು. ಒಂದು ಸಂಶೋಧನಾ ಅಂಕಿ-ಸಂಖ್ಯೆಗಳ ಪ್ರಕಾರ ಹೆಚ್ಚೆಂದರೆ ಶೇಕಡ 20 ನೂತನ ಉದ್ಯಮಗಳು (Start up ventures) ಯಶಸ್ವಿಯಾಗುತ್ತವೆ ಹೊರತು ಎಲ್ಲ ಉದ್ಯಮಗಳೂ ಅಲ್ಲ. ಈ ಯಶಸ್ವಿ ಉದ್ಯಮಿಗಳ ಯಶಸ್ಸಿನ ಗುಟ್ಟೇನು? ಇವರು ತಿಳಿದೋ ತಿಳಿಯದೆಯೋ ಪತಂಜಲಿಗಳ ಒಂದು ಯೋಗ ಸೂತ್ರವನ್ನು ಪಾಲಿಸುತ್ತಾರೆ. ಈ ಸೂತ್ರ ಹೀಗಿದೆ: ಸ ತು ದೀರ್ಘಕಾಲ ನೈರಂತರ್ಯ ಸತ್ಕಾರಾಸೇವಿತೋ ದೃಢಭೂಮಿಃ ಅಂದರೆ, ಯಾವ ಯೋಗ ಸಾಧಕನು ದೀರ್ಘ ಕಾಲ, ನಿರಂತರವಾಗಿ, ಶ್ರದ್ಧಾಪೂರ್ವಕವಾಗಿ ಯೋಗ ಸಾಧನೆ ಮಾಡುತ್ತಾನೆಯೋ ಅಂತಹವನು ಯೋಗ ಸಾಧನೆಯಲ್ಲಿ ನೆಲೆ ನಿಲ್ಲುತ್ತಾನೆ ಎನ್ನುವುದು ಈ ಸೂತ್ರದ ತಾತ್ಪರ್ಯ. ಅಂದರೆ ಸ್ವಲ್ಪ ಕಾಲ ಪ್ರಯತ್ನ ಪಟ್ಟು ವೆತ್ಯಾಸ ಗೊತ್ತಾಗದೇ ಸಾಧನೆ ಬಿಡುವುದು, ಅಥವಾ ಬಿಟ್ಟು ಬಿಟ್ಟೂ ಸಾಧನೆ ಮಾಡುವುದು ಅಥವಾ ಉತ್ಸಾಹ ಶ್ರದ್ದೆ ಮುಂತಾದ ಸಾಧನೆಗೆ ಬೇಕಾದ ಸತ್ಕಾರ ಇಲ್ಲದೇ ನಿಸ್ತೇಜವಾಗಿ ಸಾಧನೆ ಮಾಡಿದರೆ ಆ ಸಾಧನೆಯಲ್ಲಿ ನೆಲೆ ನಿಲ್ಲಲು ಆಗುವುದಿಲ್ಲ. ಯೋಗ ಸೂತ್ರವು ಹೇಳುವ ಈ ಸತ್ಯವು ಯೋಗ ಸಾಧನೆಗೆ ಸೀಮಿತವಾಗಿರದೇ ಯಾವುದೇ ಲೌಕಿಕ ಸಾಧನೆಗೂ ಅನ್ವಯವಾಗುತ್ತದೆ.


ಪ್ರಸಿದ್ಧ ವಿಜ್ಞಾನಿಗಳು, ಕ್ರೀಡಾಪಟುಗಳು ಹೀಗೆ ಪರಿಶ್ರಮ ಪಟ್ಟು ಯಶಸ್ಸನ್ನು ಕಂಡಿರುವುದನ್ನು ನಾವು ಸಾಕಷ್ಟು ಕೇಳಿರುತ್ತೇವೆ. ಇದೇ ನೀತಿಯೇ ನೂತನ ಉದ್ಯಮಗಳಿಗೂ ಅನ್ವಯವಾಗುತ್ತದೆ. ಉದ್ಯಮಿಗಳು ಧ್ಯೇಯಬದ್ಧರಾಗಿ, ನಿರಂತರವಾಗಿ ಪರಿಶ್ರಮ ಪಟ್ಟಾಗ ಯಶಸ್ವಿಯಾಗುತ್ತಾರೆ. ಆದರೆ ಹಲವಾರು ಉದ್ಯಮಿಗಳು, ಉದ್ಯಮವನ್ನು ಒಂದು ಹವ್ಯಾಸದ ರೀತಿಯಲ್ಲಿ ಪರಿಗಣಿಸಿ, ಅದಕ್ಕೆ ಎಷ್ಟು ಸಮಯವನ್ನು, ಪರಿಶ್ರಮವನ್ನು ಕೊಡಬೇಕೋ ಹಾಗೆ ಕೊಡದೇ ವಿಫಲರಾಗುತ್ತಾರೆ. ಹೀಗಾಗಿಯೇ ಉದ್ಯಮಗಳಲ್ಲಿ ಬಂಡವಾಳ ಹೂಡುವವರು, ಆ ಉದ್ಯಮದ ಹಿಂದಿನ ಪರಿಕಲ್ಪನೆ, ಯೋಜನೆ ಏನಿದೆಯೋ ಅದಕ್ಕಿಂತ ಬಹು ದೊಡ್ಡ ಮಟ್ಟದಲ್ಲಿ ಆ ಉದ್ಯಮಿಗಳು ದಕ್ಷರಾಗಿದ್ದಾರೆಯೇ? ಅವರಲ್ಲಿ ದೀರ್ಘಕಾಲ ಪರಿಶ್ರಮ ಪಡುವಷ್ಟು ಹುರುಪು, ತ್ರಾಣ ಇದೆಯೇ ಎಂದು ನೋಡುತ್ತಾರೆ. ಈ ಆಧುನಿಕ ಬಂಡವಾಳಕಾರರು ಹೇಳುವಂತೆ, ಬಹಳ ಉದ್ಯಮಗಳು ವಿಫಲವಾಗುವುದು ಅದಕ್ಷ ಕಾರ್ಯ ನಿರ್ವಹಣೆಯಿಂದ. ಹೀಗಾಗಿ ಕಾರ್ಯನಿರ್ವಹಣಾ ದಕ್ಷತೆಯೇ ಬಂಡವಾಳಕಾರರು ಉದ್ಯಮಿಗಳನ್ನು ಆಯ್ಕೆ ಮಾಡುವಲ್ಲಿ ನೋಡುವ ಮೊದಲ ಗುಣ.


ಈ ಕಾರ್ಯನಿರ್ವಹಣಾ ದಕ್ಷತೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಾಮಾಯಣ, ಮಹಾಭಾರತದ ಕಾಲದಿಂದಲೂ ರೂಢಮೂಲವಾಗಿದೆ. ರಾಮಾಯಣದಲ್ಲಿ, ದಶರಥನ ಆಳ್ವಿಕೆ ಎನ್ನುವ ಅಧ್ಯಾಯದಲ್ಲಿ, ಆ ರಾಜ್ಯದ ಜ್ಞಾನಿಗಳು, ತಪಸ್ವಿಗಳು, ವಿದ್ವಾಂಸರ ವಿವರಣೆಯಿಂದ ಹಿಡಿದು, ಅಲ್ಲಿನ ಮಂತ್ರಿಗಳ, ಸೇನಾಪತಿಗಳ ದಕ್ಷತೆ, ಸುರಕ್ಷಾ ವ್ಯವಸ್ಥೆ, ಖನಿಜ, ಧಾನ್ಯ, ಪಶು ಸಂಪತ್ತುಗಳ ನಿರ್ವಹಣೆಯಿಂದ ಹಿಡಿದು ಅಂಗಡಿಗಳಲ್ಲಿ ಸಾಮಾನುಗಳು ಹೇಗೆ ಅಂದವಾಗಿ ಜೋಡಿಸಲ್ಪಟ್ಟಿರುತ್ತಿತ್ತು, ರಸ್ತೆಗಳಿಗೆ ಧೂಳು ಏಳದಂತೆ ನೀರು ಚಿಮುಕಿಸುವ ವ್ಯವಸ್ಥೆ ಇತ್ತು ಎನ್ನುವಂತಹ ಚಿಕ್ಕ ಚಿಕ್ಕ ವಿವರಗಳೂ ಇವೆ. ಇನ್ನು ಮಹಾಭಾರತದಲ್ಲಿ, ಬರಡು ಬಂಜರು ಭೂಮಿಯನ್ನು ಪಾಂಡವರು ಕೆಲವೇ ತಿಂಗಳುಗಳಲ್ಲಿ ಸುಂದರವಾದ ಇಂದ್ರಪ್ರಸ್ಥ ರಾಜ್ಯವನ್ನಾಗಿ ಪರಿವರ್ತಿಸಿದರು ಎನ್ನುವುದು ಪ್ರಸಿದ್ಧವಾದ ವಿಷಯವೇ ಆಗಿದೆ. ಇನ್ನು ನಮಗೆ ಕಾಲ, ದೇಶ ಎರಡರಲ್ಲೂ ಹತ್ತಿರವಾಗಿರುವ ಉದಾಹರಣೆಗಳನ್ನು ತೆಗೆದುಕೊಳ್ಳುವುದಾದರೆ, ಹಂಪಿಯ ಕಲ್ಲಿನ ಕೋಟೆ ಕೊತ್ತಲುಗಳು, ಚಿತ್ರದುರ್ಗದ ಕಲ್ಲಿನ ಕೋಟೆ, ಬೇಲೂರು, ಹಳೇ ಬೀಡಿನ ದೇವಾಲಯಗಳು ಹೀಗೆ ಹತ್ತು ಹಲವಾರು ರೀತಿಯಲ್ಲಿ ನಮ್ಮ ಪೂರ್ವಜರ ಕಾರ್ಯದಕ್ಷತೆಯ ನಿದರ್ಶನಗಳಿವೆ.


ಹೀಗೆಲ್ಲಾ ನಮ್ಮ ರಕ್ತದಲ್ಲೇ ಕಾರ್ಯದಕ್ಷತೆಯು ಇದ್ದರೂ ಸಹ ಏಕೆ ಶೇಕಡಾ 80 ರಷ್ಟು ನೂತನ ಉದ್ಯಮಿಗಳಲ್ಲಿ ಕಾರ್ಯನಿರ್ವಹಣಾ ದಕ್ಷತೆಯಲ್ಲಿ ಕೊರತೆ ಕಂಡು ಬರುತ್ತದೆ? ಇದಕ್ಕೆ ಹಲವಾರು ಕಾರಣಗಳಿರಬಹುದಾದರೂ ಎದ್ದು ತೋರುವ ಒಂದು ಕಾರಣವೆಂದರೆ, ನಾವು ಭಾರತೀಯ ಸಂಸ್ಕೃತಿಯ ಶಿಸ್ತು, ಸಂಯಮದ ಜೀವನದಿಂದ ದೂರ ಸರಿಯುತ್ತಿರುವುದೇ ಆಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಯೋಗ, ಧಾರ್ಮಿಕ ನಿತ್ಯಕರ್ಮಗಳು, ನಿಯತವಾದ ದೈಹಿಕ ಪರಿಶ್ರಮ, ಮನೆಗೆಲಸ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳದೇ ಮೋಜು ಮಸ್ತಿಯಲ್ಲಿಯನ್ನು ಮೈಗೂಡಿಸಿಕೊಳ್ಳುತ್ತಾರೆ. ಒಮ್ಮೆ ಪರಿಶ್ರಮ ಪಡದೇ ಇರುವುದು ಅಭ್ಯಾಸವಾಗಿಬಿಟ್ಟರೆ, ನಂತರ ಸಮಯ ಬಂದಾಗ ಇದು ಮೈಗೂಡುವುದು ಕಷ್ಟ. ಸಮಯ ಇದ್ದಾಗ ಮೊಬೈಲ್ ಆಟಗಳು, ಅಂತರ್ಜಾಲದ ಧಾರಾವಾಹಿಗಳು, ಚಲನ ಚಿತ್ರಗಳು, ವಾರಾಂತ್ಯದಲ್ಲಿ ಮೋಜಿನ ಪ್ರಯಾಣ ಇವುಗಳಿಗೆ ಮೈಗೊಟ್ಟಾಗ, ಅದು ನಮ್ಮ ಕಾರ್ಯನಿರ್ವಹಣ ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಶ್ರದ್ಧೆಯನ್ನು ಕಡಿಮೆ ಮಾಡುತ್ತದೆ.


ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ಪೂರ್ವಜರ ದಿನಚರಿಯನ್ನು ಗಮನಿಸಿದರೆ, ರಾಮಾಯಣದಲ್ಲಿ, ಚಿತ್ರಕೂಟದಲ್ಲಿ ಶ್ರೀರಾಮಚಂದ್ರನು ಭರತನ ಯೋಗಕ್ಷೇಮವನ್ನು ವಿಚಾರಿಸಿ ನೀನು ಹೀಗೆಲ್ಲಾ ಮಾಡುತ್ತಿದ್ದೀಯಾ ತಾನೇ ಎಂದು ಒಂದು ಪಟ್ಟಿಯನ್ನು ಕೊಡುತ್ತಾನೆ. ಅದರಲ್ಲಿ ಬೆಳಿಗ್ಗೆ 3:30 ಗೆ ಎದ್ದು ಧ್ಯಾನ, ಪೂಜೆ ಇತ್ಯಾದಿ ನಿತ್ಯಕರ್ಮಗಳಿಂದ ಪ್ರಾರಂಭಿಸಿ, ಗುರುಹಿರಿಯರ ವಂದನೆ, ನಂತರ ಮಂತ್ರಿ, ಸೇನಾಪತಿಗಳ ಜೊತೆ ಸಭೆ, ನಂತರ ಪ್ರಜೆಗಳ ಅಹವಾಲುಗಳ ವಿಮರ್ಶೆ ಇತ್ಯಾದಿ ಬಹಳ ದಕ್ಷವಾದ ದಿನಚರಿ ಕಂಡು ಬರುತ್ತದೆ. ಅಂದರೆ ಯೋಗ ಸಾಧನೆಯಿಂದ ದಿನಚರಿ ಪ್ರಾರಂಭಿಸಿ, ನಂತರ ಪ್ರಾಪಂಚಿಕ ವ್ಯವಹಾರದಲ್ಲಿಯೂ ದಕ್ಷತೆಯನ್ನು ಮೆರೆಯುತ್ತಿದ್ದರು ಎನ್ನುವುದು ಕಂಡು ಬರುತ್ತದೆ.


ಯೋಗ ಸಾಧನೆಯು ನಮ್ಮ ಮೈಮನಗಳನ್ನು ಸುಟಿಗೊಳಿಸಿ ಪ್ರಾಪಂಚಿಕ ವ್ಯವಹಾರಗಳಲ್ಲಿ ದಕ್ಷರಾಗಿರುವುದಕ್ಕೆ ಅನುವು ಮಾಡಿಕೊಡುತ್ತದೆ. ಇದೇ ಇಂದಿನ ಪೀಳಿಗೆಯವರಾದ ನಾವು ನಮ್ಮ ಪೂರ್ವಜರಿಂದ ಕಲಿಯಬೇಕಾದ ಪಾಠ. ಇಂದಿನ ಪೀಳಿಗೆಯು ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾಗಿ ನಮ್ಮ ಸಂಸ್ಕೃತಿಯ ಅಭ್ಯಾಸಗಳನ್ನು ಕೈ ಬಿಡುತ್ತಿದ್ದಾರೆ. ಆದರೆ ಯಾವ ಅಭ್ಯಾಸಗಳನ್ನು ಕೈಬಿಡುತ್ತಿದ್ದಾರೆಯೋ ಅವೇ ಪಶ್ಚಿಮ ಜಗತ್ತಿನ ಉದ್ಯಮಿಗಳ ಯಶಸ್ಸಿಗೂ ಕೀಲಿ ಕೈ ಎನ್ನುವುದು ಯುವ ಪೀಳಿಗೆಗೆ ತಿಳಿಯುತ್ತಿಲ್ಲ. ಪಾಶ್ಚಾತ್ಯ ಜಗತ್ತಿನ ಉದ್ಯಮಿಗಳು ಅವರ ಅರ್ಥ ಸಂಪಾದನೆಗಾಗಿ ನಮ್ಮ ಮುಂದೆ ಇಂದ್ರಿಯ ಆಕರ್ಷಣೆಗಳನ್ನು ಒಡ್ಡುತ್ತಾರೆ. ಆದರೆ ಆ ಯಶಸ್ವೀ ಉದ್ಯಮಿಗಳು ತಾವು ಮಾತ್ರ ವ್ಯಸನಿಗಳಾಗದೇ ತಮ್ಮ ಕಾರ್ಯ ನಿರ್ವಹಣಾ ದಕ್ಷತೆಯನ್ನು ಕಾಪಾಡಿಕೊಂಡಿರುತ್ತಾರೆ.

ಆದುದರಿಂದ ನಾವು ಇಂದಿನ ಪಾಶ್ಚಾತ್ಯ ಸಂಸ್ಕೃತಿಯು ಒಡ್ಡುವ ಆಕರ್ಷಣೆಗಳಿಗೆ ದಾಸರಾಗದೇ, ಅವರ ಔದ್ಯಮಿಕ ಯಶಸ್ಸಿಗೂ ಕಾರಣವಾಗಿರುವ ಪರಿಶ್ರಮವನ್ನು ಆದರ್ಶವಾಗಿಟ್ಟುಕೊಳ್ಳುವುದು ಉಚಿತ. ಯೋಗ ಸೂತ್ರವು ಹೇಳುವ ದೀರ್ಘಕಾಲಿಕ, ನಿರಂತರ, ಸತ್ಕಾರದೊಡಗೂಡಿದ ಪರಿಶ್ರಮವನ್ನು ಯೋಗಸಾಧನೆಯಲ್ಲಿ ತೊಡಗಿಸಿ, ನಂತರ ವ್ಯಾವಹಾರಿಕ ಪ್ರಪಂಚದಲ್ಲಿಯೂ ತೊಡಗಿಸಿದರೆ, ಯೋಗ ಹಾಗೂ ಪ್ರಾಪಂಚಿಕ ವ್ಯವಹಾರಗಳೆರಡರಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ.


ಸೂಚನೆ : 29/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.