Sunday, January 9, 2022

ದೀಪಾವಳಿ-3 - ನರಕಚತುರ್ದಶಿಯ ಸಂಕೇತಗಳು (Deepaavali-3 - Narakachaturdashiya Samketagalu)

ಕನ್ನಡ ಅನುವಾದ : ಎಂ. ಆರ್. ಭಾಷ್ಯಮ್

ಮೂಲ ಆಂಗ್ಲಭಾಷೆ : ಡಾ. ಮೋಹನ್ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)



ಈ ಲೇಖನದಲ್ಲಿ ನರಕಚತುರ್ದಶಿ ಹಾಗು ಲಕ್ಷ್ಮೀ ಪೂಜೆಯ ಆಚರಣೆಗಳಲ್ಲಿ  ಅಡಗಿರುವ ಆಳವಾದ ಸಂಕೇತಗಳನ್ನು ಅನ್ವೇಷಿಸೋಣ.

ನರಕಾಸುರನ ಮೇಲಿನ ವಿಜಯ

ನರಕಾಸುರ ಗಾಢವಾದ ಪಾಪಗಳ,  ನರಕದ ಮೂರ್ತಸ್ವರೂಪ.  ಆತ ಸಮೃದ್ಧಿಯನ್ನೊಸಗುವ  ಪೃಥ್ವಿ  ಮಾತೆಯ ಪುತ್ರ. ಆದರೂ, ಅವನು, ದೇವತೆಗಳಮೇಲೆ ಲಗ್ಗೆಹತ್ತಿ, ದೇವಮಾತೆ ಅದಿತಿಯ ಆಭರಣಗಳನ್ನು ಅಪಹರಿಸುತ್ತಾನೆ. 'ಪೃಥ್ವಿ' ಯನ್ನು ಪ್ರತಿನಿಧಿಸುವ ಅರ್ಥ-ಸಂಪತ್ತನ್ನು ಗಳಿಸಿ -ಅನುಭವಿಸುವ  ಯತ್ನಗಳು, ಆಂತರಿಕ ಏಳಿಗೆಗೆ, ದಿವಿಯೆಡೆಗೆ, ಪರಂಜ್ಯೋತಿಯತಾಣಕ್ಕೆ ನಮ್ಮ ಪ್ರಯಾಣದ ಪ್ರಯತ್ನಗಳಿಗೆ  ವಿಘ್ನಗಳನ್ನು ತರಬಾರದೆಂಬ ನಮ್ಮ ಹಿಂದಿನ ಮಾತನ್ನು ನೆನೆಸಿಕೊಳ್ಳುವ. ನರಕಾಸುರನ ಈ ಕೃತ್ಯಗಳು, ಧರ್ಮದ ತತ್ವಗಳಿಗೆ ತದ್ವಿರುದ್ಧ  ಮತ್ತು ಆ ನಡತೆ, ನೇರವಾಗಿ ನರಕಕ್ಕೆ ಕೊಂಡೊಯ್ಯುತ್ತದೆ. ಆತ, ಅಂಕೆ -ಜವಾಬ್ದಾರಿಗಳಿಲ್ಲದ ಭೋಗ-ಕಾಮಾಸಕ್ತಿಯ ಮೂರ್ತರೂಪ, ಅಲ್ಲ, ನರಕದ ಸಾಕ್ಷಾತ್ ಸ್ವರೂಪವೇ ಸರಿ. ಆತನ ರಾಜಧಾನಿ ಪ್ರಾಗ್- ಜ್ಯೋತಿಷಪುರ.  ಅಂದರೆ, ಪೂರ್ವದಿಕ್ಕಿನಲ್ಲಿರುವ ಬೆಳಕಿನ ನಗರ. ಭಾರತತೀಯಪದ್ಧತಿಯಂತೆ, ಪೂರ್ವದಿಕ್ಕು -  ದಿನ, ಚಟುವಟಿಕೆ ಮತ್ತು ವಿಕಾಸಗಳನ್ನು ಪ್ರತಿನಿಧಿಸುತ್ತದೆ. ನಮ್ಮ ಹೊರಚಟುವಟಿಕೆಗಳನ್ನು  ವಿಸ್ತರಿಸುವ ಸಮಯವೂ ಸಹ.  ಇದಕ್ಕೆ ತದ್ವಿರದ್ಧವಾಗಿ, ಪ್ರತ್ಯಗ್ -ಜ್ಯೋತಿಷಪುರ-ಪಶ್ಚಿಮ, ಚಟುವಟಿಕೆಗಳ ವಿರಾಮ, ಅಂತರ್ಮುಖತೆ,  ಸಮಾಧಿಯ ಕಡೆಗಿನ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಪ್ರಾಗ್- ಜ್ಯೋತಿಷಪುರವು  ಇಂದ್ರಿಯಗಳ ತೃಪ್ತಿಪಡಿಸಲಾಗದ, ತಣಿಸಲಾಗದ, ಅಸಂಖ್ಯಾತ  ಆಸೆಗಳ ತೀರಿಸುವ ಪ್ರಯತ್ನವನ್ನು ಬಿಂಬಿಸುತ್ತದೆ. ತದ್ವಿರುದ್ಧವಾಗಿ, ಪ್ರತ್ಯಗ್ -ಜ್ಯೋತಿಷಪುರ ನಮ್ಮಲ್ಲಿ ಬೆಳಗುವ ಆಂತರಿಕ ಜ್ಯೋತಿಯ ಅನ್ವೇಷಣೆಯನ್ನು ಸೂಚಿಸುತ್ತದೆ. ನರಕಾಸುರನ ಸರದಾರ, ಐದುಹೆಡೆಯ ಮುರ. ಆತನ ರಾಜಧಾನಿ ಐದು ಪ್ರಾಕಾರಗಳಿಂದ ಸುತ್ತುವರಿದಿದೆ  - ಕೋಟೆ, ನೀರಿನ ಕಂದಕಗಳು, ಬೆಂಕಿ, ಗಾಳಿ ಮತ್ತು ಕುಣಿಕೆಗಳು (noose). ಇದೆಲ್ಲವೂ, ನರಕಾಸುರನ ಪಾಂಚಭೌತಿಕತತ್ವಗಳಿಂದ  ನಿರ್ಮಿತವಾದ ವಸ್ತುಗಳ ಮೇಲಿನ ಆಸಕ್ತಿಯಯನ್ನು ತೋರಿಸುತ್ತದೆ. ಕೇವಲ ಭೌತಿಕ ವಸ್ತುಗಳೆಡೆಗೇ ಮುಖಮಾಡಿದ ಮಾನಸಿಕ ಸ್ಸ್ಥಿತಿಯನ್ನು, ಯೋಗೇಶ್ವರನಾದ ಕೃಷ್ಣನಲ್ಲಿ ನೆನೆಹಾಕಿ ಸರಿಪಡಿಸಬಹುದು. ನರಕಾಸುರನನ್ನು ವಧಿಸಿ, ಕೃಷ್ಣ, ಆತನು  ಕಾರಾಗೃಹದಲ್ಲಿ ಬಂಧಿಸಿದ ೧೬೦೦೦ ಕನ್ಯೆಯರನ್ನು ಮುಕ್ತಗೊಳಿಸಿ, ವಿವಾಹವಾಗುತ್ತಾನೆ. ಇದು, ಯೋಗಕ್ಕೆ ಬೇಕಾದ ನಾಡೀಮುಖಗಳನ್ನು  ತೆರೆದು,  ಅರಳಿಸುವ ಕೆಲಸದ ಅನ್ಯೋಕ್ತಿ.

 

ನರಕಚತುರ್ದಶಿಯ ಆಚರಣೆ  ಮತ್ತು ಲಕ್ಷ್ಮೀಪೂಜೆ

ಈ ಮೇಲೆ ತಿಳಿಸಿದ  ತತ್ವಗಳನ್ನು ಮನಸ್ಸಿನಲ್ಲಿರಿಸಿಕೊಳ್ಳುವ. ನರಕ ಚತುರ್ದಶಿಯ ಆಚರಣೆ ಉಷಃಕಾಲದಮೊದಲು,    ಸ್ತೋತ್ರ- ಧ್ಯಾನಗಳೊಡನೆ ಮೊದಲಾಗುತ್ತದೆ. ನಂತರ ಸಾಂಪ್ರದಾಯಿಕ ಅಭ್ಯಂಜನ. ಇದು  ಅಲಕ್ಷ್ಮಿಯನ್ನೂ , ಮೃತ್ಯುವನ್ನೂ  ತಡೆಗಟ್ಟುತ್ತದೆ  ಎಂದು ಶಾಸ್ತ್ರಗಳು ತಿಳಿಸುತ್ತವೆ . ಈ ಅಭ್ಯಂಜನಸ್ನಾನ, ವೈಜ್ಞಾನಿಕವಾಗಿದೆಯೆಂದೂ, ಆರೋಗ್ಯ ಮತ್ತು ದೀರ್ಘಾಯುಸ್ಸನ್ನು ಒದಗಿಸಿ, ಯೋಗ ಮಾರ್ಗದ ವಿಘ್ನಗಳನ್ನು ಪರಿಹಾರಮಾಡುತ್ತದೆಯೆಂದೂ  ಶ್ರೀರಂಗ ಮಹಾಗುರುಗಳು ಶ್ಲ್ಯಾಘಿಸುತ್ತಿದ್ದರು. ಅವರು, ಅದೆಷ್ಟೋಬಾರಿ, ಇದರ  ತಂತ್ರ- ಸೂಕ್ಷ್ಮಗಳನ್ನು ಪ್ರಯೋಗಿಕವಾಗಿ ತಮ್ಮ ಶಿಷ್ಯರಿಗೆ ತೋರಿಸುತ್ತಿದ್ದರು. ನಸುಕಿನಲ್ಲಿ ಮಾಡುವ ಈ ಅಭ್ಯಂಜನ, ನಮ್ಮ ಮನೋ-ಬುದ್ಧಿಗಳನ್ನು ಮೇಲೇರಿಸುವುದರಿಂದ ಇದನ್ನು ಗಂಗಾಸ್ನಾನವೆಂದು ಕರೆಯುತ್ತೇವೆ. ಕೆಳಲೋಕಗಳಿಗೆ ಜಾರಿದ ಅಥವಾ ಊರ್ಧ್ವಲೋಕಗಳನ್ನು ಅರಸುವ ಪಿತೃಗಳಿಗೆ ದಾರಿತೋರಿಸಲು ಅಂದು ಸಂಜೆ ದೀವಟಿಗೆ- ಪಂಜುಗಳನ್ನು ಬೆಳಗಿಸಿ, ಆಕಾಶದೆಡೆಗೆ  ತೋರುತ್ತಾರೆ. ಆಕಾಶಕ್ಕೆ ಬೆಳಕು ಚೆಲ್ಲುವ ಪಟಾಕಿಗಳೂ ಈ ಅಭಿಪ್ರಾಯಕ್ಕೆ ಹೊಂದಿಕ್ಕೊಳ್ಳುತ್ತವೆ.

ಅಮಾವಾಸ್ಯೆಯ ಸ್ವಾಗತವೂ, ಸಾಂಪ್ರದಾಯಿಕ ಸ್ನಾನದೊಂದಿಗೆ. ಮೊದಲೇ ತಿಳಿಸಿದಂತೆ, ಅಂದು ಶಾಸ್ತ್ರೋಕ್ತವಾಗಿ  ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ. ವರ್ತಕ - ವ್ಯಾಪಾರಿಗಳಿಗೆ ಅಂದು ಸಂಜೆ ನಡೆಯುವ ಲಕ್ಷ್ಮೀಪೂಜೆ, ಹೊಸ ಆರ್ಥಿಕ ವರ್ಷಕ್ಕೆ ನಾಂದಿ. ಧನಕ್ಕೆ ಒಡೆಯನಾದ ಕುಬೇರನನ್ನೂ ಅಂದು ಅರ್ಚಿಸುವ   ವಾಡಿಕೆ ಉಂಟು. ಪವಿತ್ರವಾದ ಆ ರಾತ್ರಿ, ಭಗವಂತನ ನಿರಂತರ ಸ್ತೋತ್ರ - ಪೂಜೆಗಳೊಡನೆ ಪರಿಸಮಾಪ್ತಿಗೊಳ್ಳುತ್ತದೆ.

ಸೂಚನೆ : 15/11/2020 ರಂದು ಈ ಲೇಖನವು ಆಂಗ್ಲ ಭಾಷೆಯಲ್ಲಿ  AYVM blogs ಪ್ರಕಟವಾಗಿದೆ.