Thursday, January 6, 2022

ಪದಾರ್ಥದ ಅಪೇಕ್ಷೆ ಹೇಗಿರಬೇಕು? (Padarthada Apekshe Hegirabeku?)

ಲೇಖಕಿ: ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)


ಒಮ್ಮೆ ಒಬ್ಬರು ತಪಸ್ವಿಗಳು ತಮ್ಮ ಆಶ್ರಮದ ಬಳಿ ಅತ್ಯಂತ ಕಠಿಣವಾದ ತಪಶ್ಚರ್ಯೆಯಲ್ಲಿ ನಿರತರಾಗಿದ್ದರು. ಅವರ ತಪೋಮಹಿಮೆಯಿಂದ ತನ್ನ ಸ್ಥಾನಕ್ಕೆ ಕುತ್ತು ಬರಬಹುದೆಂಬ ಭೀತಿಯಿಂದ ಇಂದ್ರನು ಹೇಗಾದರೂ ಮಾಡಿ ಅವರ ತಪಸ್ಸಿಗೆ ಭಂಗವನ್ನುಂಟುಮಾಡಬೇಕೆಂಬ ಮನಸ್ಸಿನಿಂದ ಒಂದು ಉಪಾಯವನ್ನು ಮಾಡುತ್ತಾನೆ. ತಾನು ಮಾರುವೇಷದಲ್ಲಿ ಅವರ ಬಳಿ ಬಂದು ಅವರಲ್ಲಿ 'ಮುನಿವರ್ಯರೇ, ನಾನು ಅನ್ಯ ಕೆಲಸದ ನಿಮಿತ್ತ ಬೇರೆಡೆಗೆ ತೆರಳಬೇಕಾಗಿದೆ. ಅಲ್ಲಿಗೆ ಈ ಆಯುಧವನ್ನು ಕೊಂಡೊಯ್ಯುವಂತಿಲ್ಲ. ನಾನು ಬರುವವರೆಗೂ ಈ ನನ್ನ ಆಯುಧವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತಾನೆ.

ಮೊದಲಿಗೆ, ತಪಸ್ವಿಗಳಿಗೆ ಆ ಜವಾಬ್ದಾರಿ ಇಷ್ಟವಿಲ್ಲದಿದ್ದರೂ ಅವನ ಒತ್ತಾಯಕ್ಕೆ ಮಣಿದು ತಾವು ಆಯುಧವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಒಪ್ಪಿಕೊಳ್ಳುತ್ತಾರೆ. ಆಗ ಇಂದ್ರನು ಇನ್ನು ತನ್ನ ಮನೋರಥ ಪೂರ್ಣವಾದಂತೆ ಎಂದುಕೊಂಡು ಅಲ್ಲಿಂದ ತೆರಳುತ್ತಾನೆ. ತಪಸ್ವಿಗಳ ಮೇಲೆ ಆಯುಧವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕೆಂಬ ಜವಾಬ್ದಾರಿ ಇದ್ದುದರಿಂದ ಅವರು ಯಾವಾಗಲೂ ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವಂತೆ ಆಗುತ್ತದೆ, ತಪಸ್ಸಿಗೆ ಕುಳಿತಾಗಲೂ ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ.  ಹಾಗಾಗಿ ಹಿಂದಿನಂತೆ ಏಕಾಗ್ರತೆಯಿಂದ ತಪಸ್ಸನ್ನು ಮಾಡಲು ಸಾಧ್ಯವಾಗುವುದಿಲ್ಲ. ಅವರ ಗಮನವೆಲ್ಲ ಆಯುಧದ ಮೇಲೆಯೇ ಇರುತ್ತದೆ, ಮನಸ್ಸು ಚಾಂಚಲ್ಯಕ್ಕೆ ಒಳಗಾಗುತ್ತದೆ. ಒಮ್ಮೆ ಆಯುಧದ ಹರಿತವನ್ನು ಪರೀಕ್ಷಿಸೋಣ ಎಂದುಕೊಂಡು ತಮ್ಮ ಆಶ್ರಮದಲ್ಲಿ ಬೆಳೆದ ಒಂದು ಬಳ್ಳಿಯ ಮೇಲೆ ಅದನ್ನು ಪ್ರಯೋಗಿಸುತ್ತಾರೆ ಅದು ಒಂದೇ ಏಟಿಗೆ ಎರಡು ತುಂಡಾಗುತ್ತದೆ ಹಾಗೆಯೇ ಕೆಲವು ಗಿಡಮರಗಳ ಮೇಲೆಯೂ ಪ್ರಯೋಗಿಸಿ ಎಷ್ಟೊಂದು ಹರಿತವಾಗಿದೆ ಎಂದು ಸಂತೋಷಿಸುತ್ತಾರೆ,  ಅಷ್ಟಕ್ಕೇ ನಿಲ್ಲದೇ ಆಶ್ರಮದ ಬಳಿ ಬಂದ ಮೃಗಗಳ ಮೇಲೂ ಅದನ್ನು ಪ್ರಯೋಗಿಸಿ ಅವುಗಳ ಹತ್ಯೆಗೂ ಕಾರಣರಾಗುತ್ತಾರೆ. ಸಾತ್ವಿಕ ತಪಸ್ವಿಗಳಾಗಿದ್ದವರು ತಮ್ಮ ಪ್ರಕೃತಿಗೆ ಹೊಂದದ ಒಂದು ಪದಾರ್ಥವನ್ನು ತಮ್ಮ ಬಳಿ ಇಟ್ಟುಕೊಂಡ ಪರಿಣಾಮ ಒಬ್ಬ ದುಷ್ಟವ್ಯಾಧರಾಗಿ ಪರಿವರ್ತನೆಗೊಳ್ಳುತ್ತಾರೆ.

ಪದಾರ್ಥ ಸಂಗ್ರಹಣೆಯ ಬಗ್ಗೆ ಇರಬೇಕಾದ ಎಚ್ಚರಿಕೆಯನ್ನು ಈ ಕಥೆಯು ತಿಳಿಸುತ್ತದೆ. ನಮಗೆ ಇಷ್ಟವಾಯಿತು; ಆಕರ್ಷಣೆ ಉಂಟಾಯಿತು ಎಂಬ ಮಾತ್ರಕ್ಕೆ ಆ ಪದಾರ್ಥದಿಂದ ಉಂಟಾಗುವ ಪರಿಣಾಮವನ್ನು ಪೂರ್ವಾಪರ ಯೋಚಿಸದೆ ಅದನ್ನು ಸಂಗ್ರಹಿಸುವುದು ಮತ್ತು ಅದರ ಪ್ರಭಾವಕ್ಕೆ ಒಳಗಾಗುವುದು ಅಪಾಯವೇ ಸರಿ.

"ಶರೀರಮಾದ್ಯಂ ಖಲು ಧರ್ಮ ಸಾಧನಂ" ಎಂಬಂತೆ ಧರ್ಮ ಸಾಧನೆಗಾಗಿಯೇ ಈ ಶರೀರವು ಬಂದಿರುವುದು;  ಅವರವರ ಪ್ರಕೃತಿಗನುಗುಣವಾದ ಧರ್ಮವನ್ನು ಚೆನ್ನಾಗಿ ಪಾಲಿಸಿ ಧರ್ಮಕ್ಕೆ ಅನುಗುಣವಾಗಿ ಅರ್ಥ ಕಾಮಗಳನ್ನು ಹೊಂದಲು ಬೇಕಾದಂತಹ ಪದಾರ್ಥಗಳನ್ನು ಬಳಸಿದಾಗ ಜೀವನದ ಅಂತಿಮ ಧ್ಯೇಯವಾದ ಮೋಕ್ಷದ ಮಾರ್ಗವು ಅನಾಯಾಸವಾಗಿ ತೆರೆಯಲ್ಪಡುವುದು ಎಂಬುದು ಭಾರತೀಯ ಮಹರ್ಷಿಗಳ ಚಿಂತನೆ.

ನಮ್ಮ ಪ್ರಕೃತಿಗೆ ಹೊಂದುವ ಪದಾರ್ಥಗಳನ್ನು ಮಾತ್ರ ಅಪೇಕ್ಷಿಸುವುದರ ಜೊತೆಗೆ ಇನ್ನೊಬ್ಬರಿಗೆ ಸಂಬಂಧಿಸಿದ ಪದಾರ್ಥಗಳ ಬಗ್ಗೆ ಕಿಂಚಿತ್ತೂ ಅಪೇಕ್ಷೆ ಇಲ್ಲದಿರುವಿಕೆಯೂ ಅತ್ಯಂತ ಮುಖ್ಯವೇ. ಹಾಗಿಲ್ಲದೇ ಇನ್ನೊಬ್ಬರ ಸಂಪತ್ತನ್ನು ಅಪೇಕ್ಷಿಸುವುದರಿಂದ ಉಂಟಾಗುವ ದುರವಸ್ಥೆಗೆ ರಾವಣನೇ ಪ್ರಸಿದ್ಧ ಉದಾಹರಣೆ.  ರಾವಣನಲ್ಲಿ ಸಕಲ ಸಂಪತ್ತುಗಳು, ಭೋಗ ಸಾಮಗ್ರಿಗಳನ್ನು ಒಳಗೊಂಡ ಸ್ವರ್ಣಮಯವಾದ ಲಂಕೆಯೇ ಇತ್ತು. ಆದರೆ ಅವನು ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳದೇ ಶ್ರೀರಾಮಚಂದ್ರನ ಆತ್ಮಶ್ರೀಯಾದ ಸೀತಾದೇವಿಯನ್ನು ಅಪೇಕ್ಷಿಸಿ, ಕುತಂತ್ರದಿಂದ ಅವಳನ್ನು ಅಪಹರಿಸಿ, ತನ್ನ ರಾಜ್ಯಕ್ಕೆ ಸೆಳೆದೊಯ್ದನು. ಅವನು ಮಾಡಿದ ಅಪರಾಧಕ್ಕಾಗಿ, ತನ್ನದಾದ ಎಲ್ಲಾ ಸಂಪತ್ತನ್ನೂ, ಕೊನೆಗೆ ತನ್ನ ಪ್ರಾಣವನ್ನೂ ಕಳೆದುಕೊಳ್ಳಬೇಕಾಯಿತು, ಹಾಗಾಗಿ ಪರರ ಪದಾರ್ಥಗಳನ್ನು ಎಂದೆಂದಿಗೂ ಅಪೇಕ್ಷಿಸಬಾರದು.  ಅದನ್ನು ನಮಗೆ ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ನಮಗೆ ಇಷ್ಟವಾಯಿತು ಎಂದು ನಮ್ಮ ಜೀರ್ಣಶಕ್ತಿಗೆ ಮಿತಿಮೀರಿ ಆಹಾರವನ್ನು ಸೇವಿಸಿದಾಗ ಅದು ಅಜೀರ್ಣವಾಗಿ ಹೊಟ್ಟೆಯಲ್ಲಿರುವುದೆಲ್ಲವನ್ನೂ ಸೇರಿಸಿಕೊಂಡು ಹೊರಹೋಗುವಂತೆ, ನಮಗೆ ದಕ್ಕಿಸಿಕೊಳ್ಳಲಾಗದ ಪದಾರ್ಥವು ಎಂದಾದರೂ ಒಮ್ಮೆ ನಮ್ಮಿಂದ ಹೊರಹೋಗುವಾಗ, ನಮ್ಮ ಸಂಪತ್ತನ್ನೂ ಸೇರಿಸಿಕೊಂಡು ಹೊರಹೋಗುತ್ತದೆ! ಹಾಗಾಗಿ ನಮಗೆ ಯಾವ ಪದಾರ್ಥವು ಸೇವ್ಯ, ಯಾವುದು ವರ್ಜ್ಯ ಎಂದು ಹಲವು ಬಾರಿ ಪರಿಶೀಲಿಸಿ ಸ್ವೀಕರಿಸುವುದು ವಿವೇಕದ ಲಕ್ಷಣ.

"ಹಸಿವಿದ್ದರೆ ಅನ್ನಕೋಶವನ್ನು ತುಂಬಿಕೊಳ್ಳಿ. ಆದರೆ ಅನ್ನಕೋಶಕ್ಕೆ ಡ್ಯಾಮೇಜ್ ಆಗುವವರೆಗೆ ತುಂಬಬೇಡಿ, ಆದ್ದರಿಂದ ಧರ್ಮ ಕೆಡದಂತೆ ಅರ್ಥಜಾತವನ್ನು ಬಳಸಿಕೊಳ್ಳಿ" ಎಂಬ ಶ್ರೀರಂಗಮಹಾಗುರುಗಳ ವಾಣಿಯಂತೆ ಧರ್ಮ ಮಾರ್ಗದಲ್ಲಿ ಸಾಗಿ, ಮಹಾಧ್ಯೇಯವನ್ನು ತಲುಪಲು ತಮ್ಮ ತಮ್ಮ ಪ್ರಕೃತಿಗಳಿಗನುಗುಣವಾದ ಪದಾರ್ಥಗಳನ್ನಷ್ಟೇ ಅಪೇಕ್ಷಿಸಿದಾಗ, ಜೀವನವು ಸತ್ಯ, ಸುಂದರವಾಗಿರುತ್ತದೆ.

ಸೂಚನೆ: 06/1/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.