Sunday, January 9, 2022

ದೀಪಾವಳಿ-4 - ಬಲಿಪಾಡ್ಯಮಿ ಹಾಗೂ ಗೋವರ್ಧನ ಪೂಜೆ (Deepavali-4 - Balipaadyami hagu Govardhana Puje)

ಕನ್ನಡ ಅನುವಾದ : ಎಂ. ಆರ್. ಭಾಷ್ಯಮ್

ಮೂಲ ಆಂಗ್ಲಭಾಷೆ : ಡಾ. ಮೋಹನ್ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)



ಈ ಲೇಖನದಲ್ಲಿ ನಾವು ಬಲಿಪಾಡ್ಯಮಿ ಹಾಗು ಗೋವರ್ಧನಪೂಜೆ (ಪ್ರಥಮೆಯಂದು ಆಚರಿಸುವುದು) ಮತ್ತು ಯಮದ್ವಿತೀಯೇ/ಭಗಿನಿದ್ವಿತೀಯೆಯಲ್ಲಿ ಅಡಗಿರುವ ಆಳವಾದ ಸಾಂಕೇತಿಕ ಆಂತರಿಕ ಅನುಭವಗಳ ವಿಚಾರವನ್ನು  ಮಾಡುತ್ತೇವೆ.

 

ಬಲಿಚಕ್ರವರ್ತಿ ಮತ್ತು ತ್ರಿವಿಕ್ರಮ ಕಥೆ

 

ಈ ಕಥೆ ಜನಜನಿತ. ಬಲಿ, ರಾಕ್ಷಸರ ರಾಜ ಮತ್ತು ಪ್ರಸಿದ್ಧನಾದ ಪ್ರಹ್ಲಾದನ ಮೊಮ್ಮಗ. ನರಕಾಸುರನಂತೆ, ಈತನೂ  ನೈಸರ್ಗಿಕ ವ್ಯವಸ್ಥೆಯ, ಧರ್ಮದ, ವಿರುದ್ಧವಾಗಿ ದಿವಿಯನ್ನು ತನ್ನ ಆಧಿಪತ್ಯಕ್ಕೆ ಒಳಪಡಿಸಲು ಪ್ರಯತ್ನಿಸುತ್ತಾನೆ. ಆಗ ದಿವಿಯಾಳುವ  ದೇವತೆಗಳ ಮಾತೆಯಾದ ಅದಿತಿಯ ಪುತ್ರನಾಗಿ ಮಹಾವಿಷ್ಣುವು ಜನಿಸುತ್ತಾನೆ. ನಮ್ಮ ಪ್ರಕೃತಿಯೂ ಕಾಮ-ಕ್ರೋಧ  ಮೊದಲಾದ ಅರಿಗಳಿಂದ ತುಂಬಿ ಕೇವಲ ಪ್ರಾಪಂಚಿಕ ವಸ್ತುಗಳನ್ನು ಭೋಗಿಸಲು ಮೊದಲು ಮಾಡಿದರೆ ನಾವೂ ಬಲಿಯ ಮೂರ್ತರೂಪರಾಗುತ್ತೇವೆ.

 

ಆತನ ಇಂದ್ರಲೋಕದ ಜಯ, ಅಜ್ಞಾನದ ಕತ್ತಲೆ ನಮ್ಮಲ್ಲಿ ತುಂಬುವುದರ ಪ್ರತೀಕ. ಬಲಿಯು ಯಜ್ಞದಲ್ಲಿ ತೊಡಗಿರುವಾಗ ವಾಮನನು ತನ್ನ ಪಾದದಲ್ಲೇ ಮೂರು ಹೆಜ್ಜೆಗಳ ಜಾಗವನ್ನು ಬೇಡುತ್ತಾನೆ. ಬಲಿ  ಮಾತು ಕೊಡುತ್ತಾನೆ. ವಾಮನ ಬೃಹತ್ತಾಗಿ ಬೆಳೆದು, ಅನಾಯಾಸವಾಗಿ ದಿವಿ-ಭುವಿಗಳನ್ನು ತನ್ನ ಎರಡೇ ಹೆಜ್ಜೆಗಳಲ್ಲಿ ಆಕ್ರಮಿಸುತ್ತಾನೆ. ಒಂದು ಸಣ್ಣಕಿಡಿ ಕಾಳ್ಗಿಚ್ಚಾಗಿ ಹರಡುವಂತೆ, ಹೃದಯಮಧ್ಯದಲ್ಲಿ ಜ್ಞಾನಿಗಳು  ಕಾಣುವ ಅಂಗುಷ್ಠಮಾತ್ರದ ಆತ್ಮಜ್ಯೋತಿ, ಇಡೀ ಭುವಿ-ದಿವಿಗಳನ್ನು ಆಕ್ರಮಿಸಬಲ್ಲದು. ಈ ಅಂಗುಷ್ಠಮಾತ್ರದ ಜ್ಯೋತಿಯನ್ನು, ತಪಸ್ಸಿನಿಂದ ಬೆಳೆಸಿದರೆ, ಇಡೀ ದೇಹವನ್ನು ವ್ಯಾಪಿಸಿ ಬ್ರಹ್ಮಮಯವಾಗಿ ಮಾಡಬಲ್ಲದು.  ನಾವು ಪ್ರಾಪಂಚಿಕ ವ್ಯವಹಾರಗಳಲ್ಲಿ ಮಗ್ನರಾಗಿದ್ದಾಗ ನಮ್ಮ ಪ್ರಾಣಗಳು ದೇಹದಲ್ಲಿ ಹರಡಿರುವ ನಾಡೀಜಾಲದಲ್ಲಿ ಕೆಲಸಮಾಡುತ್ತವೆಯೆಂದು ಯೋಗಶಾಸ್ತ್ರವು ಹೇಳುತ್ತದೆ. ಆದರೆ, ಯೋಗಮಾರ್ಗದಲ್ಲಿ ಸಾಗಲು ಪ್ರಾಣಗಳು ಕೆಳಗಿನ ಮುಲಾಧಾರಚಕ್ರದಿಂದ ಉನ್ನತಸ್ಥಾನದಲ್ಲಿರುವ ಸಹಸ್ರಾರದವರೆಗೆ ವ್ಯಾಪಿಸಿರುವ ಮೇರುದಂಡದ(ಬೆನ್ನುಮೂಳೆ) ಮಧ್ಯದಲ್ಲಿರುವ ಸುಷುಮ್ನಾ ನಾಡಿಯಲ್ಲಿ ಚಲಿಸಬೇಕಾಗುತ್ತದೆ. ಈ ಯೋಗಮಾರ್ಗವು, ಭೊ: - ಭುವ: - ಸುವ:  ಎಂಬ  ಮೂರುಲೋಕಗಳನ್ನೂ ವ್ಯಾಪಿಸಿರುತ್ತದೆ. ಇದೇ  ತ್ರಿವಿಕ್ರಮನ  ಮೂರೂ ಹೆಜ್ಜೆಗಳು. ಇದರಲ್ಲಿ ಸ್ವರ್ಲೋವು ಪರಂಜ್ಯೋತಿಯ ಪವಿತ್ರಸ್ಥಾನ. ಈ ಜ್ಞಾನಸೂರ್ಯನನ್ನು ಜ್ಞಾನಿಗಳು  ತಮ್ಮ  ಮಸ್ತಿಷ್ಕದ  ಉನ್ನತಸ್ಥಾನದಲ್ಲಿ ಕಾಣುತ್ತಾರೆ. ತ್ರಿವಿಕ್ರಮನು, ತನ್ನ ಮೂರನೆಯ ಹೆಜ್ಜೆಯನ್ನು, ಬಲಿಯ ಶಿರಸ್ಸಿನಮೇಲಿರಿಸಿ, ಜ್ಞಾನದ ಪರಮೋನ್ನತ ಅನುಭವವನ್ನು ಕರುಣಿಸಿ,  ಆತನ ಆಸುರೀ ವಾಸನೆಗಳೆನ್ನೆಲ್ಲಾ ನಾಶಮಾಡಿದುದರ ಅತ್ಯಂತ ಸುಂದರ ಚಿತ್ರಣ.  ಸದ್ಯದ ಸನ್ನಿವೇಶದಲ್ಲಿ, ಮುಂದೆ ನಡೆಯುವುದು ಇನ್ನಷ್ಟು ಸುಸಂಬದ್ಧ. ಏನೇ ಕೊರತೆಗಳಿದ್ದರೂ ಬಲಿ ಮಹಾವಿಷ್ಣುವಿನ ಪರಮಭಕ್ತ. ಆದ್ದರಿಂದ, ವಿಷ್ಣುವು ಆತನನ್ನು ಅನುಗ್ರಹಿಸಿ ಅವನಿರಬೇಕಾದ, ಐಶ್ವರ್ಯಪೂರಿತ ಸುತಲಲೋಕಕ್ಕೆ ಕಳುಹಿಸುತ್ತಾನೆ. ಯಾವ ನಾಡಿಗಳು ವ್ಯಾಪಾರಮಾಡಿದರೆ ವಿಶ್ವದ ಉತ್ಕೃಷ್ಟವಾದ ಭೋಗಗಳನ್ನು ಸಂಪೂರ್ಣವಾಗಿ ಅನುಭವಿಸಬಹುದೋ, ಅಂತಹಲೋಕಕ್ಕೆ ಅವನನ್ನು ಕಳುಹಿಸುತ್ತಾನೆ. ಆದರೆ ಪರಂಜ್ಯೋತಿಯ ಅನುಭವದಿಂದ ಪಾವನನಾದ ಬಲಿ ಮಾನಸಿಕ ಸಮತೋಲನದ ಸ್ಥಿತಿಯಿಂದ ಆ ಐಶ್ವರ್ಯವೆಲ್ಲವನ್ನೂ ಅನುಭವಿಸುತ್ತಾನೆ. ಅದಲ್ಲದೇ, ಬಲಿಯನ್ನು ಆಸುರೀ ಪ್ರವೃತ್ತಿಗಳಿಂದ ಕಾಯಲು ಸ್ವಯಂ ನಾರಾಯಣನೇ ಆತನ ಬಾಗಿಲ ಕಾವಲುಗಾರನಾಗುತ್ತಾನೆ. ಇದರ ಜೊತೆಗೆ, ಬಲಿ  ಮುಂದೆ ಸ್ವರ್ಗಕ್ಕೇರಿ ಇಂದ್ರಪದವಿಯನ್ನು ಗಳಿಸುತ್ತಾನೆಂಬ ವರವೂ  ಕೂಡ ನೀಡಲಾಗುತ್ತದೆ. 

 

ಈ ಕಥೆಯು  ನಾರಾಯಣನು ನಮ್ಮ ಆಸುರೀ ವಾಸನೆಗಳನ್ನು  ಹೇಗೆ ಕಳೆಯುತ್ತಾನೆ ಎನ್ನುವುದಕ್ಕೆ ಒಂದು ನಿದರ್ಶನ. ಕೆಲವೊಮ್ಮೆ ನರಕಾಸುರನನ್ನು ನಿಗ್ರಹಿಸಿ - ಅನುಗ್ರಹಿಸಿದಂತೆ ನಿಗ್ರಹಿಸುತ್ತಾನೆ, ಅನುಗ್ರಹ ಮಾಡುವುದಕ್ಕೋಸ್ಕರ. ಆದರೆ ಇಲ್ಲಿ ಅಧರ್ಮದಿಂದ ಪಡೆದ ಸ್ಥಾನವನ್ನು ಉಪಾಯದಿಂದ ಕಸಿದು ಬಲಿಯನ್ನು ಅನುಗ್ರಹಿಸುತ್ತಾನೆ.     

 

ಶ್ರೀ ಶ್ರೀರಂಗ ಮಹಾಗುರುಗಳು ಕೊಟ್ಟ ನೋಟ ಒಂದಿಲ್ಲದಿದ್ದರೆ, ಈ ಕಥೆಯ ಅಂತರಾರ್ಥವನ್ನು ತರ್ಕಬದ್ಧವಾಗಿ ಅರಿಯುವುದು ಕಷ್ಟಸಾಧ್ಯವೇ ಸರಿ. ಉದಾಹರಣೆಗೆ, ವಿಶ್ವವನ್ನೆಲ್ಲಾ ಆಕ್ರಮಿಸಿದ ತ್ರಿವಿಕ್ರಮನ ಎರಡು ಹೆಜ್ಜೆಗಳು, ಬಲಿಯ ತಲೆಯನ್ನೂ ಆಕ್ರಮಿಸಿದಂತಾಗಲಿಲ್ಲವೇ? ಈ ರೀತಿಯಲ್ಲಿ ಏಳುವ ಅನೇಕ ಪ್ರಶ್ನೆಗಳಿಗೆ ಸಮಾಧಾನವನ್ನು ಕೊಡಲಾಗದು. ಪೌರಾಣಿಕ ಕಥೆಗಳ ಹಿಂದೆ  ಅಡಗಿರುವ ತತ್ವಗಳನ್ನು ಅರ್ಥೈಸಲು, ಅಧ್ಯಾತ್ಮಾನುಭವದ ನೋಟದಿಂದ ಮಾತ್ರ ಸಾಧ್ಯ.

 

ಗೋವರ್ಧನಗಿರಿಧಾರಿ

 

ಬಲಿಯ ಕಥೆ  ಇಂದ್ರಪದವಿಯನ್ನು ಆಕ್ರಮಿಸಲುದ್ಯುಕ್ತನಾದ ಅಸುರನನ್ನು  ಶಿಕ್ಷಿಸುವುದಾದರೆ,  ಗೋವರ್ಧನಗಿರಿಯ ಕಥೆ  ಇಂದ್ರನನ್ನೇ ದಂಡಿಸುವ ಕಥೆ. ಎರಡಕ್ಕೂ, 'ಪರಮಾತ್ಮ-ಪರಂಜ್ಯೋತಿ ಎಲ್ಲಕ್ಕೂ ಸರ್ವೋಚ್ಛ'  ಎಂಬುದನ್ನು ಮರೆಯಿಸುವ ಅಹಂಕಾರವೇ ಕಾರಣ. ಇಂದ್ರನು ಇಂದ್ರಿಯಗಳ ಪ್ರಭು ಮತ್ತು ಅವುಗಳನ್ನು ಧರ್ಮಮಾರ್ಗದಲ್ಲಿ ನಿಯಂತ್ರಿಸುತ್ತಾನೆ. ತಾನು ವಿಶ್ವಬೀಜದ ಒಂದು ಶಾಖೆಯೆಂದು ಮರೆತು, ಸ್ವೇಚ್ಛೆಯಿಂದ ವ್ಯವಹರಿಸಿದರೆ ಅವನಲ್ಲಿಯೂ ಆಸುರೀವೃತ್ತಿಗಳೇ  ಬೆಳೆಯುತ್ತವೆ. ಆದ್ದರಿಂದ ಬಲಿಗೆ ಒದಗಿದ ಗತಿಯೇ ಇವನಿಗೂ ಒದಗುತ್ತದೆ. ಕೃಷ್ಣನು ಗೋವರ್ಧನಗಿರಿಯೇ ಅವರ ಗೋವುಗಳ ಮತ್ತು ಜೀವನಕ್ಕೆ ಆಧಾರವೆಂದು ಗ್ರಾಮದ ಹಿರಿಯರ ಮನಒಲಿಸುತ್ತಾನೆ. ಇಂದ್ರನು ತನ್ನ ಕ್ರೋಧವನ್ನು ಗ್ರಾಮಸ್ಥರ, ಅವರ ಬಂಧು-ಬಳಗದವರ ಮತ್ತು ಆಕಳುಗಳಮೇಲೆ ತಿರುಗಿಸಿದಾಗ ಕೃಷ್ಣನು ಗೋವರ್ಧನಗಿರಿಯನ್ನೆತ್ತಿ ಅದರಡಿಯಲ್ಲಿ ಇವರೆಲ್ಲರನ್ನೂ ಇರಿಸಿ ಸಂರಕ್ಷಿಸುತ್ತಾನೆ. ಈ ಚಿತ್ರ, ಗೋವರ್ಧನಗಿರಿ ಪ್ರತಿನಿಧಿಸುವ ಎಲ್ಲ ಭೋಗ-ಸಮೃದ್ಧಿಗಳೂ ಅನಾದಿಯಾದ ಕೃಷ್ಣತತ್ತ್ವದ  ಆಧಾರದಮೇಲೆ ನಿಂತಿದೆಯೆಂದು ತೋರಿಸುತ್ತದೆ. (ಗೋವರ್ಧನಗಿರಿ ಗೋವುಗಳ ವೃದ್ಧಿ ಅದರಿಂದೊದಗುವ ಸಮೃದ್ಧಿಯ ಸಂಕೇತ). ನಂತರ, ಆತನ ಅನುಗ್ರಹ-ರಕ್ಷಣೆಯಲ್ಲಿ ಎಲ್ಲರೂ ಸಂತೋಷವಾಗಿರುತ್ತಾರೆ.

 

ಸಂಭ್ರಮ-ಸವೃದ್ಧಿಗಳನ್ನು ಒದಗಿಸುವ ದೀಪಾವಳಿಯ ಆಚರಣೆಯಲ್ಲಿ ಇವುಗಳು ಯಾವ ಮೂಲದಿಂದ ಒದಗಿಬಂದಿವೆಯೆಂದೂ, ಅವುಗಳನ್ನು  ಧರ್ಮಮಾರ್ಗದಿಂದ ಅನುಭವಿಸಬೇಕೆಂದೂ ಈ ಕಥೆಯು ನೆನೆಪಿಗೆ ತಂದುಕೊಡುತ್ತದೆ. ಈ ಸುಂದರಕಥಾನಿರೂಪಣೆಯು ಇಂದ್ರನು ಶ್ರೀಕೃಷ್ಣನನ್ನು ಅರ್ಚಿಸಿ ಸಂಪನ್ನಗೊಳಿಸುವ ಗೋವಿಂದಪಟ್ಟಾಭಿಷೇಕ ಮಹೋತ್ಸವದಲ್ಲಿ ಪರಿಸಮಾಪ್ತಿಗೊಳ್ಳುತ್ತದೆ. 

 

ಬಲಿಪಾಡ್ಯಮಿ ಮತ್ತು ಗೋವರ್ಧನಪೂಜೆಗಳ ಆಚರಣೆ

 

ಬಲಿಪಾಡ್ಯಮಿ ಎಂದಿನಂತೆ ಅಭ್ಯಂಗದೊಡನೆ ಮೊದಲಾಗುತ್ತದೆ. ಬಲಿ ಮತ್ತು ಅವನ ಪರಿವಾರದವರ  ಪೂಜೆ ರಾತ್ರಿಯ ಮುಖ್ಯ ಕಾರ್ಯಕ್ರಮ. ಮತ್ತು ಆ ಪೂಜೆ, " ಬಲಿರಾಜ ನಮಸ್ತುಭ್ಯಮ್ …" ಎಂಬ ಈ ಕೆಳಗಿನ ಸ್ತೋತ್ರದಿಂದ ಆರಂಭಗೊಳ್ಳುತ್ತದೆ. 

 

ಬಲಿರಾಜ ನಮಸ್ತುಭ್ಯಂ ವಿರೋಚನಸುತ ಪ್ರಭೋ |

ಭವಿಷಯೇಂದ್ರ ಸುರಾರಾತೇ ವಿಷ್ಣುಸಾನ್ನಿಧ್ಯದೋ ಭವ ||   

 

 

ಈಸ್ತೋತ್ರ ಬಲಿಯ ಹೆಗ್ಗಳಿಕೆಯಾದ ವಿಷ್ಣುವಿನ ಸಾನ್ನಿಧ್ಯವನ್ನು ಹೊಂದಿಸುವುದಕ್ಕಾಗಿ.  ಬಲಿಯಪೂಜೆಯಲ್ಲಿ, 'ಹೊನ್ನಾವರಿಕೆ' ಎಂಬ ಉತ್ಕೃಷ್ಠ ಪುಷ್ಪವನ್ನು ಉಪಯೋಗಿಸುತ್ತಾರೆ. ಈ ಸುವರ್ಣವರ್ಣ ಪುಷ್ಪವನ್ನು, 'ಹೊನ್ನು-ಹೊನ್ನು' ಎಂದು ಉದ್ಗರಿಸುತ್ತಾ ಅಂಗಳದ ಸುತ್ತಲೂ ಹರಡುತ್ತಾರೆ. ಇದು ಬಲಿಯ ಅಧ್ಭುತ ಜ್ಞಾನಸೂರ್ಯನ ಅನುಭವವನ್ನು ನೆನೆಪಿಗೆ ತಂದುಕೊಡುತ್ತದೆ. ಕೆಲವು ಮನೆಗಳಲ್ಲಿ ಪೂಜೆಯನಂತರ ಬಲಿಯ ವಿಗ್ರಹವನ್ನು ಪಶ್ಚಿಮದೆಡೆಗೆ ತಿರುಗಿಸಿಡುವ  ಪರಿಪಾಠ. ಈ ಪರಿಪಾಠ ನಾವು ಇದುವರೆವಿಗೂ ಮನಸ್ಸಿಗೆ ತಂದುಕೊಂಡ ತತ್ವಗಳಿಗೆ ಸರಿಹೊಂದುತ್ತದೆ - ಪಶ್ಚಿಮದೆಡೆಗೆ ತಿರುಗುವುದೆಂದರೆ ಒಳಮಾರ್ಗವನ್ನಧಿಕರಿಸಿ ಬಲಿ  ಇಂದ್ರ ಪದವಿಯನ್ನು ಪಡೆಯುವುದರ ಸಂಕೇತ.

 

ಉತ್ತರಭಾರತದಲ್ಲಿ, ಅದರಲ್ಲೂ ವೈಷ್ಣವ ಸಂಪ್ರದಾಯದವರ ಮನೆಗಳಲ್ಲಿ, ಗೋವರ್ಧನ  ಪೂಜೆಯನ್ನು 'ಅನ್ನಕೂಟ'ವೆಂದು ಕರೆಯುತ್ತಾರೆ. ಗೋವರ್ಧನ ಗಿರಿಯ ಸೂಕ್ಷ್ಮ ಪ್ರತಿರೂಪವನ್ನು ಸ್ಥಾಪಿಸಿ ಅರ್ಚಿಸುತ್ತಾರೆ. ವಿಧವಿಧವಾದ, ಭಕ್ಷ್ಯ-ಭೋಜ್ಯಗಳನ್ನು ಸಮೃದ್ಧಿಯ ಕುರುಹಾಗಿ ಕೃಷ್ಣನಿಗೆ ಅರ್ಪಿಸಿ, ಪ್ರಸಾದವಾಗಿ ಸ್ವೀಕರಿಸುವ ವಾಡಿಕೆ.

 

ಯಮದ್ವಿತೀಯೆ - ಭಗಿನೀ ದ್ವಿತೀಯೆ

 

ಇದನ್ನು ಬಲಿಪಾಡ್ಯಮಿಯ ಮರುದಿನ ಆಚರಿಸುವುದು ರೂಢಿ. ಅಂದು ಸಹೋದರರು ಸಹೋದರಿಯರಿಗೆ ಉಡುಗೊರೆಗಳನ್ನು ಕೊಡುವ ಮತ್ತು ಸಹೋದರಿಯರು ಅವರನ್ನು ಭಕ್ಷ್ಯ - ಭೋಜ್ಯಗಳಿಂದ ತೃಪ್ತಿಪಡಿಸುವ ವಾಡಿಕೆ. ಮೊದಲೇ ಹೇಳಿದಂತೆ, ಯಮ ಪರಂಜ್ಯೋತಿ ಸೂರ್ಯನಾರಾಯಣನ ಪುತ್ರ. ಅವನು ಧರ್ಮದ ರಾಜ ಮತ್ತು ನಮ್ಮ ಕರ್ಮಗಳಿಗೆ ತಕ್ಕಂತೆ ದಂಡವಿಧಿಸುವ ಪ್ರಭು. ಅವನ ಸ್ಮರಣೆಯು ಧರ್ಮಕ್ಕೆ ಹೊಂದದ  ಅರ್ಥ-ಕಾಮಗಳನ್ನು ಅನಿಭವಿಸಿದರೆ ಏನು ಗತಿ ಕಾದಿದೆಯೆಂಬುದನ್ನು ನೆನೆಪಿಸುತ್ತದೆ. ಅವನ ಸ್ವಂತ  ತಂಗಿ, ಯಮಿ- ಯಮುನೆ, ಸೂರ್ಯನಾರಾಯಣ ಪುತ್ರಿ. ಆಕೆ, ಜೀವನಧಾತ್ರಿ ಮತ್ತು ಸ್ತ್ರೀಸಹಜವಾದ ಔಚಿತ್ಯ- ಔದಾರ್ಯ - ಘನತೆ -ಸೌಂದರ್ಯ- ಲಾವಣ್ಯಗಳ ಪ್ರತಿಮೂರ್ತಿ.  ಯಮ-ಯಮಿಯರು, ನಾವು ಹಿಂದೆ ನೆನೆಪಿಸಿಕೊಂಡ ಪುರುಷ-ಪ್ರಕೃತಿಯ ಪ್ರತಿನಿಧಿಗಳು. ಅವರ ಈ ಸಂಧಿ ಭೋಗಗಳ ಹಾಗೂ ಧರ್ಮದ ಸಮ್ಮಿಲನವನ್ನು ಸೂಚಿಸುವುದಾಗಿದೆ. ಅಂತೆಯೇ ಅಧ್ಯಾತ್ಮಕ್ಷೇತ್ರದಲ್ಲಿ ಈ  ಮಿಲನವು ಸಮಾಧಿಯ ಪರಮೋನ್ನತ ಸ್ಥಿತಿಯಲ್ಲಾಗುವ ಪ್ರಕೃತಿ -ಪುರುಷರ ವಿಲಯದ ಸಂಕೇತ.

 

ಪರಿಸಮಾಪ್ತಿ

 

ಇದು, ದೀಪಾವಳಿಯಮೇಲಿನ  ಲೇಖನಮಾಲೆಗಳ ಸಮಾಪ್ತಿ. ನಾವು ದೀಪಗಳ ಸಾಂಕೇತಿಕ ಪ್ರಾಧಾನ್ಯದ ಅನ್ವೇಷಣೆಯೊಂದಿಗಾರಂಭಿಸಿ, ಅವುಗಳ ಅಂತರಾರ್ಥ-ಅನುಭವಸಂಕೇತಗಳು ಮತ್ತು ಕಥೆಗಳನ್ನು  ನೆನಪಿಸಿಕೊಂಡು, ಧನತ್ರಯೋದಶಿ ಮೊದಲ್ಗೊಂಡು ಯಮದ್ವಿತೀಯೆಯವೆರಿಗಿನ ಐದು ದಿನಗಳ ಹಬ್ಬಗಳ ಅನುಷ್ಠಾನದಲ್ಲಿ ಳಾರ್ಥಗಳು ಮತ್ತು ತತ್ವಗಳು ಹೇಗೆ ಹಾಸು-ಹೊಕ್ಕಾಗಿ ಸಂಮಿಳಿತವಾಗಿವೆಯೆಂಬುದನ್ನು   ಗಮನಿಸಿ ಮುಕ್ತಾಯಗೊಳಿಸಿದೆವು.


ಸೂಚನೆ : 16/11/2020 ರಂದು ಈ ಲೇಖನವು ಆಂಗ್ಲ ಭಾಷೆಯಲ್ಲಿ  AYVM blogs ಪ್ರಕಟವಾಗಿದೆ.