Sunday, July 21, 2019

ಅಂತ್ಯೇಷ್ಟಿ-ಮರಣಾನಂತರದ ಸಂಸ್ಕಾರ-2 (Anthyeshti - Marananantharada samskara-2)

ಲೇಖಕರು: ತಾರೋಡಿ ಸುರೇಶ


“ಒಂದೇ ಶೃತಿಯಲ್ಲಿಟ್ಟ ಎರಡು ತಂಬೂರಿಗಳಲ್ಲಿ ಒಂದನ್ನು ಮಿಡಿದರೆ ಇನ್ನೊಂದು ಅದನ್ನೇ ಅನುರಣಿಸುತ್ತದೆಯಪ್ಪಾ” ಎಂದು ಹಾಗೆ ಮೀಟಿ ಶ್ರೀರಂಗಮಹಾಗುರುಗಳು ತೋರಿಸುತಿದ್ದರು. ಹಾಗೆಯೇ ಜೀವದ ಗತಾಗತಿಯನ್ನು ಬಲ್ಲ ಜ್ಞಾನಿಯು ತನ್ನ ಪ್ರಾಣ-ಮನಸ್ಸುಗಳನ್ನು ವಿದ್ಯುದ್ವೇಗದಲ್ಲಿ ಮೃತಜೀವದತ್ತ ಕಳುಹಿಸಿ ಅದಕ್ಕೆ ಸಂವಾದಿಯಾಗಿಸಿ ಸದ್ಗತಿಯನ್ನುಂಟುಮಾಡುತ್ತಾನೆ. ಜೀವದ ಸದ್ಗತಿಗೆ ಬೇಕಾದ ಧರ್ಮವನ್ನು ಮೃತಜೀವದಲ್ಲಿ ಸಂಕ್ರಮಣ ಮಾಡಿಸುತ್ತಾನೆ. ಕರ್ಮಗಳೂ ವಾಹಕವಾಗಿ ಸೂಕ್ತ ಧರ್ಮವನ್ನು ಉಂಟುಮಾಡುತ್ತವೆ. 

ಸದ್ಗತಿ ಎಂದರೇನು? ಜೀವಕ್ಕೆ ಪರಮಾತ್ಮದರ್ಶನವೇ ಮಹಾಧ್ಯೇಯ. ಜ್ಞಾನಿಯ ಸಂಕಲ್ಪ,ವೈಜ್ಞಾನಿಕ ಕರ್ಮಾಚರಣೆಯಿಂದ ಪರಮಾತ್ಮನನ್ನು ಸೇರಲು ಮಾದ್ಯಮವಾದ ನಾಡೀಪಥದತ್ತ ಮೃತಜೀವನು ದಾಟಿಸಲ್ಪಡುತ್ತಾನೆ. ನಾಡಿಗಳೆಂದರೆ ಬ್ರಹ್ಮಾಂಡ-ಪಿಂಡಾಂಡಗಳನ್ನು ವ್ಯಾಪಿಸಿರುವ ಜೀವಸಂಚಾರದ ಶಕ್ತಿ ಪಥಗಳು. ಅವುಗಳಲ್ಲಿ ಅಧೋಗತಿಯನ್ನುಂಟುಮಾಡುವ ನಾಡಿಗಳೂ ಇರುತ್ತವೆ.ಅವುಗಳಿಂದ ಜೀವವನ್ನು ತಪ್ಪಿಸಿ ಸನ್ಮಾರ್ಗದಲ್ಲಿ ಕರೆದೊಯ್ಯುವಂತಹ ನಾಡೀಮಾರ್ಗಗಳಲ್ಲಿ ಜೀವವನ್ನು ಜೋಡಿಸುವುದೇ ಅಂತೇಷ್ಟಿಯ ಗುರಿಯಾಗಿದೆ.

ಜೀವಿಯ ಪುಣ್ಯಪಾಪಗಳಿಗನುಗುಣವಾಗಿ ಅದಿರುವ ಸ್ತರದಿಂದ ಉತ್ತಮ ಸ್ತರಕ್ಕೆ ಅದನ್ನು ಏರಿಸಬೇಕಾಗುವುದು. ಹಾಗಾಗಿ ಆಯಾ ಜೀವಿಗಳ ಸ್ಥಿತಿಗತಿಗನುಗುಣವಾಗಿ ಅಪರಸಂಸ್ಕಾರವು ಮೃತಜೀವಕ್ಕೆ ಶುದ್ಧಿಯನ್ನು ತಂದುಕೊಡುತ್ತದೆ. ಮುಂದೆ ಮಾನವದೇಹವು ದೊರೆಯುವಂತೆಯೋ, ಅಥವಾ ಒಬ್ಬ ಸಾತ್ವಿಕನ ಮನೆಯಲ್ಲಿ ಗೋವಾಗಿಯೋ- ಆಥವಾ ಇನ್ನಾವುದೋ ಒಂದು ಒಳ್ಳೆಯ ಪರಿಸರದಲ್ಲಿ ಹುಟ್ಟುವಂತಾದರೂ ಅದೂ ಸದ್ಗತಿಯೇ. ಅದಕ್ಕೆ ಆ ಜೀವವು ದೇವನತ್ತ ಮುಖಮಾಡಿದೆ ಎಂದೇ ಅರ್ಥ.  

ಒಂದೆರಡು ಉದಾಹರಣೆಗಳು: ಒಬ್ಬನು ಮರಣೋನ್ಮುಖವಾಗುತ್ತಿರುವಾಗ ಅವನ ಬಲಗಿವಿಯಲ್ಲಿ ಭಗವಂತನನ್ನು ನೆನಪಿಸುವ ಸಾಹಿತ್ಯವನ್ನು ಹೇಳುವುದಿದೆ. ಗಂಗಾದಿತೀರ್ಥ, ತುಳಸಿ ಇತ್ಯಾದಿ ಪವಿತ್ರದ್ರವ್ಯಗಳ ಸೇವನೆ ಮಾಡಿಸುತ್ತಾರೆ. ಅವುಗಳ ಫಲವೆಂದರೆ ಜೀವಕ್ಕೆ ಊರ್ಧ್ವಗತಿ. “ಅಂತ್ಯಕಾಲದ ಸ್ಮರಣೆ ಬಹು ಪ್ರಭಾವಿಯಾದದ್ದು. ಆಗ ಆತನ ಸಪ್ತಧಾತುಗಳೂ ಒಂದು ಪಕ್ವತೆಯಲ್ಲಿರುತ್ತದೆಯಪ್ಪಾ. ಆ ಸಮಯದಲ್ಲಿನ ಭಾವನೆಗಳಿಗೆ ತಕ್ಕಂತೆ ಇವನ ಮುಂದಿನ ಗತಿ, ದೇಹ ಇತ್ಯಾದಿಗಳು ನಿರ್ಧಾರವಾಗುತ್ತದೆ.” ಎಂದು ಮಹಾಗುರುಗಳು ನುಡಿದಿದ್ದರು. ಮೃತನ ಅಂತಿಮದರ್ಶನಕ್ಕೆಂದು ಬಂಧುಮಿತ್ರರು ತಪ್ಪದೇ ಆಗಮಿಸುವುದುಂಟು. ಕೋಪ ಇತ್ಯಾದಿ ಭಾವಗಳು ಮುಖದಲ್ಲಿ ವ್ಯಕ್ತವಾಗುವಂತೆ ಜ್ಞಾನಿಯಾದವನ ಮರಣದಲ್ಲಿಯೂ ಪ್ರಾಣೋತ್ಕ್ರಮಣದ ಶ್ರೇಷ್ಠವಾದ ಗುರುತುಗಳು ಶವದ ಮೇಲೆ ಮುದ್ರಿತವಾಗಿರುತ್ತವೆ. ಅವುಗಳ ದರ್ಶನ ದರ್ಶಕರಲ್ಲಿ ಉತ್ತಮ ಸಂಸ್ಕಾರವನ್ನು ಜಾಗೃತಗೊಳಿಸುತ್ತದೆ.ಅದಕ್ಕಾಗಿ ಅಂತಿಮದರ್ಶನಕ್ಕೆ ಬರುವ ಪದ್ಧತಿಯು ಬಂದಿದೆ. ಬಂದವರಲ್ಲಿ ಜ್ಞಾನಿಗಳಿದ್ದಲ್ಲಿ ಅವರ ಆಶೀರ್ವಾದವು ಮೃತನಿಗೆ ದೊರೆಯುತ್ತದೆ. ಹೀಗೆ ಋಷಿಗಳು ರೂಪಿಸಿದ ಇಲ್ಲಿಯ ಎಲ್ಲ ಕರ್ಮಗಳೂ ಒಂದೇ ಉದ್ದೇಶದಿಂದ ಅಳವಡಿಸಲ್ಪಟ್ಟಿರುವುದನ್ನು ತೋರಿಸಿಕೊಡಬಹುದು. ಮೂರುಲೋಕದ ಸಂಚಾರದ ಪ್ರಭುತ್ವವಿದ್ದ ಋಷಿಗಳನ್ನು ಪೂರ್ವಜರನ್ನಾಗಿ ಪಡೆದ ಭಾರತೀಯರು ಅದೆಷ್ಟು ಧನ್ಯರು! ನಮಃ ಪರಮಋಷಿಭ್ಯಃ!  

ಸೂಚನೆ: 20/07/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.