Tuesday, July 16, 2019

ಉಪದೇಶ ಏಕೆ ಬೇಕು? (Upadesha eke beku?)

ಲೇಖಕರು: ರಾಜಗೋಪಾಲನ್. ಕೆ .ಎಸ್.  


ವಿದೇಶೀಯನೊಬ್ಬ ಭಾರತದ ಕಾಶೀ ಕ್ಷೇತ್ರಕ್ಕೆ ಬಂದ. ಉದ್ದ ಗಡ್ಡದ ಆಸಾಮಿ ಅವನು. ದಾರಿಯಲ್ಲಿ ಒಂದು ಅಂಗಡಿಯಲ್ಲಿ ಹಲಸಿನ ಹಣ್ಣಿನ ವ್ಯಾಪಾರವಾಗುತ್ತಿರುವುದನ್ನು ನೋಡಿದ. ಕೊಯ್ದ ಹಣ್ಣುಗಳನ್ನು ಅನೇಕರು ಕೊಂಡುಕೊಳ್ಳುತ್ತಿದ್ದರು. ಅದರ ಮೇಲೆ ಧೂಳು ಕುಳಿತುಕೊಳ್ಳಬಾರದೆಂಬ ದೃಷ್ಟಿಯಿಂದ ಆ ಕೊಯ್ದ ಭಾಗಗಳನ್ನು ಎಲೆಗಳಿಂದ ಮುಚ್ಚಿ ಕೊಡುತ್ತಿದ್ದರು. ಹಲಸಿನ ಹಣ್ಣನ್ನು ಕೊಯ್ಯುವಾಗ ಬರುವ ಹಾಲನ್ನು ರಕ್ಷಿಸಲು ಎಲೆ ಮುಚ್ಚಿ ಕೊಡುತ್ತಿದ್ದಾರೆಂದು ಈತ ಭಾವಿಸಿದ. ಒಂದು ಪೂರ್ತಿ ಹಣ್ಣನ್ನು ಕೊಂಡುಕೊಂಡ. ಆದರೆ, ಅದನ್ನು ತಿನ್ನುವ ಕ್ರಮವನ್ನು ತಿಳಿದುಕೊಳ್ಳಲಿಲ್ಲ. ಹಾಗೆಯೇ, ಕಚ್ಚಿ ತಿನ್ನಲು ಹೋದಾಗ, ಮುಳ್ಳು ಚುಚ್ಚಿತು. ಅದನ್ನು ಬಿಟ್ಟು, ಮುಳ್ಳು ಇಲ್ಲದ ತೊಟ್ಟಿನ ಬಳಿ ಕಚ್ಚಿ ತಿನ್ನಲು ಪ್ರಯತ್ನ ಪಟ್ಟಾಗ, ಅಲ್ಲಿಂದ ಧಾರಾಕಾರವಾಗಿ ಹಾಲು ಬರತೊಡಗಿತು. ಹಾಲೇ ಈ ಹಣ್ಣಿನ ಸಾರವೆಂದು ಭಾವಿಸಿದ ಆತ ಹಣ್ಣನ್ನು ಎತ್ತಿ, ಹಾಲು ಕುಡಿಯಲು ಪ್ರಾರಂಭಿಸಿದ. ಹಾಲು ಅವನ ಗಡ್ಡಕ್ಕೆ ಅಂಟಿಕೊಂಡು ಗಡ್ಡವೆಲ್ಲ ಬತ್ತಿಯಾಗಲು ತೊಡಗಿತು. ಅದನ್ನು ತೊಳೆದುಕೊಳ್ಳುವ ಬಗೆ ತಿಳಿಯದ ಆತ ಫಜೀತಿಯಿಂದ ಪಾರಾಗಲು ಕ್ಷೌರ ಮಾಡಿಸಿಕೊಂಡುಬಿಟ್ಟ. ಹಾಗೆಯೇ ಬರುತ್ತಿರುವಾಗ, ಕ್ಷೌರ ಮಾಡಿಸಿಕೊಂಡ ಕೆಲವರು ಎದುರಿಗೆ ಸಿಕ್ಕಿದರು. ಈತ ಅವರನ್ನು ನೋಡಿ, “ಏನು! ನೀವೂ ಸಹ ಹಲಸಿನ ಹಣ್ಣನ್ನು ತಿಂದಿರಾ?” ಎಂದು ಕೇಳಿದ. ಅವರಲ್ಲಿ, ನಿಜವಾಗಿ ಹಲಸಿನ ಹಣ್ಣನ್ನು ತಿಂದವರೂ ಇದ್ದರು. ಅವರಿಗೆ ಇವನ ಪ್ರಶ್ನೆ ಆಶ್ಚರ್ಯವನ್ನುಂಟು ಮಾಡಿತು. “ ನಾವು ಹಲಸಿನ ಹಣ್ಣನ್ನು ತಿಂದಿದ್ದು ನಿಮಗೆ ಹೇಗೆ ಗೊತ್ತಾಯಿತು?” ಎಂದು ಇವನನ್ನು ಕೇಳಿದರು. ಇವನು “ನಾನೂ ನಿಮ್ಮ ಹಾಗೆಯೇ ಹಲಸಿನ ಹಣ್ಣನ್ನು ತಿಂದು ಈಗ ತಾನೇ ಕ್ಷೌರ ಮಾಡಿಸಿಕೊಂಡು ಬಂದೆ. ಆದ್ದರಿಂದಲೇ ನನಗೆ ಗೊತ್ತಾಗಿದ್ದು” ಎಂದ. ಅವರಿಗೆ ಇನ್ನೂ ಆಶ್ಚರ್ಯವಾಗಿ, “ಇದೇನು! ಹಲಸಿನ ಹಣ್ಣನ್ನು ತಿಂದರೆ ಕ್ಷೌರ ಮಾಡಿಸಿಕೊಳ್ಳಬೇಕೆ?” ಎಂದು ಮತ್ತೆ ಕೇಳಿದಾಗ, ಈತ ತಾನು ಹಣ್ಣನ್ನು ತಿಂದ ಕ್ರಮವನ್ನು ಹೇಳಿದ. ಆಗ ಅವರು ನಕ್ಕು, ಹಲಸಿನ ಹಣ್ಣನ್ನು ತಿನ್ನುವ ಬಗೆಯನ್ನು ತೋರಿಸಿಕೊಟ್ಟರು.

ಉಪದೇಶದ ಮಹತ್ವವನ್ನು ಮನದಟ್ಟುಮಾಡಿಕೊಡಲು ಈ ಕಥೆಯನ್ನು ಹೇಳಿ ಶ್ರೀರಂಗಮಹಾಗುರುಗಳು ಒಂದು ನೀತಿಯ ಪಾಠವನ್ನು ಕೊಟ್ಟಿದ್ದರು- “ಯಾವ ಪದಾರ್ಥವನ್ನೇ ಆಗಲಿ, ಉಪಯೋಗಿಸುವ ಮುನ್ನ ಅದನ್ನು ತಂದವರ ಅಥವಾ ಅನುಭವಿಗಳ ಮೂಲಕ ಸರಿಯಾಗಿ ಉಪದೇಶವನ್ನು ಪಡೆದು ನಂತರ ಅದನ್ನು ಉಪಯೋಗಿಸಿಕೊಳ್ಳಬೇಕು”. ಇಂದು, ನಮ್ಮ ಆರ್ಷಸಾಹಿತ್ಯ, ಕೆಲ ವಿದೇಶೀಯರ ಕೈಗೆ ಸಿಕ್ಕಾಗ ಮತ್ತು ಅಂತಹ ವಿದೇಶೀಯರ ಮಾನಸಪುತ್ರರಾದ ಕೆಲವು ಭಾರತೀಯರಿಂದಾಗಿ, ಅಪಾರ್ಥಕ್ಕೆ, ವ್ಯಂಗ್ಯಕ್ಕೆ ಈಡಾಗಿದೆ. ಇಂತಹ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು, ಸಾಹಿತ್ಯವನ್ನು ಕೊಟ್ಟವರ ಮನೋಭೂಮಿಕೆಗೇ ನಾವು ಹೋಗಬೇಕಾಗುವುದು ಅನಿವಾರ್ಯ. ನಮ್ಮ ಪರಂಪರೆಯಲ್ಲಿ ಈ ಕಾರಣದಿಂದಲೇ ಉಪದೇಶವಿಲ್ಲದೆ ಇಂತಹ ಸಾಹಿತ್ಯವನ್ನು ಓದುವುದು ರೂಢಿಯಲ್ಲಿರಲಿಲ್ಲ. ಕಾಲಕ್ರಮದಲ್ಲಿ ಅಂತಹ ಪದ್ಧತಿ ಮರೆಯಾಗಿದೆ. ಋಷಿಗಳ ಮನೋಧರ್ಮವನ್ನು ಹಿಡಿದು ಅದನ್ನು ಉಪದೇಶಿಸಬಲ್ಲವರನ್ನು ಹುಡುಕಿ, ಅವರ ಮಾರ್ಗದರ್ಶನದಿಂದ ನಮ್ಮ ಬಾಳನ್ನು ಹಸನು ಮಾಡಿಕೊಳ್ಳೋಣ. 

ಸೂಚನೆ:  15/07/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.