ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
“ ಮೌಲಿಸ್ಥ ಕುಂಭ ಪರಿರಕ್ಷಣ ಧೀರ್ನಟೀವಾ.....” – ಎಂಬ ಶ್ರೀ ಶಂಕರರ ಮಾತಿನಂತೆ-ನಿಪುಣೆಯಾದ ನರ್ತಕಿಯೊಬ್ಬಳು ಕುಂಭವನ್ನು ತಲೆಯಮೇಲೆ ಧರಿಸಿ ನಾನಾ ಹಾವ ಭಾವಗಳಿಂದ ನರ್ತನ ಮಾಡುತ್ತಿದ್ದರೂ ಆ ಕುಂಭವು ಕೆಳಗೆ ಬೀಳದಂತೆ ಜಾಗ್ರತೆ ವಹಿಸುತ್ತಾಳೆ. ಹಾಗೆಯೇ ನಮ್ಮ ಜೀವನದಲ್ಲಿ ಯಾವ ಕೆಲಸಗಳನ್ನು ಮಾಡುತ್ತಿದ್ದರೂ ನಮ್ಮ ಜೀವನ ಮೂಲನಾದ ಭಗವಂತನನ್ನೂ ಅವನ ಆಶಯವನ್ನೂ ತಲೆಯ ಮೇಲೆ ಧರಿಸಿಯೇ ಎಲ್ಲವನ್ನೂ ನಿರ್ವಹಿಸಲು ಕಲಿತೆವಾದರೆ ಜೀವನ ಸಾರ್ಥಕ. ಮೇಲಿನ ಮಹಾತ್ಮರ ಕಥೆಯ ಆದರ್ಶವೂ ಇದೇ ಆಗಿದೆ. ನಮಗೆ ಕೃಷ್ಣನ ಜಗದ್ವಂದ್ಯವಾದ ವ್ಯಕ್ತಿತ್ವದ ಪರಿಚಯವಿಲ್ಲದೇ ಅವನ ಹೊರ ಜೀವನದ ಆಚರಣೆಗಳ ಮೇಲೆ ಅವನನ್ನು ಅಳೆದುಬಿಡುತ್ತೇವೆ. ಹಾಗೆಯೇ ದುರ್ವಾಸರಂತಹ ಮಹಾತ್ಮರನ್ನೂ ಸಹ. ಬ್ರಹ್ಮವೇ ಲೋಕೋದ್ಧಾರಕ್ಕಾಗಿ ಇಳೆಗಿಳಿದು ಬಂದು ಕೃಷ್ಣರೂಪಿಯಾಗಿದ್ದಾನೆ ಎಂಬುದನ್ನು ಅವನ ಕಾಲದಲ್ಲಿಯೇ ಅರ್ಥ ಮಾಡಿಕೊಂಡವರು ಬೆರಳೆಣಿಕೆಯಷ್ಟು ಜನ. ಶ್ರೀರಂಗ ಮಹಾಗುರುಗಳ ಈ ಮಾತು ಇಲ್ಲಿ ಸ್ಮರಣೀಯ- 'ಸಂಸಾರಕ್ಕೆ ಬಿದ್ದಿರುವ ನಮ್ಮನ್ನು ಮೇಲೆತ್ತಲು ಭಗವಂತನೂ ಸಂಸಾರಕ್ಕೆ ಇಳಿದಿದ್ದಾನೆ ಎಂಬುದನ್ನು ನಾವು ಅರಿಯುವುದಿಲ್ಲ' ಮಹಾತ್ಮರ ಮಾಹಾತ್ಮೆಯನ್ನು ಅರಿಯಲು ಆ ದಿಕ್ಕಿನಲ್ಲಿ ನಮ್ಮ ಸಾಧನೆಇರಬೇಕು. ಜ್ಞಾನೀ ಜನರ ಮಾರ್ಗದರ್ಶನ ಬೇಕು. ಅಂತಹ ಅವಕಾಶಗಳು ನಮ್ಮೆಲ್ಲರಿಗೂ ಒದಗಿಬರಲಿ ಎಂದು ಪ್ರಾರ್ಥಿಸೋಣ.