Thursday, July 11, 2019

ಶ್ರೀ ಶಂಕರನಾರಾಯಣದಾಸರ ಸಂಕ್ಷಿಪ್ತ ಪರಿಚಯ (Sri Shankaranarayanadasara sankshipta parichiya)

ಸಂಗ್ರಹ : ತಾರೋಡಿಸುರೇಶ


ಪೂಜ್ಯ ಶ್ರೀಕಂಠರ ಒಂದು ಸಂಕ್ಷಿಪ್ತ ಪರಿಚಯವನ್ನು ನೀಡುವ ಪ್ರಯತ್ನವಾಗಿದೆ ಇದು. ಶ್ರೀರಂಗಮಹಾಗುರುಗಳು ಅವರಿಗೆ ಇಟ್ಟ ನಾಮಧೇಯವು ಶಂಕರನಾರಾಯಣದಾಸ ಎಂಬುದಾಗಿ. ಶ್ರೀಕಂಠರು ದೈಹಿಕವಾಗಿ ಅಷ್ಟೇನೂ ಎತ್ತರವಲ್ಲದ ವ್ಯಕ್ತಿ. ಸದಾ ಮುಖದಲ್ಲಿ ಮಂದಹಾಸ. ಗುರುಭಾಯಿಗಳನ್ನು ಕಂಡೊಡನೆ ಸಂತೋಷದಿಂದ ಮುಖ ಇನ್ನೂ ಅರಳುತ್ತಿತ್ತು. ಶ್ರೀಕಂಠರ ಬಗ್ಗೆ ಮೊದಲಿಗೆ ಸ್ಮರಣೆಗೆ ಬರುವುದು ಅವರು ಸಾರಳ್ಯ. ಅತ್ಯಂತ ನಿಗರ್ವಿಗಳು. ಸರಳರೆಂದಾಕ್ಷಣ ಅವರು ಮುಗ್ಧರು ಎಂದಲ್ಲ. ಅಷ್ಟಾಂಗಯೋಗವಿಜ್ಞಾನಮಂದಿರದಂತಹ ಒಂದು ಗುರುತರವಾದ ಸಂಸ್ಥೆಯ ಕಾರ್ಯದರ್ಶಿಯಾಗಿ, ಮಹಾಗುರುದಂಪತಿಗಳ ಆಶಯದಂತೆ ನಡೆಯುವುದು ಮತ್ತು ನಡೆಸುವುದು ಎರಡೂ ಬಹು ಜವಾಬ್ದಾರಿಯುತವಾದ ಕೆಲಸ. ಮಹಾಗುರುವಿನ ಹೆಜ್ಜೆಯ ಗೆಜ್ಜೆಯಾಗಬೇಕು. ಮೌಲಿಕವಾಗಿ ಅದಕ್ಕೆ ಬೇಕಾದ ಶಕ್ತಿಯನ್ನು ಮಹಾಗುರುಗುರುದಂಪತಿಗಳೇ ನೀಡಿ ಸೇವೆಯನ್ನು ಕೈಗೊಳ್ಳುತ್ತಿದ್ದುದರಿಂದ ಒಂದು ದೃಷ್ಟಿಯಿಂದ ಸುಲಭವೂ ಹೌದು. ಪೂಜ್ಯ ಶ್ರೀಕಂಠರು ಹಾಗೆ ಮಹಾಗುರುದಂಪತಿಗಳಿಗೆ ತಮ್ಮನ್ನು ಒಪ್ಪಿಸಿಕೊಂಡೇ ನಡೆಯುತ್ತಿದ್ದರು. ಅವರ 35 ವರ್ಷಕ್ಕಿಂತಲೂ ಸುದೀರ್ಘಕಾಲದ ಶ್ರೀಮಂದಿರದ ಪ್ರಧಾನಕಾರ್ಯದರ್ಶಿಗಳಾಗಿ ನಿರ್ವಹಿಸಿದ ರೀತಿಯು ಮಂದಿರದ ಇತಿಹಾಸದಲ್ಲಿಯೇ ಅಪೂರ್ವವಾದ ಸಂಗತಿ.

ಎನ್.ಶ್ರೀಕಂಠ ಎನ್ನುವುದು ಅವರ ನಾಮಧೇಯ. ನಂಜನಗೂಡು ಶ್ರೀಕಂಠ ಎನ್ನುವುದರ ಸಂಕ್ಷಿಪ್ತ ರೂಪವದು. ಇವರು ಶ್ರೀಮತಿ ಲಕ್ಷಮ್ಮ ಹಾಗೂ ಶ್ರೀನರಸಿಂಹಶಾಸ್ತ್ರಿಗಳ ಎರಡನೆಯ ಸುಪುತ್ರ. 1928ರ ಫೆಬ್ರವರಿ 2 ರಂದು ಜನನ. ಒಂಬತ್ತು ತಿಂಗಳು ಕಾಯದೇ ಬೇಗ ಭೂಮಿಗೆ ಬಂದರೆಂದು ಅವರನ್ನು ಬಂಧುಗಳು ಹಾಸ್ಯಮಾಡುತ್ತಿದ್ದುದುಂಟು. ಶ್ರೀ ನರಸಿಂಹಶಾಸ್ತ್ರಿಗಳಿಗೆ ನಾಲ್ಕು ಜನ ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳು. ಶ್ರೀಕಂಠರೂ ಅವರ ಅಣ್ಣನವರಾದ ಬಾಲಸುಬ್ರಮಣ್ಯರವರೂ ತಮ್ಮ ಅನ್ಯೋನ್ಯತೆಯಿಂದಾಗಿ ರಾಮಲಕ್ಷ್ಮಣ ಎಂದೇ ಬಿರುದಾಂಕಿತರಾಗಿದ್ದರಂತೆ.

ಮನೆಯಲ್ಲಿಯೂ ಸದಾಚಾರಸಂಪನ್ನರು. ಹೀಗೆ ವೈದಿಕ ಮನೆತನದಲ್ಲಿ ಬೆಳೆದು ಬಂದದ್ದರಿಂದ ವೈದಿಕ ಆಚಾರ-ವಿಚಾರಗಳ ಬಗ್ಗೆ ಶ್ರೀಕಂಠರಿಗೆ ಸಹಜವಾಗಿಯೇ ಶ್ರದ್ಧಾ-ಭಕ್ತಿಗಳು ಮೂಡಿದ್ದವು. ಲೌಕಿಕ ವಿದ್ಯಾಭ್ಯಾಸದಲ್ಲಿ ಅವರು ರಸಾಯನಶಾಸ್ತ್ರದಲ್ಲಿ B.Sc. (Hons)  ಮಾಡಿ ಕಾಲೇಜಿನ ಉಪನ್ಯಾಸಕರಾದರು. ಸಮಕಾಲದಲ್ಲಿಯೇ M.Sc. ಮಾಡಿದರು. SSLC ಹಾಗೂ PUC ನಲ್ಲಿ ರ‍್ಯಾಂಕ್ ಬಂದಿದ್ದರು. ವಿವಿಧ ಕಾಲೇಜು ಮತ್ತು ವಿವಿಧ ಶ್ರೇಣಿಗಳಲ್ಲಿ ಸೇವೆ ಸಲ್ಲಿಸಿ 1988 ಮಾರ್ಚ್ 31 ರಂದು ಪ್ರಾಧ್ಯಾಪಕರಾಗಿ ನಿವೃತ್ತರಾದರು.

1956 ರಲ್ಲಿ ವಿವಾಹ. ಮುಕ್ತಿಗೆ ಅಧಿಕೃತರಾದ ಗೃಹಸ್ಥರಾಗಿದ್ದರು. ಜಿತೇಂದ್ರಿಯನಾಗಿ ಆತ್ಮನಿಷ್ಠನಾಗಿರುವ ಜ್ಞಾನಿಗೆ ಗೃಹಸ್ಥಾಶ್ರಮವು ಯಾವ ಅವದ್ಯವನ್ನು ಮಾಡಲಾರದು.  ಹಿತಕೋರುವ ಭಾರ್ಯೆ ಮತ್ತು ಮಕ್ಕಳು. ಒಟ್ಟು ಆರು ಮಂದಿ ಮಕ್ಕಳು. ಆತ್ಮಜೀವನಕ್ಕೆ ಆದ್ಯತೆ ಕೊಟ್ಟಿದ್ದರೂ ಸದ್ಗೃಹಸ್ಥರಾಗಿ ಮಾಡಬೇಕಾದ ಕರ್ತವ್ಯಗಳಾವುದನ್ನು ಉಪೇಕ್ಷೆ ಮಾಡಲಿಲ್ಲ. ಮಕ್ಕಳ ವಿದ್ಯಾಭ್ಯಾಸ, ವಿವಾಹದ ಎಲ್ಲ ಘಟ್ಟಗಳ ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು. ಜೊತೆಗೆ ಮಕ್ಕಳನ್ನು ಒಂದು ಸುಸಂಸ್ಕೃತ ವಾತಾವರಣದಲ್ಲಿ ಬೆಳೆಸಿ ಅವರನ್ನು ವಿದ್ಯಾವಿನಯಸಂಪನ್ನರಾದ ಸತ್ಪ್ರಜೆಗಳನ್ನಾಗಿ ರೂಪಿಸಿದರು. ಈ ಎಲ್ಲ ವಿಷಯಗಳಲ್ಲಿಯೂ ಅವರಿಗೆ ಅವರ  ಶ್ರೀಮತಿಯವರಿಂದ ಸಂಪೂರ್ಣ ಸಹಕಾರ ದೊರೆಯಿತು.

ಅವರು ತುಂಬಾ ಶಿಸ್ತಿನ ವ್ಯಕ್ತಿಯಾಗಿದ್ದರು. ಯಾವುದೇ ಕೆಲಸವನ್ನಾದರೂ ಸಕಾಲದಲ್ಲಿ ಮಾಡಿ ಮುಗಿಸುತ್ತಿದ್ದರು. ಆರಂಭಿಸುವ ಮುನ್ನವೇ ಚನ್ನಾಗಿ ಪರ್ಯಾಲೋಚಿಸಿ ಕಾರ್ಯ ಸನ್ನದ್ಧರಾಗುತ್ತಿದ್ದರು. ಆರಂಭಿಸಿದ ಮೇಲೆ ಮುಗಿಸದೆ ಬಿಡುತ್ತಿರಲಿಲ್ಲ. ಎಂತಹ ಪರಿಸ್ಥಿತಿಯಲ್ಲಿಯೂ ಸಂಯಮವನ್ನು ಕಳೆದುಕೊಳ್ಳುತ್ತಿರಲಿಲ್ಲ. ಶಾಂತರೀತಿಯಲ್ಲಿಯೇ ಉತ್ತರಿಸುತ್ತಿದ್ದರು. ತರ್ಕಬದ್ಧತೆ ಅವರ ಚಿಂತನೆಯ ಇನ್ನೊಂದು ಪ್ರಮುಖ ಲಕ್ಷಣ. ಅತಿಥಿಅಭ್ಯಾಗತರನ್ನು ಯಥೋಚಿತವಾಗಿ ಸಂಭಾವನೆ ಮಾಡುತ್ತಿದ್ದರು. ತಾವೂ ಸಂತೋಷಪಡುತ್ತಿದ್ದರು. 

ಪ್ರಾಪಂಚಿಕ ಸುಖದ ಕಡೆ ಅತಿಯಾದ ಒಲುಮೆ ಇರುತ್ತಿರಲಿಲ್ಲ. ನಿರಂತರವಾಗಿ ಆರ್ಥಿಕವಾದ ತೊಂದರೆಯಿದ್ದರೂ ಗಳಿಕೆಗಾಗಿ ನ್ಯಾಯಸಮ್ಮತವಲ್ಲದ ಹಾದಿಯನ್ನು ಹಿಡಿಯಲಿಲ್ಲ. ನಿಗರ್ವಿಗಳೂ, ಸಂಘಟನಾ ಕುಶಲರೂ ಆಗಿದ್ದರು. ಸಮಸ್ಯೆಗಳು ಬಂದಲ್ಲಿ ಬಹಳ ಕುಶಲತೆಯಿಂದ ಬಗೆಹರಿಸುತ್ತಿದ್ದರು. ವಿಶ್ವದ ಆಗುಹೋಗುಗಳತ್ತ ಒಂದು ನಿಗಾ ಇರುತ್ತಿತ್ತು. ಹೆಚ್ಚು ಮಾತನಾಡುವವರಾಗಿರಲಿಲ್ಲ. ಆತ್ಮಶ್ರೀಮಂತಿಕೆ, ಬುದ್ಧಿಶ್ರೀಮಂತಿಕೆ ಮತ್ತು ಹೃದಯಶ್ರೀಮಂತಿಕೆಗಳಿಗೆ ಆಗರವಾಗಿದ್ದ ಶ್ರೀಶ್ರೀಕಂಠರು 2006, ಮೇ 5 ರಂದು ತಮ್ಮ ಇಹಲೋಕಯಾತ್ರೆಯನ್ನು ಮುಗಿಸಿ ಪರಮಪದನಾಥನಲ್ಲಿ ವಿಲೀನವಾದರು.

ಶ್ರೀಕಂಠರಿಗೆ ಶ್ರೀ ಸೀತಾರಾಮುಗಳು( ಶ್ರೀಮಂದಿರದ ಪೂರ್ವಕಾರ್ಯದರ್ಶಿಗಳು) ಬಹಳ ಆತ್ಮೀಯ ಮಿತ್ರರಾಗಿದ್ದರು. ಶ್ರೀ ಸೀತಾರಾಮುಗಳು ಬಹಳ ಹಿಂದೆಯೇ ಶ್ರೀರಂಗಮಹಾಗುರುಗಳ ಶಿಷ್ಯರಾಗಿದ್ದರು. ಆದರೆ ಕಾರಣಾಂತರದಿಂದ  ಮಹಾಗುರುವಿನ ಜೊತೆಗಿನ ಸಂಬಂಧವನ್ನು ಬಹಿರಂಗಪಡಿಸಿರಲಿಲ್ಲ. ಆಪ್ತಸ್ನೇಹಿತರಾಗಿದ್ದ ಕಾರಣದಿಂದ ಸೀತಾರಾಮುಗಳು ಶ್ರೀಕಂಠರನ್ನು ಪದೇಪದೇ ಭೆಟ್ಟಿಯಾಗುತ್ತಿದ್ದರು. ಕೆಲವೊಮ್ಮೆ ನಂಜನಗೂಡಿನಲ್ಲಿಯೇ ಇರುತ್ತಿದ್ದ ಅವರನ್ನು ಭೆಟ್ಟಿಯಾಗಲು ಅವರಲ್ಲಿಗೆ ಬರುತ್ತಿದ್ದರು. ಒಮ್ಮೆ ಮಹಾಗುರುವೂ ಇಬ್ಬರೂ ಪರಸ್ಪರ ನೋಡಿದ್ದರು. ಆದರೆ ಶ್ರೀಗುರುವಿನ ಅಂತರಂಗಪರಿಚಯವಿರಲಿಲ್ಲ. ಜೊತೆಗೆ ಮಹಾಗುರುಗಳೂ ತಮ್ಮ ಶಿಷ್ಯರಿಗೆ ಗುರು-ಶಿಷ್ಯಸಂಬಂಧವನ್ನು ಬಹಿರಂಗಗೊಳಿಸಲು ಅನುಮತಿ ಕೊಟ್ಟಿರಲಿಲ್ಲ. ಹೀಗಾಗಿ ಶ್ರೀಸೀತಾರಾಮುಗಳು “ಇವರು ಹೆಡತಲೆಯ ರಂಗಸ್ವಾಮಿಗಳು,ನನ್ನ ಸ್ನೇಹಿತರು” ಎಂದಷ್ಟೇ ಪರಿಚಯಿಸಿದ್ದರು. ಶ್ರೀಗುರುವು ನಂತರ ಶ್ರೀಕಂಠರ ಬಗ್ಗೆ ‘ಇವನು ನನ್ನ ಬಳಿಗೆ ಅವನಾಗಿಯೇ ಬಂದೇ ಬರುತ್ತಾನಪ್ಪಾ’ ಎಂದಷ್ಟೇ ನುಡಿದಿದ್ದರು.

ಶ್ರೀಗುರುವಿನ ದರ್ಶನದ ನಂತರ ಶ್ರೀಶ್ರೀಕಂಠರಲ್ಲಿ ತಮ್ಮ ಪ್ರಕೃತಿಯಲ್ಲಿ ಅನೇಕ ಪರಿವರ್ತನೆಗಳುಂಟಾಗುತ್ತಿದ್ದವು. ಇದನ್ನು ಶ್ರೀಗುರುವಿಗೆ ತಿಳಿಸಿದ ಶ್ರೀಸೀತಾರಾಮುಗಳು,ಗುರುವಿನ ನಿರ್ದೇಶನದಂತೆ ಶ್ರೀಗುರುವಿನ ಬಳಿ ಕರೆದೊಯ್ದರು. ಶ್ರೀಶ್ರೀಕಂಠರು ಮಹಾಗುರುದಂಪತಿಗಳ ಮಾರ್ಗದರ್ಶನದ ಅನುಗ್ರಹಕ್ಕೆ ಪಾತ್ರರಾದರು.

ಶ್ರೀಶ್ರೀಕಂಠರು ಆತ್ಮಾರಾಮನೂ, ಯೋಗೇಶ್ವರನೂ ಆಗಿದ್ದ ಶ್ರೀಗುರುವಿನ ಒಳಸೆಳೆತಕ್ಕೆ ಆಕರ್ಷಿತರಾಗಿ ಬಂದು ಸೇರಿದವರು. “ಮಹಾಗುರುವು ನೀಡುತ್ತಿದ್ದ ಸಂಸ್ಕೃತಿಯ ವಿವರಣೆಗಳು ಅಷ್ಟಾಗಿ  ನೆನಪಿನಲ್ಲಿ ಉಳಿಯದೆ  ಮಹಾಗುರುಗಳ ದಿವ್ಯರೂಪ, ಪ್ರಣವನಾದಸಹಿತವಾದ ಅವರ ಗಾನಲಹರಿ ಅವರನ್ನು ಅಂತರಂಗದಲ್ಲಿ ಮುಳುಗುವಂತೆ ಮಾಡಿಬಿಡುತ್ತಿದ್ದವು. ಶ್ರೀಗುರುದೇವರು ಸಾಮಾನ್ಯವಾಗಿ ಪಾಠಗಳು ಮುಗಿದ ನಂತರ ಪ್ರತಿಕ್ರಿಯೆಯನ್ನು ತಪ್ಪದೇ ಕೇಳುತ್ತಿದ್ದರು. ಆಗ ನನಗೆ ಒಳಗೆ ಉಂಟಾದ ಅನುಭವಗಳ ಸ್ಮರಣೆಯುಂಟಾಗಿ ಪುನಃ ಆ ಸ್ಥಿತಿಗಳೇ ಉಂಟಾಗಿಬಿಡುತ್ತಿದ್ದವು. ಮಹಾಗುರುವು ‘ಇದೇ ನಿಜವಾದ ಪ್ರತಿಕ್ರಿಯೆಯಪ್ಪಾ’ ಎಂದು ಮೆಚ್ಚಿಕೊಳ್ಳುತ್ತಿದ್ದರು. ಇಂತಹ ಅವರ ವಾತ್ಸಲ್ಯ,ಕರುಣೆಗಳೇ ನನ್ನ ಮನದುಂಬಿ ನನ್ನನ್ನು ಧ್ಯಾನದಲ್ಲಿ ಮುನ್ನಡೆಸುತ್ತಿದ್ದವು” ಎಂದು ಶ್ರೀಶ್ರೀಕಂಠರೇ ಹೇಳುತ್ತಿದ್ದುದುಂಟು.

ಹೀಗೆ ತಮ್ಮ ಅಂತರಂಗಯಾತ್ರೆಯಲ್ಲಿ ಶ್ರೀಶ್ರೀಕಂಠರು ಸಾಗುತ್ತಿರಲು, ಅವರ ಪ್ರಕೃತಿಯ ವಿಶಿಷ್ಟತೆಯನ್ನೂ, ಶಬ್ಧಾರ್ಥಗಳ ಅವಿನಾಭಾವಸಂಬಂಧದ ವಿಜ್ಞಾನವನ್ನೂ ಬಲ್ಲ ಶ್ರೀಗುರುವು ಅವರಿಗೆ ‘ಶಂಕರನಾರಾಯಣದಾಸ’ ಎಂಬ ನಾಮಧೇಯವನ್ನು ಅನುಗ್ರಹಿಸಿದರು. ಶಂಕರನಾರಾಯಣಾತ್ಮಕವಾದ ತತ್ವದ ಅಭಿವ್ಯಕ್ತಿಗೆ ತಕ್ಕುದಾದ ಪ್ರಕೃತಿಯಾದ್ದರಿಂದ ಒಳಧರ್ಮವನ್ನು ಪ್ರತಿನಿಧಿಸುವ ಹೆಸರು. ಇದರ ವಿವರಕ್ಕೆ ಇಲ್ಲಿ ಹೋಗುತ್ತಿಲ್ಲ. ಇದು ಭಾರತೀಯ ನಾಮಕರಣ ವಿಜ್ಞಾನಕ್ಕೊಂದು ಅದ್ಭುತವಾದ ಉದಾಹರಣೆಯಾಗಿದೆ. ನಂತರ ಶ್ರೀಗುರುವು ಪ್ರಕಾಶಿತಗೊಳಿಸಿದ್ದ ಅಷ್ಟಾಂಗಯೋಗವಿಜ್ಞಾನಮಂದಿರದ ವ್ಯವಹಾರಗಳಲ್ಲಿ ಈ ಹೆಸರನ್ನೇ ಶ್ರೀಶಂಕರನಾರಾಯಣದಾಸರು ಅಂಕಿತಗೊಳಿಸುತ್ತಿದ್ದರು.

ಶ್ರೀ ಶಂಕರನಾರಾಯಣದಾಸರಿಗೆ  ಶ್ರೀಮಂದಿರದ ಸೇವೆಯು ನಿತ್ಯಕರ್ಮೋಪಾದಿಯಲ್ಲಿತ್ತು. ಒಂದು ದಿನವೂ ಅವರು ಶ್ರೀಮಂದಿರದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸದೆ ಇರುತ್ತಿರಲಿಲ್ಲ. ಅವರು ಸುದೀರ್ಘ 35 ವರ್ಷಗಳಿಗಿಂತಲೂ ಹೆಚ್ಚಾಗಿ ಮಂದಿರದ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದರು. ಶ್ರೀಮಂದಿರದ ದೈನಂದಿನ ಕಾರ್ಯಗಳಲ್ಲದೆ, ಮಹಾಗುರುದಂಪತಿಗಳ ಶಿಷ್ಯರೊಡನೆ ವ್ಯಕ್ತಿಗತ ಮಾತುಕತೆಗಳು, ಹೊಸದಾಗಿ ಬರುವವರಿಗೆ ಸೂಕ್ತ ಮಾರ್ಗದರ್ಶನ, ಹಾಗೂ ವಿಶೇಷ ಉತ್ಸವಾದಿಗಳ ನಿರ್ವಹಣೆ, ಆಡಳಿತಾತ್ಮಕ ವಿಷಯಗಳ ನಿರ್ವಹಣೆ ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸುತ್ತಿದ್ದರು. ಶ್ರೀಮಂದಿರಕ್ಕೆ ಸಂಜೆ ಸುಮಾರು 5-6 ಗಂಟೆಗೆ ಹೆಜ್ಜೆಯಿಟ್ಟರೆಂದರೆ ತಿರುಗಿ ಸ್ವಗೃಹವನ್ನು ಸೇರುವುದು ರಾತ್ರಿ 10 ಗಂಟೆಯಾಗುತ್ತಿತ್ತು.ಅಲ್ಲಿಯವರೆಗೂ ಎಡಬಿಡದ ಕೆಲಸಗಳು. ತಮ್ಮ ಮನೆಯ ವಿವಾಹ ಇತ್ಯಾದಿ ಕಾರ್ಯಗಳನ್ನೂ ಮಂದಿರದ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ ಇಟ್ಟುಕೊಳ್ಳುತ್ತಿದ್ದರು.

ಈ ನಡುವೆ ಮಹಾಗುರುಗಳು ಶಂಕರನಾರಾಯಣದಾಸರಿಗೆ ”ಅಪ್ಪಾ ನಿನ್ನ ಗುರುವಿನ ಸಂಸ್ಥೆಯಲ್ಲಿ ಯಾವುದೇ ಸೇವೆ ಸಲ್ಲಿಸಬೇಕಾಗಿ ಬಂದರೂ ಅದಕ್ಕೆ ಸಿದ್ಧನಿರಬೇಕಪ್ಪಾ. ಜೊತೆಗೆ ನನ್ನನ್ನು ಕೇಳದೆ ಬೇರೆ ಯಾವುದೇ ಸಂಸ್ಥೆಗೂ ನಿನ್ನ ಹೆಸರನ್ನು ಕೊಡುವುದಾಗಲೀ, ಸದಸ್ಯನಾಗುವುದಾಗಲೀ ಬೇಡವಪ್ಪಾ” ಎಂಬ ಸೂಚನೆಯನ್ನು ಕೊಟ್ಟಿದ್ದರಂತೆ. ಈ ಮಾತನ್ನು ಸ್ಮರಿಸುತ್ತಿರುವಾಗ ಅವರಲ್ಲಿ ಒಂದು ಧನ್ಯತೆಯ ಭಾವ ಮೂಡುತ್ತಿದ್ದುದನ್ನು ಗಮನಿಸಿದ್ದೇನೆ. ಅದರಂತೆಯೇ ಅವರು ತಮ್ಮ ಕೊನೆ ಉಸಿರಿರುವವರೆಗೂ ನಡೆದುಕೊಂಡರು.

ಈ ಪೂರ್ವದಲ್ಲಿ 'ಶ್ರೀಭಾರತೀಮಂದಿರ' ವೆಂಬ ಸಾಂಸ್ಕೃತಿಕ ಸಂಸ್ಥೆಯೊಂದು ಮಹಾಗುರುವಿನ ಅಣತಿಯಂತೆ ನಂಜನಗೂಡಿನಲ್ಲಿ ಸ್ಥಾಪಿತವಾಗಿತ್ತು. ಮಹಾಗುರುವಿತ್ತ ಸ್ಫೂರ್ತಿಯ ಹಿನ್ನೆಲೆಯಲ್ಲಿ ತನ್ನ ಸಂಸ್ಕೃತಿಸೇವೆಯನ್ನು ನಡೆಸಿಕೊಂಡು ಬಂದಿತ್ತು. ಶ್ರೀಶ್ರೀಕಂಠರು ತಮ್ಮ ಗುರುವಿನ ಆದೇಶಕ್ಕನುಗುಣವಾಗಿ ಅಲ್ಲಿಯೂ ಕಾರ್ಯದರ್ಶಿಗಳಾಗಿ ದುಡಿದಿದ್ದರು.

ಶ್ರೀಗುರುಪತ್ನೀ ವಿಜಯಲಕ್ಷ್ಮೀಶ್ರೀಮಾತೆಯವರ ಸಾನಿಧ್ಯದಲ್ಲಿ ಅವರು ಒಂದು ಶಿಶುವಿನಂತೆ ಆಗಿಬಿಡುತ್ತಿದ್ದರು. ಶ್ರೀಗುರುವೂ ಅನೇಕ ಭಾರಿ ಶ್ರೀಮಾತೆಯವರನ್ನು ಕರೆ ಎನ್ನುವುದರ ಬದಲು “ನಿನ್ನ ಅಮ್ಮನನ್ನು ಕರೆಯಪ್ಪಾ” ಎಂದೇ ಹೇಳುತ್ತಿದ್ದರಂತೆ. ಶ್ರೀಮಾತೆಯವರನ್ನು ಕೇಳದೆ ಎಲ್ಲಿಗೂ ಹೋಗುತ್ತಿರಲಿಲ್ಲ.ಏನನ್ನೂ ಮಾಡುತ್ತಿರಲಿಲ್ಲ. ತಾವಿರುವುದು ಅವರ ಸೇವೆ, ಸಂಕಲ್ಪಗಳ ವಿಸ್ತಾರಕ್ಕೆ ಎಂಬ ಒಂದೇ ಖಚಿತವಾದ ತೀರ್ಮಾದಲ್ಲಿ ಇದ್ದುಬಿಡುತ್ತಿದ್ದರು.

ಮಹಾಗುರುಗಳು ಅವಿರತವಾಗಿ ಮಹರ್ಷಿಸಂಸ್ಕೃತಿಯನ್ನು ಕುರಿತು ಪಾಠ-ಪ್ರವಚನಗಳನ್ನೂ, ಅವುಗಳನ್ನು  ಶಿಷ್ಯರಿಗೆ ಮನಗಾಣಿಸಲು ಅದ್ಭುತವಾದ ಪ್ರಯೋಗಗಳನ್ನು  ಮಾಡುತ್ತಿದ್ದರಷ್ಟೆ. ಒಂದು ಆತ್ಮಸಿದ್ಧವೂ, ಸಹಜಸಿದ್ಧವೂ ಸತ್ಯಸಿದ್ಧವೂ ಆದ  ಆ ವಿಚಾರ ಸರಣಿಯನ್ನು ಶಿಷ್ಯರಲ್ಲಿ ಬೆಳೆಸಲು ಅವರು ಅಹೋರಾತ್ರಿ ದುಡಿಯುತ್ತಿದ್ದರು. ಆ ವಿದ್ಯಾ ಸರಣಿಯನ್ನು ಬೆಳೆಸಲು ಶ್ರೀಮಂದಿರವು ಕಾಲಕಾಲಕ್ಕೆ ಹಾಕಿಕೊಳ್ಳುತ್ತಿದ್ದ ಯೋಜನೆಗಳನ್ನು ರೂಪಿಸುವಲ್ಲಿಯೂ ಮತ್ತು ಕಾರ್ಯಗತಗೊಳಿಸುವಲ್ಲಿಯೂ ಸದಾ ಮಗ್ನರಾಗಿರುತ್ತಿದ್ದರು. ಶ್ರೀಶಂಕರನಾರಾಯಣದಾಸರು ಶ್ರೀಮಂದಿರದಿಂದ ಪ್ರಕಾಶಗೊಳ್ಳುತ್ತಿರುವ ಆರ್ಯಸಂಸ್ಕೃತಿ ಮಾಸಪತ್ರಿಕೆಯ ಸಂಪಾದಕರಾಗಿ ಸುಮಾರು 27 ವರ್ಷಗಳ ಸುದೀರ್ಘಕಾಲ ಸೇವೆ ಸಲ್ಲಿಸಿದರು. ಹಾಗೆಯೇ ಜ್ಞಾನವಿಜ್ಞಾನಪೂರ್ಣವಾದ ಮಹಾಗುರುವಿನ ಪ್ರವಚನಗಳ ಸಂಕಲನವಾದ 'ಅಮರವಾಣೀ' ಗ್ರಂಥಮಾಲೆಯ ಪ್ರಕಾಶನದಲ್ಲಿಯೂ ಮುಂಚೂಣಿಯಲ್ಲಿದ್ದು ತಾವಿರುವಷ್ಟು ಕಾಲವೂ ಅದನ್ನು ನಿರ್ವಹಿಸಿದರು. ಮಹಾಗುರು ಕೊಟ್ಟ ವಿದ್ಯಾಸಂಪತ್ತನ್ನು ಲೋಕಕ್ಕೆ ಹರಿಸುವಲ್ಲಿ ಈ ಪ್ರಕಾಶನಗಳ ಪಾತ್ರದ ಬಗ್ಗೆ ಅವರಿಗೆ ಅತೀವ ಧನ್ಯತೆಯ ಭಾವವಿತ್ತು.

ಅನೇಕ ಮಹನೀಯರು ತಮ್ಮ ಉಪನ್ಯಾಸ, ಗ್ರಂಥರಚನೆಗಳ ಮುಖಾಂತರ ತಮ್ಮ ವಿಷಯಗಳನ್ನು ಜಗತ್ತಿಗೆ ಹಂಚುವುದುಂಟು. ಆದರೆ ಶ್ರೀಶಂಕರನಾರಾಯಣದಾಸರು ತಮ್ಮ ವ್ಯಕ್ತಿಗತವಾದ ಮಾತುಕತೆಗಳಿಂದ ಅದನ್ನು ನಿಶ್ಶ್ಯಬ್ಧವಾಗಿ ಸಾಧಿಸುತ್ತಿದ್ದರು. ಮುಕ್ತವಾದ ಚರ್ಚೆಗಳ ಮೂಲಕ ಕಿರಿಯ ಸಾಧಕರ ಮನಸ್ಸನ್ನು ವಿಕಾಸಗೊಳ್ಳುವಂತೆ ಮಾಡುತ್ತಿದ್ದರು. ಸೇವಾಮನೋಭಾವ ಅವರಲ್ಲಿ ವೃದ್ಧಿಸುವಂತೆ ನೋಡಿಕೊಳ್ಳುತ್ತಿದ್ದರು. ಸನಾತನಾರ್ಯಭಾರತಮಹರ್ಷಿಗಳ ಸಂಸ್ಕೃತಿಯ ಶ್ರೇಷ್ಠತೆಯನ್ನು ಮನಗಾಣಿಸಲು ಚಿಂತನೆಗೆ ತೊಡಗಿಸುವಂತಹ ಪ್ರಶ್ನೆಗಳನ್ನು ಕೇಳುತ್ತಿದ್ದರು. ಶ್ರೀಮಂದಿರವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಭಾವಿಸಿ ತಮ್ಮ ತನುಮನಧನಜೀವನವನ್ನು ಮಹಾಗುರುದಂಪತಿಗಳ ಪಾವನವಾದ ಪಾದಕಮಲಗಳಲ್ಲಿ ಅಂತರಂಗ-ಬಹಿರಂಗಗಳಲ್ಲಿ ಸಮರ್ಪಿಸಿಕೊಂಡು, ಎಲ್ಲರಿಗೂ ಒಂದು ಮೇಲ್ಪಂಕ್ತಿಯಾಗಿರುವ, ಹಿರಿಯರಾದ ಶ್ರೀಶಂಕರನಾರಾಯಣದಾಸರಿಗೆ ಶ್ರೀಗುರುಸ್ಮರಣೆಗಳೊಡನೆ ಪ್ರಾಣಪ್ರಣಾಮಗಳು.
ಶ್ರೀಶಂಕರನಾರಾಯಣದಾಸರ ಕುರಿತಾದ ಈ ಸಂಕ್ಷಿಪ್ತವಾದ ಪರಿಚಯವು ಮಹಾಗುರುದಂಪತಿಗಳಿಗೆ ಪ್ರೀತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ.