Saturday, July 27, 2019

ಸಂಸ್ಕಾರ ಲೇಖನಮಾಲಿಕೆ - ಉಪಸಂಹಾರ (Samskara lekhanamalike - upasamhara)

ಲೇಖಕರು: ತಾರೋಡಿ ಸುರೇಶ 



ಈ ಲೇಖನಮಾಲೆಯಲ್ಲಿ ವಿವಿಧ ಸಂಸ್ಕಾರಗಳ ಕಿರುಪರಿಚಯವನ್ನು ನೋಡಿದೆವು. ಈಗ ಅದಕ್ಕೆ ಒಂದು ಮಂಗಳವನ್ನು ಹಾಡಬೇಕಿದೆ. ಸಂಸ್ಕಾರ ಎನ್ನುವ ಪದವು ಅನೇಕ ಅರ್ಥಗಳಲ್ಲಿ ಬಳಸಲ್ಪಡುತ್ತಿದೆ. ಪರಿಷ್ಕಾರ,ಶುದ್ಧಿ,ಉತ್ಕರ್ಷ, ವಿದ್ಯೆ ಇತ್ಯಾದಿ. ಆದರೆ ಇಂದು ಶ್ರದ್ಧೆಯ ಕೊರತೆ, ಮರ್ಮರಾಹಿತ್ಯದಿಂದಾಗಿ ಶಾಸ್ತ್ರಕ್ಕಾಗಿ ಮಾಡಿ ಮುಗಿಸುವುದಾಗಿದೆ. ಕರ್ಮದಲ್ಲಿ ಒಂದು ರುಚಿಯನ್ನು ಅನುಭವಿಸುತ್ತಿಲ್ಲ. ಸಂಸ್ಕಾರವೆಂದರೇನು? ಮೌಲಿಕವಾಗಿ ಶುದ್ಧಿ ಎಂದರ್ಥ. ಕೊಳೆಯನ್ನು ತೆಗೆದು ಹೊಳೆಯುವಂತೆ ಮಾಡುವುದು. ಮೂಲರೂಪಕ್ಕೆ ತರುವುದು. “ಸ್ವಸ್ವರೂಪಕ್ಕೆ ಬರುವಂತೆ ಮಾಡುವುದು” ಎಂದು ಶ್ರೀರಂಗಮಹಾಗುರುಗಳು ನುಡಿಯುತ್ತಿದ್ದರು. ಯಾವುದಕ್ಕೆ ಸಂಸ್ಕಾರ? ದೇಹ, ದ್ರವ್ಯಗಳು, ಸಪ್ತಧಾತುಗಳು ಮತ್ತು ಮನಸ್ಸಿಗೆ. ಕೆಲವರು ಆತ್ಮನಿಗೂ ಉಂಟು ಎನ್ನುತ್ತಾರೆ. ಇಲ್ಲಿ ಆತ್ಮನ ಸ್ಮೃತಿ ಬರುವುದೇ ಆತ್ಮನಿಗೆ ಶುದ್ಧಿ. ಪರಮಾತ್ಮಸಾಕ್ಷಾತ್ಕಾರದ ಲಾಭ. ಎಲ್ಲ ಶುದ್ಧಿಗೂ ಆತ್ಮಜ್ಞಾನದಲ್ಲಿಯೇ ತಾತ್ಪರ್ಯ. 16 ಸಂಸ್ಕಾರಗಳು. ಇವುಗಳನ್ನು ವಿಸ್ತರಿಸಿ 40 ಸಂಸ್ಕಾರಗಳು ಎನ್ನುತ್ತಾರೆ. ಕೊನೆಯಲ್ಲಿ ಅನಂತ ಸಂಸ್ಕಾರಗಳಿವೆಯೆಂದು ಶಾಸ್ತ್ರವು ಹೇಳುತ್ತದೆ. ಅನಂತವಾದ ದೋಷಗಳು ಏರ್ಪಡುಬಹುದಾದ್ದರಿಂದ ಚಿಕಿತ್ಸೆಯೂ ಅಷ್ಟು ಬಗೆಯಲ್ಲಿರುವುದು ಸಹಜವೇ. ಪೂರ್ವ ಮತ್ತು ಅಪರ ಎಂದೂ ವಿಭಾಗವಿದೆ. ದಯೆ, ಕ್ಷಮೆ, ಅನಸೂಯಾ, ಶುಚಿ, ಅನಾಯಾಸ, ಮಂಗಲ, ಅಕಾರ್ಪಣ್ಯ ಮತ್ತು ಅಸ್ಪೃಹತೆ- ಇವುಗಳನ್ನು ಆತ್ಮಗುಣಗಳೆಂದು ಋಷಿಗಳು ಕರೆದಿದ್ದಾರೆ. ಸಂಸ್ಕಾರಗಳಿಂದ ಆತ್ಮಗುಣಗಳ ಪ್ರಾಪ್ತಿ. ಆತ್ಮಗುಣದಿಂದಾಗಿ ಬ್ರಹ್ಮಪದ ಮತ್ತು ಸದ್ವಂಶ.

ಎಲ್ಲ ಜೀವಿಗಳಿಗೂ ಸಂಸ್ಕಾರ ಬೇಕು. ಆದರೆ ಪರಮಹಂಸ ಸನ್ಯಾಸಿಗೆ ಅಗತ್ಯವಿಲ್ಲದಿದ್ದರೂ ಅಂತ್ಯಸಂಸ್ಕಾರ ನಡೆಸುವುದು ಕರ್ತೃವಿಗೆ ಶ್ರೇಯಸ್ಕರ. ಕೆಲವು ಸಂಸ್ಕಾರಗಳನ್ನು ಪತಿ ಅಥವಾ ತಂದೆಯೇ ಮಾಡಬೇಕು. ಅಂತ್ಯಸಂಸ್ಕಾರವನ್ನು ಬೇರೆಯವರು ಮಾಡಬೇಕಾಗುವುದು. ಉಪನಯನವನ್ನು ತಂದೆ ಅಥವಾ ಆಚಾರ್ಯನು ಮಾಡುತ್ತಾನೆ. ಒಟ್ಟಾರೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು, ಬಂಧುಮಿತ್ರರು, ಎಲ್ಲರಿಗೂ ಸಂಸ್ಕಾರ. ಸಂಪ್ರದಾಯಗಳಲ್ಲಿ ಕೆಲವುವ್ಯತ್ಯಾಸಗಳಿರುತ್ತವೆ.ಈ ಸಂಸ್ಕಾರಗಳನ್ನು ಸಮಂತ್ರಕವಾಗಿಯೂ ಹಾಗೆಯೇ ಅಮಂತ್ರಕವಾಗಿಯೂ ಆಚರಿಸುವುದುಂಟು. ಮಂತ್ರ-ತಂತ್ರ-ದ್ರವ್ಯ ಇವುಗಳೆಲ್ಲದಕ್ಕೂ ತಕ್ಕ ಪಾತ್ರವಿದೆ. ಒಂದೊಂದನ್ನೂ ಋಷಿಗಳು ಕೊಟ್ಟ ಕ್ರಮದಲ್ಲಿ ವಿನಿಯೋಗಿಸಬೇಕು. “ಮರ್ಮವರಿತು ಕರ್ಮವನ್ನಾಚರಿಸೀಪ್ಪ” ಎಂಬುದು ಶ್ರೀರಂಗಮಹಾಗುರುಗಳ ವಾಣಿ.

ಸ್ನಾನ, ಸಂಕಲ್ಪಗಳು, ಮಹಾಗಣಪತಿಪೂಜೆ, ನಾಂದೀಶ್ರಾದ್ಧ, ಮಾತೃಗಣಪೂಜೆ, ಪುಣ್ಯಾಹವಾಚನ ಮುಂತಾದ ಪೂರ್ವಕ್ರಿಯೆಗಳ ನಂತರ ಸಂಸ್ಕಾರಗಳನ್ನು ಆಚರಿಸಬೇಕು. ಗರ್ಭಾಧಾನ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ನಿಷ್ಕ್ರಮಣ, ಅನ್ನಪ್ರಾಶನ, ಚೂಡಾಕರ್ಮ, ಉಪನಯನ, ನಾಲ್ಕು ವೇದವ್ರತಗಳು, ಸ್ನಾನ, ವಿವಾಹ ಮತ್ತು ಅಂತ್ಯೇಷ್ಟಿ-ಇವೇ ನಿಷೇಕಾದಿ ಸ್ಮಶಾನಾಂತವಾಗಿರುವ 16 ಪ್ರಧಾನ ಸಂಸ್ಕಾರಗಳು. ಅನ್ಯಾನ್ಯ
ಗೃಹ್ಯಸೂತ್ರಕಾರರು ಬೇರೆಬೇರೆ ಸಂಖ್ಯೆಗಳನ್ನು ಹೇಳಿದ್ದಾರೆ.ಒಂದು ಗುಂಪಿನಲ್ಲಿ ಒಂದೆರಡು ಇಲ್ಲದಿದ್ದರೆ ಅದನ್ನು ಇನ್ನೊಂದು ಗುಂಪಿನಲ್ಲಿ ಸೇರಿಸಿರುತ್ತಾರೆ. ಪರಮಾತ್ಮಸುಖ, ಆತ್ಮಗುಣ, ಸದ್ವಂಶ ಇವುಗಳ ಪ್ರಾಪ್ತಿಗಾಗಿಯೂ, ಉತ್ತಮ ಸಮಾಜಕ್ಕಾಗಿಯೂ ಸಂಸ್ಕಾರಗಳು ಅತ್ಯವಶ್ಯ. ದಿನಚರಿ, ಹಬ್ಬ-ವ್ರತಗಳರೂಪದಲ್ಲಿ ವಾರ್ಷಿಕ ಚರ್ಯೆ ಹಾಗೂ ಜನನಾರಭ್ಯ ಮೃತ್ಯುವಿನವರೆಗೆ ಸಂಸ್ಕಾರಗಳು-ಹೀಗೆ ಪುರುಷಾರ್ಥಮಯವಾದ ಬಾಳಾಟವನ್ನು ರೂಪಿಸಿಕೊಟ್ಟ ಮಹರ್ಷಿಭಾರತಕ್ಕೆ ನಮೋನಮಃ  

ಸೂಚನೆ: 27/07/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.