Wednesday, July 3, 2019

ಕೃಷ್ಣಾನುಕರಣೆ (Krishnanukarane)

ಲೇಖಕರು: ವಿದ್ವಾನ್ ಬಿ.ಜಿ. ಅನಂತ




ಪೌಂಡ್ರಕ ವಾಸುದೇವ ಎಂಬ ಹೆಸರಿನ ರಾಜನೊಬ್ಬನಿದ್ದ.  ಅವನು ಶ್ರೀಕೃಷ್ಣನ ಕಾಲದವನು. ಆ ವೇಳೆಗಾಗಲೇ ಶ್ರೀಕೃಷ್ಣನು ಬಹಳ ಜನಪ್ರಿಯವಾಗಿದ್ದ. ಅವನ ಸಾಹಸಗಳು, ಅವನ ಸುಂದರ ರೂಪ, ಯಾರಲ್ಲೂ  ಇಲ್ಲದ ಅವನ ಆಯುಧಗಳು, ನವಿಲುಗರಿ ಎಲ್ಲವೂ ಕೃಷ್ಣನನ್ನು ವಿಶಿಷ್ಟ ವ್ಯಕ್ತಿಯನ್ನಾಗಿ ಮಾಡಿದ್ದವು.


ಶ್ರೀಕೃಷ್ಣನ ತಂದೆ ವಸುದೇವ. ಕಾಕತಾಳೀಯವಾಗಿ ಪೌಂಡ್ರಕನ ತಂದೆಯ ಹೆಸರೂ ಕೂಡ ವಸುದೇವ ಎಂದೇ.  ಹಾಗಾಗಿ ವಸುದೇವನ ಮಗನಾದ್ದರಿಂದ ನಿಜವಾದ ವಾಸುದೇವನು ನಾನೇ ಎಂಬ ಭ್ರಮೆಯು ಪೌಂಡ್ರಕನನ್ನು ಆವರಿಸಿತು.  ಕೃಷ್ಣನ ವೇಷಭೂಷಣಗಳು, ಹಾವಭಾವಗಳೆಲ್ಲವನ್ನೂ ಪೌಂಡ್ರಕನು ಅನುಕರಿಸತೊಡಗಿದ. ಕೃಷ್ಣನಂತೆಯೇ ಪೀತಾಂಬರವನ್ನುಟ್ಟ,  ಕಿರೀಟ ತೊಟ್ಟ, ಅದಕ್ಕೊಂದು ನವಿಲುಗರಿಯನ್ನೂ ಸಿಕ್ಕಿಸಿಕೊಂಡ. ಊದಲು ಬಾರದಿದ್ದರೂ ಚಿನ್ನದ ಕೊಳಲನ್ನು ಹಿಡಿದ.ಎಡ-ಬಲ ಭುಜಗಳಿಗೆ ಶಂಖ ಚಕ್ರಗಳನ್ನು ಕಟ್ಟಿಕೊಂಡ. ವಿಷ್ಣುವಿನ ವಾಹನವಾದ ಗರುಡನನ್ನು ಹೋಲುವ ಕೃತ್ರಿಮವಾದ ಗರುಡನನ್ನು ಮಾಡಿಸಿಕೊಂಡ.  ಇವೆಲ್ಲವುಗಳಿಂದ ಅವನ ಭ್ರಮೆಯು ಮತ್ತಷ್ಟು ಬಲಿಯುತ್ತ ಹೋಯಿತು. ಸದಾ ಕಾಲದಲ್ಲೂ ‘ನಾನೇ ಕೃಷ್ಣ ನಾನೇ ಕೃಷ್ಣ’ ಎಂಬ ಭಾವದಿಂದ ನಿರಂತರ ಕೃಷ್ಣ ಧ್ಯಾನವು ಮೊದಲಾಯಿತು.

ಕೊನೆಗೊಂದು ದಿವಸ ಕೃಷ್ಣನಿಗೇ ಹೇಳಿ ಕಳುಹಿಸಿದನಂತೆ- ನಾನೇ ನಿಜವಾದ ಕೃಷ್ಣ, ನೀನು ಕಪಟ ವೇಷಧಾರಿ, ಹಾಗಾಗಿ ನಿನ್ನ ವೇಷಭೂಷಣಗಳನ್ನು ಕಳಚಿ ನನಗೆ ಶರಣಾಗು. ಇಲ್ಲವೇ ಯುದ್ಧಕ್ಕೆ ಬಾ ಎಂದು.

ಸರಿ ಇದೇನು ತಮಾಷೆ ಎಂದು ನೋಡಲು ಶ್ರೀಕೃಷ್ಣನೇ ಯುದ್ಧಕ್ಕೆ ಬರುತ್ತಾನೆ.  ನೋಡಿದರೆ ಆಶ್ಚರ್ಯವಾಗುವಂತೆ ತನ್ನ ತದ್ರೂಪಿನಂತೆ ನಿಂತಿದ್ದಾನೆ ಪೌಂಡ್ರಕ ವಾಸುದೇವ. ಅವನನ್ನು ನೋಡಿ ಕೃಷ್ಣನು ಪಕಪಕನೇ ನಕ್ಕನಂತೆ. ಯುದ್ಧದಲ್ಲಿ ಪೌಂಡ್ರಕನನ್ನು ತನ್ನ ಚಕ್ರಾಯುಧದಿಂದ ಸಂಹರಿಸುತ್ತಾನೆ ಶ್ರೀಕೃಷ್ಣ. ಆಗ ಎಲ್ಲರೂ ನೋಡುವಂತೆ ಪೌಂಡ್ರಕನ ದೇಹದಿಂದ ಹೊರ ಹೊರಟ ಜ್ಯೋತಿಯೊಂದು ಶ್ರೀಕೃಷ್ಣನಲ್ಲಿ ಸೇರಿಕೊಂಡಿತು.  ಎಂದರೆ ಪೌಂಡ್ರಕನಿಗೆ ಸದ್ಗತಿಯೇ ದೊರೆಯಿತು.
   
ತಮ್ಮನ್ನೇ ತಾವು ಮರೆತು ಕೇವಲ ಭಗವಂತನನ್ನು ಧ್ಯಾನಿಸುವುದು ದೊಡ್ಡ ದೊಡ್ಡ ಭಕ್ತರಿಗೂ ಕಷ್ಟಕರವಾದುದು.  ಆದರೆ ಪೌಂಡ್ರಕನ ಕೃಷ್ಣಾನುಕರಣೆಯು, ತಾನು ಪೌಂಡ್ರಕ ವಾಸುದೇವ ಎಂಬುದನ್ನೇ ಮರೆತು ಶ್ರೀಕೃಷ್ಣನೇ ತಾನು ಎಂಬ ತಾದಾತ್ಮ್ಯವು  ಬೆಳೆದು ಬಿಡುವಷ್ಟು ಗಾಢವಾಗಿದ್ದಿತು. ಮಹಾ ಭಕ್ತರಿಗೂ ಈ ಮಟ್ಟದ ತಾದಾತ್ಮ್ಯವು ಸುಲಭವಾಗಿ ದೊರಕುವಂಥದ್ದಲ್ಲ.

  ಹೀಗೆ ಜೀವನದುದ್ದಕ್ಕೂ ತನ್ನನ್ನು ತಾನು ಕೃಷ್ಣ ಎಂದುಕೊಂಡ ಪೌಂಡ್ರಕನು ಕೊನೆಯಲ್ಲಿ ಕೃಷ್ಣನಲ್ಲಿ ಸೇರಿ ನಿಜವಾಗಿ ಕೃಷ್ಣನೇ ಆಗಿ ಹೋಗುತ್ತಾನೆ. ಇದೊಂದು  ಪರಮಾಶ್ಚರ್ಯಕರವಾದ ಭಕ್ತಿಯ ವಿಧ.


ಸೂಚನೆ:  3/07/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.