ಲೇಖಕರು: ತಾರೋಡಿ ಸುರೇಶ
ಜನಿಸಿದವನಿಗೆ ಮೃತ್ಯುವು ಅನಿವಾರ್ಯ. ಹುಟ್ಟಿದವನು ಸಾಯಲೇಬೇಕು. ಅದರ ಬಗ್ಗೆ ಹೆಚ್ಚಾಗಿ ಯೋಚಿಸದೇ ಇರುವವರೇ ಲೋಕದಲ್ಲಿ ಹೆಚ್ಚು. ಬಂದಾಗ ನೋಡಿಕೊಳ್ಳೋಣ ಎಂದರೂ ಅದು ಎದುರಾದಾಗ ಶರಣಾಗುವುದು ಬಿಟ್ಟರೆ ಅನ್ಯಮಾರ್ಗವಿರುವುದಿಲ್ಲ.ಇನ್ನು ಕೆಲವರು ಜೀವವಿಮೆ ಮಾಡಿಸಿಕೊಳ್ಳುವುದುಂಟು.ಆದರೆ ಅದು ಇವರ ದೇಹವನ್ನೇನೂ ಉಳಿಸಲಾರದು. ಮರಣಾನಂತರ ‘ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ’-ಬಹುವರ್ಷ ಸಂಗಾತಿಯಾಗಿ ಬಂದವಳೇ ಮೃತದೇಹವನ್ನು ನೋಡಿ ಜುಗುಪ್ಸೆಗೊಳ್ಳುತ್ತಾಳೆ’ ಎಂದು ಶ್ರೀಶಂಕರರು ಎಚ್ಚರಿಸುತ್ತಾರೆ. ಜೀವವು ತನಗಾಗಿ ಕಟ್ಟಿಕೊಂಡ ಗೃಹ-ದೇಹ ಕೈತಪ್ಪಿತು. ನಂತರ ಜೀವದ ಪಾಡೇನು? ಅದನ್ನು ಈ ಸ್ಥಿತಿಯಲ್ಲಿ ಶಾಸ್ತ್ರೀಯವಾಗಿ ‘ಪ್ರೇತ’ ಎಂದು ಕರೆಯುತ್ತಾರೆ. ಪ್ರೇತ ಎಂದರೆ ‘ಇಲ್ಲಿಂದ ಹೊರಟಿದ್ದು’ ಎಂದರ್ಥ. ಇಲ್ಲಿಂದ ಹೊರಟ ಜೀವದ ಗಮ್ಯಸ್ಥಾನ ಯಾವುದು? ಅದರ ಗತಾಗತಿ ಏನು? ಇವೆಲ್ಲವೂ ನಿಗೂಢವೇ.
ಸಾಮಾನ್ಯ ದೃಷ್ಟಿಗೆ ಗೋಚರಿಸದ ವಿಷಯಗಳು ಸೂಕ್ಷ್ಮದರ್ಶಕ ಯಂತ್ರಕ್ಕೆ ಗೋಚರವಾಗುತ್ತವೆ. ಹಾಗೆಯೇ ನಮ್ಮ ಪೂರ್ವಜರಾದ ಮಹರ್ಷಿಗಳು ತಪಸ್ಸಿನಿಂದ ದಿವ್ಯದೃಷ್ಟಿಯನ್ನು ಸಂಪಾದಿಸಿ ಜೀವನದ ಮೊಟ್ಟಮೊದಲ ಆಶ್ರಯವಾದ ದೇಹವನ್ನು ಆಳವಾದ ಶೋಧನೆಗೊಳಪಡಿಸಿದರು. ಆಗ ದೇಹವೆಂಬ ಪುರದಲ್ಲಿ ವಾಸವಾಗಿದ್ದ ಜೀವ ಎಂಬ ಪುರುಷನನ್ನು ಕಂಡರು. ನಂತರ ಸಮಗ್ರವಾಗಿ ಜೀವದ ಗತಾಗತಿಯನ್ನು ಅರ್ಥಮಾಡಿಕೊಂಡರು. ಈ ಅನ್ವೇಷಣೆಯಿಂದ ಜೀವಸಂಚಾರದ ಕ್ಷೇತ್ರಗಳನ್ನು ಆಮೂಲಾಗ್ರವಾಗಿ ಅರಿತು ಅದಕ್ಕೆ ತಕ್ಕಂತೆ ಬಾಳಿನ ವಿಧಾನವನ್ನು ಅಳವಡಿಸಿದರು. ‘ಸ್ವದೇಶೋ ಭುವನತ್ರಯಮ್’ ಎಂಬುದಾಗಿ, ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ- ಈ ಮೂರೂ ಕ್ಷೇತ್ರದ ಸಂಚಾರ ಯೋಗ್ಯತೆ ಜೀವಕ್ಕೆ ಇರುವುದರಿಂದ ಎಲ್ಲಿಯೂ ಅಡೆತಡೆಗಳು ಬರದಂತೆ ಎಚ್ಚರಿಕೆಯಿಂದ ಬಾಳಬೇಕು ಎಂಬ ಸಂದೇಶವನ್ನೂ ಕೊಟ್ಟರು. ದೇಹತ್ಯಾಗದ ನಂತರ ಪ್ರೇತ ಸ್ಥಿತಿಯಲ್ಲಿ ಅದು ಹೆಚ್ಚು ಕಾಲ ಇರಲಾರದೆ ಪರಿತಪಿಸುತ್ತದೆಯಂತೆ. ತಕ್ಷಣ ಅದರ ಮುಂದಿನ ಗತಿಯನ್ನು- ಸದ್ಗತಿಯನ್ನು ಅದು ಪಡೆಯಬೇಕು. ಅಂತಃಕರಣಗಳು, ಪುಣ್ಯ-ಪಾಪಗಳು, ಪ್ರಾಣೇಂದ್ರಿಯಗಳೂ ಮರಣಾನಂತರ ಜೀವವನ್ನು ಹಿಂಬಾಲಿಸಿ ಸಾಗುತ್ತವೆ. ಆ ಕರ್ಮಗಳ ತಳ್ಳುವಿಕೆಗನುಗುಣವಾಗಿ ಅವುಗಳ ಫಲವನ್ನು ಪಡೆಯಲು ತಕ್ಕುದಾದ ದೇಹವನ್ನು(ಲೋಕವನ್ನು) ಅದು ಮುಂದೆ ಹೊಂದುತ್ತದೆ.
ನಮ್ಮ ಜಾಗ್ರದವಸ್ಥೆಯಲ್ಲಿ ಜೀವನದ ಮಹಾಧ್ಯೇಯವಾದ ಪರಮಾತ್ಮಸಾಕ್ಷಾತ್ಕಾರಕ್ಕೆ ಬೇಕಾದ ಜೀವನದ ರೂಪರೇಷೆಗಳನ್ನು ಋಷಿಗಳು ರೂಪಿಸಿಕೊಟ್ಟಂತೆಯೇ, ಮರಣಾನಂತರವೂ ಆ ಜೀವವು ಸದ್ಗತಿಯನ್ನು ಪಡೆದು ಬಹುಬೇಗ ಗುರಿಯನ್ನು ಮುಟ್ಟಲು ಬೇಕಾದ ಕರ್ಮಗಳನ್ನು ಅಳವಡಿಸಿಕೊಟ್ಟಿದ್ದಾರೆ. ಈ ಅಂತ್ಯೇಷ್ಟಿ ಎಂಬ ಸಂಸ್ಕಾರವು ಈ ಸ್ಥೂಲಶರೀರವನ್ನು ಬಿಡುವುದಕ್ಕೆ ಸ್ವಲ್ಪ ಮೊದಲೂ ಮತ್ತು ಬಿಟ್ಟ ನಂತರವೂ ಆ ಜೀವಿಗೆ ಆತ್ಮಭಾವ ಮತ್ತು ಅದನ್ನು ಸೇರಲು ಬೇಕಾದ ನಾಡೀಪಥ-ಇವುಗಳು ವಿಸ್ಮೃತವಾಗದಂತೆ ಜ್ಞಾಪಿಸುತ್ತದೆ. ಜೀವದ ಕರ್ಮಗಳು, ಅದರ ಈಗಿನ ಸ್ಥಿತಿ, ಜೀವದ ಜಾಡನ್ನನುಸರಿಸಿ ಸದ್ಗತಿಯನ್ನು ಏರ್ಪಡಿಸಲು ಮಾಡಬೇಕಾದ ಕರ್ಮಗಳು, ಇವೆಲ್ಲವನ್ನೂ ಯೋಗದೃಷ್ಟಿಸಂಪನ್ನನಾದ ಪುರೋಹಿತನು ನಿರ್ಧರಿಸಿ ಅದರಂತೆಯೇ ನಡೆಸಿಕೊಡಬೇಕು. ಈ ಸಂಸ್ಕಾರ-ಕರ್ಮಗಳನ್ನು ಬದ್ಧಜೀವಿಯ ಮುಕ್ತಿಗಾಗಿ ಮಾಡಬೇಕು. ಮೃತನು ಜ್ಞಾನಿಯಾಗಿದ್ದಲ್ಲಿ ವಾಸ್ತವಿಕವಾಗಿ ಅವನಿಗೆ ಯಾವ ಸಂಸ್ಕಾರ-ಕರ್ಮಗಳ ಅಗತ್ಯವಿಲ್ಲದಿದ್ದರೂ ಪಿತೃದೇವತೆಗಳ ಆಶೀರ್ವಾದವು ಕರ್ತೃವಿಗೂ, ಇಡೀ ವಂಶಕ್ಕೂ ಲಭಿಸುತ್ತದೆ. ಆದ್ದರಿಂದ
ಅಪರಸಂಸ್ಕಾರವನ್ನು ಬಿಡಬಾರದು.
ನಾವು ಇಲ್ಲಿ ಮಾಡುವ ಕರ್ಮವು ದೇಹವನ್ನು ಬಿಟ್ಟ ಜೀವಿಗಳಿಗೆ ಹೇಗೆ ಉಪಕರಿಸುತ್ತದೆ ಎಂಬ ಪ್ರಶ್ನೆ ಸಹಜ. ಸಮಾನಧರ್ಮದ (Wave-length) ಎರಡು ವಸ್ತುಗಳು ಪರಸ್ಪರ ಸ್ಪಂದಿಸುತ್ತವೆ ಎನ್ನುವುದು ನಿತ್ಯಜೀವನದ ಅನುಭವದ ವಿಷಯ. ಶ್ರೀರಂಗಮಹಾಗುರುಗಳು ಒಂದೇ ಶೃತಿಯಲ್ಲಿಟ್ಟಿದ್ದ ಎರಡು ತಂಬೂರಿಗಳಲ್ಲಿ ಒಂದನ್ನು ಮೀಟಿದರೆ ಇನ್ನೊಂದು ಅದನ್ನು ಅನುರಣಿಸುತ್ತದೆಯಪ್ಪಾ” ಎಂಬ ಉದಾಹರಣೆಯನ್ನು ಕೊಡುತ್ತಿದ್ದರು. ಹಾಗೆ ಮೀಟಿ ತೋರಿಸುತ್ತಿದ್ದುದೂ ಉಂಟು. ಪ್ರಾಣವಿದ್ಯೆಯನ್ನು ಬಲ್ಲ ಮಹಾತ್ಮರ ನೇತೃತ್ವದಲ್ಲಿ ಕರ್ಮಗಳು ನಡೆದಾಗ ತಮ್ಮ ಪ್ರಾಣಗಳ ಮೂಲಕವೇ ಮೃತಜೀವಕ್ಕೆ ಬೇಕಾದ ಧರ್ಮಸಂಕ್ರಮಣ ಮಾಡಿಸಿ ಸದ್ಗತಿಯನ್ನು ಕೊಡಬಲ್ಲರು. ಅದಕ್ಕೆ ಪೋಷಕವಾಗುವಂತೆ ಕಲಾಪಗಳನ್ನೂ ಋಷಿಗಳು ಜೋಡಿಸಿಕೊಟ್ಟಿದ್ದಾರೆ. (ಮುಂದುವರೆಯುತ್ತದೆ).