Thursday, July 11, 2019

ಕಾಯಬೇಕಪ್ಪ, ಕಾಯಬೇಕಪ್ಪ, ಕಾಯಬೇಕಪ್ಪ. (Kaayabekappa, Kaayabekappa, Kaayabekappa)

ಲೇಖಕರು: ತಾರೋಡಿ ಸುರೇಶ  


ಶ್ರೀಗುರುವಿನ ಬಳಿ ಶಿಷ್ಯರೊಬ್ಬರು  ತಮ್ಮ ಭಾವಸಮರ್ಪಣೆ ಮಾಡಲು ಬಂದರು. ನಮಸ್ಕರಿಸಿದರು. ಶ್ರೀಗುರುವಾದರೋ ಪರಮಶಾಂತ ಸ್ಥಿತಿಯಿಂದ ಬಹಿರ್ಮುಖರಾಗಿ ತುಂಬುಹೃದಯದಿಂದ ಶಿಷ್ಯರನ್ನು ಆಶೀರ್ವದಿಸಿ ಕ್ಷೇಮಸಮಾಚಾರವನ್ನು ವಿಚಾರಿಸಿದರು. ನಮ್ಮ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನ ಅತ್ಯಂತ ದೊಡ್ಡದು. ಭಗವಂತನಿಗೆ ಆದಿಗುರುವೆಂದೇ ಕರೆಯುತ್ತಾರೆ. ಅಂತಹ ಗುರುತ್ವವನ್ನು ಹೊತ್ತ ಮಾನುಷದೇಹಧಾರಿಯಾಗಿರುವ ಗುರುವಿಗೂ ಅದೇ ಸ್ಥಾನ-ಮಾನ. ಕಾರಣ, ಗುರುವು ದೇವರನ್ನು ತೋರಿಸಬಲ್ಲ ದೇವರು. ಶಿಷ್ಯನನ್ನು ಉದ್ಧರಿಸುವ ಪರಮಾಪ್ತನಾದ ದೀರ್ಘಬಂಧು. ಅಂತಹ ಗುರುವಿಗೆ ನಮಸ್ಕರಿಸಿದ ಶಿಷ್ಯರು ಸಹಜವಾಗಿಯೇ ಭಕ್ತಿಭಾವಭರಿತವಾದ ಅಂತಃಕರಣದಿಂದ “ಕಾಯಬೇಕಪ್ಪ” ಎಂದು ಪ್ರಾರ್ಥಿಸಿ, ಅವರ ಪದತಲದಲ್ಲಿ ಆಸೀನರಾದರು. ”ಹೌದಪ್ಪ, ಕಾಯಬೇಕಪ್ಪ” ಎಂದು ಶ್ರೀಗುರುವು ತಾವೂ ಪುನರುಚ್ಛರಿಸಿದರು. ಶಿಷ್ಯರಿಗೆ ಗುರುವಿನ ಈ ಉತ್ತರ ಸ್ವಲ್ಪ ಗೊಂದಲ ಉಂಟುಮಾಡಿತು. ಆದರೆ ಅಭಯವನ್ನು ಕೊಟ್ಟು, ಶ್ರೀಗುರುವು ‘ಕಾಯುವಿಕೆಯ’ ಬಗ್ಗೆ ಒಂದು ಚಿಕ್ಕ ವಿವರಣೆಯನ್ನು ನೀಡಿದರು.

ಕಾಯ ಎಂದರೆ ದೇಹ. ಯಾವುದೇ ಕೆಲಸಕ್ಕಾದರೂ ಅದರದೇ ಆದ ಅಧಿಕಾರಸಂಪತ್ತು ಬೇಕಪ್ಪಾ. ಅಧಿಕಾರವೆಂದರೆ ಪಾತ್ರತ್ವ. ಉದಾಹರಣೆಗೆ ಸಿಮೆಂಟ್ ನೆಲದಮೇಲೆ ಬೀಜಬಿತ್ತಿದರೆ ಅದು ಬೆಳೆಯುವುದಿಲ್ಲ. ಹಾಗೆಯೇ ಆತ್ಮಸಾಧನೆಗೆ ಬೇಕಾದ ಯೋಗ್ಯದೇಹ ಇಲ್ಲದಿದ್ದಾಗ ಸಾಧನೆ ಮಂದಗತಿಯಲ್ಲಿ ಸಾಗುವುದು. ಆರ್ಷಸಾಹಿತ್ಯಗಳಲ್ಲಿ ಈ ಪಾತ್ರತ್ವವಿವೇಚನೆಯನ್ನು ಬಹು ಆಳವಾಗಿ ನಡೆಸಿದ್ದಾರೆ. ತಕ್ಕ ಕಾಯವಿದ್ದಾಗ ಸಾಧನೆ ತೀವ್ರಗತಿಯಲ್ಲಿ ಸಾಗುತ್ತದೆ. ಫಲವೂ ಬಹುಬೇಗ ದೊರೆಯುತ್ತದೆ. “ಮಾನವಜನ್ಮ ಬಲು ದೊಡ್ಡದು ಹುಚ್ಚಪ್ಪಗಳಿರಾ” ಎಂದು ಭಕ್ತರು ಹಾಡಿದ್ದಾರೆ. ಗುರುವಿನ ಮಾರ್ಗದರ್ಶನದಂತೆ, ಯೋಗ್ಯ ದಿನಚರಿಯಿಂದ ದೇಹವನ್ನು ಸ್ವಸ್ಥವಾಗಿಟ್ಟುಕೊಂಡಲ್ಲಿ ಅದು ಆತ್ಮಪ್ರಸನ್ನತೆಯನ್ನು ಬಹುಬೇಗ ಪಡೆದುಕೊಳಬಲ್ಲ ಕಾಯವಾಗಿ ರೂಪುಗೊಳ್ಳುತ್ತದೆ. ಆಗ ಗುರುವಿಗೆ ಶಿಷ್ಯನ ಉದ್ಧಾರದ ಕೆಲಸ ಸುಲಭ.

ಕಾಯುವುದು ಎಂದರೆ ಇನ್ನೊಂದು ಅರ್ಥ ತಪಿಸುವುದು. ತಪಸ್ಸಿನಿಂದ ತಪಿಸಬೇಕು. ಪಕ್ವಗೊಳಿಸಿಕೊಳ್ಳಬೇಕು. ತನ್ನ ದೇಹ, ಮನಸ್ಸುಗಳಲ್ಲಿ ಒಂದು ಧರ್ಮಪಾಕವು ಏರ್ಪಡಬೇಕು. ತಪಸ್ಸಾದರೂ ಗುರುವಿನ ಮಾರ್ಗದರ್ಶನದಂತೆ ಸಾಗಬೇಕು. ತಪಸ್ಸು ಬಹು ಕಠಿಣ. ಪುರುಷಪ್ರಯತ್ನ ಮತ್ತು ಗುರುವಿನ ಅನುಗ್ರಹದಿಂದ ಸಾಧನೆಯು ತೀವ್ರಗತಿಯಲ್ಲಿ ಮುಂದುವರೆಯುತ್ತದೆ. ಹೀಗಿದ್ದರೂ ಆತ್ಮಸಿದ್ಧಿಯಾಗಲು ಯೋಗ್ಯ ಕಾಲವನ್ನು ನಿರೀಕ್ಷಿಸುವ ತಾಳ್ಮೆ ಬೇಕು. ಕಾಯಬೇಕು. ಬೀಜವನ್ನು ಬಿತ್ತಿದೊಡನೆಯೇ ಫಲವು ಸಿದ್ಧಿಯಾಗಿಬಿಡುವುದಿಲ್ಲ. ಅನೇಕ ಸಾಧಕರಲ್ಲಿ ಆತ್ಮದರ್ಶನದ ಇಚ್ಛೆಯು ತೀವ್ರತರವಾಗಿರುತ್ತದೆ. ತಕ್ಷಣವೇ ಆಗಿಬಿಡಬೇಕೆಂಬ ಹಂಬಲವಿರುತ್ತದೆ. ಆದರೆ ಒಮ್ಮೆ ವರ್ಷಕಾಲವು ಕಳೆದಮೇಲೆ ಪುನಃ ಆ ಅಮೃತವರ್ಷಕ್ಕೆ ಇನ್ನೊಂದು ಮಳೆಗಾಲ ಬರುವವರೆಗೂ ಕಾಯಲೇಬೇಕು. ಮಧ್ಯೆ ನಾವು ಎಷ್ಟು ಬೇಡಿದರೂ ಕಣ್ಣೀರು ಬರಬಹುದೇ ಹೊರತು ಮಳೆಯ ನೀರು ಬರಲಾರದು.  ಹಾಗೇನಾದರೂ ಬಂದರೂ ಅದು ಭಗವಂತನ ವಿಶೇಷ ಅನುಗ್ರಹ ಮತ್ತು ಅಪವಾದ.

ಶಿಷ್ಯರು ಮಂತ್ರಮುಗ್ಧವಾಗಿ ಶ್ರೀಗುರು ಕೊಟ್ಟವಿವರಣೆಯನ್ನು ಕೇಳಿದರು. ನಾವು ಗುರುವನ್ನೋ, ಭಗವಂತನನ್ನೋ ಬೇಡಿಕೊಳ್ಳುವುದು ಬಹಳ ಸುಲಭ. ಆದರೆ ಅದರ ಹಿಂದಿರಬೇಕಾದ ಜವಾಬ್ದಾರಿಯ ಅರಿವಿಟ್ಟುಕೊಂಡು ಕೇಳುವುದಿಲ್ಲ. ‘ಕಾಯಬೇಕು’ ಎನ್ನುವುದನ್ನು ಈ ವಿಶಾಲವಾದ ಅರ್ಥದಲ್ಲಿ ಅವರೆಂದೂ ಗಮನಿಸಿಯೇ ಇರಲಿಲ್ಲ. 

ಶ್ರೀಗುರುವಿನ ಅಮೃತಸದೃಶವಾದ ವಿವೇಕವನ್ನು ಮೆಲುಕುಹಾಕುತ್ತಾ, ಆರ್ದ್ರವಾದ ಹೃದಯದಿಂದ ಮತ್ತೊಮ್ಮೆ ನಮಸ್ಕರಿಸಿ ಶಿಷ್ಯರು ಹೊರಟುಬಂದರು. (ಸತ್ಯ ಘಟನೆ).

ಸೂಚನೆ:  11/07/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.