ಲೇಖಕರು: ತಾರೋಡಿ ಸುರೇಶ
ಸಪ್ತಪದಿ ಎಂದರೆ ಏಳು ಹೆಜ್ಜೆಗಳು. ‘ಸಖಾ ಸಪ್ತಪದಾ ಭವ’- ಏಳು ಹೆಜ್ಜೆ ಇಟ್ಟಂತಹ ನೀನು ನನಗೆ ಗೆಳತಿಯಾಗು -ಎಂದು ಹೇಳಿ ಧರ್ಮಮಯ ಜೀವನಕ್ಕಾಗಿ ಅನ್ನ ಸಂಪಾದನೆ ಮಾಡಬೇಕು. ಅದಕ್ಕೋಸ್ಕರ ಮೊದಲನೆಯ ಹೆಜ್ಜೆ. ಜ್ಞಾನಿಯಾದ ಪುತ್ರನಿಗಾಗಿ ಎರಡನೆಯ ಹೆಜ್ಜೆ. ಪುರುಷಾರ್ಥಮಯವಾದ ಜೀವನ ನಡೆಸೋಣ ಎಂಬ ವ್ರತಕ್ಕಾಗಿ ಮೂರನೆಯ ಹೆಜ್ಜೆ, ಇಂದ್ರಿಯಭೋಗ -ಆತ್ಮಯೋಗ ಎರಡರ ಸುಖಕ್ಕಾಗಿ ನಾಲ್ಕನೆಯ ಹೆಜ್ಜೆ, ಪಶುಗಳ ಸಂಪಾದನೆಗಾಗಿಯೂ ಮತ್ತು ಅವುಗಳನ್ನು ಬಳಸಿಕೊಂಡು ತನ್ನ ಮತ್ತು ಸಮಾಜದ ಸುಖವನ್ನು ಸಾಧಿಸಲು ಐದನೆಯ ಹೆಜ್ಜೆ, ಸರ್ವ ಋತುಗಳನ್ನೂ ಧರ್ಮಕಾಮದಿಂದ ಬಳಸುವ ನಿಯಮಕ್ಕಾಗಿ ಆರನೆಯದೂ ಮತ್ತು ಕೊನೆಯಲ್ಲಿ ಇಡೀ ಜೀವನವನ್ನು ಯಜ್ಞಮಯವಾಗಿ ಜೊತೆಗೂಡಿ ನಿರ್ವಹಿಸಲು ಏಳನೆಯ ಹೆಜ್ಜೆಯನ್ನು ಇಡಿಸುತ್ತಾನೆ. ಒಟ್ಟಾರೆ ಧರ್ಮಕ್ಕನುಗುಣವಾಗಿ ಸರ್ವಸಂಪತ್ತೂ ಬೇಕು ಎಂಬ ಮನಸ್ಸಿನಿಂದ ಅಕ್ಷತಾರೋಪ ಮಾಡಬೇಕು. ಪರಕ್ಕೆ ಬೆಲೆಕೊಟ್ಟು ಇಹವನ್ನು ಭಾರತೀಯರು ಕಡೆಗಣಿಸಿದ್ದಾರೆ ಎಂಬ ಆರೋಪಕ್ಕೂ ಇದು ಸತ್ಯಾನಪೇತವಾದ ಉತ್ತರವನ್ನು ನೀಡುವುದಲ್ಲದೆ, ಧರ್ಮದ ಚೌಕಟ್ಟನ್ನು ಮೀರಿಹೋಗದೆ ಜೀವನದ ಎಲ್ಲ ವ್ಯವಹಾರಗಳನ್ನೂ ನಡೆಸಿಕೊಂಡು ಹೋಗುವ ನಡೆಯನ್ನೂ ಇಲ್ಲಿ ಸ್ಪಷ್ಟವಾಗಿ ನೋಡುತ್ತೇವೆ.
ಹಾಗೆಯೇ ಮುಂದಕ್ಕೆ ‘ಸಮ್ರಾಜ್ಞೀ ಶ್ವಶುರೇ ಭವ’ ಪತಿದೇವರು ಮತ್ತು ಎಲ್ಲರಿಗೂ ರಾಣಿಯಾಗಿ, ಮಹಾರಾಣಿಯಾಗಿ ಶುದ್ಧವಾದ ಮನಸ್ಸಿನಿಂದ ಎಲ್ಲರನ್ನೂ ರಕ್ಷಿಸುವವಳಾಗು, ಎಲ್ಲರ ಮೆಚ್ಚಿಗೆಯನ್ನು ಸಂಪಾದಿಸು ಎಂಬ ಆಶೀರ್ವಾದ ಮತ್ತು ಆದೇಶಗಳು. ಒಂದು ಮಂತ್ರವು ‘ಪತಿಯ ಶಿರಸ್ಸನ್ನು ಹತ್ತುವವಳಾಗು’ ಎಂದು ಸ್ವಾರಸ್ಯವಾಗಿ ಹೇಳುತ್ತದೆ. ಇದರ ಭಾವ ಹೊರಗಡೆ ಪತಿಯ ಮೇಲೆ ಸವಾರಿ ಮಾಡು ಎಂದರ್ಥವಲ್ಲ. ಶಿರಸ್ಸು ಜ್ಞಾನದ ಸ್ಥಾನ.ಅಲ್ಲಿ ಹತ್ತಬೇಕಾದರೆ ಅವಳು ಬ್ರಹ್ಮಜ್ಞಾನಿಯಾಗಬೇಕು.ಅಂತಹ ಸುಖವನ್ನು ಅನುಭವಿಸಿ ಅದನ್ನೇ ಲೋಕದಲ್ಲೆಲ್ಲಾ ಚಲ್ಲುವವಳಾಗಲಿ ಎಂಬುದು ಇಲ್ಲಿ ಆಶಯ.
ಎಲ್ಲರ ಯೋಗಕ್ಷೇಮದ ಹೊಣೆಯನ್ನು ಹೊರುವವಳಾದ್ದರಿಂದ “ನ ಗೃಹಂ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೇ” ಗೃಹಿಣಿಯೇ ಗೃಹ, ಹೊರಗಡೆಯ ಕಟ್ಟಡವಲ್ಲ ಎಂಬ ಮಾತು ಹುಟ್ಟಿತು.
ಮುಂದೆ ಅಶ್ಮಾರೋಹಣ -ಅಂದರೆ ಕಲ್ಲಿನ ಮೇಲೆ ಹೆಜ್ಜೆ ಇಡಿಸುವ ಕ್ರಿಯೆ. ಇಲ್ಲಿ ಕಲ್ಲಿನಷ್ಟೇ ಧೃಡವಾಗಿರು ಎಂಬ ಸಂದೇಶವಿದೆ. ಒಳಗಿನ ಮತ್ತು ಹೊರಗಿನ ಶತ್ರುಗಳನ್ನು ಎದುರಿಸಲು ಅಂತಹ ಸ್ಥಿರತೆ, ಗಟ್ಟಿತನ ಬೇಕು. ನಂತರ ಧ್ರುವ ಮತ್ತು ಅರುಂಧತೀ ನಕ್ಷತ್ರಗಳನ್ನು ತೋರಿಸುತ್ತಾರೆ. ಧ್ರುವ ಎಂದರೆ ನಿಶ್ಚಲವಾದ ಅಳಿಯದ ವಸ್ತು.ಒಳಗೆ ಬೆಳಗುವ ಪರಮಾತ್ಮನ ಪ್ರತೀಕ. ಹಾಗೆಯೇ ಪತಿಯಾದ ವಸಿಷ್ಠರನ್ನು ಸದಾ ಅನುಸರಿಸುವ ಅರುಂಧತೀ. ಬಾಹ್ಯಾಕಾಶದಲ್ಲಿಯೂ ವಸಿಷ್ಠ ನಕ್ಷತ್ರದ ಜೊತೆಯಲ್ಲಿಯೇ ಅರುಂಧತೀ ನಕ್ಷತ್ರವು ಗೋಚರವಾಗುವುದು. ಅರುಂಧತಿಯ ಆದರ್ಶವನ್ನು ಪತ್ನಿಗೂ, ಧ್ರುವನ ಆದರ್ಶವನ್ನು ಪತಿಗೂ ಜ್ಞಾಪಿಸುವ ಕೌಶಲ್ಯವಿಲ್ಲಿದೆ.
ದಾಂಪತ್ಯ ಭಾವಕ್ಕೆ ಆದರ್ಶ ಯಾವುದು? ವೇದಸಾಹಿತ್ಯದಲ್ಲಿ ನಾನು ದಿವಿ, ನೀನು ಭುವಿ, ಪೃಥಿವಿಯೇ ತಾಯಿ, ದಿವಿಯೇ ತಂದೆ’ ಇಂತಹ ಮಾತುಗಳನ್ನು ನೋಡುತ್ತೇವೆ. ದಿವಿಯಲ್ಲಿರುವ ಪರಮಾತ್ಮಭಾವವು ಭುವಿಯಲ್ಲಿ ಬೆಳೆಯಬೇಕು. ಅಲ್ಲಿ ಯಾವ ಜ್ಞಾನವುಂಟೋ ಅದು ನಮ್ಮ ಕ್ಷೇತ್ರಗಳಲ್ಲಿ ವಿಕಾಸಗೊಳ್ಳಬೇಕು. ಪತಿಯು ಪರಮಾತ್ಮಭಾವವನ್ನು ಪತ್ನಿಯಲ್ಲಿ ಹರಿಸಬೇಕು. ಅದನ್ನು ಅದರ ಸ್ವರೂಪ ಕೆಡದಂತೆ ಹಾಗೆಯೇ ಎಚ್ಚರಿಕೆಯಿಂದ ಪತ್ನಿಯು ತನ್ನ ಗರ್ಭಕೋಶದಲ್ಲಿ ಬೆಳೆಯಿಸಿ ಲೋಕಕ್ಕೆ ತರಬೇಕು.
“ಮಗುವು ನಿದ್ರೆ ಮಾಡುತ್ತಿರುವಾಗ ತಾಯಿ ಅದಕ್ಕೆ ಹಾಲುಕೊಟ್ಟರೂ, ಬೆಳಿಗ್ಗೆ ಎದ್ದಾಗ ಹಾಲೇ ಕೊಡಲಿಲ್ಲ ಎಂದು ಕೇಳುತ್ತದೆ.ಏಕೆಂದರೆ ಅದಕ್ಕೆ ತೃಪ್ತಿಯುಂಟಾಗಿರುವುದಿಲ್ಲ.ಅದೇ ರೀತಿ ಇಂದು ಕರ್ಮಗಳನ್ನು ಆಚರಿಸುತ್ತಿದ್ದರೂ ಅವುಗಳ ಅಂತರಾರ್ಥವನ್ನು ತಿಳಿದು ಮಾಡುತ್ತಿಲ್ಲವಾದ್ದರಿಂದ ಅದರ ಸವಿಯು ತಿಳಿಯುತ್ತಿಲ್ಲಪ್ಪಾ” ಎಂದು ಶ್ರೀರಂಗಮಹಾಗುರುಗಳು ಇಂದಿನ ಪರಿಸ್ಥಿತಿಯ ವಿಶ್ಲೇಷಣೆ ಮಾಡುತ್ತಾ ನುಡಿಯುತ್ತಿದ್ದರು. ‘ಯಜ್ಞಂ ಪ್ರಜ್ಞಯಾ ಕೃತಂ’ ಋಷಿಗಳು ಯಾವ ವಿಜ್ಞಾನದಿಂದ ರೂಪಿಸಿಕೊಟ್ಟರೋ ಅದನ್ನು ಅರ್ಥಮಾಡಿಕೊಂಡು ನಡೆಸಿದಾಗ ಫಲಪ್ರದವಾಗಿರುತ್ತದೆ. ಈ ಮಾತು ಕೇವಲ ವಿವಾಹಕ್ಕೆ ಮಾತ್ರ ಸೀಮಿತವಾಗದೆ ಸಮಗ್ರ ಭಾರತೀಯ ಸಂಸ್ಕೃತಿಗೇ ಅನ್ವಯಿಸುತ್ತದೆ.
ಸೂಚನೆ: 6/07/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.