Sunday, July 21, 2019

ಪೂಜೆ-ಒಂದು ಪರಿಚಯ (Pooje -ondu parichaya)

ಲೇಖಕರು: ತಾರೋಡಿ ಸುರೇಶ


ಪೂಜೆಯನ್ನು ದೇವಪೂಜೆ, ದೇವತಾರ್ಚನೆ ಆರಾಧನೆ ಎಂದೆಲ್ಲ ವಿವಿಧವಾಗಿ  ಕರೆಯುವುದುಂಟು. ವೇದದಲ್ಲಿಯೂ ಅರ್ಚನೆ ಎಂಬ  ಪದವನ್ನು ನೋಡುತ್ತೇವೆ. ಭಗವಂತನಿಗೂ ತನಗೂ ಐಕ್ಯವನ್ನುಂಟುಮಾಡಿ, ಅವನ ಒಂದು ಭಾಗವಾಗಿ ಉಳಿದುಕೊಳ್ಳುವ ಕೃತಿಗೆ ಪೂಜೆ ಎಂದು ಹೆಸರು.

ಪ್ರಕೃತಿಯನ್ನು ದಾಟಿ, ಪರಮಪುರುಷನಲ್ಲಿ ಸೇರಿಕೊಳ್ಳುವುದು ಜೀವಿಯ ಜನ್ಮಸಿದ್ಧ ಹಕ್ಕು. ಆದ್ದರಿಂದ ಪೂಜೆಯಲ್ಲಿ ಜೀವ, ದೇವ ಮತ್ತು ಪ್ರಕೃತಿ ಮೂರೂ ಸೇರುತ್ತವೆ. ಈ ಮೂರೂ ಅನಾದಿಯಾಗಿರುವುದರಿಂದ ಪೂಜೆಯೂ ಅನಾದಿಯೇ.ಅದಕ್ಕೆ ಸಂಬಂಧಪಟ್ಟ ಸಾಹಿತ್ಯ ಇಂದಿನದೋ, ಹಿಂದಿನದೋ ಆಗಬಹುದು ಅಷ್ಟೆ.

ವಾಸ್ತವಿಕವಾಗಿ ಧ್ಯಾನವೇ ಪೂಜೆ. ಅದರಿಂದಲೇ ಜೀವ-ದೇವರ ಸಂಯೋಗ. ಊಹಿಸಲಾಗದ ಆನಂದ ತುಂಬುವುದು. ಇದಕ್ಕೆ ಬೇಕಾದದ್ದು ಜೀವ ಮತ್ತು ದೇವ ಇಬ್ಬರೇ. ಆದರೆ ಪ್ರಕೃತಿಯಲ್ಲಿ ಭಗವಂತನು ಸೃಷ್ಟಿಸಿದ ಅತ್ಯದ್ಭುತವಾದ ಪದಾರ್ಥಗಳೂ ಇವೆ. ಅವುಗಳ ಸೃಷ್ಟಿಯ ವಿಧಾನ, ವಿಜ್ಞಾವನ್ನರಿತು, ಭಕ್ತಿ, ಶ್ರದ್ಧೆಗಳಿಂದ ಪುನಃ ದೇವದೇವನಲ್ಲಿ ಆ ಪದಾರ್ಥಗಳನ್ನು ಸಮರ್ಪಿಸಿದರೆ ಅದೂ ಪೂಜೆಯೇ.

ಕೇವಲ ಮೋಕ್ಷಕ್ಕೋಸ್ಕರ ಪೂಜೆ ಮಾಡುವವರುಂಟು. ಜೊತೆಗೆ ಧರ್ಮಾರ್ಥಕಾಮಗಳೂ ಸಿದ್ಧಿಸಬೇಕೆಂದು ಪೂಜಿಸುವವರೂ ಉಂಟು. ಯೋಗ-ಭೋಗವೆರಡೂ  ಜೀವದ ಸೃಷ್ಟಿಸಹಜವಾದ ಅಪೇಕ್ಷೆಗಳೇ. ಆದ್ದರಿಂದಲೇ ನಮ್ಮ ಪೂರ್ವಜರಾದ ಋಷಿಮಹರ್ಷಿಗಳು ಪುರುಷಾರ್ಥಮಯವಾದ ಬಾಳಾಟದ ವ್ಯವಸ್ಥೆಯನ್ನು ಆದರ್ಶವಾಗಿಟ್ಟರು.

ಪೂಜೆಯನ್ನು ಯಾರು ಮಾಡಬಹುದು? ಆಹಾರವನ್ನು ಯಾರು ಸ್ವೀಕರಿಸಬಹುದು ಎಂದು ಕೇಳಿದಂತೆಯೇ ಸರಿ ಇದು. ಪೂಜೆಯು ಎಲ್ಲ ಜೀವಿಗಳ ಆಜನ್ಮಸಿದ್ಧ ಹಕ್ಕು. ಆದರೆ ಅವರವರ ಸ್ವಭಾವ, ರುಚಿ ಇವುಗಳನ್ನನುಸರಿಸಿ ಪೂಜೆಯ ವಿಧಾನ ಭಿನ್ನವಾಗಬಹುದು.

ಪೂಜೆ ಮಾಡುವವನು ತನ್ನ ಅಂತರ್ಬಾಹ್ಯ ಶುದ್ಧಿಯನ್ನು ಕಾಪಾಡಿಕೊಂಡಿರಬೇಕು. ದೇಹ,  ಅಂತಕರಣ, ದ್ರವ್ಯ,ತತ್ವಶುದ್ಧಿಗಳನ್ನು ಇಟ್ಟುಕೊಂಡಾಗ ಪೂಜೆಯು ಫಲಕಾರಿಯಾಗುವುದು.

ದೇವಾಲಯಗಳಲ್ಲಿ ಅರ್ಚಕರು ಪೂಜೆಯನ್ನು ಮಾಡುತ್ತಾರೆ. ಅರ್ಚಕನು  ‘ಅಷ್ಟಾಂಗಯೋಗನಿಷ್ಣಾತನಾಗಿರಬೇಕು; ಎಂದು ವಿಧಿಸಿದ್ದಾರೆ. ಅಂದರೆ ಆತ್ಮಜ್ಞಾನಿಯಾಗಿದ್ದು, ಭಕ್ತರ ಮನೋಧಾರೆಯನ್ನು ಭಗವಂತನವರೆಗೆ ತಲುಪಿಸಿ ಭಕ್ತರಿಗೆ ತನ್ನ ದೃಷ್ಟಿ, ಸ್ಪರ್ಶ, ಮಾತು ಮತ್ತು ಸಂಕಲ್ಪದಿಂದ ಪ್ರಸನ್ನತೆಯನ್ನು  ಹರಿಸಬಲ್ಲವನಾಗಿರಬೇಕು. ಅದರಿಂದ ಭಕ್ತರಿಗೆ ಉತ್ತಮೋತ್ತಮವಾದ ಫಲಸಿದ್ಧಿಯಾಗುತ್ತದೆ. ಭಕ್ತರ ಅಂತರಂಗವು ಪ್ರಸನ್ನತೆಯಿಂದ ತುಂಬಿಕೊಳ್ಳುತ್ತದೆ.

ಇಂದಿನ ಪರಿಸ್ಥಿತಿ ಕೆಟ್ಟಿರಬಹುದು. ಅದನ್ನು ದೂಷಿಸುತ್ತಾ ಕೂರದೆ ಸರಿಪಡಿಸಿಕೊಂಡು ಪೂರ್ಣಲಾಭವನ್ನು ಪುನಃ ಮಾಡಿಕೊಳ್ಳುವ ಜವಾಬ್ದಾರಿ ನಮ್ಮದೇ. ಆಸ್ಪತ್ರೆಗಳಲ್ಲಿ ದೋಷಗಳಿವೆ ಎಂದು ಆಸ್ಪತ್ರೆಗಳನ್ನೇ ನಾಶಮಾಡುವುದು ಜಾಣತನವಲ್ಲ. ಅಲ್ಲವೆ?

ಭಗವದ್ಭಾವಭರಿತರಾಗಿ ಸಂಪನ್ನವಾಗುವ ಕ್ರಿಯೆಗಳೂ ಭಗವಂತನ ಪೂಜೆಯೇ ಆಗುತ್ತದೆ. ಶಂಕರರು “ಪ್ರಭೋ ನನ್ನ ಅತ್ಮಸ್ವರೂಪ ನೀನು, ನನ್ನ ಬುದ್ಧಿಯೇ ಪಾರ್ವತಿ,  ದೇಹವೇ ದೇವಾಲಯ, ಭೋಗರಚನೆಯೇ ನಿನ್ನ ಪೂಜೆ,ನಿದ್ರಾಸ್ಥಿತಿಯೇ ಸಮಾಧಿ,  ಸಂಚಾರವೆಲ್ಲವೂ  ಪ್ರದಕ್ಷಿಣೆಯಾದರೆ ನನ್ನ ಮಾತುಗಳೆಲ್ಲವೂ ನಿನ್ನ ಸ್ತೋತ್ರವೇ ಆಗಿದೆ”ಎನ್ನುತ್ತಾರೆ. ಹೀಗೆ ಅಂತಹ ಮಹಾಪುರುಷರ ಒಂದೊಂದು ಕ್ರಿಯೆಯೂ ಪೂಜೆಯೇ. ಉಳಿದ ಪೂಜಾಕ್ರಮಗಳು ಇಂತಹ ಸ್ಥಿತಿಗೆ ಏರಲು ಸೋಪಾನದಂತೆ.

ಉಪಚಾರಗಳನ್ನೆಲ್ಲಾ ಮಾನಸಿಕವಾಗಿಯೇ ಸಮರ್ಪಿಸುವುದು ಮಾನಸ ಪೂಜೆ. ಬಾಹ್ಯ ಪೂಜೆಯಲ್ಲಿ ಬಾಹ್ಯ ಸಾಮಗ್ರಿಗಳನ್ನೂ ಅರ್ಪಿಸುತ್ತೇವೆ. ಬಾಹ್ಯಪೂಜೆಯೂ ಮಾನಸ ಪೂಜೆಯಲ್ಲಿಯೇ ಪರ್ಯವಸಾನಗೊಳ್ಳಬೇಕು. ಆದರೆ ಮಾನಸಪೂಜೆ ಸುಲಭವಲ್ಲ. ಆದ್ದರಿಂದಲೇ ಬಾಹ್ಯಪೂಜೆ ಮತ್ತು ಮಾನಸಪೂಜೆಗಳೆರಡನ್ನೂ ಇಟ್ಟುಕೊಂಡಾಗ ಅದು ಜೀವ ದೇವರಿಗೆ ಸೇತುವೆಯಾಗಿ  ಸಹಕಾರಿಯಾಗುತ್ತದೆ. ಪ್ರಕೃತಿಯಲ್ಲಿರುವ ದ್ರವ್ಯಗಳು ಸಾರ್ಥಕವಾಗಬೇಕು.ಅರ್ಚಕನ ಮನಸ್ಸು ಮಾನಸ ಪೂಜೆಯಲ್ಲಿ ನಿಲ್ಲಬೇಕು.ಹಾಗೆ ಪೂಜಾವಿಧಾನವನ್ನು ಋಷಿಗಳು ಹೆಣೆದಿದ್ದಾರೆ.

ದೇವರಿಗೆ ದೀಪ ಬೆಳಗಿ ನಮಸ್ಕರಿಸಿದರೂ ಪೂಜಿಸಿದಂತೆಯೇ. ಈ ಪೂಜೆಯನ್ನು ಎಲ್ಲರೂ ಮಾಡಲೇಬೇಕು. ಅವಕಾಶವಿದ್ದಲ್ಲಿ ಪಂಚೋಪಚಾರ ಪೂಜೆ, ಷೋಡಶೋಪಚಾರ ಪೂಜೆ ಎಂದು ವಿಸ್ತರಿಸಿಕೊಳ್ಳಬಹುದು ಕೂಡ.

ದೇವರಪೂಜೆ ಋಷಿಗಳ ಅತ್ಯಮೂಲ್ಯವಾದ ಕೊಡುಗೆ. ಇಂತಹ ಪೂಜೆಯು ನಮಗೆಲ್ಲರಿಗೂ ಒಲಿಯಲಿ.

ಸೂಚನೆ:  20/07/2019 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.