Thursday, July 3, 2025

ಪ್ರಶ್ನೋತ್ತರ ರತ್ನಮಾಲಿಕೆ 22 (Prasnottara Ratnamalike 22)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೨೨. ಜಾಡ್ಯ ಯಾವುದು?

ಉತ್ತರ - ಪಾಠಮಾಡಿದ್ದನ್ನು ಅಭ್ಯಾಸದಲ್ಲಿ ಇಟ್ಟುಕೊಳ್ಳದಿರುವುದು.


ಈ ಪ್ರಶ್ನೆ ಹೀಗಿದೆ 'ಜಾಡ್ಯ ಯಾವುದು?' ಎಂದು. ಅದಕ್ಕೆ ಉತ್ತರ - 'ಪಾಠ ಮಾಡಿದ್ದನ್ನು ಅಭ್ಯಾಸದಲ್ಲಿ ಇಟ್ಟುಕೊಳ್ಳದೆ ಇರುವಂತೆ ಇರುವುದು. ಜಾಡ್ಯ ಎಂದರೆ ಆಲಸ್ಯ, ಕಾರ್ಯಪ್ರವೃತ್ತಿ ಇಲ್ಲದೇ ಇರುವುದು ಇತ್ಯಾದಿಯಾಗಿ ಅರ್ಥವನ್ನು ಮಾಡುವುದುಂಟು. ಆದರೆ ಇಲ್ಲಿ ಪಾಠ ಮಾಡಿದ್ದನ್ನು ಮತ್ತೆ ಮತ್ತೆ ಓದದೇ ಇರುವುದನ್ನೇ 'ಜಾಡ್ಯ' ಎಂಬುದಾಗಿ ಹೇಳಲಾಗಿದೆ. ಅಂದರೆ ಓದದೇ ಇರುವುದು ಹೇಗೆ ಜಾಡ್ಯವಾಗುತ್ತದೆ? ಅದಕ್ಕೆ ಜಾಡ್ಯ ಎಂದು ಕರೆಯುವುದು ಹೇಗೆ ಸರಿ? ಎಂಬ ವಿಷಯವನ್ನು ನಾವಿಲ್ಲಿ ಮನಗಾಣಬೇಕಾಗಿದೆ.

ವಿಷಯದ ಅರಿವನ್ನು ನಾವು ಪಡೆಯಬೇಕು. ಅದಕ್ಕೆ ತಿಳಿದವರಿಂದ ಪಾಠವನ್ನು ಮಾಡಿಸಿಕೊಳ್ಳಬೇಕು. ಆಗ ತಿಳಿಯದ ವಿಷಯ ನಮ್ಮ ಬುದ್ಧಿಗೆ ಬರುತ್ತದೆ. ಹಾಗೆ ಒಮ್ಮೆ ಕೇಳಿದ ಪಾಠವನ್ನು ಹಾಗೆಯೇ ಧರಿಸುವ ಸಾಮರ್ಥ್ಯ ಕೆಲವರಿಗೆ ಮಾತ್ರ ಇರುತ್ತದೆ. ಯಾರು ಒಮ್ಮೆ ಕೇಳಿದ್ದನ್ನು ಹಾಗೆಯೇ ಹೇಳಬಲ್ಲರು ಅವರಿಗೆ 'ಏಕಪಾಠೀ- ಸಕೃತ್ ಪಾಠೀ' ಎಂದು ಕರೆಯುತ್ತಾರೆ. ಇನ್ನು ಕೆಲವರಿಗೆ ಪಾಠ ಮಾಡಿದ್ದನ್ನು ಪುನಃ ಪುನಃ ಅಭ್ಯಾಸ ಮಾಡುವ ಅವಶ್ಯಕತೆ ಇರುತ್ತದೆ. ಹೀಗೆ ಮತ್ತೆ ಮತ್ತೆ ಅಭ್ಯಾಸ ಮಾಡುವ ವಿಧಾನದಿಂದ ದ್ವಿಪಾಠೀ, ತ್ರಿಪಾಠೀ ಇತ್ಯಾದಿ ಶಬ್ದಗಳು ಹುಟ್ಟಿಕೊಂಡಿವೆ. ಅಂದರೆ ವಿಷಯವನ್ನು ಅರಿಯಬೇಕಾದರೆ ಅದಕ್ಕೆ ಅಭ್ಯಾಸ ಅತ್ಯಂತ ಅಗತ್ಯ. ಹಾಗೆ ಅಭ್ಯಾಸ ಮಾಡದಿದ್ದರೆ ನಾವು ತಿಳಿಯಬೇಕಾದ ವಿಷಯ ತಿಳಿಯದೆ ಹೋಗುತ್ತದೆ. ವಿಷಯವನ್ನು ತಿಳಿಯಬೇಕಾದರೆ ಅದನ್ನು ಮತ್ತೆ ಮತ್ತೆ ಮನನ ಮಾಡುವ ಅವಶ್ಯಕತೆ ಇರುತ್ತದೆ. ಅದಿಲ್ಲವಾದರೆ ವಿಷಯ ನಮ್ಮಿಂದ ದೂರವಾಗುತ್ತದೆ. ಹೀಗೆ ಅಧೀತವಾದ ಪಾಠವನ್ನು ಪುನರ್ಮನನ ಮಾಡಲು ಕೊಡದೇ ಇರುವ ಯಾವ ಸ್ವಭಾವವಿದೆಯೋ ಅದನ್ನು 'ಜಾಡ್ಯ - ಆಲಸ್ಯ' ಎಂಬುದಾಗಿ ಹೇಳಲಾಗಿದೆ.


 ಈ ಜಾಡ್ಯವು ಅಭ್ಯಾಸ ಮಾಡುವ ಪ್ರವೃತ್ತಿಯನ್ನು ಕೊಲ್ಲುತ್ತದೆ. 'ಆಲಸ್ಯಂ ಹಿ ಮನುಷ್ಯಾಣಾಂ ಶರೀರಸ್ಥೋ ಮಹಾನ್ ರಿಪುಃ' ಎಂಬಂತೆ ಆಲಸ್ಯವು ಈ ಶರೀರದಲ್ಲಿರುವ ದೊಡ್ಡ ಶತ್ರು ಎಂಬುದಾಗಿ ಪರಿಗಣಿಸಲಾಗಿದೆ. ಇದು ನಮ್ಮ ತನವನ್ನು ಹಾಳು ಮಾಡುತ್ತದೆ. ಒಬ್ಬ ವ್ಯಕ್ತಿ ಹೇಗೆ ಬದುಕಬೇಕು? ಹೇಗೆ ಬದುಕನ್ನು ಸಾಧಿಸಿದರೆ ತನ್ನ ಜೀವನ ಹಸನಾಗುತ್ತದೆ? ಎಂಬಿತ್ಯಾದಿಗಳನ್ನು ತಿಳಿದುಕೊಳ್ಳಬೇಕು. ತಿಳಿದು ಅಂತೆಯೇ ಜೀವನವನ್ನು ಮಾಡಬೇಕಾದುದು ಅವನ ಆದ್ಯ ಕರ್ತವ್ಯವಾಗಿರುತ್ತದೆ. ಹಾಗಾಗಿ ಅವನು ಆ ವಿಷಯವನ್ನು ಆಲಸ್ಯವಿಲ್ಲದೆ ಶ್ರದ್ಧಾಪೂರ್ವಕವಾಗಿ, ನಿರಂತರವಾಗಿ ಅನುಸಂಧಾನ ಮಾಡುವ ಅವಶ್ಯಕತೆ ಇರುತ್ತದೆ. ಹಾಗೆ ಮಾಡುವುದನ್ನು 'ಅಭ್ಯಾಸ' ಎಂಬುದಾಗಿ ಕರೆಯಲಾಗಿದೆ. 'ಅಭಿ' - ಎದರು, 'ಆಸ' - ಕುಳಿತುಕೊಳ್ಳುವುದು. ಯಾವ ವಿಷಯವನ್ನು ನಾವು ಕರತಲಾಮಲಕ ಮಾಡಿಕೊಳ್ಲಬೇಕಾಗಿದೆಯೋ ಅದರ ಎದುರು ನಾವು ಕುಳಿತುಕೊಳ್ಳಬೇಕು; ಅಂದರೆ ನಮ್ಮ ಮನಸ್ಸು ಇಂದ್ರಿಯಗಳೆಲ್ಲವೂ ಆ ವಿಷಯದಲ್ಲಿ ಹೊಗಬೇಕು. ಆಗ ಆ ವಿಷಯದ ಪರಿಪೂರ್ಣ ಅರಿವು ನಮ್ಮದಾಗುತ್ತದೆ. ಹಾಗಾಗಿ ಜಾಡ್ಯವನ್ನು ಮರೆತು ಅಭ್ಯಾಸವನ್ನು ಮಾಡಬೇಕು. ಅಭ್ಯಾಸವನ್ನು ಮಾಡದಿದ್ದರೆ ಅಮೃತವೂ ವಿಷವಾಗಬಹುದು 'ಅನಭ್ಯಾಸೇ ವಿಷಂ ವಿದ್ಯಾ ಎಂಬ ಈ ಮಾತು ಅಭ್ಯಾಸವನ್ನು ಮಾಡದೇ ಇರುವವನಿಗೆ ವಿದ್ಯೆಯೇ ಆದರೂ ತೊಡಕನ್ನು ಉಂಟುಮಾಡುತ್ತದೆ ಎಂಬುದನ್ನು ಸಾರುತ್ತದೆ. ಹಾಗಾಗಿ ಜಾಡ್ಯವನ್ನು ಬಿಟ್ಟು ಅಭ್ಯಾಸವನ್ನು ಮಾಡಬೇಕು ಎಂಬ ಸೂಚನೆಯನ್ನು ಈ ಪ್ರಶ್ನೋತ್ತರ ಕೊಟ್ಟಂತಿದೆ.


ಸೂಚನೆ : 29/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.