Sunday, July 20, 2025

ಪ್ರಶ್ನೋತ್ತರ ರತ್ನಮಾಲಿಕೆ 25 (Prasnottara Ratnamalike 25)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೨೫ ಕಮಲದ ಎಲೆಯ ಮೇಲಿನ ಜಲದ ಕಣದಂತೆ ಚಲನಶೀಲವಾದುದು ಯಾವುದು?

ಉತ್ತರ - ಯೌವನ, ಧನ ಮತ್ತು ಆಯುಸ್ಸು


ಈ ಪ್ರಶ್ನೆಯು ಉದಾಹರಣೆಯಿಂದ ಕೂಡಿದೆ. ಹೇಗೆಂದರೆ, ಅತ್ಯಂತ ಚಂಚಲವಾದುದು ಯಾವುದು? ಎಂಬುದಕ್ಕೆ ಒಂದು ಉದಾಹರಣೆ ಎಂದರೆ ಕಮಲದ ಎಲೆಯ ಮೇಲೆ ಇರುವ ನೀರಿನ ಕಣ. ಕಮಲದ ಎಲೆಯ ಮೇಲೆ ಇರುವ ನೀರಿನ ಹನಿಯು ಕಮಲಕ್ಕೆ ಅಂಟಿಕೊಳ್ಳುವುದಿಲ್ಲ. ಅದು ಯಾವಾಗ ಕಮಲದಿಂದ ಜಾರುತ್ತದೆ? ಎಂಬುದು ತಿಳಿಯದಂತಿರುತ್ತದೆ. ಅಷ್ಟು ಕ್ಷಣಿಕ ಎಂಬುದು ಅರ್ಥ. ಯಾವುದೇ ಕಾರಣಕ್ಕೂ ಆ ನೀರಿನಿಂದ ಕಮಲದ ಎಲೆಗೆ ಪ್ರಯೋಜನವಿರುವುದಿಲ್ಲ. ಹಾಗೆ ಇರುವಂತದ್ದು ಕಮಲದ ಎಲೆಯ ಮೇಲಿನ ನೀರಿನ ಹನಿ. ಇಲ್ಲಿ ಕೇಳುವಂತಹ ಪ್ರಶ್ನೆಯೂ ಅದೇ ರೀತಿಯಲ್ಲಿ ಇದೆ. ಅಂದರೆ ಅತ್ಯಂತ ಚಂಚಲವಾದದ್ದು ಯಾವುದು? ಎಂಬುದು. ಅದಕ್ಕೆ ಉತ್ತರವಾಗಿ ಯೌವನ, ಧನ ಮತ್ತು ಆಯುಸ್ಸು ಎಂಬ ಮೂರೂ ಸಂಗತಿಗಳು ಬಹಳ ಚಂಚಲವಾದವುಗಳು. ಕ್ಷಣ ಕ್ಷಣಕ್ಕೂ ರೂಪಾಂತರವನ್ನು ಹೊಂದುವ ಸ್ವಭಾವದವುಗಳು ಎಂಬುದು ಇದರ ಅರ್ಥ. ಯಾವುದು ಚಂಚಲವಾಗಿರುತ್ತದೆಯೋ ಅದಕ್ಕೆ ಒಂದೇ ರೂಪ, ಒಂದೇ ಆಕಾರ, ಒಂದೇ ಕಾಲಕ್ಕೆ ಸಂಬಂಧ ಅಥವಾ ಒಂದೇ ದೇಶಕ್ಕೆ ಸಂಬಂಧಪಟ್ಟಿದ್ದು ಎಂಬುದನ್ನು ನಾವು ಎಣಿಸುವಷ್ಟರಲ್ಲಿ ಅದು ಎಲ್ಲ ಸಂಬಂಧಗಳಿಂದ ಜಾರುವುದನ್ನು ಕಾಣುತ್ತೇವೆ. ಹೀಗೆ ಇಂತಹ ಜಾರುವ ಲಕ್ಷಣದಿಂದ ಕೂಡಿರುವ ಸಂಗತಿಗಳನ್ನು ಕ್ಷಣಿಕ ಅಥವಾ ಚಂಚಲ ಎಂಬುದಾಗಿ ಕರೆಯಬಹುದಾಗಿದೆ. ಆದ್ದರಿಂದ ಯೌವನ, ಧನ ಮತ್ತು ಆಯುಸ್ಸು ಮೂರೂ ಒಂದೇ ವರ್ಗಕ್ಕೆ ಸೇರುತ್ತವೆ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ. ಹಾಗಾದರೆ ಅವು ಹೇಗೆ ಕ್ಷಣಿಕ? ಎಂಬುದನ್ನು ಇಲ್ಲಿ ಚಿಂತಿಸಬೇಕಾಗಿದೆ. 


ಚಂಚಲ ಎಂದರೆ ಒಂದೇ ವಿಷಯದ ಮೇಲೆ ನಿರಂತರವಾಗಿ ಮನಸ್ಸನ್ನು ನೆಲೆನಿಲ್ಲಿಸಲು ಸಾಧ್ಯವಾಗದ ಸ್ವಭಾವ.  ಯೌವನ ಇರುವವನಿಗೆ ಜಗತ್ತೆಲ್ಲವೂ ಕೂಡ ಅವನ ಎದುರುಗಡೆ ನಶ್ವರವಾದಂತೆ, ಬೆಲೆ ಇಲ್ಲದಿರುವಂತೆ ಕಾಣುತ್ತದೆ. ಅಂದರೆ ತಾನು ಇವುಗಳೆಲ್ಲವನ್ನು ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲೆ, ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಇವೆಲ್ಲವೂ ಇರಲಿವೆ ಎಂಬ ದರ್ಪ ಆತನದ್ದಾಗಿರುತ್ತದೆ. ಅಂತಯೇ ಧನದಿಂದ ಕೂಡಿದವನು ಕೂಡ ಈ ಎಲ್ಲ ಸ್ವಭಾವದಿಂದ ಕೂಡಿರುತ್ತಾನೆ ಮತ್ತು ಇದೇ ರೀತಿಯಾಗಿ ಕ್ಷಣ ಚಿತ್ತ ಕ್ಷಣಪಿತ್ತ ಎಂಬಂತೆ ಇರುತಾನೆ. ಆಯಸ್ಸನ್ನು ನೆಚ್ಚಿಕೊಂಡು ಯಾವುದನ್ನು ಕೂಡ ಸಾಧಿಸಲು ಆಗದು. ಕ್ಷಣವು ಉರುಳುತ್ತಿರುವುದರಿಂದ ಆಯಸ್ಸು ಕೂಡ ಆ ಕ್ಷಣಪರಿಣಾಮವನ್ನೇ ಹೇಳುವುದಾದ್ದರಿಂದ ಅದು ಕೂಡ ಅಷ್ಟೇ ಉರುಳುವ ಸ್ವಭಾವವುಳ್ಳದ್ದಾಗಿರುತ್ತದೆ. ಹಾಗಾಗಿ ಈ ಮೂರನ್ನು ನಂಬಿಕೊಂಡು ಯಾವುದನ್ನು ಕೂಡ ಮಾಡಲಿಕ್ಕೆ ಸಾಧ್ಯವಿಲ್ಲ. ಈ ಸಮಯದಲ್ಲಿ ಒಂದು ನಿರ್ದಿಷ್ಟವಾದ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಅಥವಾ ಸಾಧಿಸುವುದು ಎಲ್ಲವೂ ಕಷ್ಟ ಸಾಧ್ಯ ಎಂಬುದು ಇದರ ಅರ್ಥವಾಗಿದೆ. ಇದನ್ನೇ ಪುಷ್ಟೀಕರಿಸುವಂತೆ ಒಂದು ಸುಭಾಷಿತ ಹೀಗಿದೆ- ಯೌವನ, ಧನ, ಅಧಿಕಾರ ಮತ್ತು ಅವಿವೇಕ ಇವು ಒಂದೊಂದೂ ಅನರ್ಥಕ್ಕೆ ಸಾಧನ. ಈ ನಾಲ್ಕು ಒಟ್ಟಿಗೆ ಇರುವ ಕಡೆ ಎಂತಹ ಅನರ್ಥಗಳು ಸಂಭವಿಸಬಹುದು! ಎಂಬ ಆಶ್ಚರ್ಯ ಇಲ್ಲಿ ಕಾಣುತ್ತದೆ. ಇದೇ ಅರ್ಥವನ್ನು ಕೊಡುವ ಈ ಪ್ರಶ್ನೋತ್ತರವು ಯೌವನ, ಧನ ಆಯುಸ್ಸು ಇವೆಲ್ಲವೂ ಕೂಡ ಕ್ಷಣಿಕ. ಇವುಗಳು ಬಂದಾಗ ಶಾಶ್ವತವಾದ ಬದುಕಿನ ಬಗ್ಗೆ ನಮಗೆ ಅರಿವು ಮೂಡುವುದು ಕಷ್ಟಸಾಧ್ಯ ಎಂಬ ಮಾರ್ಮಿಕವಾದ ಉತ್ತರ ಇಲ್ಲಿ ಕಂಡುಬರುತ್ತದೆ.


ಸೂಚನೆ : 20/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.