Tuesday, July 15, 2025

ವ್ಯಾಸ ವೀಕ್ಷಿತ 145 ಯುಧಿಷ್ಠಿರನನ್ನಾದರಿಸಲು ನೆರೆದ ರಾಜಸ್ತೋಮ (Vyaasa Vikshita 145)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಮಯನಿರ್ಮಿತವಾದ ಆ ಭವ್ಯಸಭಾಗೃಹಪ್ರವೇಶದ ಶುಭಪ್ರಸಂಗದಲ್ಲಿ ಅನೇಕ ಕ್ಷತ್ರಿಯಶ್ರೇಷ್ಠರು ಧರ್ಮರಾಜನನ್ನು ಉಪಾಸಿಸುತ್ತಿದ್ದರು. ಉಗ್ರಸೇನ, ಅಪರಾಜಿತ, ಕಂಬೋಜರಾಜ - ಇವರುಗಳಿದ್ದರು. ಅಲ್ಲದೆ, ಯವನರನ್ನು ಒಂಟಿಯಾಗಿದ್ದುಕೊಂಡೇ ನಡುಗಿಸಿದ ಕಂಪನನಿದ್ದನು; ಕಾಲಕೇಯಾಸುರರನ್ನು ವಜ್ರಧಾರಿಯಾದ ಇಂದ್ರನು ಹೇಗೆ ನಡುಗಿಸಿದನೋ ಹಾಗೆ ನಡುಗಿಸಿದವನು ಅವನು! ಅಲ್ಲದೆ ಅಂಗ-ವಂಗ-ರಾಜರುಗಳಿದ್ದರು. ಜೊತೆಗೆ, ಸುಮಿತ್ರ, ಶೈಬ್ಯ, ಕಿರಾತರಾಜ, ಯವನಾಧಿಪತಿ, ಚಾಣೂರ, ಕಾಲಿಂಗ, ಚೇಕಿತಾನ, ವೈದೇಹ, ಶಿಶುಪಾಲ, ಅಕ್ರೂರ, ಭೀಷ್ಮಕ, ದ್ಯುಮತ್ಸೇನ, ಯಜ್ಞಸೇನ - ಇವರೇ ಮುಂತಾದ ಕ್ಷತ್ರಿಯರು ಸಭೆಯಲ್ಲಿ ಉಪಸ್ಥಿತರಾಗಿದ್ದರು. ಅಲ್ಲಿದ್ದ ಅನೇಕ ರಾಜರು ಧನುರ್ವೇದವನ್ನು ಅರ್ಜುನನಿಂದಲೇ ಕಲಿತಿದ್ದವರು. ಇವರೆಲ್ಲರೂ ಬಂದು ಅಲ್ಲಿ ಉಪಸ್ಥಿತರಿದ್ದರು.


ಇವರುಗಳೇ ಅಲ್ಲದೆ ಮುಖ್ಯಸಂಮತರಾದ ಅನೇಕಾನೇಕ ಕ್ಷತ್ರಿಯರಾಜರು ಯುಧಿಷ್ಠಿರನನ್ನು ಆ ಸಭೆಯಲ್ಲಿ ಉಪಾಸಿಸಿದರು.


ರೌರವಾಜಿನವನ್ನು - ಎಂದರೆ ರುರು ಎಂಬ ಮೃಗದ ಚರ್ಮವನ್ನು- ವಸ್ತ್ರವಾಗಿ ಧರಿಸಿ, ಅಲ್ಲಿಯೇ ಎಂದರೆ ಅರ್ಜುನನಲ್ಲಿಯೇ, ಶಿಕ್ಷಣವನ್ನು ಪಡೆದಂತಹ ವೃಷ್ಣಿವಂಶದ ಕುಮಾರರೂ ಅಲ್ಲಿ ಸೇರಿದವರಾಗಿದ್ದರು. ಅವರಲ್ಲಿ ಮುಖ್ಯರಾದ ಕೆಲವರನ್ನು ಹೇಳಬೇಕೆಂದರೆ - ರೌಕ್ಮಿಣೇಯ (ಎಂದರೆ ರುಕ್ಮಿಣಿಯ ಪುತ್ರನಾದ ಪ್ರದ್ಯುಮ್ನ), ಸಾಂಬ, ಸಾತ್ಯಕಿ, ಶೈಬ್ಯ ಮುಂತಾದವರು. ಇವರುಗಳೂ ಇನ್ನಿತರ ಅನೇಕ ರಾಜರೂ ಸಹ ಅಲ್ಲಿಗೆ ಆಗಮಿಸಿದ್ದರು.


ಅಲ್ಲದೆ ಅರ್ಜುನನ ಮಿತ್ರನೇ ಆದ ತುಂಬುರು (ಈತನೊಬ್ಬ ಗಂಧರ್ವ); ಆತನಂತೂ ಸದಾಕಾಲವೂ ಸಭೆಯಲ್ಲಿ ವಿರಾಜಿಸುತ್ತಿದ್ದನು. ಚಿತ್ರಸೇನನು ತನ್ನ ಮಂತ್ರಿಯೊಂದಿಗೆ ಬಂದಿದ್ದನು. ಅವನವರೇ ಆದ ಗಂಧರ್ವ-ಅಪ್ಸರೆಯರು – ಅವರು ಇಪ್ಪತ್ತೇಳು ಮಂದಿಯಿದ್ದವರು - ಅವರೆಲ್ಲರೂ ಆಸೀನನಾಗಿದ್ದ ಯುಧಿಷ್ಠಿರನನ್ನು ಉಪಾಸಿಸಿದರು.


ಗೀತದಲ್ಲಿ ಕುಶಲರೂ, ವಾದಿತ್ರದಲ್ಲಿ - ಎಂದರೆ ವಾದ್ಯಗಳಲ್ಲಿ - ಕುಶಲರೂ, ಸಾಮ್ಯ-ತಾಲಗಳಲ್ಲಿ - ಎಂದರೆ ಲಯದಲ್ಲಿ ಮತ್ತು ಕಾಲಮಾನದಲ್ಲಿ – ವಿಶಾರದರೂ, ಪ್ರಮಾಣಜ್ಞರೂ ಆದವರು ಕಿಂನರರು. ತುಂಬುರುವಿನ ಚೋದನೆಯಂತೆ ಆ ಕಿಂನರರು ಗಂಧರ್ವರೊಡಗೂಡಿ ಹಾಡಿದರು. ಅವರು ಹಾಡಿದುದು ದಿವ್ಯತಾನಗಳೊಂದಿಗೆ. ಅವರ ಗಾನವು ಅತ್ಯಂತ ಉಚಿತವಾಗಿತ್ತು. ಪಾಂಡುಪುತ್ರರನ್ನೂ ಋಷಿಗಳನ್ನೂ ಅವರು ಆ ಮೂಲಕ ಸಂತೋಷಪಡಿಸಿದರು. ಹೀಗೆಲ್ಲ ಮಾಡಿ ಧರ್ಮರಾಜನ ಉಪಾಸನೆಯನ್ನು ಮಾಡಿದರು. ಯಾವ ರೀತಿಯಲ್ಲಿ ದೇವತೆಗಳು ಬ್ರಹ್ಮನನ್ನು ಉಪಾಸನೆ ಮಾಡುವರೋ ಅದೇ ರೀತಿಯಲ್ಲಿ ಸು-ವ್ರತರೂ ಹಾಗೂ ಸತ್ಯವಾದ ಮಾತುಗಳನ್ನೇ ಆಡುವವರೂ ಆದ ಮಹಾಪುರುಷರು ಯುಧಿಷ್ಠಿರನ ಉಪಾಸನೆಯನ್ನು ಮಾಡುತ್ತಿದ್ದರು.


ಒಮ್ಮೆ ಪಾಂಡವರು ಆ ಸಭೆಯಲ್ಲಿ ಕುಳಿತಿದ್ದರು. ಅವರ ಜೊತೆ ಅನೇಕ ಮಹಾತ್ಮರೂ ಗಂಧರ್ವರೂ ಇದ್ದರು. ಲೋಕಗಳಲ್ಲೆಲ್ಲ ಸಂಚರಿಸುವ ನಾರದರು ಆಗ ಅಲ್ಲಿಗೆ ಆಗಮಿಸಿದರು. ಎಂಥವರು ಆ ನಾರದರು! ವೇದ-ಉಪನಿಷತ್ತುಗಳನ್ನು ಬಲ್ಲವರು; ಸುರಸಮೂಹದಿಂದ ವಂದಿತರು; ಇತಿಹಾಸ-ಪುರಾಣಗಳನ್ನು ಬಲ್ಲವರು; ನ್ಯಾಯಜ್ಞರು, ಧರ್ಮತತ್ತ್ವವನ್ನರಿತವರು; ವೇದಗಳ ಆರೂ ಅಂಗಗಳನ್ನು ಬಲ್ಲವರಲ್ಲಿ ಸರಿಸಾಟಿಯಿಲ್ಲದವರು; ಏಕತೆ, ಸಂಯೋಗ, ನಾನಾತ್ವ, ಸಮವಾಯ - ಇವುಗಳಲ್ಲಿ ವಿಶಾರದರಾದವರು (ಎಂದರೆ ಏಕತ್ವ-ನಾನಾತ್ವಗಳನ್ನೂ ಮಿಶ್ರಣ-ಸಂಮಿಶ್ರಣಗಳನ್ನೂ ಚೆನ್ನಾಗಿ ಬಲ್ಲವರು); ವಾಗ್ಮಿಗಳು, ಧೈರ್ಯವಾಗಿ ವಿಷಯವನ್ನಿಡಬಲ್ಲವರು; ಮೇಧಾವಿ, ಸ್ಮೃತಿಸಂಪನ್ನರು, ರಾಜನೀತಿಯನ್ನು ಬಲ್ಲವರು; ಕವಿ, ಮತ್ತು ಪರ ಮತ್ತು ಅಪರ - ಎಂಬ ವಿಭಾಗಗಳನ್ನು ಅರಿತವರು. ಪ್ರಮಾಣಗಳಿಂದಾಗಿ ನಿಶ್ಚಯವನ್ನು ಮಾಡುವುದರಲ್ಲಿ ಸಮರ್ಥರು.


ಸೂಚನೆ : 13/7/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.