Saturday, July 19, 2025

ಅಷ್ಟಾಕ್ಷರೀ 84 ತಸ್ಯ ವಾಚಕಃ ಪ್ರಣವಃ (Ashtakshari 84)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತಪಸ್ಸಿನಲ್ಲೇ ಮನಸ್ಸಿಟ್ಟ ತಪಸ್ವಿಗಳಿಗೆ ಜನಜಂಗುಳಿಯೇ ಬಾಧಕ. ಎಂದೇ ಅವರಿಗೆ ತಪೋವನದ ಏಕಾಂತವೇ ವಿಹಿತ. ಆದರೆ ನಗರಗಳಲ್ಲೋ ಗ್ರಾಮಗಳಲ್ಲೋ ವಾಸಮಾಡುವ ನಮಗೆ ಜನಸಂಪರ್ಕವಿಲ್ಲದೆ ಆದೀತೇ? 

ಸಂಪರ್ಕಿಸುವುದಕ್ಕಾಗಿ ವ್ಯಕ್ತಿಯ ಹೆಸರನ್ನು ಹಿಡಿದು ಕರೆಯುತ್ತೇವೆ. ಇಲ್ಲವೇ  ಆತನೊಂದಿಗಿನ ನಮ್ಮ ಸಂಬಂಧವನ್ನು ಬಳಸುತ್ತೇವೆ. ಶಿಶುವಿನ "ಅಮ್ಮಾ!" ಎಂಬ ಪ್ರಥಮ-ಸಂಬೋಧನವಾದರೂ ಸಂಬಂಧ-ವಾಚಿಯೇ ತಾನೆ?

ಆದರೆ ಭಗವಂತನನ್ನು ಕರೆಯುವ ಪರಿಯೇನು? ಅಲ್ಲೂ ಈ ಎರಡೂ ಪರಿಗಳುಂಟು. "ತ್ವಮೇವ ಮಾತಾ ಚ ಪಿತಾ ತ್ವಮೇವ" ಎನ್ನುವಾಗ ಅದು ಸಂಬಂಧವೇ. ಇನ್ನು ಭಗವಂತನನ್ನು ಹೆಸರು ಹಿಡಿದು ಕರೆಯುವುದೆಂದರೆ ಅದೂ ಸುಕರವೇ. ಹೇಗೆ? ಭಾರತೀಯ-ಸಂಸ್ಕೃತಿಯಲ್ಲಿ ದೇವತೆಗಳಿಗೂ ಕಡಿಮೆಯಿಲ್ಲ, ಅವರ ಹೆಸರುಗಳಿಗೂ ಕಡಿಮೆಯಿಲ್ಲ. ೩೩ ಕೋಟಿ ದೇವತೆಗಳೆಂದು ಕಲ್ಪಿಸಿಕೊಳ್ಳಲೂ ಅನ್ಯರಿಗಾಗಿಲ್ಲ. ತಮಗೊಬ್ಬೊಬ್ಬನೇ ದೇವನೆಂಬ ಕಾರಣಕ್ಕೆ ತಮ್ಮ ಸಂಸ್ಕೃತಿಯೇ ಹೆಚ್ಚೆಂದು ಕೊಚ್ಚಿಕೊಳ್ಳುವವರೂ ಉಂಟು. ಉಪನಿಷತ್ತಿನ ೩೩ ದೇವತೆಗಳನ್ನೇ ವಿಸ್ತೃತರೂಪದಲ್ಲಿ ೩೩ ಕೋಟಿಯೆಂದಿರುವುದು.

ರುಂಡ-ಮುಂಡ-ಕೈಕಾಲುಗಳೆಂದಾಗಿ ನಮ್ಮಲ್ಲೇ ಮೂರಿಲ್ಲವೇ? ಒಂದೇ ಮೈ ಮೂರಾಗಿ(ತೋರಿ)ದೆ. ಕೈಕಾಲುಗಳನ್ನೇ ತೆಗೆದುಕೊಂಡರೂ ಒಂದೊಂದರಲ್ಲೇ ಐದೈದು ಬೆರಳುಗಳಿಲ್ಲವೇ? ಮೂಲದಲ್ಲಿ ಒಂದು, ವಿಸ್ತಾರದಲ್ಲಿ ಐದು. ಹೀಗೆ ಪಂಚವೇ ಪ್ರಪಂಚವಾಗಿರುವುದೂ.

ಇನ್ನು ದೇವತೆಗಳ ಹೆಸರುಗಳೋ? ಅದೆಷ್ಟೊಂದು ಅಷ್ಟೋತ್ತರಶತ-ಅಷ್ಟೋತ್ತರಸಹಸ್ರ-ನಾಮಗಳು! ಶಿವಸಹಸ್ರನಾಮ-ವಿಷ್ಣುಸಹಸ್ರನಾಮಗಳು ಮಹಾಭಾರತದಲ್ಲೇ ಬರುತ್ತವೆ. ಪುರಾಣಗಳಲ್ಲಿ ಹತ್ತುಹಲವು ದೇವತೆಗಳ ಸಹಸ್ರನಾಮಗಳಿವೆ.

ಇವೆಲ್ಲದರ ಮೂಲದಲ್ಲಿ ಒಂದೇ ತತ್ತ್ವವಿರುವುದಾದರೆ, ಆ ಮೂಲ-ಭಗವತ್-ತತ್ತ್ವಕ್ಕೇ ಹೆಸರೊಂದುಂಟೇ? - ಎಂದು ಕೇಳಬಹುದಲ್ಲವೇ? 

ಅದಕ್ಕೆ ಯೋಗಶಾಸ್ತ್ರದ ಉತ್ತರವಿದೆ. ದೇವನೆಂದರೆ ಎಂತಹವನು, ಹಾಗೂ ಆತನ ಹೆಸರೇನು - ಎಂಬುದನ್ನೂ ಪಾತಂಜಲ-ಯೋಗಸೂತ್ರವು ಹೇಳುತ್ತದೆ: ಯಾವನಿಗೆ ಕ್ಲೇಶ-ಕರ್ಮಗಳಿರವೋ ಆತನೇ ಈಶ್ವರ; ಪ್ರಣವವೇ ಆತನ ವಾಚಕ (ತಸ್ಯ ವಾಚಕಃ ಪ್ರಣವಃ) ಎಂದಿದೆ.

ಇಲ್ಲಿ ಹೇಳಿರುವ ಕ್ಲೇಶ-ಕರ್ಮಾದಿಗಳು ಪಾರಿಭಾಷಿಕ-ಪದಗಳು.  ಅವುಗಳ ವಿಶ್ಲೇಷಣೆ ಇಲ್ಲಿ ಬೇಡ. ಹೆಸರಿಗೇ ಇನ್ನೊಂದು ಹೆಸರು "ವಾಚಕ". ಈ ವಾಚಕದಿಂದ ಯಾರನ್ನು ಹೆಸರಿಸಲಾಗಿದೆಯೋ ಆತನು "ವಾಚ್ಯ". ಹೀಗೆ, ಇಲ್ಲಿ ಈಶ್ವರನು ವಾಚ್ಯ, ಪ್ರಣವವೆಂಬುದು ವಾಚಕ. ಅರ್ಥಾತ್, ಈಶ್ವರನ ಹೆಸರೇ ಪ್ರಣವ.

ನಮಗೆಲ್ಲ ಹುಟ್ಟುಂಟು, ಸಾವುಂಟು. ಭಗವಂತನ ಅವತಾರಗಳಿಗೆ ಸಹ ಹೀಗೆಯೇ ಆದಿಯುಂಟು, ಅಂತವುಂಟು. ಆದರೆ ಭಗವಂತನೇ ಹೇಗಿರುವನೆಂದರೆ ಆತನು ಅನಾದಿ, ಅನಂತ. ಎಂದೇ ಎಂದೂ ಹೊಸದಾಗಿಯೇ ಇರುವವನು ಆತ! ನವವೆಂದರೆ ಹೊಸತು; ಪ್ರ-ನವವೆಂದರೆ ಹೊಚ್ಚಹೊಸತು! ಹೀಗೆ ಎಂದೆಂದೂ ಹೊಚ್ಚಹೊಸತಾಗಿರುವ ನಿತ್ಯ-ತತ್ತ್ವವೇ ಪ್ರಣವ.

ಇದಲ್ಲದೆ ಯೋಗಶಾಸ್ತ್ರ-ದೃಷ್ಟಿಯಿಂದ ಪ್ರಣವ ಎಂಬುದಕ್ಕೂ ಪ್ರಣಾಮ ಎಂಬುದಕ್ಕೂ ಹತ್ತಿರದ ನಂಟುಂಟು. ಭಕ್ತಿಯಿದ್ದೆಡೆ ಬಾಗುವುದೇ.

ಪ್ರಣವವನ್ನು ಜಪಿಸಬೇಕೆಂದೂ, ಅದರ ಅರ್ಥವನ್ನು ಭಾವಿಸಬೇಕೆಂದೂ ಯೋಗಸೂತ್ರದಲ್ಲಿ ಹೇಳಿದೆ. ಪ್ರಣವ-ವಾಚ್ಯನಾದ ಈಶ್ವರನಲ್ಲಿಯ ಪ್ರಣಿಧಾನದಿಂದಲೇ, ಎಂದರೆ ಭಕ್ತಿಪೂರ್ವಕ-ಸರ್ವಕರ್ಮಾರ್ಪಣದಿಂದಲೇ, ಸಮಾಧಿಸಿದ್ಧಿಯಾಗುವುದೆಂದೂ ಅಲ್ಲೇ ಹೇಳಿದೆ.

ಪ್ರಣವಕ್ಕೆ ಪರ್ಯಾಯಪದವೊಂದುಂಟು. ಅದುವೇ ಓಂಕಾರ. "-ಕಾರ" ಎಂಬುದನ್ನು ಸೇರಿಸಿದರೆ "ಹೀಗೆಂಬ ಧ್ವನಿ" ಎಂಬ ಅರ್ಥ ಬರುತ್ತದೆ. ಬಿಲ್ಲಿನ ಸದ್ದಿಗೆ ಟಂಕಾರ ಎನ್ನುತ್ತೇವೆ; ಅದಕ್ಕೆ "ಟಂ - ಎಂಬ ಧ್ವನಿ" - ಎಂದರ್ಥ. ಹಾಗೆಯೇ ದುಂಬಿಗಳ ಝೇಂಕಾರವೆನ್ನುವಾಗಲೂ. ಅಂತೆಯೇ ಓಂಕಾರವೆಂದರೆ "ಓಂ ಎಂಬ ಧ್ವನಿ"ಯೆಂದೇ.

ಈಶ್ವರ-ತತ್ತ್ವವು ಮೂಲತಃ ಅಮೂರ್ತವಾದದ್ದು, ಎಂದರೆ ಶರೀರವಿಲ್ಲದ್ದು. ಕೇವಲಜ್ಯೋತೀರೂಪವಾದ ಅದು ಮೊಟ್ಟಮೊದಲು ಮೈತಾಳುವುದು ನಾದವಾಗಿ, ಶಬ್ದವಾಗಿ. ಎಂದೇ ಓಂಕಾರವನ್ನು ಈಶ್ವರನ ಶಬ್ದಮೂರ್ತಿಯೆನ್ನುವುದೂ ಉಂಟು. ಯೋಗಿಪುಂಗವರಾದ ಶ್ರೀರಂಗಮಹಾಗುರುಗಳ ಮಾತಿನಲ್ಲಿ, "ಜಗತ್ತನ್ನಾಳುವ ಸ್ವರಾಟ್ ಆದ ಪ್ರಭುವಿನ ವಿಶ್ವಮೂಲಶಕ್ತಿಯ ಸದ್ದೇ ಈ ಓಂಕಾರ". ವೇದಾದಿಯಲ್ಲೇ ಪ್ರೋಕ್ತವಾದ ಸ್ವರವಿದು, ವೇದಾಂತದಲ್ಲಿಯೂ ಪ್ರತಿಷ್ಠಿತವಾದದ್ದು.

ಈ ಏಕಾಕ್ಷರಬ್ರಹ್ಮವೇ ಅಕಾರ-ಉಕಾರ-ಮಕಾರವಾಗಿ ವಿಸ್ತಾರಗೊಂಡು ಬ್ರಹ್ಮ-ವಿಷ್ಣು-ಮಹೇಶ್ವರವೆಂಬ ತ್ರಿಮೂರ್ತಿಗಳಾಗಿರುವುದು. ತ್ರಿದೇವಮೂಲವೆನ್ನುವಂತೆ ತ್ರಿವೇದಮೂಲವೂ ಓಂಕಾರವೇ. ಇದೆಲ್ಲವೂ ಯೋಗಿಗಳಿಗೇ ಏಕಾಂತದಲ್ಲೇ ಗೋಚರವಾಗತಕ್ಕದ್ದು.

ಈಶ್ವರನನ್ನು "ಹೆಸರು ಹಿಡಿದು" ಓಂಕಾರ-ದಿಂದ ಆಹ್ವಾನ ಮಾಡಿದರೆ ಆತನು ಪ್ರಸನ್ನಗೊಳ್ಳುತ್ತಾನೆ - ಎಂಬ ಯೋಗಿಯಾಜ್ಞವಲ್ಕ್ಯರ ಮಾತೂ ಇಲ್ಲಿ ಸ್ಮರಣೀಯವಲ್ಲವೇ?

ಸೂಚನೆ: 19/7//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.