ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಆ ಸಭೆಯು ಉದ್ದ-ಅಗಲಗಳಲ್ಲಿ ಹತ್ತು ಹತ್ತು ಸಾವಿರ ಮೊಳಗಳಷ್ಟಿತ್ತು. ಅಗ್ನಿ, ಸೂರ್ಯ, ಚಂದ್ರ - ಇವರುಗಳ ಸಭಾಭವನಗಳು ಹೇಗೆ ಪ್ರಕಾಶಮಯವಾಗಿರುತ್ತವೆಯೋ ಹಾಗೆ ಇದೂ ಭ್ರಾಜಮಾನವಾಗಿತ್ತು, ಎಂದರೆ ಕಂಗೊಳಿಸಿತ್ತು. ಒಟ್ಟಿನಲ್ಲಿ ಇದರ ರೂಪವು ಮನೋಹರವಾಗಿತ್ತು. ಸೂರ್ಯನ ಪ್ರಭೆಯನ್ನೇ ಹೊಡೆಯುವ ಹಾಗಿತ್ತು ಇದರ ಪ್ರಭೆ. ತನ್ನ ಅಲೌಕಿಕವಾದ ತೇಜಸ್ಸಿನಿಂದಾಗಿ ಅದು ಜ್ವಲಿಸುತ್ತಲಿದೆಯೋ ಎಂಬಂತೆ ತೋರುತ್ತಿತ್ತು.
ಅದರ ಎತ್ತರವೆಷ್ಟಿತ್ತೆಂದರೆ ಆಕಾಶವನ್ನು ಆವರಿಸಿಕೊಂಡಿರುವ ನೂತನ ಮೇಘದ ಹಾಗೆ ಅದು ಭಾಸವಾಗುತ್ತಿತ್ತು. ಅದರ ಆಯಾಮ-ವಿಪುಲತೆಗಳಿಂದಾಗಿ ಅದು ಪಾಪವನ್ನೂ ಆಯಾಸವನ್ನೂ ಕಳೆಯುವಂತಿತ್ತು.
ಉತ್ತಮದ್ರವ್ಯಗಳಿಂದ ಅದು ಸಂಪನ್ನವಾಗಿತ್ತು, ಎಂದರೆ ಸಮೃದ್ಧವಾಗಿತ್ತು: ಅದರ ಪ್ರಾಕಾರವೂ ತೋರಣವೂ ರತ್ನಮಯವಾಗಿತ್ತು; ಅನೇಕ ಚಿತ್ರಗಳಿಂದ ಕೂಡಿತ್ತು; ಐಶ್ವರ್ಯದಿಂದ ತುಂಬಿತ್ತು. ವಿಶ್ವಕರ್ಮನಿಂದ, ಎಂದರೆ ಮಯನಿಂದ, ಬಹಳ ಸುಂದರವಾಗಿ ಅದು ನಿರ್ಮಿತವಾಗಿತ್ತು.
ಬುದ್ಧಿಶಾಲಿಯಾದ ಮಯನು ಅದನ್ನದೆಷ್ಟು ಚೆನ್ನಾಗಿ ನಿರ್ಮಿಸಿದ್ದನೆಂದರೆ ದಾಶಾರ್ಹರ ಸುಧರ್ಮೆಯಾಗಲಿ, (ಎಂದರೆ ಯಾದವರ ಸಭೆಯಾಗಲಿ) ಅಥವಾ ಬ್ರಹ್ಮನದ್ದೇ ಸಭೆಯಾಗಲಿ - ಈ ಸಭೆಯಷ್ಟು ರೂಪಸಂಪನ್ನವಾಗಿರಲಿಲ್ಲ.
ಮಯನ ಆಣತಿಯಂತೆ ಆ ಸಭಾಭವನವನ್ನು ರಕ್ಷಿಸುತ್ತಿದ್ದರು, ಕಿಂಕರರೆಂಬ ರಾಕ್ಷಸರು. ಅವರ ಸಂಖ್ಯೆ ಎಂಟು ಸಾವಿರ. ಅವರು ಅದನ್ನು ಒಯ್ಯಬಲ್ಲವರೂ ಆಗಿದ್ದರು. ಅಂತರಿಕ್ಷದಲ್ಲಿ ಅವರು ಸಂಚರಿಸಬಲ್ಲವರು, ಘೋರರಾದವರು, ಮಹಾಕಾಯರು - ಎಂದರೆ ಬೃಹತ್ತಾದ ಶರೀರವುಳ್ಳವರು. ಅವರ ಕಣ್ಣುಗಳು ಕೆಂಪಾಗಿಯೋ ಪಿಂಗಳವಾಗಿಯೋ ಇರುತ್ತಿದ್ದವು. ಅವರ ಕಿವಿಗಳು ಕಪ್ಪೆಚಿಪ್ಪಿನಂತಿದ್ದವು. ಅವರುಗಳು ಪ್ರಹಾರಮಾಡುವುದರಲ್ಲಿ ಸಮರ್ಥರಾಗಿದ್ದವರು.
ಆ ಸಭೆಯಲ್ಲಿ ಮಯನು ಅಪ್ರತಿಮವಾದ ಪುಷ್ಕರಿಣಿಯೊಂದನ್ನು ನಿರ್ಮಿಸಿದನು. ಅದರಲ್ಲಿಯ ಕಮಲವು ಮಣಿಮಯವಾದ ನಾಳದಿಂದ ಕೂಡಿತ್ತು. ವೈದೂರ್ಯಮಯವಾದ ದಳಗಳೊಂದಿಗೆ ವಿಕಾಸಗೊಂಡಿತ್ತು. (ಸಾಮಾನ್ಯವಾಗಿ ಎಲ್ಲರೂ ಬಳಸುವ ವೈಢೂರ್ಯ ಎಂಬ ಪದವು ಸಾಧುವಲ್ಲ. ವೈಡೂರ್ಯವೆಂಬುದೂ ಅಪಭ್ರಂಶವೇ).
ಪದ್ಮರಾಗಮಣಿಯಿಂದಾದ ಕಮಲಗಳ ಸೌರಭವು ಅಲ್ಲಿ ತುಂಬಿತ್ತು. ಸಹಸ್ರಾರು ಪಕ್ಷಿಗಳ ಸಮೂಹವು ಅಲ್ಲಿ ಸೇರಿತ್ತು. ಅಲ್ಲಿಯ ಕಮಲಸಸ್ಯಗಳು ಚೆನ್ನಾಗಿ ಹೂಬಿಟ್ಟಿದ್ದು ಅದರಿಂದಾಗಿ ಆ ಸಭೆಯು ಆಕರ್ಷಕವಾಗಿದ್ದಿತು. ಆ ಸರೋವರದಲ್ಲಿ ಚಿನ್ನದ ಕೂರ್ಮಗಳು ಮತ್ಸ್ಯಗಳೂ ಇದ್ದವು. ಅದರ ಮೆಟ್ಟಿಲುಗಳು ವಿಚಿತ್ರ ಸ್ಫಟಿಕಗಳಿಂದಾಗಿದ್ದವು. ಅಲ್ಲಿಯ ನೀರಲ್ಲಿ ಕೆಸರೇ ಮೂಡುತ್ತಿರಲಿಲ್ಲ. ಮಂದಮಾರುತವು ಅಲ್ಲಿ ಬೀಸುತ್ತಿತ್ತು. ಮುತ್ತಿನ ಬಿಂದುಗಳಿಂದ ಅದು ವ್ಯಾಪ್ತವಾಗಿತ್ತು. ಅದರ ಪರ್ಯಂತದಲ್ಲಿಯ ವೇದಿಕೆಗಳು ಮಹಾಮಣಿಗಳಿಂದಾದ ಶಿಲಾಪಟ್ಟಗಳಿಂದ ಕೂಡಿದ್ದವು.
ಮಣಿಖಚಿತವೂ ರತ್ನಮಯವೂ ಆದ ಆ ಸಭೆಗೆ ಅನೇಕ ಅರಸರು ಬರುತ್ತಿದ್ದರು. ಕಂಡೂ ಅದರ ವಿಶಿಷ್ಟತೆಯನ್ನು ಗುರುತಿಸಲಾರರು.ಹಾಗಾಗಿ ತಮ್ಮ ಅಜ್ಞಾನದಿಂದಾಗಿ ಅಲ್ಲಿ ಬಿದ್ದುಬಿಡುತ್ತಿದ್ದರು!
ಆ ಸಭೆಯ ಸುತ್ತಲೂ ಬಗೆಬಗೆಯ ಮನೋಹರವಾದ ವೃಕ್ಷಗಳು ಬೆಳೆದಿದ್ದವು. ಅವು ಸದಾಕಾಲವೂ ಪುಷ್ಪಭರಿತವಾಗಿರುತ್ತಿದ್ದವು. ಮಂದಮಾರುತದಿಂದಾಗಿ ಅವು ಓಲಾಡುತ್ತಿದ್ದವು. ಭವನದ ಸುತ್ತಲೂ ಸುಗಂಧಭರಿತವಾದ ಕಾನನಗಳೂ ಪುಷ್ಕರಿಣಿಗಳೂ ಇದ್ದವು. ಅವುಗಳಲ್ಲಿಯ ಹಂಸ-ಕಾರಂಡವಪಕ್ಷಿಗಳೂ ಚಕ್ರವಾಕಪಕ್ಷಿಗಳೂ ಅದಕ್ಕೆ ಶೋಭೆಯನ್ನುಂಟುಮಾಡುತ್ತಿದ್ದುವು. ಜಲಜ-ಪದ್ಮಗಳು ಸ್ಥಲಜ-ಪದ್ಮಗಳು – ಇವೆರಡರ ಗಂಧವನ್ನೂ ವಾಯುವು ಎಲ್ಲೆಡೆಯಿಂದ ಹೊತ್ತು ತಂದು ಪಾಂಡವರಿಗೆ ಸೇವೆಯನ್ನು ಸಲ್ಲಿಸುತ್ತಿತ್ತು.
ಸುಮಾರು ಹದಿನಾಲ್ಕು ತಿಂಗಳುಗಳಲ್ಲಿ ಇಂತಹ ಅದ್ಭುತಸಭೆಯನ್ನು ನಿರ್ಮಿಸಿ, ಅದು ಸಂಪೂರ್ಣವಾಗಿ ಸಿದ್ಧವಾದ ಬಳಿಕ, ಮಯನು ಯುಧಿಷ್ಠಿರನಿಗೆ ಅದನ್ನರುಹಿದನು.
ಸೂಚನೆ : 29/6/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.